ನವದೆಹಲಿ[ಡಿ.13]: ನಿರ್ಭಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ದೋಷಿಗಳನ್ನು ಶೀಘ್ರ ಗಲ್ಲಿಗೇರಿಸಲಾಗುತ್ತದೆ ಎನ್ನುವ ಸುದ್ದಿಗಳ ಬೆನ್ನಲ್ಲೇ, ನೇಣುಶಿಕ್ಷೆ ವಿಧಿಸುವ ಇಬ್ಬರನ್ನು ಕಳುಹಿಸಿಕೊಡಿ ಎಂದು ತಿಹಾರ್‌ ಜೈಲು ಅಧಿಕಾರಿಗಳು, ಉತ್ತರ ಪ್ರದೇಶದ ಮೇರಠ್‌ನ ಜೈಲಧಿಕಾರಿಗಳನ್ನು ಕೋರಿದ್ದಾರೆ.

ಕಾನೂನು ಸಮರದ ಎಲ್ಲಾ ದಾರಿಗಳು ಮುಗಿದಿರುವ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಲಾಗುತ್ತಿದ್ದು, ಅದಕ್ಕಾಗಿ ಗಲ್ಲು ಶಿಕ್ಷೆ ನೀಡುವವರ ಅವಶ್ಯಕತೆ ಇದೆ. ಇಂಥ ಇಬ್ಬರು ವ್ಯಕ್ತಿಗಳನ್ನು ಕಳುಹಿಸಿಕೊಡಿ ಎಂದು ಡಿ.9ರಂದೇ ನಮಗೆ ಕೋರಿಕೆ ಸಲ್ಲಿಕೆಯಾಗಿದೆ. ಅಂಥ ವ್ಯಕ್ತಿಗಳನ್ನು ಕಳುಹಿಸಿಕೊಡಲು ನಾವು ಸಿದ್ಧ ಎಂದು ಉತ್ತರ ಪ್ರದೇಶ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ಬಂಧೀಖಾನೆ) ಆನಂದ್‌ ಕುಮಾರ್‌ ತಿಳಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ 10 ನೇಣು ಕುಣಿಕೆ ಕಳುಹಿಸಿಕೊಡಿ ಎಂದು ಬಿಹಾರದ ಬಕ್ಸರ್‌ ಜೈಲಾಧಿಕಾರಿಗಳಿಗೂ ಪತ್ರ ಬರೆಯಲಾಗಿತ್ತು. ಈ ಎಲ್ಲಾ ಪ್ರಕ್ರಿಯೆಗಳು, ನಿರ್ಭಯಾ ಪ್ರಕರಣದ ನಾಲ್ವರು ದೋಷಿಗಳನ್ನು ಗಲ್ಲಿಗೆ ಏರಿಸುವ ಪ್ರಕ್ರಿಯೆಯ ಭಾಗ ಎಂದೇ ಹೇಳಲಾಗಿದೆ. ಇವೆಲ್ಲದರ ನಡುವೆ ನಾಲ್ಕು ಮಂದಿ ದೋಷಿಗಳನ್ನು ನೇಣಿಗೆ ಹಾಕಲು ಸಿದ್ಧ ಎಂದು ಎಂದು ಮೇರಠ್‌ ಜೈಲಿನ ನೇಣುಗಂಬಕ್ಕೆ ಏರಿಸುವ ಪವನ್‌ ಹೇಳಿದ್ದಾರೆ.

ಅರ್ಜಿ ಬಾಕಿ ಇಲ್ಲ:

ಈ ನಡುವೆ ಕ್ಷಮಾದಾನ ಕೋರಿ ಸಲ್ಲಿಕೆಯಾಗಿರುವ ಯಾವುದೇ ಅರ್ಜಿಗಳು ತಮ್ಮ ಬಳಿಯಾಗಲೀ, ರಾಷ್ಟ್ರಪತಿ ಬಳಿಯಾಗಲೀ ಇಲ್ಲ ಎಂದು ಕೇಂದ್ರ ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ. ಹೀಗಾಗಿ ರಾಷ್ಟ್ರಪತಿಗಳು ಈಗಾಗಲೇ ವಿನಯ್‌ ಶರ್ಮಾನ ಕ್ಷಮಾದಾನ ಅರ್ಜಿ ತಿರಸ್ಕರಿಸಿರಬಹುದು ಎಂದು ಹೇಳಲಾಗಿದೆ.

ಶೀಘ್ರ ಡೆತ್‌ ವಾರಂಟ್‌:

ಈ ನಡುವೆ ದೋಷಿಗಳಿಗೆ ಗಲ್ಲು ಶಿಕ್ಷೆ ಜಾರಿಗೊಳಿಸುವ ಪ್ರಕ್ರಿಯೆಯ ಮೊದಲ ಭಾಗವಾಗಿ ಶೀಘ್ರವೇ ಅವರಿಗೆ ಡೆತ್‌ ವಾರಂಟ್‌ ಹೊರಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಡಿ.16ಕ್ಕೆ ಶಿಕ್ಷೆ ಜಾರಿ ಇಲ್ಲ?:

ಈ ನಡುವೆ ನಿರ್ಭಯಾ ಮೇಲೆ ಅತ್ಯಾಚಾರ ನಡೆದ ದಿನವಾದ ಡಿ.16ಕ್ಕೆ ದೋಷಿಗಳಿಗೆ ಶಿಕ್ಷೆ ಜಾರಿ ಮಾಡಬಹುದು ಎಂಬ ವಾದ ಕೇಳಿಬರುತ್ತಿದೆಯಾದರೂ, ಅಂಥ ಸಾಧ್ಯತೆ ಇಲ್ಲ ಎಂದು ಕಾನೂನು ತಜ್ಞರು ಹೇಳಿದ್ದಾರೆ. ದೋಷಿಗಳಿಗೆ ಡೆತ್‌ವಾರಂಟ್‌ ಹೊರಡಿಸಿದ ದಿನದಿಂದ ಶಿಕ್ಷೆ ಜಾರಿಯ ದಿನಕ್ಕೆ 14 ದಿನಗಳ ಅಂತರ ಇರಬೇಕು. ಹೀಗಾಗಿ ಡಿ.16ಕ್ಕೆ ಶಿಕ್ಷೆ ಜಾರಿ ಸಾಧ್ಯತೆ ಇಲ್ಲ ಎಂದಿದ್ದಾರೆ.