* ಭಟ್ಕಳದಲ್ಲಿ ಶಂಕಿತ ಐಸಿಸ್‌ ಉಗ್ರ ಎನ್‌ಐಎ ಬಲೆಗೆ ಭರ್ಜರಿ ಬೇಟೆ* ಪಾಕಿಸ್ತಾನ, ಆಫ್ಘಾನಿಸ್ತಾನದ ಐಸಿಸ್‌ ಕಮಾಂಡರ್‌ ಜತೆ ನಂಟು ಆರೋಪ* ಐಸಿಸ್‌ಗೆ ಭಾರತದಲ್ಲಿ ನೇಮಕಾತಿ ನಡೆಸುತ್ತಿದ್ದ ಜಫ್ರಿ ಅರೆಸ್ಟ್‌* 4 ವರ್ಷಗಳ ಹಿಂದೆ ಈತನ ಸೋದರ ಕೂಡ ಬಂಧನಕ್ಕೊಳಗಾಗಿದ್ದ

ಬೆಂಗಳೂರು(ಆ.07): ಪೈಶಾಚಿಕ ಉಗ್ರ ಸಂಘಟನೆ ಇಸ್ಲಾಮಿಕ್‌ ಸ್ಟೇಟ್ಸ್‌ (ಐಸಿಸ್‌) ನೇಮಕಾತಿ ಜಾಲದ ವಿರುದ್ಧ ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ದ ಕಾರ್ಯಾಚರಣೆ ಮುಂದುವರೆದಿದ್ದು, ಪಾಕಿಸ್ತಾನ-ಆಫ್ಘಾನಿಸ್ತಾನದ ಐಸಿಸ್‌ ಕಮಾಂಡರ್‌ಗಳ ಜತೆ ನೇರ ಸಂಪರ್ಕ ಹೊಂದಿದ್ದ ಭಟ್ಕಳ ಮೂಲದ ಶಂಕಿತ ಉಗ್ರನನ್ನು ಶುಕ್ರವಾರ ಬಂಧಿಸಿದೆ.

ಉತ್ತರ ಕನ್ನಡ ಜಿಲ್ಲೆ ಭಟ್ಕಳದ ಜಫ್ರಿ ಜವ್ಹಾರ್‌ ದಾಮುದಿ ಅಲಿಯಾಸ್‌ ಅಬು ಹಝೀರ್‌ ಅಲ್‌ ಬದ್ರಿ ಬಂಧಿತನಾಗಿದ್ದು, ಆತನಿಂದ ಮೊಬೈಲ್‌ಗಳು, ಹಾರ್ಡ್‌ ಡಿಸ್ಕ್‌ಗಳು, ಎಸ್‌ಡಿ ಕಾರ್ಡ್‌ಗಳು ಹಾಗೂ ಡಿವಿಡಿ ಸೇರಿದಂತೆ ತಾಂತ್ರಿಕ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ನಾಲ್ಕು ವರ್ಷಗಳ ಹಿಂದೆ ಐಸಿಸ್‌ ಸಂಘಟನೆಯಲ್ಲಿ ತೊಡಗಿದ್ದ ಈತನ ಸೋದರ ಅದ್ನಾ ಹಸನ್‌ ದಾಮುದಿ ಎಂಬಾತನನ್ನು ಸಹ ಬಂಧಿಸಲಾಗಿತ್ತು ಎಂದು ಎನ್‌ಐಎ ಪ್ರಕಟಣೆಯಲ್ಲಿ ತಿಳಿಸಿದೆ.

ಐಸಿಸ್‌ ಉಗ್ರರ ನಂಟು ಶಂಕೆ: ಮಾಜಿ ಶಾಸಕನ ಮೊಮ್ಮಗ ಸೇರಿ 4 ಮಂದಿ ಅರೆಸ್ಟ್‌!

ಕೆಲ ದಿನಗಳ ಹಿಂದೆ ಜಮ್ಮು ಮತ್ತು ಕಾಶ್ಮೀರದ ಹಲವೆಡೆ ಕಾರ್ಯಾಚರಣೆ ನಡೆಸಿ ಐಸಿಸ್‌ ಸಂಘಟನೆ ನೇಮಕಾತಿಯಲ್ಲಿ ನಿರತರಾಗಿದ್ದ ಶಂಕಿತ ಉಗ್ರರಾದ ಉಮಾರ್‌ ನಿಸಾರ್‌, ತನ್ವೀರ್‌ ಅಹ್ಮದ್‌ ಭಟ್‌ ಹಾಗೂ ರಮೀಜ್‌ ಅಹ್ಮದ್‌ ಲೋನ್‌ ಎಂಬುವರನ್ನು ಬಂಧಿಸಲಾಗಿತ್ತು. ಈ ಶಂಕಿತ ಉಗ್ರರ ವಿಚಾರಣೆ ಹಾಗೂ ಆನಂತನಾಗ್‌ ಜಿಲ್ಲೆಯ ಅಚಬಲ್‌ ಪ್ರದೇಶದಲ್ಲಿನ ಆರೋಪಿಗಳ ಮನೆಗಳ ಶೋಧ ನಡೆಸಿದಾಗ ಸಿಕ್ಕಿದ್ದ ಕೆಲ ದಾಖಲೆಗಳನ್ನು ಪರಿಶೀಲಿಸಿದಾಗ ಭಟ್ಕಳದ ಜಫ್ರಿ ಕುರಿತು ಸುಳಿವು ಲಭಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಲವು ಭಾಷೆಗಳಲ್ಲಿ ಜಿಹಾದಿ ಬೋಧಿಸಿದ ಜಫ್ರಿ:

ಮೂಲಭೂತವಾದಿಗಳಿಂದ ಪ್ರಭಾವಿತನಾಗಿದ್ದ ಜಫ್ರಿ, ಭಾರತದಲ್ಲಿ ಜಾಗತಿಕ ಮಟ್ಟದ ರಕ್ತಪಿಪಾಸು ಸಂಘಟನೆ ಐಸಿಸ್‌ಗೆ ನೀರೆರೆದು ಬೆಳೆಸಲು ಟೊಂಕಕಟ್ಟಿದ್ದ. ಅಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ‘ಅಬೂ ಹಝೀರ್‌ ಅಲ್‌ ಬದ್ರಿ’ ಹೆಸರಿನಲ್ಲಿ ಖಾತೆಗಳನ್ನು ಹಾಗೂ ಯೂಟ್ಯೂಬ್‌ ಚಾನಲ್‌ ತೆರೆದು ಜಫ್ರಿ ಜಿಹಾದಿ ಬೋಧಿಸುತ್ತಿದ್ದ. ದಕ್ಷಿಣ ಭಾರತದ ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಆತ ಧರ್ಮ ಬೋಧನೆ ಮಾಡಿದ್ದ. ಸಾಮಾಜಿಕ ಜಾಣತಾಣಗಳಲ್ಲಿ ಆತನ ಧ್ವನಿ ಹೊಂದಿದ್ದ ವಿಡಿಯೋ ಹಾಗೂ ಆಡಿಯೋಗಳು ಆಪ್‌ಲೋಡ್‌ ಆಗಿದ್ದವು. ತನ್ನ ಮಾತುಗಳಿಂದ ಪ್ರಭಾವಿತರಾದ ಯುವಕರನ್ನು ಸೆಳೆದು ಐಸಿಸ್‌ ಸಂಘಟನೆಗೆ ನಿಯೋಜಿಸುತ್ತಿದ್ದ. ಆ ಯುವಕರಿಗೆ ಭಾರತದ ವಿರುದ್ಧ ನಡೆಯುವ ಜಿಹಾದಿ ಯುದ್ಧದಲ್ಲಿ ಪಾಲ್ಗೊಳ್ಳುವಂತೆ ಆರೋಪಿ ಪ್ರಚೋದಿಸುತ್ತಿದ್ದ ಎಂದು ಎನ್‌ಐಎ ಹೇಳಿದೆ.

ದೇವರ ನಾಡೀಗ ಉಗ್ರರ ನೇಮಕಾತಿ ತಾಣ; ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಕೇರಳ DGP!

ಪಾಕಿಸ್ತಾನ ಹಾಗೂ ಆಷ್ಘಾನಿಸ್ತಾನದ ಐಸಿಸ್‌ ನಾಯಕರುಗಳ ಜತೆ ನೇರ ಸಂಪರ್ಕ ಹೊಂದಿದ್ದ ಜಫ್ರಿ, ಐಸಿಸ್‌ ಕಮಾಂಡರ್‌ಗಳ ಸೂಚನೆ ಮೇರೆಗೆ ಭಾರತದಲ್ಲಿ ಐಸಿಸ್‌ಗೆ ಯುವಕರನ್ನು ನೇಮಕಾತಿ ಮಾಡುತ್ತಿದ್ದ. ಹಲವು ಯುವಕರು ಆತನಿಂದ ಪ್ರಭಾವಿತರಾಗಿರುವುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಎನ್‌ಐಎ ವಿವರಿಸಿದೆ.