ಜೆಡಿಯು ಬಿಹಾರದಲ್ಲಿ ಹಾಗೂ ರಾಷ್ಟ್ರಮಟ್ಟದಲ್ಲಿ ಮೈತ್ರಿಕೂಟದಿಂದ ಹೊರಹೋಗಿ ಬಿಜೆಪಿ ಜೊತೆ ಕೈಜೋಡಿಸಿರುವುದು ಕಾಂಗ್ರೆಸ್‌ ಮುಂದಾಳತ್ವದ ‘ಇಂಡಿಯಾ’ ಕೂಟಕ್ಕೆ ಬಹುದೊಡ್ಡ ಹೊಡೆತ ನೀಡಿದೆ.

ನವದೆಹಲಿ (ಜನವರಿ 29, 2024): ಬಿಹಾರದಲ್ಲಿ ಜೆಡಿಯು ನಾಯಕ ನಿತೀಶ್‌ ಕುಮಾರ್‌ ‘ಇಂಡಿಯಾ’ ಮೈತ್ರಿಕೂಟವನ್ನು ತೊರೆದಿರುವುದು ಬಿಜೆಪಿಯನ್ನು ಸೋಲಿಸುವ ಉದ್ದೇಶದಿಂದ ಹುಟ್ಟಿಕೊಂಡಿದ್ದ ವಿಪಕ್ಷಗಳ ಮೈತ್ರಿಕೂಟಕ್ಕೆ ಭಾರಿ ಆಘಾತ ತಂದಿದೆ.

ಈಗಾಗಲೇ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ ಪಕ್ಷದ (ಟಿಎಂಸಿ) ನಾಯಕಿ ಮಮತಾ ಬ್ಯಾನರ್ಜಿ ತಮ್ಮ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಯಾವುದೇ ಸೀಟು ಬಿಟ್ಟುಕೊಡುವುದಿಲ್ಲ ಎಂದು ಹೇಳಿದ್ದರು. ಪಂಜಾಬ್‌ನಲ್ಲಿ ಆಮ್‌ ಆದ್ಮಿ ಪಕ್ಷದ (ಆಪ್‌) ಮುಖ್ಯಮಂತ್ರಿ ಭಗವಂತ ಮಾನ್‌ ಕೂಡ ಎಲ್ಲಾ ಸೀಟುಗಳಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದರು. ಆದರೆ ಅವರಿಬ್ಬರೂ ರಾಷ್ಟ್ರಮಟ್ಟದಲ್ಲಿ ಮೈತ್ರಿಕೂಟದಲ್ಲೇ ಮುಂದುವರೆಯುವುದಾಗಿ ಹೇಳಿದ್ದರು. ಇದೀಗ ಜೆಡಿಯು ಬಿಹಾರದಲ್ಲಿ ಹಾಗೂ ರಾಷ್ಟ್ರಮಟ್ಟದಲ್ಲಿ ಮೈತ್ರಿಕೂಟದಿಂದ ಹೊರಹೋಗಿ ಬಿಜೆಪಿ ಜೊತೆ ಕೈಜೋಡಿಸಿರುವುದು ಕಾಂಗ್ರೆಸ್‌ ಮುಂದಾಳತ್ವದ ‘ಇಂಡಿಯಾ’ ಕೂಟಕ್ಕೆ ಬಹುದೊಡ್ಡ ಹೊಡೆತ ನೀಡಿದೆ.

ಇದನ್ನು ಓದಿ: ನಿತೀಶ್‌ಗೆ ಮತ್ತೆ ಬಿಜೆಪಿ ಬಾಗಿಲು ತೆರೆದಿದ್ದೇಕೆ? ನಿತೀಶ್‌ ನಡೆಗೆ ಪಿಎಂ ಅಭ್ಯರ್ಥಿ ಖರ್ಗೆ ಕಾರಣ!

ಪ್ರಾದೇಶಿಕ ಪಕ್ಷಗಳ ಕೈ ಮೇಲು:
ವಿಶೇಷವಾಗಿ, ನಿತೀಶ್‌ ನಿರ್ಗಮನದಿಂದ ಪ್ರಾದೇಶಿಕ ಪಕ್ಷಗಳು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಸೀಟುಗಳಿಗಾಗಿ ಕಾಂಗ್ರೆಸ್‌ ಜೊತೆ ನಡೆಸುವ ‘ಚೌಕಾಶಿ’ ಇನ್ನಷ್ಟು ಹೆಚ್ಚಲಿದ್ದು, ಅದು ಕಾಂಗ್ರೆಸ್‌ ಪಕ್ಷಕ್ಕೆ ಸ್ಪರ್ಧಿಸಲು ಸಿಗುವ ಸೀಟುಗಳ ಸಂಖ್ಯೆಯನ್ನು ಕಡಿತಗೊಳಿಸಬಹುದು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಇಂಡಿಯಾ ಮೈತ್ರಿಕೂಟದಿಂದ ನಿರ್ಗಮಿಸಲು ನಿತೀಶ್‌ ನೀಡಿರುವ ಬಹುಮುಖ್ಯ ಕಾರಣವೆಂದರೆ ‘ಮೈತ್ರಿಕೂಟದಲ್ಲಿ ಏನೂ ಪ್ರಗತಿಯಾಗುತ್ತಿಲ್ಲ. ಪ್ರಾದೇಶಿಕ ಪಕ್ಷಗಳು ಶಕ್ತಿಯುತವಾಗಿ ಇರುವ ಕಡೆಯಲ್ಲೂ ಕಾಂಗ್ರೆಸ್‌ನವರು ಹೆಚ್ಚು ಸೀಟುಗಳಲ್ಲಿ ಸ್ಪರ್ಧಿಸುವುದಾಗಿ ಒತ್ತಡ ಹಾಕುತ್ತಿದ್ದಾರೆ’ ಎಂಬುದೇ ಆಗಿದೆ. ಹೀಗಾಗಿ, ಕಾಂಗ್ರೆಸ್‌ನ ಒತ್ತಡದಿಂದಲೇ ನಿತೀಶ್‌ ಮೈತ್ರಿ ತೊರೆದರು ಎಂಬ ನೆಪ ಮುಂದಿಟ್ಟು ಇನ್ನಿತರ ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್‌ ಬಳಿ ಹೆಚ್ಚು ಸೀಟುಗಳಿಗೆ ಬೇಡಿಕೆ ಇಡಬಹುದು ಎನ್ನಲಾಗಿದೆ.

ಬಿಹಾರದಲ್ಲಿ ಬಿಜೆಪಿಗೆ ಆನೆ ಬಲ:
ಒಂದೆಡೆ ಬಿಹಾರದಲ್ಲಿ ಇಂಡಿಯಾ ಮೈತ್ರಿಕೂಟಕ್ಕೆ ನಿತೀಶ್‌ ನಿರ್ಗಮನದಿಂದ ಹಿನ್ನಡೆಯಾಗಿದ್ದರೆ, ಅವರ ಆಗಮನದಿಂದ ಬಿಜೆಪಿ ನೇತೃತ್ವದ ಎನ್‌ಡಿಎಗೆ ಆನೆಬಲ ಬಂದಂತಾಗಿದೆ. ಈ ಬೆಳವಣಿಗೆಯು 40 ಲೋಕಸಭಾ ಸೀಟುಗಳಿರುವ ಬಿಹಾರದಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಅನುಕೂಲ ಮಾಡಿಕೊಡಲಿದೆ ಎಂದು ಹೇಳಲಾಗಿದೆ.

Breaking: ಬಿಹಾರ ಸಿಎಂ ಸ್ಥಾನಕ್ಕೆ ನಿತೀಶ್‌ ಕುಮಾರ್‌ ರಾಜೀನಾಮೆ: ಸಂಜೆ ಬಿಜೆಪಿ ಜತೆ ಸೇರಿ ಮತ್ತೆ ಪ್ರಮಾಣ ವಚನ!

ಕಾಂಗ್ರೆಸ್‌ನ ಇಮೇಜ್‌ಗೆ ಧಕ್ಕೆ:
ಇಂಡಿಯಾ ಮೈತ್ರಿಕೂಟವನ್ನು ಒಗ್ಗಟ್ಟಿನಿಂದ ಮುನ್ನಡೆಸುವ ಜವಾಬ್ದಾರಿಯನ್ನು ಕಾಂಗ್ರೆಸ್‌ ಪಕ್ಷ ಹಾಗೂ ಅದರ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೊತ್ತುಕೊಂಡಿದ್ದರು. ಜೆಡಿಯು ನಿರ್ಗಮನವು ಕಾಂಗ್ರೆಸ್‌ನ ಇಮೇಜ್‌ಗೆ ಧಕ್ಕೆ ತಂದಿದೆ. ಹೀಗಾಗಿ ಬಿಜೆಪಿಯು ಲೋಕಸಭೆ ಚುನಾವಣೆಯಲ್ಲಿ ‘ಇಂಡಿಯಾ ಕೂಟದಲ್ಲಿ ಒಗ್ಗಟ್ಟಿಲ್ಲ’ ಎಂಬ ಪ್ರಚಾರವನ್ನು ಇನ್ನಷ್ಟು ತೀವ್ರಗೊಳಿಸಲಿದೆ.

ಘಟಬಂಧನ್ ಬಿಟ್ಟು ಇಂದು ಮತ್ತೆ ಬಿಜೆಪಿ ತೆಕ್ಕೆಗೆ ನಿತೀಶ್‌? ಇಂಡಿಯಾ ಮೈತ್ರಿಕೂಟಕ್ಕೆ ಮರಣಶಾಸನ!