ನವದೆಹಲಿ (ಡಿ.18) : ಭಾರತದಿಂದ ಪರಾರಿಯಾಗಿ ದೂರದ ದಕ್ಷಿಣದ ಅಮೆರಿಕದ ದೇಶ ಈಕ್ವೆಡಾರ್‌ನಲ್ಲಿ ಕೈಲಾಸವೆಂಬ ದೇಶ ರಚನೆಯ ಘೋಷಣೆ ಮಾಡಿರುವ ನಿತ್ಯಾನಂದ, ಇದೀಗ ಭಕ್ತರಿಗೆ ತನ್ನ ಕೈಲಾಸ ದೇಶಕ್ಕೆ ಭೇಟಿ ನೀಡುವ ಆಫರ್‌ ಮುಂದಿಟ್ಟಿದ್ದಾನೆ. ಅದೂ ಸಂಪೂರ್ಣ ಉಚಿತವಾಗಿ!

ಕೋವಿಡ್‌ ಹಿನ್ನೆಲೆಯಲ್ಲಿ ಕಳೆದ ಕೆಲ ತಿಂಗಳಿನಿಂದ ಆನ್‌ಲೈನ್‌ನಲ್ಲೇ ಸತ್ಸಂಗ ಮಾಡುತ್ತಿದ್ದ ನಿತ್ಯಾನಂದ ಇದೀಗ ಭಕ್ತರಿಗೆ ದೈಹಿಕವಾಗಿ ದರ್ಶನ ನೀಡುವ ಘೋಷಣೆ ಮಾಡಿದ್ದಾನೆ. ಇದಕ್ಕಾಗಿ ಕೈಲಾಸ ದೇಶಕ್ಕೆ ಹೇಗೆ ಆಗಮಿಸಬಹುದು ಎಂಬುದರ ಕುರಿತು ಆತ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾನೆ.

3 ದಿನ ಭೇಟಿ:  ಯಾವುದೇ ಭಕ್ತರು 3 ದಿನಗಳ ಕಾಲ ಕೈಲಾಸ ದೇಶಕ್ಕೆ ಭೇಟಿ ನೀಡಬಹುದು. ಇದಕ್ಕಾಗಿ ಅವರು ಕೈಲಾಸ ವೆಬ್‌ಸೈಟ್‌ ಮೂಲಕ ವೀಸಾಕ್ಕೆ ಅರ್ಜಿ ಸಲ್ಲಿಸಬೇಕು. ಇದಕ್ಕೆ ಯಾವುದೇ ಶುಲ್ಕ ಇರುವುದಿಲ್ಲ. ಆದರೆ ಭೇಟಿ ಬಯಸುವವರು ಸ್ವಂತ ವೆಚ್ಚದಲ್ಲಿ ಆಸ್ಪ್ರೇಲಿಯಾಕ್ಕೆ ಬರಬೇಕು. ಅಲ್ಲಿಂದ ಕೈಲಾಸ ದೇಶಕ್ಕೆ ಸೇರಿದ ಖಾಸಗಿ ವಿಮಾನಗಳಾದ ‘ಗರುಡ’ದಲ್ಲಿ ಭಕ್ತರನ್ನು ಸುಮಾರು 15000 ಕಿ.ಮೀ ದೂರದ ಈಕ್ವೆಡಾರ್‌ ದೇಶಕ್ಕೆ ಸೇರಿದ ದ್ವೀಪದಲ್ಲಿನ ಕೈಲಾಸ ದೇಶಕ್ಕೆ ಕರೆದುಕೊಂಡು ಹೋಗಲಾಗುವುದು. 3 ದಿನಗಳ ಬಳಿಕ ಅದೇ ವಿಮಾನದಲ್ಲಿ ಆಸ್ಪ್ರೇಲಿಯಾಕ್ಕೆ ಕಳುಹಿಸಿಕೊಡಲಾಗುವುದು. ಈ ವಿಮಾನಯಾನ ಸಂಪೂರ್ಣ ಉಚಿತ. ಕೈಲಾಸ ದೇಶದಲ್ಲಿ ಭಕ್ತರು ಗರಿಷ್ಠ 3 ದಿನ ಇರಬಹುದು. ಈ ವೇಳೆ ಅಲ್ಲಿ ಉಳಿದುಕೊಳ್ಳುವ ವ್ಯವಸ್ಥೆ, ಊಟ ಎಲ್ಲವನ್ನೂ ಕೈಲಾಸ ದೇಶವೇ ಉಚಿತವಾಗಿ ಒದಗಿಸುತ್ತದೆ ಎಂದು ನಿತ್ಯಾನಂದ ಹೇಳಿಕೊಂಡಿದ್ದಾನೆ.

ನಿತ್ಯಾನಂದನ ರಿಸರ್ವ್ ಬ್ಯಾಂಕ್ ಶುರು, ಕೈಲಾಸಿಯನ್ ಡಾಲರ್ ಕರೆನ್ಸಿ ಬಿಡುಗಡೆ! .

ದರ್ಶನ ಭಾಗ್ಯ:  ತನ್ನ ದೇಶಕ್ಕೆ ಬಂದ ಭಕ್ತರಿಗೆ ಮೂರು ದಿನಗಳಲ್ಲಿ ಒಮ್ಮೆ ಮಾತ್ರವೇ ಖಾಸಗಿ ದರ್ಶನ ನೀಡುವುದಾಗಿ ನಿತ್ಯಾನಂದ ಹೇಳಿದ್ದಾನೆ. ಈ ದರ್ಶನದ ಅವಧಿ 10 ನಿಮಿಷದಿಂದ ಗರಿಷ್ಠ 1 ಗಂಟೆಗೆ ಸೀಮಿತ. ಒಂದು ದಿನದಲ್ಲಿ 10ರಿಂದ 20 ಭಕ್ತರಿಗೆ ಮಾತ್ರವೇ ದರ್ಶನ ಭಾಗ್ಯ ಸಿಗಲಿದೆಯಂತೆ.

ಯಾರಿಗೆ ಅವಕಾಶ?:  ಯಾರು ಕೈಲಾಸದಲ್ಲಿ ಎಲ್ಲರಲ್ಲೂ ಪರಮಶಿವನನ್ನು ಕಾಣುತ್ತಾರೆ ಹಾಗೂ ಪರಮಶಿವನ ಹೊಣೆಗಾರಿಕೆಯನ್ನು ಎಷ್ಟುಅರ್ಥ ಮಾಡಿಕೊಂಡಿದ್ದಾರೆ ಮತ್ತು ಪರಮಶಿವನ ಎಷ್ಟುಭಾಗವಾಗಿದ್ದಾರೆ ಎಂಬುದರ ಮೇಲೆ ಭಕ್ತರಿಗೆ ವೀಸಾ ನೀಡಲಾಗುವುದು. ಆದರೆ ಕೆಲವೊಬ್ಬರಿಗೆ ವೀಸಾ ನೀಡಿಕೆಯಲ್ಲಿ ವಿಳಂಬ ಆಗಬಹುದು. ಇದಕ್ಕಾಗಿ ಯಾರೂ ಬೇಸರ ಮಾಡಿಕೊಳ್ಳಬಾರದು ಎಂದೂ ನಿತ್ಯಾನಂದ ಸಲಹೆ ನೀಡಿದ್ದಾನೆ. ಈಗಾಗಲೇ ನಿತ್ಯಾನಂದ ತನ್ನದೇ ಪ್ರತ್ಯೇಕ ಬ್ಯಾಂಕ್‌, ಕರೆನ್ಸಿಯನ್ನು ಘೋಷಿಸಿದ್ದಾನೆ.