ಜಮ್ಮು[ಜ.05]: ಸಾಕಷ್ಟುವಿರೋಧದ ನಡುವೆಯೂ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೊಳಿಸುವುದಾಗಿ ಘೋಷಣೆ ಮಾಡಿರುವ ಕೇಂದ್ರ ಸರ್ಕಾರದ ಮುಂದಿನ ಗುರಿ ರೋಹಿಂಗ್ಯಾ ಮುಸ್ಲಿಮರ ಗಡೀಪಾರು. ಇದನ್ನು ಸ್ವತಃ ಪ್ರಧಾನಿ ಕಾರ್ಯಾಲಯ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್‌ ಅವರೇ ತಿಳಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆಯಡಿ ರೋಹಿಂಗ್ಯಾಗಳಿಗೆ ಪೌರತ್ವ ದೊರೆಯುವುದಿಲ್ಲ. ಹೀಗಾಗಿ ಅವರನ್ನು ದೇಶದಿಂದ ಗಡೀಪಾರು ಮಾಡುವುದೇ ಕೇಂದ್ರ ಸರ್ಕಾರದ ಮುಂದಿನ ಗುರಿಯಾಗಲಿದೆ ಎಂದು ಅವರು ಶನಿವಾರ ಕಾರ್ಯಕ್ರಮವೊಂದರಲ್ಲಿ ತಿಳಿಸಿದರು.

ನಗರದಲ್ಲಿ ಸಿಕ್ಕಿಬಿದ್ದ 7 ರೋಹಿಂಗ್ಯ ಮುಸ್ಲಿಮರು

ಪಶ್ಚಿಮ ಬಂಗಾಳದಿಂದ ಹಲವು ರಾಜ್ಯಗಳನ್ನು ದಾಟಿ ದೇಶದ ಉತ್ತರ ಭಾಗಕ್ಕೆ ಬಂದು ರೋಹಿಂಗ್ಯಾಗಳು ಹೇಗೆ ನೆಲೆಸಿದರು ಎಂಬ ಬಗ್ಗೆ ತನಿಖೆಯಾಗಬೇಕಿದೆ. ಬಂಗಾಳದಿಂದ ಜಮ್ಮುವರೆಗೂ ಬರಲು ಅವರಿಗೆ ಟಿಕೆಟ್‌ ಕೊಡಿಸಿದ್ದು ಯಾರು ಎಂಬದನ್ನು ಅರಿಯಬೇಕಿದೆ ಎಂದು ಹೇಳಿದರು.

ಸಂಸತ್ತಿನಲ್ಲಿ ಪೌರತ್ವ ಕಾಯ್ದೆ ಅಂಗೀಕಾರವಾಗಿರುವುದರಿಂದ ಅದನ್ನು ಜಮ್ಮು-ಕಾಶ್ಮೀರದಲ್ಲೂ ಜಾರಿಗೆ ತರಲಾಗುತ್ತದೆ. ಅದರಲ್ಲಿ ಆದರೆ, ಹೋದರೆ ಎಂಬುದೆಲ್ಲಾ ಇಲ್ಲ. ಜಮ್ಮುವಿನಲ್ಲಿ ಸಾಕಷ್ಟುಸಂಖ್ಯೆಯಲ್ಲಿ ರೋಹಿಂಗ್ಯಾಗಳು ಇದ್ದಾರೆ ಎಂದು ತಿಳಿಸಿದರು.

ಮನುಷ್ಯರನ್ನು ಕೊಂದು ಮಾಂಸ ಭಕ್ಷಿಸುತ್ತಿದ್ದಾರೆ ರೋಹಿಂಗ್ಯಾಗಳು?

ರೋಹಿಂಗ್ಯಾಗಳು ಮ್ಯಾನ್ಮಾರ್‌ ಮೂಲಕ ಬಂದಿದ್ದಾರೆ. ಅವರು ವಾಪಸ್‌ ಹೋಗಬೇಕು. ನೂತನ ಪೌರತ್ವ ತಿದ್ದುಪಡಿ ಕಾಯ್ದೆಯಡಿ ಮೂರು ದೇಶಗಳ ಆರು ಧಾರ್ಮಿಕ ಅಲ್ಪಸಂಖ್ಯಾತರಿಗೆ ಪೌರತ್ವ ನೀಡಲಾಗುತ್ತದೆ. ಆದರೆ ರೋಹಿಂಗ್ಯಾಗಳು ಈ ಮೂರೂ ದೇಶಕ್ಕೂ ಸಂಬಂಧಿಸಿದವರಲ್ಲ, ಆರೂ ಸಮುದಾಯದವರೂ ಇಲ್ಲ ಎಂದು ತಿಳಿಸಿದರು.

ಸರ್ಕಾರಿ ದಾಖಲೆಗಳ ಪ್ರಕಾರ, ರೋಹಿಂಗ್ಯಾ ಮುಸ್ಲಿಮರು ಹಾಗೂ ಬಾಂಗ್ಲಾದೇಶ ಪ್ರಜೆಗಳು ಸೇರಿದಂತೆ 13700 ವಿದೇಶಿಗರು ಜಮ್ಮು ಮತ್ತು ಸಾಂಬಾ ಜಿಲ್ಲೆಗಳಲ್ಲಿ ನೆಲೆಸಿದ್ದಾರೆ.