ಅತ್ಯಾಚಾರ ಮಾಡುವವರ ಮನಸ್ಸಲ್ಲಿ ಏನಿರುತ್ತದೆ?
ಕ್ರಿಮಿನಲ್ ಮೈಂಡ್‌ಗಳ ಸುಧಾರಣೆ ಸಾಧ್ಯವಿಲ್ಲ. ಅತ್ಯಾಚಾರಿಗಳು ಮತ್ತು ಕೊಲೆಗಾರರು ಪಶ್ಚಾತ್ತಾಪ ಪಡುವುದಿಲ್ಲ. ಶಿಕ್ಷಣ ಅಥವಾ ಲಿಂಗ ಸಂವೇದನಾಶೀಲತೆಯಿಂದಲೇ ಕ್ರಿಮಿನಲ್ ಅಪರಾಧಗಳನ್ನು ಕಡಿಮೆ ಮಾಡಲು ಆಗದು.
ಹೈದರಾಬಾದ್‌ನ ಪಶುವೈದ್ಯೆಯ ಮೇಲಿನ ಸಾಮೂಹಿಕ ಅತ್ಯಾಚಾರ ದೇಶಾದ್ಯಂತ ದೊಡ್ಡಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಈ ಮೂಲಕ ಮಹಿಳಾ ಸುರಕ್ಷತೆ ಮತ್ತು ಲಿಂಗ ಸಂವೇದನಾಶೀಲತೆ ಬಗ್ಗೆ ಹಲವರು ಧ್ವನಿ ಎತ್ತುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಅತ್ಯಾಚಾರಿಯಾಗಲು ಕಾರಣ ಏನು ಎಂಬ ಬಗ್ಗೆ ಹೆಸರಾಂತ ಅಪರಾಧ ಮನೋಶಾಸ್ತ್ರಜ್ಞೆಯೊಬ್ಬರು ‘ದಿ ಲಾಜಿಕಲ್ ಇಂಡಿಯನ್’ಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ. ಆಯ್ದ ಭಾಗ ಇಲ್ಲಿದೆ.
ವ್ಯಕ್ತಿಯೊಬ್ಬ ಅತ್ಯಾಚಾರ ನಡೆಸಲು ಕಾರಣ ಏನು? ಅತ್ಯಾಚಾರಿಗಳ ಮನಸ್ಸಿನಲ್ಲಿ ಏನು ನಡೆಯುತ್ತಿರುತ್ತದೆ?
ಅತ್ಯಾಚಾರ ಎನ್ನುವುದು ಒಂದು ದ್ವೇಷದ ಅಪರಾಧ. ಲೈಂಗಿಕ ಬಯಕೆಗಾಗಿ ಮಾತ್ರ ವ್ಯಕ್ತಿಯೊಬ್ಬ ಅತ್ಯಾಚಾರ ಮಾಡುವುದಿಲ್ಲ. ವಿರುದ್ಧ ಲಿಂಗದ ಮೇಲಿನ ದ್ವೇಷಕ್ಕೂ ಅತ್ಯಾಚಾರ ಮಾಡುತ್ತಾನೆ. ಇದು ಮೂಲತಃ ವಿಷಕಾರಿ ಪುರುಷತ್ವ. ಅವರು ತಮ್ಮನ್ನು ತಾವು ಉನ್ನತ ಲಿಂಗದವರೆಂದು ಪರಿಗಣಿಸುತ್ತಾರೆ. ಹೀಗೆ ಮಾಡುವುದರಿಂದ ತಾವು ಹೆಚ್ಚು ಶಕ್ತಿಶಾಲಿ ಎಂದು ಸಾಬೀತುಪಡಿಸಬಹುದು ಎಂದು ಅವರು ಭಾವಿಸುತ್ತಾರೆ.
ಅಕ್ರಮ ವಲಸಿಗರಿಗೆಲ್ಲ ಆಶ್ರಯ ನೀಡುತ್ತಾ ಹೋಗಲು ಭಾರತವೇನು ಧರ್ಮಛತ್ರವೇ?
ಅತ್ಯಾಚಾರಿಗಳು ಮತ್ತು ಕೊಲೆಗಡುಕರನ್ನು ಮನೋವಿಕೃತಿಗಳು ಎಂದು ಕರೆಯುತ್ತೇವೆ. ನಿಜಕ್ಕೂ ಅವರು ಮನೋವಿಕೃತರೇ?
ಭಾರತದಲ್ಲಿ ಸರಣಿ ಕೊಲೆಗಳಿಗಿಂತ ಸರಣಿ ಅತ್ಯಾಚಾರಗಳು ಹೆಚ್ಚು. ಇಬ್ಬರೂ ಮನೋವಿಕೃತರೇ. ಮನೋವಿಕೃತರು ಸಾಮಾನ್ಯರಂತೆಯೇ ಕಾಣುತ್ತಾರೆ, ಅದೇ ರೀತಿ ಜೀವನ ನಡೆಸುತ್ತಾರೆ. ಹೆಚ್ಚಾಗಿ ಅವರು ಅತಿ ಬುದ್ಧಿವಂತರಾಗಿರುತ್ತಾರೆ. ಆಕರ್ಷಕವಾಗಿಯೂ ಕಾಣಿಸಬಹುದು. ಇದಕ್ಕೆ ತದ್ವರುದ್ಧವಾಗಿ ಮಾನಸಿಕವಾಗಿ ಅಸಮತೋಲನಗೊಂಡವರೂ ಇದ್ದಾರೆ. ಅಂದರೆ ಸಾಮಾನ್ಯರಂತೆ ಇರದೆ ಹೆಚ್ಚು ಕೋಪಪೀಡಿತರಾಗಿರುವವರು. ಆನುವಂಶಿಕ ಅಸಮತೋಲನದಿಂದಾಗಿ ಅಥವಾ ಪೋಷಕರು ಅಪರಾಧ ಹಿನ್ನೆಲೆ ಹೊಂದಿದ್ದರೆ ಕೆಲವರು ಮನೋವಿಕೃತರು ಅಥವಾ ಮನೋರೋಗಿಗಳಾಗಬಹುದು. ಸಾಮಾನ್ಯ ವ್ಯಕ್ತಿ ಅತ್ಯಾಚಾರಕ್ಕೆ ಸಂಬಂಧಿಸಿದ ಫೋಟೋ ನೋಡಿದರೆ ಭಾವುಕನಾಗುತ್ತಾನೆ. ಆದರೆ, ಮನೋವಿಕಾರ ಇರುವವರು ಅಥವಾ ಕ್ರಿಮಿನಲ್ ಮೈಂಡ್ ಇದ್ದವರು ಅದನ್ನೇ ನೋಡುತ್ತಿರುತ್ತಾರೆ.
ಅವರ ಮನಸ್ಸಿನಲ್ಲಿ ಯಾವುದೇ ಬದಲಾವಣೆಗಳು ಆಗುವುದಿಲ್ಲ. ಕ್ರಿಮಿನಲ್‌ಗಳು ತಮ್ಮ ಬಗ್ಗೆ ತಾವು ಹೆಚ್ಚು ಆಸಕ್ತಿ ಅಥವಾ ಮೆಚ್ಚುಗೆ ಹೊಂದಿರುತ್ತಾರೆ. ಭಾವನಾತ್ಮಕವಾಗಿ ಅಸ್ಥಿರರಾಗಿರುತ್ತಾರೆ. ಇಂಥವರು ಹೆಚ್ಚಾಗಿ ವ್ಯಾಮೋಹಕ್ಕೆ ಒಳಗಾಗುತ್ತಾರೆ. ಕೆಲವೊಮ್ಮೆ ಆನುವಂಶಿಕವಲ್ಲದಿದ್ದರೆ ಇಂತಹ ವ್ಯಕ್ತಿ ಅಪರಾಧ ವರ್ತನೆಯನ್ನು ತಾನೇ ಬೆಳೆಸಿಕೊಂಡಿದ್ದಿರಬಹುದು.
ತಿಳಿವಳಿಕೆಯ ನಡವಳಿಕೆ, ಉತ್ತಮ ವ್ಯಕ್ತಿತ್ವ, ಸರಿಯಾದ ಅಭಿವ್ಯಕ್ತಿ, ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ಸಾಮಾಜಿಕ ನಡವಳಿಕೆಯನ್ನು ನಿಯಂತ್ರಿಸುವಲ್ಲಿ ಮೆದುಳಿನ Prefrontal cortex ಪ್ರದೇಶವು ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಜೀವಶಾಸ್ತ್ರವು ಈ ವಿಷಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ನೀವು ಯಾವತ್ತಾದರೂ ಕ್ರಿಮಿನಲ್‌ಗಳನ್ನು ಸಂದರ್ಶನ ಮಾಡಿದ್ದೀರಾ?
ಭಾರತದಲ್ಲಿ ಕ್ರಿಮಿನಲ್‌ಗಳ ಸಂದರ್ಶನಕ್ಕೆ ಅಷ್ಟುಸುಲಭವಾಗಿ ಅನುಮತಿ ದೊರಕುವುದಿಲ್ಲ. ವಾಸ್ತವವಾಗಿ ಇದು ದುರದೃಷ್ಟದ ಸಂಗತಿ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಪರಿಸ್ಥಿತಿ ಹೀಗಿದ್ದಾಗ ಒಬ್ಬ ಅಪರಾಧ ಮನಶ್ಶಾಸ್ತ್ರಜ್ಞನು ಅಪರಾಧ ಮನಸ್ಸಿನ ಬಗ್ಗೆ ಪ್ರಾಯೋಗಿಕ ಒಳನೋಟವನ್ನು ಪಡೆಯಲು ಹೇಗೆ ಸಾಧ್ಯ? ಸಿದ್ಧಾಂತವು ಅಧ್ಯಯನಕ್ಕೆ ಸಾಕಾಗುವುದಿಲ್ಲ. ಒಮ್ಮೆ ನಾನು ಅಮೆರಿಕಕ್ಕೆ ಹೋಗಿದ್ದೆ. ಅಲ್ಲಿ ಕೊಲೆ ಮಾಡಿದ ಅಪರಾಧಿಗಳಿಬ್ಬರನ್ನು ಸಂದರ್ಶನ ಮಾಡುವ ಅವಕಾಶ ಸಿಕ್ಕಿತ್ತು. ಅವರು ಪಶ್ಚಾತ್ತಾಪವೇ ಇಲ್ಲದ ವ್ಯಕ್ತಿಗಳಾಗಿದ್ದರು. ಸರಣಿ ಅತ್ಯಾಚಾರಿಗಳು ಮತ್ತು ಸರಣಿ ಕೊಲೆಗಾರರು ಪಶ್ಚಾತ್ತಾಪ ಪಡುವುದು ಕಡಿಮೆ. ಆದರೆ ಇವರಿಗೆ ವಿರುದ್ಧವಾಗಿ, ಶಿಶುಕಾಮಿಗಳು ಪಶ್ಚಾತ್ತಾಪ ವ್ಯಕ್ತಪಡಿಸುತ್ತಾರೆ.
ಭಾರತದ ಕಾರಾಗೃಹಗಳು ಸುಧಾರಣೆಗೊಂಡಿವೆಯೇ? ದುಷ್ಕರ್ಮಿಗಳ ಮನಸ್ಸನ್ನು ಅವು ತಿದ್ದಿ ಸರಿಪಡಿಸುತ್ತವೆಯೇ?
ಸಾಧ್ಯವೇ ಇಲ್ಲ. ನಾನು ಹೇಳಿದಂತೆ, ಅತ್ಯಾಚಾರಿಗಳು ಮತ್ತು ಕೊಲೆಗಾರರು ಪಶ್ಚಾತ್ತಾಪ ಪಡುವುದಿಲ್ಲ. ದೆಹಲಿಯ ನಿರ್ಭಯಾ ಪ್ರಕರಣವನ್ನು ಆಧರಿಸಿ ‘ಇಂಡಿಯಾಸ್ ಡಾಟರ್’ ಎಂಬ ಸಾಕ್ಷ್ಯಚಿತ್ರವನ್ನು ನಿರ್ಮಾಣ ಮಾಡಲಾಗಿತ್ತು. ದೇಶದಲ್ಲಿ ಅದನ್ನೀಗ ನಿಷೇಧಿಸಲಾಗಿದೆ. ಆದರೆ ನೀವು ಅದನ್ನು ನೋಡಿದರೆ, ‘ರಾತ್ರಿ 9 ಗಂಟೆಯ ನಂತರ ಮಹಿಳೆ ಮನೆಯಿಂದ ಹೊರಗೆ ಹೋಗಬಾರದು’ ಎಂದು ಕೃತ್ಯ ಎಸಗಿದ ಅಪರಾಧಿಗಳಲ್ಲಿ ಒಬ್ಬ ಎಷ್ಟೊಂದು ವಿಶ್ವಾಸದಿಂದ ಹೇಳುತ್ತಾನೆ ಎಂಬುದನ್ನು ನೋಡಬಹುದು.
ದೇಶದ ಮಕ್ಕಳಲ್ಲಿ ಅಸುರಕ್ಷಿತ ಭಾವನೆ: ಆಘಾತದ ವರದಿ ಮಂಡನೆ!
ಅದರರ್ಥ ಮಹಿಳೆಯರು ಮನೆಗೆಲಸಕ್ಕೆ ಮಾತ್ರ ಸೀಮಿತ ಎಂದು ಅವರು ಭಾವಿಸಿದ್ದಾರೆ. ಅವನು ಚೂರೇ ಚೂರು ಹಿಂಜರಿಯದೆ ಮಹಿಳೆ (ನಿರ್ಭಯಾ) ವಿರೋಧಿಸದಿದ್ದರೆ ಅವಳನ್ನು ಕೊಲ್ಲುತ್ತಿರಲಿಲ್ಲ ಎಂದೂ ಹೇಳುತ್ತಾನೆ. ಪ್ರತಿಯೊಬ್ಬ ಅತ್ಯಾಚಾರಿ ಹೇಗಿರುತ್ತಾನೆ ಎಂಬುದಕ್ಕೆ ಅವನು ಒಂದು ಉದಾಹರಣೆ. ಅವರಿಗೆ ಪಶ್ಚಾತ್ತಾಪವೇ ಆಗುವುದಿಲ್ಲ.
ಅಪರಾಧಿಗಳನ್ನು ತಿದ್ದುವುದು ಸಾಧ್ಯವಿಲ್ಲ ಎಂದ ಮೇಲೆ ಪರಿಹಾರ ಏನು?
ಕ್ರಿಮಿನಲ್ ಮೈಂಡ್‌ಗಳ ಸುಧಾರಣೆ ಸಾಧ್ಯವೇ ಇಲ್ಲ. ಶಿಕ್ಷಣ ಅಥವಾ ಲಿಂಗ ಸಂವೇದನಾಶೀಲತೆಯಿಂದಲೇ ಕ್ರಿಮಿನಲ್ ಅಪರಾಧಗಳನ್ನು ಕಡಿಮೆ ಮಾಡಲು ಆಗದು. ಅಪರಾಧ ಮಾಡಲು ಹೊರಟಿರುವ ವ್ಯಕ್ತಿಗೆ ತಾನು ಮಾಡುತ್ತಿರುವುದು ತಪ್ಪು ಎಂದು ಅರಿವಾಗುವಂತೆ ಮಾಡಲು ಇವುಗಳಿಂದ ಸಾಧ್ಯವಿಲ್ಲ. ನಮ್ಮ ಕಾನೂನು ವ್ಯವಸ್ಥೆ ಬದಲಾಗಬೇಕು. ಇಂತಹ ಭಯಾನಕ ಅಪರಾಧ ಮಾಡಿದ ವ್ಯಕ್ತಿಯ ವಿರುದ್ಧದ ಪ್ರಕರಣವು ವಿಚಾರಣೆಯಾಗದೆ ವರ್ಷಾನುಗಟ್ಟಲೆ ವಿಸ್ತರಣೆಯಾಗುವುದನ್ನು ನಿಲ್ಲಿಸಬೇಕು.
ಒಂದು ನಿರ್ದಿಷ್ಟಟೈಮ್‌ಲೈನ್ ನಿಗದಿ ಮಾಡಬೇಕು. ಅದರ ಒಳಗಾಗಿ ಎಲ್ಲಾ ಕಾರ್ಯವಿಧಾನಗಳು ಮುಗಿಯಬೇಕು ಮತ್ತು ಅಪರಾಧಿಗಳಿಗೆ ಸರಿಯಾದ ಶಿಕ್ಷೆಯಾಗಬೇಕು. ಒಟ್ಟಾರೆ ನಮ್ಮ ನ್ಯಾಯ ವ್ಯವಸ್ಥೆಯ ವೇಗವನ್ನು ಹೆಚ್ಚಿಸಬೇಕು. ಹೈದರಾಬಾದ್ ಪಶುವೈದ್ಯೆಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ನಮ್ಮ ವ್ಯವಸ್ಥೆಯ ಸಮಗ್ರ ವೈಫಲ್ಯವನ್ನು ಮತ್ತೊಮ್ಮೆ ಸೂಚಿಸುತ್ತದೆ.
- ಅನುಜಾ ಕಪೂರ್, ಅಪರಾಧ ಮನೋಶಾಸ್ತ್ರಜ್ಞೆ