ನೋಯ್ಡಾ ಅಪಾರ್ಟ್‌ಮೆಂಟ್ ನೋಟಿಸ್: 'ಅವಿವಾಹಿತ ಅತಿಥಿಗಳ ಜೊತೆ ಮಲಗುವ ಮುನ್ನ ಪರ್ಮಿಷನ್ ತೆಗೆದುಕೊಳ್ಳಿ..'
ಇನ್ನು ನೋಯ್ಡಾದ ಅಪಾರ್ಟ್‌ಮೆಂಟ್ ಸೊಸೈಟಿಯ ವಿಚಿತ್ರ ನೋಟಿಸ್‌ಗೆ ಪ್ರತಿಕ್ರಿಯೆ ನೀಡಿರುವ ನಿವಾಸಿಗಳು, ಇದು ನಮ್ಮ ಖಾಸಗಿತನದ ಮೇಲಿನ ಪ್ರಹಾರ ಎಂದು ಟೀಕಿಸಿದ್ದಾರೆ.
ನವದೆಹಲಿ (ಮಾ.14): ಅಪಾರ್ಟ್‌ಮೆಂಟ್‌ಗಳಲ್ಲಿ ವಾಸ ಮಾಡುವ ನಿವಾಸಿಗಳಿಗೆ ಅಲ್ಲಿನ ಸೊಸೈಟಿಗಳು ಹೊರಡಿಸುವ ನೋಟಿಸ್‌ಗಳು ಯಾವಾಗಲೂ ಕಿರಿಕಿರಿ ಉಂಟು ಮಾಡುತ್ತದೆ. ಕೆಲವೊಮ್ಮೆ ನೋಟಿಸ್‌ನಲ್ಲಿ ಇಂಥದ್ದನ್ನೆಲ್ಲಾ ಹೇಳ್ತಾರಾ ಎಂದು ಕುತೂಹಲ ಮೂಡಿಸುವಷ್ಟು 'ಓಪನ್' ಆಗಿರುತ್ತದೆ. ಅಂಥದ್ದೇ ಒಂದು ನೋಟಿಸ್‌ಅನ್ನು ನೋಯ್ಡಾದ ಸೆಕ್ಟರ್ 99 ಅಲ್ಲಿರುವ ಸುಪ್ರೀಂ ಟವರ್ ಸೊಸೈಟಿ ಹೊರಡಿಸಿದೆ. ಸುಪ್ರೀಂ ಟವರ್‌ನ ಅಪಾರ್ಟ್‌ಮೆಂಟ್ ಓನರ್ಸ್ ಅಸೋಸಿಯೇಷನ್ (ಎಒಎ) ಇತ್ತೀಚೆಗೆ ಹೊಸ ನೋಟಿಸ್ ಹೊರಡಿಸಿದ್ದು, ಅಪಾರ್ಟ್‌ಮೆಂಟ್‌ನ ಮನೆಗಳಲ್ಲಿ ಅವಿವಾಹಿತ ಅತಿಥಿಗಳು ರಾತ್ರಿ ಪೂರ್ತಿ ಕಳೆಯುವಂತಿಲ್ಲ. ಅದಕ್ಕೆ ನಿಷೇಧವಿರುತ್ತದೆ ಎಂದು ಹೇಳಿದೆ. ನೋಯ್ಡಾದಲ್ಲಿ ಹೈ ರೈಸ್ ಅಪಾರ್ಟ್‌ಮೆಂಟ್‌ಗಳು ಬೇಕಾದಷ್ಟಿವೆ. ಅದರಲ್ಲಿ ಸುಪ್ರೀಂ ಟವರ್‌ನಲ್ಲಿ ಪ್ರಖ್ಯಾತ ವ್ಯಕ್ತಿಗಳು ವಾಸವಿರುವ ಕಾರಣ ಹೈಪ್ರೊಫೈಲ್ ಟವರ್ ಎನಿಸಿದೆ. ಹಾಗೇನಾದರೂ ಅವಿವಾಹಿತ ಅತಿಥಿಗಳು ಮನೆಯಲ್ಲಿ ರಾತ್ರಿ ಕಳೆಯಬೇಕಾದಲ್ಲಿ ಈ ಕುರಿತಾಗಿ ಎಒಎಯಿಂದ ಅನುಮತಿಯನ್ನು ಪಡೆದುಕೊಳ್ಳಬೇಕಿದೆ. ಈ ನಿಯಮಗಳನ್ನು ಪಾಲನೆ ಮಾಡುವಂತೆ ನೋಟಿಸ್‌ಅನ್ನು ಜಾರಿ ಮಾಡಿದ ಬಳಿಕ, ಅಪಾರ್ಟ್‌ಮೆಂಟ್ ನಿವಾಸಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ನೋಟಿಸ್‌ನಲ್ಲಿ 'ಎಒಎ ಮಂಡಳಿಯಿಂದ ಸೀಮಿತ ಅವಧಿಗೆ ಪೂರ್ವಾನುಮತಿ ಪಡೆದರೆ ಅತಿಥಿಗಳು ಬ್ಯಾಚುಲರ್ ಬಾಡಿಗೆದಾರರ ನಿವಾಸದಲ್ಲಿ ರಾತ್ರಿ ಉಳಿಯಬಹುದು' ಎಂದು ಹೇಳಿದೆ.
ಇದರೊಂದಿಗೆ ಸುತ್ತೋಲೆಯಲ್ಲಿ ನಿವಾಸಿಗಳಿಗೆ ಎಒಎ ಸುರಕ್ಷತೆ ಮತ್ತು ಶುಚಿತ್ವದ ಬಗ್ಗೆ ಹೊಸ ನೀತಿಗಳನ್ನು ಸಹ ನೀಡಿದೆ. ನೋಟಿಸ್ ಪ್ರಕಾರ, AOA ಸಾಮಾನ್ಯ ಪ್ರದೇಶದಲ್ಲಿ ಸಿಗರೇಟ್ ಸೇದುವುದನ್ನು ನಿಷೇಧಿಸುವ ಕೆಲವು ನಿಯಮಗಳನ್ನೂ ಸೇರಿಸಿದೆ. ಅಪಾರ್ಟ್‌ಮೆಂಟ್ ಆವರಣದಲ್ಲಿ ವಾಹನಗಳ ವಾಹನಗಳ ವೇಗದ ಮಿತಿಯನ್ನೂ ಗಂಟೆಗೆ 10 ಕಿ.ಮೀ ನಿಗದಿ ಮಾಡಲಾಗಿದೆ. ಸಾಕುಪ್ರಾಣಿಗಳ ಮಾಲೀಕರಿಗೆ, ಸೊಸೈಟಿ ಆವರಣವನ್ನು ಸ್ವಚ್ಛವಾಗಿ ಮತ್ತು ಅಚ್ಚುಕಟ್ಟಾಗಿ ಇರಿಸುವಂತೆ ಸೂಚಿಸುವ ನಿಯಮವನ್ನೂ ಹಾಕಲಾಗಿದೆ.
ಮಾರ್ಚ್ 11 ರವರೆಗೆ ಈ ಬಗ್ಗೆ ನಿವಾಸಿಗಳಿಂದ ಸಲಹೆಗಳನ್ನು ಕೇಳಲಾಗಿದೆ ಎಂದು AOA ತಿಳಿಸಿದೆ. ಯಾವುದೇ ನಿವಾಸಿ ಯಾವುದೇ ಆಕ್ಷೇಪಣೆಯನ್ನು ಹೊಂದಿದ್ದರೆ, ಅವುಗಳನ್ನು ಆಲಿಸಿದ ನಂತರವೇ ನೀತಿಯನ್ನು ಜಾರಿಗೊಳಿಸಲಾಗುವುದು. ಯಾವುದೇ ನಿಯಮಗಳನ್ನು ಯಾರ ಮೇಲೂ ಹೇರಲಾಗುವುದಿಲ್ಲ ಎಂದು ತಿಳಿಸಲಾಗಿದೆ.
ನೋಯ್ಡಾದ ಪ್ರಮುಖ ಸೊಸೈಟಿಗಳಲ್ಲಿ ಒಂದಾದ ಎಮರಾಲ್ಡ್ ಕೋರ್ಟ್ ಸೊಸೈಟಿಯಲ್ಲಿ ಭಾರೀ ಪ್ರತಿಭಟನೆಗಳು ನಡೆದ ಬಳಿಕ ಇದೇ ರೀತಿಯ ನಿಷೇಧವನ್ನು ಹಿಂಪಡೆಯಲಾಗಿತ್ತು. 2022ರ ಡಿಸೆಂಬರ್‌ನಲ್ಲಿ ಎಮರಾಲ್ಟ್ ಕೋರ್ಟ್ ಸೊಸೈಟಿಯು, ಬ್ಯಾಚುಲರ್‌ಗಳಿಗೆ ಫ್ಲ್ಯಾಟ್‌ಗಳನ್ನು ಬಾಡಿಗೆಗೆ ನೀಡಲು ನಿಷೇಧ ವಿಧಿಸಿತ್ತು. ತನ್ನ ಆದೇಶದಲ್ಲ, ಬ್ಯಾಚುಲರ್‌ಗಳಿಗೆ ಇಲ್ಲಿ ಮನೆಗಳನ್ನು ನೀಡಲಾಗುವುದಿಲ್ಲ ಎಂದು ಹೇಳಿತ್ತು. ಇದರ ಬೆನ್ನಲ್ಲಿಯೇ ಸೊಸೈಟಿಯಲ್ಲಿ ಅದಾಗಲೇ ಇದ್ದ ಬ್ಯಾಚುಲರ್‌ಗಳು ಹಾಗೂ ಸಾಮಾನ್ಯ ಜನರು ವಿರೋಧ ವ್ಯಕ್ತಪಡಿಸಲು ಆರಂಭಿಸಿದ್ದರು. ಭಾರೀ ಪ್ರತಿಭಟನೆ ವ್ಯಕ್ತವಾದ ನಂತರ ಈ ಆದೇಶವನ್ನು ಹಿಂಪಡೆಯಲಾಗಿತ್ತು. ಆ ಬಳಿಕ ಪೊಲೀಸ್ ಪರಿಶೀಲನೆಯ ನಂತರವೇ ಸೊಸೈಟಿಯಲ್ಲಿ ಬ್ಯಾಚುಲರ್‌ಗಳು ಬಾಡಿಗೆಗೆ ವಾಸಿಸಬಹುದು ಎಂದು ಎಒಎ ತಿಳಿಸಿತ್ತು.