ನವದೆಹಲಿ(ಫೆ.16): ದೇಶಾದ್ಯಂತ ಇರುವ ರಾಷ್ಟ್ರೀಯ ಹೆದ್ದಾರಿ ಹಾಗೂ ಎಕ್ಸ್‌ಪ್ರೆಸ್‌ವೇಗಳ ಅಕ್ಕಪಕ್ಕ ಪ್ರಯಾಣಿಕರಿಗೆ ಮೂಲಸೌಕರ್ಯಗಳನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೊಸ ನೀತಿ ಜಾರಿಗೊಳಿಸಿದೆ. ಅದರಂತೆ, ಹೆದ್ದಾರಿಗಳ ಅಕ್ಕಪಕ್ಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ)ದ ಒಡೆತನದಲ್ಲಿರುವ ಜಾಗವನ್ನು ಖಾಸಗಿ ಸಂಸ್ಥೆಗಳಿಗೆ 30 ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೀಡಲಾಗುತ್ತದೆ.

ಹೆದ್ದಾರಿಗಳ ಪಕ್ಕ ಮೂಲಸೌಕರ್ಯಗಳನ್ನು ನಿರ್ಮಿಸಲು ಖಾಸಗಿ ಕಂಪನಿಗಳು ಇನ್ನುಮುಂದೆ ಹೆದ್ದಾರಿ ಪ್ರಾಧಿಕಾರದಿಂದ 30 ವರ್ಷಗಳವರೆಗೆ ಜಾಗ ಗುತ್ತಿಗೆ ಪಡೆಯಬಹುದು. ಹೆದ್ದಾರಿ ಪ್ರಾಧಿಕಾರದ ಜೊತೆ ಯಾರು ಹೆಚ್ಚು ಲಾಭ ಹಂಚಿಕೊಳ್ಳಲು ಮುಂದೆ ಬರುತ್ತಾರೋ ಅವರಿಗೆ ಗುತ್ತಿಗೆ ಸಿಗಲಿದೆ. ಪ್ರಾಧಿಕಾರ ಈಗಾಗಲೇ ತಾನೇ ಮೂಲಸೌಕರ್ಯಗಳನ್ನು ನಿರ್ಮಿಸಲು ಆರಂಭಿಸಿದ್ದರೆ ಅದನ್ನು 15 ವರ್ಷಗಳ ಅವಧಿಗೆ ಗುತ್ತಿಗೆ ನೀಡಬಹುದು. ಖಾಲಿ ಜಾಗವಿದ್ದರೆ 30 ವರ್ಷಕ್ಕೆ ನೀಡಬಹುದು. 30 ವರ್ಷದ ನಂತರ ಅಲ್ಲಿ ನಿರ್ಮಿತವಾಗಿರುವ ಕಟ್ಟಡಗಳ ಸಮೇತ ಜಾಗವು ಪ್ರಾಧಿಕಾರಕ್ಕೆ ಮರಳಿ ಸೇರುತ್ತದೆ. ನಂತರ ಮತ್ತೆ ಅದನ್ನು ಗುತ್ತಿಗೆ ನೀಡಬಹುದು ಎಂದು ಹೊಸ ನೀತಿಯಲ್ಲಿ ಹೇಳಲಾಗಿದೆ.

ಪ್ರಯಾಣಿಕರಿಗೆ ಮೂಲಸೌಕರ್ಯಗಳನ್ನು ನಿರ್ಮಿಸುವ ಜಾಗದಲ್ಲಿ ಭೂಮಿಯ ಬೆಲೆ, ಭೇಟಿ ನೀಡಬಹುದಾದ ಜನರ ಸಂಖ್ಯೆ, ಸಂಚಾರ ದಟ್ಟಣೆ, ಸಮೀಪದಲ್ಲಿರುವ ಸ್ಪರ್ಧಾತ್ಮಕ ಸೌಕರ್ಯಗಳು ಮುಂತಾದವುಗಳನ್ನು ನೋಡಿಕೊಂಡು ಪ್ರಾಧಿಕಾರವು ಲಾಭ ಹಂಚಿಕೆಯ ಪ್ರಮಾಣವನ್ನು ನಿರ್ಧರಿಸಲಿದೆ.