Nithari Serial Killings Surender Koli Acquitted ದೇಶವನ್ನೆ ಬೆಚ್ಚಿ ಬೀಳಿಸಿದ್ದ 2005-2006ರ ನಿಥಾರಿ ಸರಣಿ ಹತ್ಯೆ ಪ್ರಕರಣದ ಆರೋಪಿ ಸುರೀಂದರ್ ಕೋಲಿಯನ್ನು ಸುಪ್ರೀಂ ಕೋರ್ಟ್ ಕೊನೆಯ ಪ್ರಕರಣದಲ್ಲೂ ದೋಷಮುಕ್ತಗೊಳಿಸಿದೆ.
ನವದೆಹಲಿ (ನ.11): ಹಿಂದಿನ ಸೆಕ್ಟರ್ 36 ಸಿನಿಮಾಗೆ ಸ್ಪೂರ್ತಿಯಾಗಿದ್ದ ನಿಥಾರಿ ಸರಣಿ ಕೊಲೆ ಪ್ರಕರಣದ ಆರೋಪಿ ಸುರೀಂದರ್ ಕೋಲಿ ದೋಷಮುಕ್ತನಾಗಿದ್ದಾನೆ. 2005-2006ರ ನೋಯ್ಡಾದಲ್ಲಿ ನಡೆದ ಕುಖ್ಯಾತ ನಿಥಾರಿ ಹತ್ಯೆಗಳಿಗೆ ಸಂಬಂಧಿಸಿದ ಕೊನೆಯ ಕೊಲೆ ಪ್ರಕರಣದಲ್ಲಿ ಸುರೇಂದ್ರ ಕೋಲಿಯ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ರದ್ದುಗೊಳಿಸಿದೆ, ಈ ಪ್ರಕರಣವು ವ್ಯಾಪಕ ಮಾಧ್ಯಮ ಗಮನ ಸೆಳೆದಿತ್ತು. ಮತ್ತು 2024ರ ಬಾಲಿವುಡ್ ಸಿನಿಮಾ ಸೆಕ್ಟರ್ 36ಗೆ ಸ್ಫೂರ್ತಿಯಾಗಿತ್ತು. "ಅರ್ಜಿದಾರ ಆರೋಪಗಳಿಂದ ಖುಲಾಸೆಗೊಂಡಿದ್ದಾರೆ. ಅರ್ಜಿದಾರರನ್ನು ತಕ್ಷಣವೇ ಬಿಡುಗಡೆ ಮಾಡಬೇಕು" ಎಂದು ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ, ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ವಿಕ್ರಮ್ ನಾಥ್ ಅವರಿದ್ದ ಪೀಠ ಹೇಳಿದೆ.
15 ವರ್ಷದ ಬಾಲಕಿಯ ಹತ್ಯೆಯಲ್ಲಿ ಕೋಲಿ ಅವರ ಅಪರಾಧವನ್ನು ದೃಢಪಡಿಸಿದ 2011 ರ ತೀರ್ಪಿನ ವಿರುದ್ಧ ಕೋಲಿ ಸಲ್ಲಿಸಿದ್ದ ಪರಿಹಾರಾತ್ಮಕ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿತ್ತು. ಹಿಂದಿನ ವಿಚಾರಣೆಯ ಸಂದರ್ಭದಲ್ಲಿ, ಕೋಲಿಯ ಶಿಕ್ಷೆಯು, ಕೇವಲ ಹೇಳಿಕೆ ಮತ್ತು ಅಡುಗೆಮನೆಯ ಚಾಕುವನ್ನು ವಶಪಡಿಸಿಕೊಂಡ ಆಧಾರದ ಮೇಲೆ ನೀಡಲಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಇದು ಕೋಲಿ ವಿರುದ್ಧದ 13 ನೇ ಪ್ರಕರಣವಾಗಿತ್ತು. ಅವರು ಈಗಾಗಲೇ 12 ಹಿಂದಿನ ಪ್ರಕರಣಗಳಲ್ಲಿ ಖುಲಾಸೆಗೊಂಡಿದ್ದಾರೆ. ಹೀಗಾಗಿ, ಅವರ ಇತ್ತೀಚಿನ ಖುಲಾಸೆಯೊಂದಿಗೆ, ಕೋಲಿ ಈಗ ಸಂಪೂರ್ಣವಾಗಿ ದೋಷಮುಕ್ತರಾಗಿದ್ದಾರೆ.
ಏನಿದು ನಿಥಾರಿ ಸರಣಿ ಹತ್ಯೆ ಪ್ರಕರಣ?
ದೇಶದಲ್ಲಿ ಅಮಾನವೀಯತೆ ಮತ್ತು ಮಾಧ್ಯಮಗಳ ತೀವ್ರ ವರದಿಗೆ ಒಳಗಾದ ಕೆಲವೇ ಅಪರಾಧಗಳಲ್ಲಿ ನಿಥಾರಿ ಘಟನೆಯೂ ಒಂದು.
ಡಿಸೆಂಬರ್ 2006 ರಲ್ಲಿ ನೋಯ್ಡಾದ ನಿಥಾರಿ ಪ್ರದೇಶದ ಉದ್ಯಮಿ ಮಣಿಂದರ್ ಸಿಂಗ್ ಪಂಧೇರ್ ಅವರ ಮನೆಯ ಹಿಂಭಾಗದ ಚರಂಡಿಯಲ್ಲಿ ಹಲವಾರು ಮಕ್ಕಳ ಅಸ್ಥಿಪಂಜರದ ಅವಶೇಷಗಳು ಪತ್ತೆಯಾದಾಗ ನಿಥಾರಿ ಹತ್ಯೆಗಳು ಬೆಳಕಿಗೆ ಬಂದವು. ಪಂಧೇರ್ ಮತ್ತು ಅವರ ಮನೆಯಲ್ಲಿ ಮನೆಕೆಲಸಗಾರರಾಗಿ ಕೆಲಸ ಮಾಡುತ್ತಿದ್ದ ಕೋಲಿಯನ್ನು ಕೂಡ ಈ ವೇಳೆ ಬಂಧಿಸಲಾಗಿತ್ತು.
ತನಿಖೆಯನ್ನು ಕೈಗೆತ್ತಿಕೊಂಡ ಕೇಂದ್ರ ತನಿಖಾ ದಳ (ಸಿಬಿಐ), ಕೋಲಿ ವಿರುದ್ಧ ಕೊಲೆ, ಅಪಹರಣ, ಅ*ತ್ಯಾಚಾರ ಮತ್ತು ಸಾಕ್ಷ್ಯ ನಾಶ ಸೇರಿದಂತೆ ವಿವಿಧ ಆರೋಪಗಳ ಮೇಲೆ ಹಲವಾರು ಪ್ರಕರಣಗಳನ್ನು ದಾಖಲಿಸಿತು. ಪಂಧೇರ್ ವಿರುದ್ಧ ಅನೈತಿಕ ಕಳ್ಳಸಾಗಣೆಗೆ ಸಂಬಂಧಿಸಿದ ಒಂದು ಪ್ರಕರಣದಲ್ಲಿ ಆರೋಪ ಹೊರಿಸಲಾಯಿತು.
ಕೊನೆಯಲ್ಲಿ ಕೋಲಿ ವಿವಿಧ ಮಕ್ಕಳ ಮೇಲೆ ಅ*ತ್ಯಾಚಾರ ಮತ್ತು ಕೊಲೆ ಮಾಡಿದ ಆರೋಪದಲ್ಲಿ ಶಿಕ್ಷೆಗೊಳಗಾದ ಮತ್ತು 10 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಮರಣದಂಡನೆ ವಿಧಿಸಲಾಯಿತು.
