ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಆಯುಷ್ ವೈದ್ಯೆ ನುಸ್ರತ್ ಪರ್ವೀನ್ ಅವರ ಹಿಜಾಬ್ ಎಳೆದ ಘಟನೆ ವಿವಾದಕ್ಕೆ ಕಾರಣವಾಗಿದೆ. ಈ ಘಟನೆಯಿಂದ ತೀವ್ರವಾಗಿ ನೊಂದಿರುವ ವೈದ್ಯೆ, ತಮಗೆ ದೊರೆತ ಸರ್ಕಾರಿ ಸೇವೆಗೆ ಸೇರದಿರಲು ನಿರ್ಧರಿಸಿದ್ದಾರೆ.

ಪಾಟ್ನಾ (ಡಿ.17): ಬಿಹಾರ ಸಿಎಂ ನಿತೀಶ್‌ ಕುಮಾರ್‌ ಇತ್ತೀಚೆಗೆ ಆಯುಷ್‌ ವೈದ್ಯರಿಗೆ ನೇಮಕಾತಿ ಪತ್ರ ನೀಡುವ ವೇಳೆ ಆಯುಷ್‌ ವೈದ್ಯೆ ನುಸ್ರತ್‌ ಪರ್ವೀನ್‌ ಅವರ ಹಿಜಾಬ್‌ಅನ್ನು ವೇದಿಕೆಯಲ್ಲೇ ಎಳೆದಿದ್ದು ಭಾರೀ ವಿವಾದ ಸೃಷ್ಟಿಸಿತ್ತು. ಈ ಘಟನೆಯಿಂದ ನೊಂದಿರುವ ವೈದ್ಯೆ ನುಸ್ರತ್‌ ಪರ್ವನ್‌, ಸರ್ಕಾರಿ ಸೇವೆಗೆ ಸೇರದೇ ಇರುವ ನಿರ್ಧಾರ ಮಾಡಿದ್ದಾರೆ. ಪಾಟ್ನಾದಲ್ಲಿ ನಡೆದ ಸಂವಾದ್‌ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿತ್ತು. ಈ ವೇಳೆ ಹೊಸದಾಗಿ ನೇಮಕವಾದ ವೈದ್ಯರಿಗೆ ನಿತೀಶ್‌ ಕುಮಾರ್‌ ನೇಮಕಾತಿ ಪತ್ರ ವಿತರಿಸಿದ್ದರು. ನುಸ್ರತ್‌ ಪರ್ವೀನ್‌ಗೆ ಪತ್ರ ನೀಡುವ ವೇಳೆ ನಿತೀಶ್‌ ಕುಮಾರ್‌ ಹಿಜಾಬ್‌ ಎಳೆದಿದ್ದು ಭಾರೀ ಸುದ್ದಿಯಾಗಿತ್ತು.

'ಆಕೆ ಸೇವೆಗೆ ಸೇರದೇ ಇರುವ ದೃಢನಿಶ್ಚಯ ಮಾಡಿದ್ದಾಳೆ. ಆದರೆ, ನಾನೂ ಸೇರಿದಂತೆ ಎಲ್ಲಾ ಕುಟುಂಬ ಸದಸ್ಯರು ಆಕೆಗೆ ಬೇರೆ ಬೇರೆ ರೀತಿಯಲ್ಲಿ ಮನವೊಲಿಸಲು ಪ್ರಯತ್ನಿಸುತ್ತಿದ್ದೇವೆ. ಅದು ಇನ್ನೊಬ್ಬ ವ್ಯಕ್ತಿಯಿಂದ ಆದ ತಪ್ಪು ಎಂದೂ ನಾವು ಅವಳಿಗೆ ಹೇಳುತ್ತಿದ್ದೇವೆ. ಬೇರೊಬ್ಬ ವ್ಯಕ್ತಿ ಮಾಡಿರುವ ಕೃತ್ಯವಾಗಿರುವುದರಿಂದ ಆಕೆ ಏಕೆ ಕೆಟ್ಟದಾಗಿ ಭಾವಿಸಬೇಕು, ಅದರಿಂದ ಬಳಲಬೇಕು ಎನ್ನುವುದು ನಮ್ಮ ಉದ್ದೇಶ' ಎಂದು ಆಕೆಯ ಸಹೋದರ ತಿಳಿಸಿದ್ದಾರೆ. ಕೋಲ್ಕತ್ತಾದಲ್ಲಿ ನೆಲೆಸಿರುವ ಆಕೆಯ ಸಹೋದರ ಸರ್ಕಾರಿ ಕಾನೂನು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ.

ಡಿಸೆಂಬರ್‌ 20 ರಂದು ನುಸ್ರತ್‌ ಪರ್ವೀನ್‌ ಸೇವೆಗೆ ಸೇರಿಕೊಳ್ಳಬೇಕಿದೆ. ಯುವ ವೈದ್ಯೆಯ ಪತಿ ಕಾಲೇಜಿನಲ್ಲಿ ಕ್ಲಿನಿಕಲ್‌ ಸೈಕಾಲಜಿಸ್ಟ್‌ ಆಗಿ ಕೆಲಸ ಮಾಡುತ್ತಿದ್ದಾರೆ.

ಇನ್ನೊಂದೆಡೆ ವಿಪಕ್ಷ ಆರ್‌ಜೆಡಿ ಹಿಜಾಬ್‌ ಕ್ಲಿಪ್‌ಅನ್ನು ಹಂಚಿಕೊಂಡು, ನಿತೀಶ್‌ ಕುಮಾರ್‌ ಅವರ ವರ್ತನೆಯನ್ನು ಪ್ರಶ್ನೆ ಮಾಡಿದೆ. ಆರ್‌ಜೆಡಿ ತನ್ನ ಹ್ಯಾಂಡಲ್‌ನಲ್ಲಿ ಈ ವಿಡಿಯೋ ಹಂಚಿಕೊಂಡ ಬಳಿಕ ವಿಚಾರ ಭಾರೀ ವೈರಲ್‌ ಆಗಿತ್ತು. ಹೆಚ್ಚಿನ ಮಹಿಳೆಯರು ಬಿಹಾರ ಮುಖ್ಯಮಂತ್ರಿಯ ವರ್ತನೆಯನ್ನು ಖಂಡಿಸಿದ್ದಾರೆ.

ಘಟನೆ ನಡೆದು 2-3 ದಿನಗಳಾದರೂ ನಿತೀಶ್ ಕುಮಾರ್ ಆಗಲಿ ಅಥವಾ ಅವರ ಪಕ್ಷವಾಗಲಿ ಅಥವಾ ಬಿಹಾರ ಸರ್ಕಾರವಾಗಲಿ ಈ ವಿಷಯದ ಬಗ್ಗೆ ಯಾವುದೇ ಹೇಳಿಕೆಯನ್ನು ನೀಡಿಲ್ಲ.

ದಂಗಲ್‌ ನಟಿಯ ಆಕ್ರೋಶ

ಹಿಜಾಬ್‌ ಘಟನೆಯ ಬಗ್ಗೆ ದಂಗಲ್‌ ಸಿನಿಮಾದಲ್ಲಿ ಬಾಲನಟಿಯಾಗಿದ್ದ ಜೈರಾ ವಾಸಿಂ ಆಕ್ರೋಶ ವ್ಯಕ್ತಪಡಿಸಿದ್ದು, ನಿತೀಶ್‌ ಕುಮಾರ್‌ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದಾರೆ. ಈ ವಿಚಾರದಲ್ಲಿ ನಿತೀಶ್‌ ಕುಮಾರ್‌ ಬೇಷರತ್‌ ಕ್ಷಮೆಯಾಚಿಸಬೇಕೆಂದು ತಿಳಿಸಿದ್ದಾರೆ.