ಕಳಪೆ ವಾಯುಗುಣಮಟ್ಟದಿಂದ ಉಸಿರುಗಟ್ಟುತ್ತಿರುವ ದೆಹಲಿಯಲ್ಲಿ ಮಾಲಿನ್ಯ ತಗ್ಗಿಸುವ ಸಲುವಾಗಿ ಮಾ.31ರಿಂದ 15 ವರ್ಷ ಹಳೆದ ವಾಹನಗಳಿಗೆ ಇಂಧನ ನೀಡಲಾಗುವುದಿಲ್ಲ ಎಂದು ಪರಿಸರ ಸಚಿವ ಮಜಿಂದರ್‌ ಸಿಂಗ್‌ ಸಿರ್ಸಾ ಘೋಷಿಸಿದ್ದಾರೆ. 

ನವದೆಹಲಿ (ಮಾ.02): ಕಳಪೆ ವಾಯುಗುಣಮಟ್ಟದಿಂದ ಉಸಿರುಗಟ್ಟುತ್ತಿರುವ ದೆಹಲಿಯಲ್ಲಿ ಮಾಲಿನ್ಯ ತಗ್ಗಿಸುವ ಸಲುವಾಗಿ ಮಾ.31ರಿಂದ 15 ವರ್ಷ ಹಳೆದ ವಾಹನಗಳಿಗೆ ಇಂಧನ ನೀಡಲಾಗುವುದಿಲ್ಲ ಎಂದು ಪರಿಸರ ಸಚಿವ ಮಜಿಂದರ್‌ ಸಿಂಗ್‌ ಸಿರ್ಸಾ ಘೋಷಿಸಿದ್ದಾರೆ. ಈ ಮೂಲಕ 3 ವರ್ಷ ಹಿಂದೆಯೇ ಜಾರಿಯಾಗಿದ್ದ ಈ ನೀತಿಯ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ನಿರ್ಧರಿಸಿದ್ದಾರೆ. ಮಾಲಿನ್ಯ ತಡೆಗಾಗಿ ಸಿರ್ಸಾ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಹಳೆಯ ವಾಹನಗಳ ಮೇಲೆ ನಿರ್ಬಂಧ, ಕಡ್ಡಾಯ ಹೊಗೆ- ನಿರೋಧಕ ಕ್ರಮ ಮತ್ತು ಸಾರ್ವಜನಿಕ ಸಾರಿಗೆಯ ವಿದ್ಯುತೀಕರಣದ ಕುರಿತು ಚರ್ಚಿಸಲಾಗಿದೆ.

ಬಳಿಕ ಮಾತನಾಡಿದ ಸಿರ್ಸಾ, ‘15 ವರ್ಷಕ್ಕೂ ಹಳೆಯ ವಾಹನಗಳ ಪತ್ತೆಗೆ ಪೆಟ್ರೋಲ್‌ ಪಂಪ್‌ಗಳಲ್ಲಿ ಉಪಕರಣಗಳನ್ನು ಅಳವಡಿಸಲಾಗುವುದು ಹಾಗೂ ಹಳೆ ವಾಹನಗಳಿಗೆ ಇಂಧನ ತುಂಬಿಸುವುದಿಲ್ಲ. ಈ ನಿರ್ಧಾರವನ್ನು ದೆಹಲಿ ಸರ್ಕಾರ ಕೇಂದ್ರ ಪೆಟ್ರೋಲಿಯಂ ಸಚಿವಾಲಯಕ್ಕೆ ತಿಳಿಸಲಿದೆ’ ಎಂದರು. ಜೊತೆಗೆ, ಎತ್ತರದ ಕಟ್ಟಡ, ಹೋಟೆಲ್‌, ವಾಣಿಜ್ಯ ಸಂಕೀರ್ಣಗಳಲ್ಲಿ ಹೊಗೆ ವಿರೋಧಿ ಗನ್‌ಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಸೂಚಿಸಿದ್ದಾರೆ.

ದಿಲ್ಲಿಯಲ್ಲಿ ನಿಯಮ ಏನು?: ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ 10 ವರ್ಷಕ್ಕಿಂತ ಹಳೆಯದಾದ ಡೀಸೆಲ್ ವಾಹನಗಳು ಮತ್ತು 15 ವರ್ಷಕ್ಕಿಂತ ಹಳೆಯದಾದ ಪೆಟ್ರೋಲ್ ವಾಹನಗಳನ್ನು ರಸ್ತೆಗಳಲ್ಲಿ ಅನುಮತಿಸುವುದಿಲ್ಲ ಎಂಬ ನೀತಿ ಇದೆ. 2021ರ ಆದೇಶದ ಪ್ರಕಾರ, ಜನವರಿ 1, 2022ರ ನಂತರ ರಸ್ತೆಗಳಲ್ಲಿ ಅಂಥ ವಾಹನಗಳ ಸಂಚಾರ ಕಂಡುಬಂದರೆ ಅವನನ್ನು ಮುಟ್ಟುಗೋಲು ಹಾಕಿಕೊಂಡು ಸ್ಕ್ರ್ಯಾಪ್‌ಯಾರ್ಡ್‌ಗೆ ಕಳುಹಿಸಲಾಗುವುದು ಎಂದು ತಿಳಿಸಲಾಗಿತ್ತು.

ಇಡ್ಲಿಗೆ ಡೆಡ್ಲಿ ಪ್ಲಾಸ್ಟಿಕ್‌ ಬಳಸಿದವರಿಗೆ ನೋಟಿಸ್‌ ಜಾರಿ: ಸಚಿವ ದಿನೇಶ್ ಗುಂಡೂರಾವ್‌

ಯುಮುನಾ ನದಿ ಶುದ್ಧೀಕರಣ ಪ್ರಕ್ರಿಯೆ ಚಾಲನೆ: ದೆಹಲಿಯಲ್ಲಿ ಬಿಜೆಪಿ ಸರ್ಕಾರ ರಚನೆಯಾಗುವುದಕ್ಕೂ ಮುನ್ನವೇ ಚುನಾವಣಾ ಸಂದರ್ಭದಲ್ಲಿ ನೀಡಿದ್ದ ಪ್ರಮುಖ ಭರವಸೆಗಳಲ್ಲಿ ಒಂದಾದ ಯಮುನಾ ನದಿ ಶುದ್ಧೀಕರಣಕ್ಕೆ ಚಾಲನೆ ಸಿಕ್ಕಿದೆ. ನದಿಯಿಂದ ಕಸ ತೆಗೆಯುವ ಯಂತ್ರಗಳು, ಕಳೆ ಕೊಯ್ಲು ಯಂತ್ರಗಳು, ಹೂಳೆತ್ತುವ ಸಾಧನಗಳು ಮತ್ತು ಡ್ರೆಡ್ಜರ್‌ನೊಂದಿಗೆ ನದಿಯನ್ನು ಸ್ವಚ್ಛಗೊಳಿಸುವ ಕೆಲಸ ಪ್ರಾರಂಭವಾಗಿದೆ ಎಂದು ರಾಜ್ಯಪಾಲರ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ. ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಬಿಜೆಪಿ ವಿಜಯೋತ್ಸವದ ಸಂದರ್ಭದಲ್ಲಿ ಪ್ರಧಾನಿ ಮೋದಿ, ಮಾಲಿನ್ಯಮುಕ್ತ ಯಮುನಾಗೆ ಎಲ್ಲ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ್ದರು. ಅದರ ಬೆನ್ನಲ್ಲೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ. ಕೆ. ಸಕ್ಸೇನಾ ಅವರು ಶನಿವಾರ ದೆಹಲಿ ಮುಖ್ಯ ಕಾರ್ಯದರ್ಶಿಯವರನ್ನು ಭೇಟಿ ಮಾಡಿ ಯಮುನಾ ನದಿ ಶುಚಿಗೊಳಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳುವಂತೆ ನಿರ್ದೇಶಿಸಿದ್ದರು.