ಘಟಬಂಧನ್ ಬಿಟ್ಟು ಇಂದು ಮತ್ತೆ ಬಿಜೆಪಿ ತೆಕ್ಕೆಗೆ ನಿತೀಶ್? ಇಂಡಿಯಾ ಮೈತ್ರಿಕೂಟಕ್ಕೆ ಮರಣಶಾಸನ!
ಭಾನುವಾರ ಬೆಳಗ್ಗೆ ರಾಜ್ಯಪಾಲರನ್ನು ಭೇಟಿ ಆಗಲಿರುವ ನಿತೀಶ್ ಔಪಚಾರಿಕವಾಗಿ ನಿತೀಶ್ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.
ಪಟನಾ (ಜನವರಿ 28, 2024): ಬಿಹಾರ ರಾಜಕೀಯ ಬೃಹನ್ನಾಟಕ ಶನಿವಾರವೂ ಮುಂದುವರೆದಿದ್ದು, ಬಿಜೆಪಿ ಹಾಗೂ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಮರುಮೈತ್ರಿಗೆ ಅಂತಿಮ ವೇದಿಕೆ ಸಿದ್ಧವಾಗಿದೆ. ಭಾನುವಾರ ನಿತೀಶ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಜತೆ ಸರ್ಕಾರ ರಚಿಸುವ ಎಲ್ಲ ಸಾಧ್ಯತೆಗಳಿವೆ.
ಇದರೊಂದಿಗೆ ರಾಜ್ಯದಲ್ಲಿ ಆರ್ ಜೆಡಿ, ಎಡರಂಗ ಹಾಗೂ ಕಾಂಗ್ರೆಸ್ ಜತೆಗಿನ ನಿತೀಶ್ ಮೈತ್ರಿ ಮುರಿಯುವುದು ಸ್ಪಷ್ಟವಾಗಿದೆ. ಅಲ್ಲದೆ ಬಿಜೆಪಿ ವಿರುದ್ಧದ ಇಂಡಿಯಾ ಕೂಟ ರಚನೆಗೆ ಪೌರೋಹಿತ್ಯ ವಹಿಸಿದ್ದ ನಿತೀಶ್ ಅವರು ಕೂಟದಿಂದ ಹೊರಬೀಳುವುದರೊಂದಿಗೆ ವಿಪಕ್ಷಗಳ ಹೊಸ ಮೈತ್ರಿಕೂಟ ನುಚ್ಚುನೂರಾಗುವ ಎಲ್ಲ ಸಾಧ್ಯತೆಗಳು ಗೋಚರಿಸಿವೆ. ಇದಕ್ಕೆ ಪೂರಕವಾಗಿ ಜೆಡಿಯು ವಕ್ತಾರ ಕೆ.ಸಿ.ತ್ಯಾಗಿ, 'ಇಂಡಿಯಾ ಕೂಟ ಪತನದಂಚಿನಲ್ಲಿದೆ. ನಿತೀಶ್‌ಗೆ ಆ ಕೂಟದಲ್ಲಿ ಮರ್ಯಾದೆ ಸಿಕ್ಕಿಲ್ಲ' ಎಂದಿದ್ದಾರೆ.
ಇದನ್ನು ಓದಿ: ನಾಳೆ ಬಿಜೆಪಿ - ನಿತೀಶ್ ಸರ್ಕಾರ? ಸಿಎಂ ಆಗಿ 9ನೇ ಬಾರಿ ನಿತೀಶ್ ಪ್ರಮಾಣ: ಬಿಜೆಪಿಗೆ 2 ಡಿಸಿಎಂ?
ಈಗಾಗಲೇ ಕೂಟದಿಂದ ಹೊರಬರುವುದಾಗಿ ಇತ್ತೀಚೆಗೆ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಹಾಗೂ ಅರವಿಂದ ಕೇಜಿವಾಲ್ ಘೋಷಿಸಿದ್ದರು.
ನಿನ್ನೆ ನಡೆದಿದ್ದೇನು?:
ಶನಿವಾರ ಬಿಹಾರದಲ್ಲಿ ಇಡೀ ದಿನ ತೀವ್ರ ರಾಜಕೀಯ ಚಟುವಟಿಕೆ ನಡೆದವು. ಜೆಡಿಯು ಹಾಗೂ ಬಿಜೆಪಿ ಪ್ರತ್ಯೇಕವಾಗಿ ಶಾಸಕರ ಸಭೆಗಳನ್ನು ನಡೆಸಿದವು. ಮರುಮೈತ್ರಿಗೆ ಉಭಯ ಪಕ್ಷಗಳ ಶಾಸಕರು ಒಪ್ಪಿದರು.
ಇದನ್ನು ಓದಿ: ಯಾವುದೇ ಕ್ಷಣದಲ್ಲಿ ನಿತೀಶ್ ರಾಜೀನಾಮೆ! ಭಾನುವಾರ ಮತ್ತೆ ಸಿಎಂ ಆಗಿ ಪ್ರಮಾಣ ವಚನ; ಇಬ್ಬರು ಬಿಜೆಪಿ ನಾಯಕರಿಗೆ ಡಿಸಿಎಂ ಪಟ್ಟ?
ಭಾನುವಾರ ಬೆಳಗ್ಗೆ ರಾಜ್ಯಪಾಲರನ್ನು ಭೇಟಿ ಆಗಲಿರುವ ನಿತೀಶ್ ಹಾಗೂ ಬಿಜೆಪಿ ನಾಯಕರು ಹೊಸ ಮೈತ್ರಿ ಸರ್ಕಾರದ ಶಾಸಕರ ಪಟ್ಟಿ (ಬಿಜೆಪಿ-ಜೆಡಿಯು-ಹಮ್ ಸೇರಿ 128 ಬಲ) ನೀಡಲಿದ್ದಾರೆ. ಇದೇ ವೇಳೆ ಔಪಚಾರಿಕವಾಗಿ ನಿತೀಶ್ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.
ಬಳಿಕ ನಿತೀಶ್ ಸಂಜೆ 4 ಗಂಟೆಗೆ 9ನೇ ಬಾರಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಡಿಸಿಎಂ ಆಗಿ ಬಿಜೆಪಿಯ ಸುಶೀಲ್ ಮೋದಿ ಪ್ರಮಾಣವಚನ ಸ್ವೀಕರಿಸಬಹುದು. ಈಗ ಹಾಲಿ ಆರ್‌ಜೆಡಿ ಹೊಂದಿ ರುವ ಎಲ್ಲ ಸಚಿವ ಸ್ಥಾನಗಳು ಬಿಜೆಪಿಗೆ ಲಭಿಸಲಿವೆ ಎಂದು ಅದು ಹೇಳಿವೆ.
2025ರಲ್ಲಿ ರಾಜ್ಯ ವಿಧಾನಸಭೆ ಅವಧಿ ಮುಗಿಯಲಿದ್ದು, ಅಲ್ಲಿಯವರೆಗೆ ನಿತೀಶ್ ಮುಖ್ಯಮಂತ್ರಿ ಆಗಿರಲಿದ್ದಾರೆ. ಬಳಿಕ ಎನ್‌ಡಿಎ ಕೂಟದೆಲ್ಲಿ ಅವರಿಗೆ ರಾಷ್ಟ್ರಮಟ್ಟದಲ್ಲಿ ಮಹತ್ವದ ಸ್ಥಾನಮಾನ ನೀಡಲು ಬಿಜೆಪಿ ಒಪ್ಪಿದೆ ಎಂದೂ ಮೂಲಗಳು ತಿಳಿಸಿವೆ. ಭಾನುವಾರ ನಿತೀಶ್ ಪ್ರಮಾಣವಚನಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಆಗಮಿಸುವ ನಿರೀಕ್ಷೆಯಿದೆ.
ಲಾಲು, ತೇಜಸ್ವಿ ಸಡ್ಡು: ಆದರೆ ನಿತೀಶ್‌ಗೆ ಸಡ್ಡು ಹೊಡೆಯಲು ಲಾಲು ಯಾದವ್ ಹಾಗೂ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರ ಆರ್‌ಜೆಡಿ ಕೂಡ ಸಜ್ಜಾಗಿದ್ದು, 79 ಸದಸ್ಯರನ್ನು ಹೊಂದಿರುವ ತಮ್ಮ ಪಕ್ಷವು ಸದನದ ದೊಡ್ಡ ಪಕ್ಷವಾಗಿದೆ. ಹೀಗಾಗಿ ನಿಯಮಾನುಸಾರ ಸರ್ಕಾರ ರಚನೆಗೆ ತನಗೇ ಆಹ್ವಾನ ನೀಡಬೇಕು ಎಂದು ಪಟ್ಟು ಹಿಡಿಯುವ ಸಾಧ್ಯತೆ ಇದೆ.
ಅಲ್ಲದೆ, ಜೆಡಿಯು ಹೊರತಾಗಿ 115 ಸದಸ್ಯರ ಬೆಂಬಲ ಹೊಂದಿರುವ ಆರ್‌ಜೆಡಿ-ಕಾಂಗ್ರೆಸ್- ಎಡರಂಗ-ಎಐಎಂಐಎಂ ಕೂಟವು ಕೆಲ ಅತೃಪ್ತ ಜೆಡಿಯು ಶಾಸಕರನ್ನು ಸೆಳೆದು ಬಹುಮತಕ್ಕೆ ಬೇಕಾದ 123 ಸೀಟುಗಳನ್ನು ತಲುಪುವ ಯತ್ನ ಮಾಡುತ್ತಿದೆ.
ಸೋನಿಯಾ, ಖರ್ಗೆ ಫೋನ್‌ಗೂ ಸಿಗದ ನಿತೀಶ್ ಕುಮಾರ್
ನವದೆಹಲಿ: ನಿತೀಶ್ ಕುಮಾರ್‌ರನ್ನು ಸಂಪರ್ಕಿಸುವ ಕಾಂಗ್ರೆಸ್‌ನಾಯಕರಾದ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರ ಯತ್ನ ವಿಫಲಗೊಂಡಿದೆ. ನಿತೀಶ್ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಖರ್ಗೆ ಹೇಳಿದ್ದಾರೆ. ಸೋನಿಯಾ ಕೂಡ ನಿತೀಶ್ ಜತೆ ಮಾತನಾಡಲು ಯತ್ನಿಸಿದರೂ ಸಾಧ್ಯವಾಗಿಲ್ಲ ಎನ್ನಲಾಗಿದೆ.
ಮೈತ್ರಿಕೂಟದ ಒಗ್ಗಟ್ಟಿಗೆ ಪ್ರಯತ್ನಿಸುತ್ತಿದ್ದೇವೆ
ಇಂಡಿಯಾ ಮೈತ್ರಿಕೂಟ ಒಗ್ಗಟ್ಟಾಗಿರಲು ಪ್ರಯತ್ನಿಸುತ್ತಿದ್ದೇವೆ. ಪಶ್ಚಿಮ ಬಂಗಾಳ ನಾಯಕಿ ಮಮತಾ ಬ್ಯಾನರ್ಜಿ ಸೇರಿ ಎಲ್ಲರಿಗೂ ಪತ್ರ ಬರೆದಿದ್ದೇವೆ. ನಿತೀಶ್ ಕುಮಾರ್ ಮೈತ್ರಿಕೂಟ ತೊರೆವ ಅಥವಾ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಮಾಹಿತಿ ಇಲ್ಲ
• ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಅಧ್ಯಕ್ಷ