ನವದೆಹಲಿ (ಡಿ. 14): ದಿಲ್ಲಿಯ ‘ನಿರ್ಭಯಾ’ ಗ್ಯಾಂಗ್‌ರೇಪ್‌ ಹಾಗೂ ಕೊಲೆ ಪ್ರಕರಣದ ದೋಷಿಗಳನ್ನು ನೇಣುಗಂಬಕ್ಕೇರಿಸಲು ‘ಡೆತ್‌ ವಾರಂಟ್‌’ ಹೊರಡಿಸಬೇಕು ಎಂದು ಕೋರಿ ನಿರ್ಭಯಾ ಪೋಷಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಡಿಸೆಂಬರ್‌ 18ರಂದು ನಡೆಸುವುದಾಗಿ ದಿಲ್ಲಿಯ ಪಟಿಯಾಲಾ ಹೌಸ್‌ ಸತ್ರ ನ್ಯಾಯಾಲಯ ಹೇಳಿದೆ.

‘ಇದೇ ಪ್ರಕರಣದ ದೋಷಿಯೊಬ್ಬ (ಅಕ್ಷಯ್‌) ಸುಪ್ರೀಂ ಕೋರ್ಟಿನಲ್ಲಿ ಗಲ್ಲು ಶಿಕ್ಷೆಯ ಮರುಪರಿಶೀಲನೆ ಕೋರಿದ್ದಾನೆ. ಇದರ ವಿಚಾರಣೆ ಡಿಸೆಂಬರ್‌ 17ರಂದು ನಡೆಯಲಿದೆ. ಹೀಗಾಗಿ ಡಿಸೆಂಬರ್‌ 18ರಂದು ಈ ಅರ್ಜಿಯ ವಿಚಾರಣೆ ನಡೆಸಲಾಗುವುದು’ ಎಂದು ಕೋರ್ಟ್‌ ಹೇಳಿದೆ.

ಅತ್ಯಾಚಾರ ಮಾಡುವವರ ಮನಸ್ಸಲ್ಲಿ ಏನಿರುತ್ತದೆ?

ಇದೇ ವೇಳೆ ಕೋರ್ಟ್‌ನ ಹೊರಗೆ ಸುದ್ದಿಗಾರರ ಜೊತೆಗೆ ಮಾತನಾಡಿದ ನಿರ್ಭಯಾಳ ತಾಯಿ ‘ಈ ನಾಲ್ವರೂ ದುರುಳರು ನನ್ನ ಮಗಳ ಮೇಲೆ 2012ರ ಡಿ.16ರಂದು ಅತ್ಯಾಚಾರ ನಡೆಸಿದ್ದರು. ಹೀಗಾಗಿ ಇವರನ್ನು ಈ ವರ್ಷ ಡಿ.16ರೊಳಗೇ ಗಲ್ಲಿಗೇರಿಸಬೇಕು’ ಎಂದು ಆಗ್ರಹಿಸಿದರು.

ಯಾವುದೇ ಸಮಯದಲ್ಲಿ ನೇಣುಗಂಬ ಏರುವ ಭೀತಿಯಲ್ಲಿರುವ ನಿರ್ಭಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ನಾಲ್ವರು ದೋಷಿಗಳಿಗೆ ಇದೀಗ ಸಾವಿನ ಭೀತಿ ಎದುರಾಗಿದೆ. ಸಾವಿನ ದಿನ ಹತ್ತಿರವಾದ ಬೆನ್ನಲ್ಲೇ, ನಾಲ್ವರೂ ದೋಷಿಗಳು ಖಿನ್ನತೆಗೆ ಒಳಗಾಗಿದ್ದಾರೆ.

ನಿರ್ಭಯಾ ದೋಷಿಗಳು ಕುಣಿಕೆಗೆ ಸನಿಹ: ನೇಣು ಹಾಕುವವರಿಗೆ ಮೇರಠ್‌ನಿಂದ ಬುಲಾವ್!

ಕೆಲ ದಿನಗಳಿಂದ ಅವರು ತಮ್ಮ ಆಹಾರ ಸೇವನೆ ಕಡಿಮೆ ಮಾಡಿದ್ದಾರೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾಲ್ವರು ದೋಷಿಗಳು ತಮ್ಮ ದೇಹಕ್ಕೆ ಯಾವುದೇ ಹಾನಿ ಮಾಡದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.