ತಿರುಪತಿ ದೇಗುಲದ ಲಡ್ಡು ಪ್ರಸಾದದಲ್ಲಿ ಬಳಸಲಾಗಿದ್ದ ಕಲಬೆರಕೆ ತುಪ್ಪ ಪೂರೈಕೆ ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರೀಯ ತನಿಖಾ ದಳ ಲಡ್ಡು ತಯಾರಿಸಲು ಬಳಸಿದ ತುಪ್ಪ ದನದ ಮಾಂಸ ಹಂದಿ ಕೊಬ್ಬಿನಿಂದ ತಯಾರಿಸಲಾಗಿಲ್ಲ. ಸಸ್ಯಜನ್ಯ ಎಣ್ಣೆ ಹಾಗೂ ರಾಸಾಯನಿಕದಿಂದ ತಯಾರಿಸಲಾಗುತ್ತಿತ್ತು ಎಂದು ತಿಳಿಸಿದೆ.

ತಿರುಪತಿ: ವಿಶ್ವಪ್ರಸಿದ್ಧ ತಿರುಪತಿ ವೆಂಕಟೇಶ್ವರ ದೇಗುಲದ ಲಡ್ಡು ಪ್ರಸಾದದಲ್ಲಿ ಬಳಸಲಾಗಿದ್ದ ಕಲಬೆರಕೆ ತುಪ್ಪ ಪೂರೈಕೆ ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರೀಯ ತನಿಖಾ ದಳವು (ಸಿಬಿಐ), ಲಡ್ಡು ತಯಾರಿಸಲು ಬಳಸಿದ ತುಪ್ಪವನ್ನು ದನದ ಮಾಂಸ ಅಥವಾ ಹಂದಿ ಕೊಬ್ಬಿನಿಂದ ತಯಾರಿಸಲಾಗಿಲ್ಲ. ಬದಲಾಗಿ ಸಸ್ಯಜನ್ಯ ಎಣ್ಣೆ ಹಾಗೂ ರಾಸಾಯನಿಕದಿಂದ ತಯಾರಿಸಲಾಗುತ್ತಿತ್ತು ಎಂದು ತಿಳಿಸಿದೆ. ಜೊತೆಗೆ, ಹಲವು ವರ್ಷಗಳಿಂದ ಸುಮಾರು 250 ಕೋಟಿ ರು. ಮೌಲ್ಯದ 68 ಲಕ್ಷ ಕೆ.ಜಿ.ಯಷ್ಟು ನಕಲಿ ತುಪ್ಪದ ಪೂರೈಕೆಯಾಗಿದೆ ಎಂಬ ಆಘಾತಕಾರಿ ಸಂಗತಿಯನ್ನು ಬಯಲು ಮಾಡಿದೆ.

ಈ ಪ್ರಕರಣದ ತನಿಖೆಯನ್ನು ಸಿಬಿಐ ನೇತೃತ್ವದ ವಿಶೇಷ ತನಿಖಾ ತಂಡ (ಎಸ್‌ಐಟಿ) ನಡೆಸುತ್ತಿದ್ದು, ನೆಲ್ಲೂರಿನ ಭ್ರಷ್ಟಾಚಾರ ವಿರೋಧಿ ಕೋರ್ಟ್‌ಗೆ ಅಂತಿಮ ಆರೋಪಪಟ್ಟಿ ಸಲ್ಲಿಸಿತ್ತು. ಅದರಲ್ಲಿ ಈ ಅಂಶಗಳಿವೆ ಎಂದು ಮಾಧ್ಯಮ ವರದಿಗಳು ಹೇಳಿವೆ.

‘ಟಿಟಿಡಿಗೆ ಪೂರೈಕೆಯಾಗುತ್ತಿದ್ದ ತುಪ್ಪ ಹಾಲಿನ ಉತ್ಪನ್ನವೇ ಆಗಿರಲಿಲ್ಲ. ಬದಲಾಗಿ ತಾಳೆ ಎಣ್ಣೆ, ತಾಳೆ ಬೀಜದ ಎಣ್ಣೆ ಮತ್ತು ಇತರ ಸಸ್ಯಜನ್ಯ ಎಣ್ಣೆಗಳಿಂದ ತಯಾರಿಸಲಾಗಿತ್ತು. ಶುದ್ಧ ಹಸುವಿನ ತುಪ್ಪದ ಬಣ್ಣ ಮತ್ತು ಸುವಾಸನೆ ಬರುವಂತೆ ಮಾಡಲು ಮತ್ತು ಪ್ರಯೋಗಾಲಯದ ಮಾನದಂಡಗಳಿಗೆ ಸೂಕ್ತವಾಗಿಸಲು, ಅಸಿಟಿಕ್ ಆ್ಯಸಿಡ್‌ ಎಸ್ಟರ್, ಬೀಟಾ ಕ್ಯಾರೊಟಿನ್ ಮೊದಲಾದ ರಾಸಾಯನಿಕಗಳ ಸೇರ್ಪಡೆ ಮಾಡಲಾಗುತ್ತಿತ್ತು. ಹಲವಾರು ವರ್ಷಗಳಿಂದ, ಸುಮಾರು 250 ಕೋಟಿ ರು. ಮೌಲ್ಯದ ಅಂದಾಜು 68 ಲಕ್ಷ ಕೆ.ಜಿ. ನಕಲಿ ತುಪ್ಪ ಪೂರೈಕೆಯಾಗಿದೆ’ ಎಂದು ಉಲ್ಲೇಖಿಸಿದೆ.

ತಿರಸ್ಕೃತ ತುಪ್ಪ ಮರುಬಳಕೆ:

‘ಗುಣಮಟ್ಟ ಪರೀಕ್ಷೆಯಲ್ಲಿ ತಿರಸ್ಕೃತವಾದ ಟ್ಯಾಂಕರ್‌ಗಳನ್ನು ಕೈಬಿಡುವ ಬದಲು, ಮರುಬಳಕೆ ಮಾಡಲಾಗಿದೆ. ಕೆಲವು ತಿರಸ್ಕೃತ ಟ್ಯಾಂಕರ್‌ಗಳಲ್ಲಿ ಹಂದಿ ಮತ್ತು ಗೋವಿನ ಕೊಬ್ಬಿನ ಅಂಶಗಳಿದ್ದವು. ಆದರೆ ಇವು ತಿರಸ್ಕೃತ ಬ್ಯಾಚ್‌ಗಳಲ್ಲಿ ಮಾತ್ರ ಪತ್ತೆಯಾಗಿವೆ. ಪ್ರಸಾದಕ್ಕೆ ಬಳಸುವ ಅಧಿಕೃತವಾಗಿ ಪರೀಕ್ಷಿಸಲಾದ ತುಪ್ಪದ ಭಾಗವಾಗಿರಲಿಲ್ಲ’ ಎಂದು ತಿಳಿಸಿದೆ.

ಆರೋಪಪಟ್ಟಿಯಲ್ಲಿ 36 ಮಂದಿ:

ಅಂತಿಮ ಆರೋಪಪಟ್ಟಿಯಲ್ಲಿ ಸಿಬಿಐ ಒಟ್ಟು 36 ಮಂದಿಯ ಹೆಸರು ಸೇರಿಸಿದೆ. ಇವರಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಅಧಿಕಾರಿಗಳು, ಉತ್ತರಾಖಂಡದ ತುಪ್ಪ ಪೂರೈಕೆದಾರರು, ಗುಣಮಟ್ಟ ಪರೀಕ್ಷೆ ಮಾಡಿ ಸುಳ್ಳು ವರದಿ ನೀಡುತ್ತಿದ್ದವರು, ಲಂಚ ಮತ್ತು ಉಡುಗೊರೆ ಪಡೆದು ವಂಚನೆಯಲ್ಲಿ ಭಾಗಿಯಾದವರು ಸೇರಿದ್ದಾರೆ.

ನಾಯ್ಡು, ಕಲ್ಯಾಣ್‌ ಕ್ಷಮೆಗೆ ಜಗನ್ ಪಕ್ಷದ ಆಗ್ರಹ:

ಈ ಹಿಂದಿನ, ಜಗನ್ಮೋಹನ ರೆಡ್ಡಿ ನೇತೃತ್ವದ ವೈಎಸ್‌ಆರ್‌ ಕಾಂಗ್ರೆಸ್‌ ಅವಧಿಯಲ್ಲಿ ಅಕ್ರಮ ನಡೆದಿದ್ದು, ಪ್ರಾಣಿ ಕೊಬ್ಬಿನ ತುಪ್ಪ ಪೂರೈಕೆ ಮಾಡಲಾಗಿದೆ ಎಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಮತ್ತು ಉಪಮುಖ್ಯಮಂತ್ರಿ ಪವನ್‌ ಕಲ್ಯಾಣ್‌ ಗಂಭೀರ ಆರೋಪ ಮಾಡಿದ್ದರು. ಆದರೆ ಆರೋಪಪಟ್ಟಿಯಲ್ಲಿ ಇದು ಸುಳ್ಳು ಎಂದು ಉಲ್ಲೇಖಿಸಿದ ಬೆನ್ನಲ್ಲೇ ವಿಪಕ್ಷ ನಾಯಕರು, ನಾಯ್ಡು ಮತ್ತು ಕಲ್ಯಾಣ್‌ ಕ್ಷಮೆಗೆ ಆಗ್ರಹಿಸಿದ್ದಾರೆ.