ದೇಶದ ಜನ ವಿಶ್ವಾಸವಿಡಿ, ಶಾಂತಿಯ ಸೂರ್ಯ ಮಣಿಪುರದಲ್ಲಿ ಉದಯಿಸಲಿದೆ, ಮೋದಿ ವಿಶ್ವಾಸ!
ಮಣಿಪುರದ ಹಿಂಸಾಚಾರದ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ಮಾತನಾಡಿದ್ದಾರೆ. ಮಣಿಪುರದ ಜನರೊಂದಿಗೆ ಇಡೀ ದೇಶವಿದೆ. ಸರ್ಕಾರ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದೆ ಎಂದು ಪ್ರಧಾನಿ ಹೇಳಿದ್ದಾರೆ.
ನವದೆಹಲಿ (ಆ.10): ಪ್ರಧಾನಿ ನರೇಂದ್ರ ಮೋದಿ ಮಣಿಪುರದ ವಿಚಾರವಾಗಿ ಮಾತನಾಡಿದ್ದಾರೆ. ಮಣಿಪುರ ಹಿಂಸಾಚಾರದ ಬಗ್ಗೆ ಪ್ರಧಾನಿ ಏನೂ ಮಾತನಾಡಿಲ್ಲ ಎಂದು ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದ ವಿಪಕ್ಷಗಳಿಗೆ ಉತ್ತರ ಎನ್ನುವಂತೆ ಪ್ರಧಾನಿ ಮಾತನಾಡಿದ್ದಾರೆ. ಸದನದಲ್ಲಿ ಒಂದೂವರೆ ಗಂಟೆ ಆದರೂ, ಮಣಿಪುರದ ಬಗ್ಗೆ ಮಾತನಾಡದೇ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಕ್ಕೆ ಸದನವನ್ನು ತೊರೆದವು. ಅದರ ಬೆನ್ನಲ್ಲಿಯೇ ಮಣಿಪುರದ ಬಗ್ಗೆ ಪ್ರಧಾನಿ ಮೋದಿ ಮಾತನಾಡಲು ಆರಂಭಿಸಿದರು. ಗೃಹ ಸಚಿವ ಅಮಿತ್ ಶಾ ಈಗಾಗಲೇ ಮಣಿಪುರದ ಬಗ್ಗೆ ವಿಸ್ತ್ರತವಾಗಿ ಬುಧವಾರ ಮಾತನಾಡಿದ್ದಾರೆ. ಚರ್ಚೆ ಮಾಡಬೇಕು ಎನ್ನುವ ಮನಸ್ಸಿದ್ದರೆ, ನಿನ್ನೆ ಇಡೀ ದಿನ ಮಣಿಪುರ ವಿಚಾರವಾಗಿ ಸ್ವತಃ ಅಮಿತ್ ಶಾ ಅವರಿಂದ ಉತ್ತರ ಪಡೆದುಕೊಳ್ಳಬಹುದಿತ್ತು. ಆದರೆ, ಅವರಿಗೆ ರಾಜಕೀಯ ಮಾಡುವ ಉದ್ದೇಶವಿತ್ತು. ಅದಕ್ಕಾಗಿ ಅಮಿತ್ ಶಾ, ಮಣಿಪುರದಲ್ಲಿ ಸರ್ಕಾರ ಮಾಡಿರುವ ಕೆಲಸವನ್ನು ತಿಳಿಸಿದರೂ ಅದನ್ನು ಕೇಳುವ ಮನಸ್ಥಿತಿಯಲ್ಲಿರಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
'ಹೌದು, ಮಣಿಪುರದಲ್ಲಿ ಹಿಂದೆಯಾಗಿದೆ. ಮಹಿಳೆಯರ ಮೇಲೆ ಅಲ್ಲಿ ಗಂಭೀರ ಅಪರಾಧವಾಗಿದೆ. ದೋಷಿಗಳಿಗೆ ಕಠಿಣ ಕ್ರಮ ಕೈಗೊಳ್ಳಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ದೊಡ್ಡ ಪ್ರಯತ್ನ ಮಾಡುತ್ತಿದೆ. ದೇಶದ ನಾಗರೀಕರಿಗೆ ನಾನು ವಿಶ್ವಾಸದಿಂದ ಹೇಳುತ್ತಿದ್ದೇನೆ. ನಮ್ಮ ಪ್ರಯತ್ನ ಯಾವ ರೀತಿ ಸಾಗುತ್ತಿದೆ ಎಂದರೆ ಮಣಿಪುರದಲ್ಲಿ ಖಂಡಿತವಾಗಿ ಶಾಂತಿ ಮರಳುತ್ತದೆ. ಮಣಿಪುರದ ಜನರಿಗೂ ನಾನು ಇಲ್ಲಿಂದಲೇ ಮನವಿ ಮಾಡಲು ಹೇಳುತ್ತಿದ್ದೇನೆ. ಮಣಿಪುರದ ಜನರೊಂದಿಗೆ ಈ ದೇಶವಿದೆ. ಈ ಸದನ ಅವರೊಂದಿಗೆ ಇದೆ. ನಾವೆಲ್ಲರೂ ಸೇರಿಕೊಂಡು ಅಲ್ಲಿ ಪರಿಹಾರ ಹುಡುಕಬೇಕಿದೆ. ಮಣಿಪುರದ ಮತ್ತೆ ವಿಕಾಸದ ಗತಿಗೆ ಮರಳುತ್ತದೆ. ಅದರಲ್ಲಿ ಯಾವುದೇ ಅನುಮಾನ ಯಾರಿಗೂ ಬೇಡ' ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಕಳೆದ 9 ವರ್ಷಗಳಲ್ಲಿ ನಾವು ಮಾಡಿದ ಕೆಲಸಗಳಿಂದ ಹೇಳುತ್ತಿದ್ದೇವೆ. ಈಶಾನ್ಯ ರಾಜ್ಯಗಳು ಬರೀ ಭೂಭಾಗವಲ್ಲ, ಅದು ನನ್ನೆದೆಯ ಭಾಗ ಎಂದು ಪ್ರಧಾನಿ ಮೋದಿ ಹೇಳಿದಾಗ ಎಲ್ಲರೂ ಮೋದಿ ಮಾತಿಗೆ ಸಮ್ಮತಿಸಿದರು. ಇಂದು ಮಣಿಪುರದ ಸಮಸ್ಯೆಯನ್ನು ಯಾವ ರೀತಿ ಬಿಂಬಿಸುತ್ತಿದ್ದಾರೆ ಎಂದರೆ, ಇತ್ತೀಚಿನ ವರ್ಷಗಳಲ್ಲಿ ಇದು ಆಗಿರುವ ಹಿಂಸಾಚಾರ ಎನ್ನುವಂತೆ ಹೇಳುತ್ತಿದ್ದಾರೆ. ನಿನ್ನೆ ಅಮಿತ್ ಶಾ ಅದರ ಬಗ್ಗೆ ವಿಸ್ತಾರವಾಗಿ ತಿಳಿಸಿದರು. ಅಲ್ಲಿ ಆಗಿರುವ ಸಮಸ್ಯೆ ಏನು, ಅದಕ್ಕೆ ಪರಿಹಾರ ಏನು ಅನ್ನೋದರ ಬಗ್ಗೆ ಮಾತನಾಡಿದ್ದರು. ಇಂದು ಗಂಭೀರವಾಗಿ ಹೇಳುತ್ತಿದ್ದೇನೆ. ಇಂದು ಈಶಾನ್ಯದ ಈ ಸಮಸ್ಯೆಗಳಿಗೆ ಸಾಕಷ್ಟು ವರ್ಷಗಳ ಇತಿಹಾಸವಿದೆ. ಅದಕ್ಕೆಲ್ಲಾ ಕಾರಣ ಕಾಂಗ್ರೆಸ್ ಎನ್ನುವುದನ್ನೂ ತಿಳಿಸುತ್ತಿದ್ದೇನೆ. ಈಶಾನ್ಯ ರಾಜ್ಯಗಳ ನಾಗರೀಕರು ಈ ಹಿಂಸೆಗೆ ಕಾರಣವಲ್ಲ. ಕಾಂಗ್ರೆಸ್ ಮಾಡಿರುವ ರಾಜಕಾರಣ ಇದಕ್ಕೆ ಕಾರಣ ಎಂದು ಮೋದಿ ಹೇಳಿದ್ದಾರೆ.
ಪ್ರಧಾನಿ ಮೋದಿ ಮಣಿಪುರ ಹಿಂಸಾಚಾರ ಮಾತು ಆರಂಭಿಸುತ್ತಿದ್ದಂತೆ ಸದನದಿಂದ ಹೊರನಡೆದ ವಿಪಕ್ಷ!
ಭಾರತೀಯ ಸಂಸ್ಕೃತಿಯ ಭಾವ ಭಕ್ತಿ ಮಣಿಪುರ. ಸ್ವಾತಂತ್ರ್ಯ ಸಂಗ್ರಾಮ ಹಾಗೂ ಆಜಾದ್ ಹಿಂದ್ ಫೌಜ್ ಹಾಗೂ ಅಸಖ್ಯ ಬಲಿದಾನಗಳನ್ನು ತೋರಿದ ಭಾಗ ಮಣಿಪುರ. ಕಾಂಗ್ರೆಸ್ ನ ಶಾಸನದಲ್ಲಿ ಇಂಥ ಮಹಾನ್ ಭೂಭಾಗ, ಬೆಂಕಿಗೆ ತುತ್ತಾಗಿತ್ತು. ಇಲ್ಲಿರುವ ಈಶಾನ್ಯದ ಸಂಸದರಿಗೆ ಎಲ್ಲದರ ಅರಿವಿದೆ. ಹಿಂದೆ ಈಶಾನ್ಯ ರಾಜ್ಯಗಳ ಪ್ರತಿ ಅಭಿವೃದ್ದಿಗಳು ಉಗ್ರವಾದಿ ಸಂಘಟನೆಗಳ ಒಪ್ಪಿಗೆಯಿಂದ ನಡೆಯುತ್ತಿತ್ತು. ಅವರು ಹೇಳಿದ ಹಾಗೆ ಅಲ್ಲಿ ನಡೆಯುತ್ತಿತ್ತು. ಅಂದು ಯಾರ ಸರ್ಕಾರವಿತ್ತು ಅಲ್ಲಿ, ಇದೇ ಕಾಂಗ್ರೆಸ್ ಸರ್ಕಾರ. ಅಲ್ಲಿನ ಸರ್ಕಾರದ ಪೇಪರ್‌ಗಳಲ್ಲಿ ಮಹಾತ್ಮ ಗಾಂಧಿಯ ಫೋಟೋ ಕೂಡ ಹಾಕುತ್ತಿರಲಿಲ್ಲ. ಆಜಾದ್ ಹಿಂದ್ ಫೌಜ್‌ನ ಪ್ರದೇಶದಲ್ಲಿ ನೇತಾಜಿ ಅವರ ಪುತ್ಥಳಿ ಮೇಲೆ ಬಾಂಬ್ ಹಾಕಿದಾಗ ಅಲ್ಲಿ ಕಾಂಗ್ರೆಸ್ ಸರ್ಕಾರವಿತ್ತು. ಮಣಿಪುರದ ಶಾಲೆಗಳಲ್ಲಿ ರಾಷ್ಟ್ರಗೀತೆ ಹಾಡುತ್ತಿರಲಿಲ್ಲ ಅಂದು ಇದೇ ಕಾಂಗ್ರೆಸ್ ಸರ್ಕಾರವಿತ್ತು. ಒಂದು ಅಭಿಯಾನ ನಡೆಸಿ ಲೈಬ್ರೆರಿಯಲ್ಲಿದ್ದ ಎಲ್ಲಾ ಪುಸ್ತಕಗಳನ್ನು ಸುಟ್ಟು ಹಾಕಲಾಗಿತ್ತು. ದೇಶದ ಜ್ಞಾನ ಸಂಪತ್ತು ಸುಟ್ಟುಹೋಗುವಾಗ ಅಲ್ಲಿ ಕಾಂಗ್ರೆಸ್ ಸರ್ಕಾರವಿತ್ತು. ಮಣಿಪುರದಲ್ಲಿ ಸಂಜೆ 6 ಗಂಟೆಗೆ ದೇವಸ್ಥಾನದ ಬಾಗಿಲು ಹಾಕಬೇಕಾಗಿ ಬರುತ್ತಿತ್ತು. ಸೇನೆಯ ರಕ್ಷಣೆ ನೀಡಲಾಗುತ್ತಿತ್ತು ಅಂದು ಅಲ್ಲಿದ್ದದ್ದು ಕಾಂಗ್ರೆಸ್ ಸರ್ಕಾರ. ಇಂಫಾಲ್‌ನ ಇಸ್ಕಾನ್ ಮಂದಿರದಲ್ಲಿ ಬಾಂಬ್ ಹಾಕಿ ಜನರನ್ನು ಸಾಯಿಸಿದರಲ್ಲ ಆಗ ಯಾರ ಸರ್ಕಾರವಿತ್ತು? ಐಎಎಸ್, ಐಪಿಎಸ್ ಅಧಿಕಾರಿಗಳು ಅಲ್ಲಿ ಕೆಲಸ ಮಾಡಬೇಕಾದರೆ ತಮ್ಮ ವೇತನದ ಒಂದು ಭಾಗವನ್ನು ಉಗ್ರವಾದಿಗಳಿಗೆ ನೀಡಬೇಕಿತ್ತು, ಆಗ ಅಲ್ಲಿದ್ದದ್ದು ಯಾರ ಸರ್ಕಾರ? ಎಂದು ಮೋದಿ ಪ್ರಶ್ನೆ ಮಾಡಿದ್ದಾರೆ.
HAL ಮುಳುಗುತ್ತಿದೆ ಎಂದು ವಿಕ್ಷಗಳು ಟೀಕಿಸಿದ್ದವು; ಇಂದು ರಾಷ್ಟ್ರದ ಹೆಮ್ಮೆಯಾಗಿದೆ: ಮೋದಿ