ತಮಿಳುನಾಡಿನ ಐಟಿ ಸಚಿವ ಮನೋ ತಂಗರಾಜ್ ಅವರು ಗಡ್ಕರಿ ಅವರನ್ನು ದುರಹಂಕಾರಿ ಎಂದು ಕರೆದಿದ್ದು ಅವರು ತಮಿಳು ಜನರನ್ನು ಅವಮಾನಿಸಿದ್ದಾರೆ ಎಂದು ಹೇಳಿದ್ದಾರೆ.
ಚೆನ್ನೈ (ಮೇ 27): ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಅವರು ಚೆನ್ನೈನಲ್ಲಿ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ವರ್ಚುವಲ್ ಮಾದರಿಯಲ್ಲಿ ಭಾಗವಹಿಸುವ ಸಂದರ್ಭದಲ್ಲಿ ತಮಿಳುನಾಡು ನಾಡಗೀತೆಗೆ (Tamil Nadu State Anthem) ಎದ್ದು ನಿಂತಿಲ್ಲ ಎಂದು ಆರೋಪಿಸಲಾಗಿದೆ. ಈ ಬೆನ್ನಲ್ಲೇ ತಮಿಳುನಾಡಿನ ಐಟಿ ಸಚಿವ ಮನೋ ತಂಗರಾಜ್ ಅವರು ಗಡ್ಕರಿ ಅವರನ್ನು ದುರಹಂಕಾರಿ ಎಂದು ಕರೆದಿದ್ದು ಅವರು ತಮಿಳು ಜನರನ್ನು ಅವಮಾನಿಸಿದ್ದಾರೆ ಎಂದು ಹೇಳಿದ್ದಾರೆ.
ಕಳೆದ ವರ್ಷ, ತಮಿಳು ತಾಯಿಗೆ ವಂದಿಸುವ ‘ತಮಿಳ್ ತಾಯ್ ವಾಳ್ತ್’ (ತಮಿಳು ತಾಯಿಯೇ ನಿನಗೆ ವಂದನೆ- Tamil Thai Vazhthu) ಗೀತೆಯನ್ನು ತಮಿಳುನಾಡು (Tamil Nadu) ತನ್ನ ನಾಡಗೀತೆಯಾಗಿ ಘೋಷಿಸಿದೆ ಹಾಗೂ ಈ ಗೀತೆ ಹಾಡುವಾಗ ಎಲ್ಲರೂ ಎದ್ದು ನಿಂತು ಗೌರವ ಕೊಡಬೇಕು ಎಂಬ ಸುತ್ತೋಲೆ ಹೊರಡಿಸಿದೆ.
55 ಸೆಕೆಂಡುಗಳಿರುವ ಈ ನಾಡಗೀತೆ ಹಾಡುವಾಗ ಅಂಗವಿಕಲರನ್ನು ಹೊರತುಪಡಿಸಿ ಉಳಿದವರೆಲ್ಲರೂ ಎದ್ದು ನಿಲ್ಲಬೇಕು ಹಾಗೂ ರಾಜ್ಯದ ಎಲ್ಲಾ ಶಾಲೆಗಳು,ವಿಶ್ವವಿದ್ಯಾನಿಲಯಗಳು, ಸರ್ಕಾರಿ ಕಚೇರಿಗಳು ಸೇರಿದಂತೆ ಎಲ್ಲಾ ಸಾರ್ವಜನಿಕ ಸಂಸ್ಥೆಗಳು ಯಾವುದೇ ಕಾರ್ಯಕ್ರಮ ಆರಂಭಿಸುವ ಮುನ್ನ ಈ ಗೀತೆಯನ್ನು ಹಾಡುವುದು ಕಡ್ಡಾಯ ಎಂದು ಸ್ಟಾಲಿನ್ (M K Stalin) ಆದೇಶಿಸಿದ್ದಾರೆ.
ಇದನ್ನೂ ಓದಿ:‘ತಮಿಳ್ ತಾಯ್ ವಾಳ್ತ್’ ಅಧಿಕೃತ ನಾಡಗೀತೆ : ಹಾಡುವಾಗ ಎದ್ದು ನಿಲ್ಲುವುದು ಕಡ್ಡಾಯ!
ಟ್ವೀಟ್‌ನಲ್ಲಿ ತಂಗರಾಜ್, ಗಡ್ಕರಿ ಅವರ "ಅಹಂಕಾರಿ ಮತ್ತು ಬೇಜವಾಬ್ದಾರಿಯುತ ಕೃತ್ಯಕ್ಕೆ" ಕಾರಣಗಳನ್ನು ನೀಡುವಂತೆ ಕೇಳಿದ್ದಾರೆ. ನಿನ್ನೆ ಪ್ರಧಾನಿ ಮೋದಿಯವರ ಚೆನ್ನೈ ಪ್ರವಾಸದ ವೇಳೆ ಈ ಘಟನೆ ನಡೆದಿದೆ.
"ತಮಿಳ್ ತಾಯ್ ವಾಳ್ತ್ (ತಮಿಳು ನಾಡಗೀತೆ) ಪ್ಲೇ ಆಗುತ್ತಿರುವಾಗ ಎದ್ದು ನಿಲ್ಲದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಇಡೀ ತಮಿಳು ಜನತೆಗೆ ಅವಮಾನ ಮಾಡಿದ್ದಾರೆ. ಸಚಿವರು ತಮ್ಮ ದುರಹಂಕಾರ ಮತ್ತು ಬೇಜವಾಬ್ದಾರಿ ಕೃತ್ಯಕ್ಕೆ ಕಾರಣವನ್ನು ಜನರಿಗೆ ವಿವರಿಸಬೇಕು." ಎಂದು ಮನೋ ತಂಗರಾಜ್ ಟ್ವೀಟ್ ಮಾಡಿದ್ದಾರೆ
ತಮಿಳಿನ ಖ್ಯಾತ ವಿದ್ವಾಂಸರ ಗೀತೆ: ತಮಿಳಿನ ಖ್ಯಾತ ವಿದ್ವಾಂಸ ಎಂ.ಎಸ್.ಪಿಳ್ಳೈ (1855-1897) ಗೀತೆ ಬರೆದಿದ್ದರು. ಎಂ.ಎಸ್.ವಿಶ್ವನಾಥನ್ ಸಂಗೀತ ನೀಡಿದ್ದಾರೆ. ಇದು 1970ರಿಂದ ಅಧಿಕೃತ ಗೀತೆ ಮಾನ್ಯತೆ ಹೊಂದಿತ್ತು. ಇದೀಗ ಇದಕ್ಕೆ ನಾಡಗೀತೆ ಸ್ಥಾನಮಾನ ದೊರಕಿದೆ. 2018ರಲ್ಲಿ ಈ ಗೀತಗಾಯನದ ವೇಳೆ ಕಂಚಿ ಕಾಮಕೋಟಿ ಶ್ರೀಗಳಾದ ವಿಜಯೇಂದ್ರ ಸರಸ್ವತಿಗಳು ಎದ್ದು ನಿಲ್ಲದೇ ಇರುವುದು ವಿವಾದಕ್ಕೀಡಾಗಿತ್ತು. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ನಾಡಗೀತೆಯಿದೆ. ಕರ್ನಾಟಕದಲ್ಲಿ ‘ಜಯಭಾರತ ತನನಿಯ ತನುಜಾತೆ’ ನಾಡಗೀತೆ ಹಾಡಲಾಗುತ್ತದೆ.
ಇದನ್ನೂ ಓದಿ: ಕೆನಡಾದಲ್ಲಿ ಕನ್ನಡದ ಕಂಪು: ಕನ್ನಡದಲ್ಲಿ ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದ ಕನ್ನಡಿಗ
