ನಿತೀಶ್‌ಗೆ ಮತ್ತೆ ಬಿಜೆಪಿ ಬಾಗಿಲು ತೆರೆದಿದ್ದೇಕೆ? ನಿತೀಶ್ ನಡೆಗೆ ಪಿಎಂ ಅಭ್ಯರ್ಥಿ ಖರ್ಗೆ ಕಾರಣ!
ನಿತೀಶ್ ತಾವಾಗೇ ಬಿಜೆಪಿಯತ್ತ ಬಂದಿದ್ದಾರೆ. ಹೀಗಾಗಿ ಪಕ್ಷ ಒಡೆದು ಸರ್ಕಾರ ಮಾಡಿತು ಎಂಬ ಅಪವಾದ ಬರದು ಎಂಬ ಆಶಾಭಾವದೊಂದಿಗೆ ಬಿಹಾರದಲ್ಲಿ ನಿತೀಶ್ ಜತೆ ಬಿಜೆಪಿ ಮೈತ್ರಿ ಮಾಡಿಕೊಂಡಿದೆ.
ಪಟನಾ (ಜನವರಿ 29, 2024): ಜೆಡಿಯು ನಾಯಕ ನಿತೀಶ್ ಕುಮಾರ್ ಅವರು 2 ವರ್ಷ ಹಿಂದೆ ಬಿಜೆಪಿಗೆ ಕೈಕೊಟ್ಟು ಆರ್‌ಜೆಡಿ-ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡಾಗ ಬಿಜೆಪಿ ನಾಯಕರು ‘ನಿತೀಶ್‌ಗೆ ಕೇಸರಿ ಪಕ್ಷದ ಬಾಗಿಲು ಮುಚ್ಚಿದೆ’ ಎಂದಿದ್ದರು. ಆದರೆ ಈಗ ದಿಢೀರ್ ನಿಲುವು ಬದಲಿಸಿ ನಿತೀಶ್ ಜತೆ ಮೈತ್ರಿ ಮಾಡಿಕೊಂಡಿದೆ. ಇದಕ್ಕೆ ಕಾರಣಗಳು ಹೀಗಿವೆ.
- ಅನೇಕ ಬಾರಿ ನಿಷ್ಠೆ ಬದಲಿಸಿದರೂ ನಿತೀಶ್ ಬಿಹಾರದ ಜನಪ್ರಿಯ ನಾಯಕ. ಹೀಗಾಗಿ ಅವರ ಜನಪ್ರಿಯತೆ ಬಳಸಿಕೊಂಡು ಈ ವರ್ಷದ ಲೋಕಸಭೆ ಚುನಾವಣೆಯಲ್ಲಿ ಮೋದಿಯನ್ನು ಮತ್ತೆ ಪ್ರಧಾನಿ ಮಾಡಲು ಬಿಹಾರದ 40 ಲೋಕಸಭಾ ಸೀಟುಗಳಲ್ಲಿ ಹೆಚ್ಚಿನ ಸೀಟು ಗೆಲ್ಲಲು ಬಿಜೆಪಿ ಯತ್ನ
- ನಿತೀಶ್ ಜನಪ್ರಿಯರಾಗಿದ್ದರೂ ಕಾಲಕ್ರಮೇಣ ಜೆಡಿಯು ಬಲ ಬಿಹಾರದಲ್ಲಿ ಕುಸಿದಿದೆ. ಇದನ್ನೇ ಬಳಸಿಕೊಂಡು ಮೈತ್ರಿ ಸರ್ಕಾರದಲ್ಲಿ ತನ್ನ ಹಿಡಿತ ಸಾಧಿಸಲು ಬಿಜೆಪಿ ಯತ್ನ
- ನಿತೀಶ್ ಇಂಡಿಯಾ ಕೂಟದ ಮುಖ್ಯ ನಾಯಕರಾಗಿದ್ದರು. ಈಗ ನಿತೀಶ್‌ರನ್ನೇ ಸೆಳೆದು ಇಂಡಿಯಾ ಕೂಟವನ್ನು ಬಲಹೀನ ಮಾಡಲು ಬಿಜೆಪಿ ಯತ್ನ
- ಬೇರೆ ರಾಜ್ಯಗಳಂತೆ ಬಿಜೆಪಿ ಇಲ್ಲಿ ಯಾವ ಪಕ್ಷವನ್ನೂ ಒಡೆದಿಲ್ಲ. ನಿತೀಶ್ ತಾವಾಗೇ ಬಿಜೆಪಿಯತ್ತ ಬಂದಿದ್ದಾರೆ. ಹೀಗಾಗಿ ಪಕ್ಷ ಒಡೆದು ಸರ್ಕಾರ ಮಾಡಿತು ಎಂಬ ಅಪವಾದ ಬರದು ಎಂಬ ಆಶಾಭಾವದೊಂದಿಗೆ ಬಿಹಾರದಲ್ಲಿ ನಿತೀಶ್ ಜತೆ ಬಿಜೆಪಿ ಮೈತ್ರಿ ಮಾಡಿಕೊಂಡಿದೆ.
Breaking: ಬಿಹಾರ ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ: ಸಂಜೆ ಬಿಜೆಪಿ ಜತೆ ಸೇರಿ ಮತ್ತೆ ಪ್ರಮಾಣ ವಚನ!
ನಿತೀಶ್ ನಡೆಗೆ ಪಿಎಂ ಅಭ್ಯರ್ಥಿ ಖರ್ಗೆ ಕಾರಣ!
ಪಟನಾ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಇಂಡಿಯಾ ಕೂಟದ ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಲು ನಡೆಸಿದ ಯತ್ನವೇ ನಿತೀಶ್ ಕುಮಾರ್ ಅವರು ಇಂಡಿಯಾ ಕೂಟಕ್ಕೆ ಗುಡ್‌ಬೈ ಹೇಳಲು ನಾಂದಿ ಹಾಡಿತು ಎಂದು ಜೆಡಿಯು ನಾಯಕ ಕೆ.ಸಿ. ತ್ಯಾಗಿ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಕಾಂಗ್ರೆಸ್ ಪಕ್ಷವು ಇಂಡಿಯಾ ಮೈತ್ರಿಕೂಟದ ನಾಯಕತ್ವ ಕಸಿದುಕೊಳ್ಳಲು ಬಯಸಿದ್ದೇ ನಿತೀಶ್ ಮೈತ್ರಿಕೂಟದಿಂದ ಹೊರಬರಲು ಕಾರಣ. ಮುಂಬೈನಲ್ಲಿ ನಡೆದ ಮೈತ್ರಿಕೂಟದ ಸಭೆಯಲ್ಲಿ ನಾವು ಯಾರನ್ನೂ ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿದೇ ಚುನಾವಣೆ ಎದುರಿಸಲು ನಿರ್ಧರಿಸಿದ್ದೆವು. ಆದರೆ ಡಿಸೆಂಬರ್ 19ರಂದು ನಡೆದ ಸಭೆಯಲ್ಲಿ ಸಂಚಿನ ಮೂಲಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಪ್ರಸ್ತಾಪಿಸಲಾಯಿತು. ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮೂಲಕ ಖರ್ಗೆ ಹೆಸರು ಸೂಚಿಸುವಂತೆ ಮಾಡಲಾಯಿತು’ ಎಂದು ಆರೋಪಿಸಿದರು.
ಘಟಬಂಧನ್ ಬಿಟ್ಟು ಇಂದು ಮತ್ತೆ ಬಿಜೆಪಿ ತೆಕ್ಕೆಗೆ ನಿತೀಶ್? ಇಂಡಿಯಾ ಮೈತ್ರಿಕೂಟಕ್ಕೆ ಮರಣಶಾಸನ!