8 ವರ್ಷದ ಪ್ರೀತಿ, 15 ದಿನ ಹಿಂದಷ್ಟೇ ಮದುವೆ, ಹನಿಮೂನ್ ಮುಗಿಸಿ ಬಂದ ನವದಂಪತಿ ದುರಂತ ಅಂತ್ಯ!
ಬರೋಬ್ಬರಿ 8 ವರ್ಷದ ಪ್ರೀತಿ ಇವರದು. 15 ದಿನ ಹಿಂದಷ್ಟೇ ಮದುವೆಯಾಗಿದೆ. ಮಲೇಷಿಯಾದಲ್ಲಿ ಹನಿಮೂನ್ ಮುಗಿಸಿ ವಾಪಸ್ ಬಂದ ನವ ದಂಪತಿ ದುರಂತ ಅಂತ್ಯ ಕಂಡಿದ್ದಾರೆ.
ತಿರುವನಂತಪುರಂ(ಡಿ.15) ಕಾಲೇಜು ದಿನಗಳಲ್ಲಿ ಶುರುವಾದ ಪ್ರೀತಿ ಬಳಿಕ ವೃತ್ತಿ ಜೀವನದಲ್ಲೂ ಮುಂದುವರಿಯಿತು. ಬರೋಬ್ಬರಿ 8 ವರ್ಷಗಳ ಪ್ರೀತಿ 15 ದಿನಗಳ ಹಿಂದೆ ಮದುವೆಯ ಅರ್ಥ ಪಡೆದುಕೊಂಡಿತ್ತು. ಕುಟುಂಬಸ್ಥರು, ಆಪ್ತರು, ಹಿರಿಯರ ಸಮ್ಮುಖದಲ್ಲಿ ಮದುವೆಯಾದ ಈ ಜೋಡಿ ಹನಿಮೂನ್‌ಗಾಗಿ ಮಲೇಷಿಯಾಗೆ ತೆರಳಿದ್ದರು. ಹನಿಮೂನ್ ಪ್ರವಾಸ ಮುಗಿಸಿ ಭಾರತಕ್ಕೆ ಬಂದಾಗ ದುರಂತ ಸಂಭವಿಸಿದೆ. ಕಾರು ಅಪಘಾತದಲ್ಲಿ ಈ ನವ ಜೋಡಿಗಳು ಮೃತಪಟ್ಟಿದ್ದಾರೆ. ಇವರನ್ನು ವಿಮಾನ ನಿಲ್ದಾಣದಿಂದ ಕರೆತರಲು ಹೋದ ಇನ್ನಿಬ್ಬರು ಇದೇ ದುರಂತದಲ್ಲಿ ಮೃತಪಟ್ಟ ಘಟನೆ ಕೇರಳದ ಪಟ್ಟಣಂತಿಟ್ಟದಲ್ಲಿ ನಡೆದಿದೆ.
ಪತ್ತನಂತಿಟ್ಟದ ಮಲ್ಲಶ್ಶೇರಿಯ ನಿಖಿಲ್ (29 ವರ್ಷ) ಹಾಗೂ ಅನು (26 ವರ್ಷ) ದುರಂತ ಅಂತ್ಯ ಕಂಡಿದ್ದಾರೆ. ಇವರ ಕುಟುಂಬಗಳ ಸಂಭ್ರಮ, ಸಂತೋಷ ಒಂದೇ ಕ್ಷಣದಲ್ಲಿ ಮಾಯವಾಗಿದೆ. ಇವರ ಪ್ರೀತಿ ವಿಚಾರ ಮನೆಯವರಿಗೆ ಹೇಳಿ ಕೆಲ ವರ್ಷಗಳಾಗಿದೆ. ಮದುವೆಗೆ ಎರಡೂ ಮನೆಯವರ ಒಪ್ಪಿಗೆ ಇತ್ತು. ಬೇಗ ಮದುವೆಯಾಗಲು ಎರಡೂ ಕುಟುಂಬಸ್ಥರು ಮನವಿ ಮಾಡುತ್ತಲೇ ಇದ್ದರು. ಆದರೆ ಸಮಯ, ಕಂಕಣ ಭಾಗ್ಯ ಕೂಡಿ ಬರಬೇಕಲ್ಲ. ಈ ಘಳಿಗೆ ನವೆಂಬರ್ 30ಕ್ಕೆ ಕೂಡಿ ಬಂದಿತ್ತು. 8 ವರ್ಷಗಳ ಸುದೀರ್ಘ ಪ್ರೀತಿಯ ಈ ಜೋಡಿ ಮದುವೆ ಬಂಧನದಲ್ಲಿ ಮಿಂದಿದ್ದರು.
ಬೆಂಗಳೂರು ನಂ.2, ನಿತಿನ್ ಗಡ್ಕರಿ ವರದಿಯಿಂದ ಸಿಲಿಕಾನ್ ಸಿಟಿ ಜನರಲ್ಲಿ ಹೆಚ್ಚಿದ ಆತಂಕ!
ನಿಖಿಲ್ ಹಾಗೂ ಅನು ನವ ಜೋಡಿ ಭಾನುವಾರ(ಡಿ.15) ಬೆಳಗಿನ ಜಾವ ತಿರುವನಂತಪುರಂ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಇವರನ್ನು ನವ ಜೋಡಿಗಳನ್ನು ವಿಮಾನ ನಿಲ್ದಾಣದಿಂದ ಕರೆ ತರಲು ಇಬ್ಬರು ಪೋಷಕರು ಕಾರಿನಲ್ಲಿ ತೆರಳಿದ್ದಾರೆ. ನಿಖಿಲ್ ತಂದೆ ಮಥಾಯ್ ಈಪನ್ ಹಾಗೂ ಅನು ತಂದೆ ಬಿಜು ಜಾರ್ಜ್ ಕಾರಿನಲ್ಲಿ ಏರ್‌ಪೋರ್ಟ್‌ಗೆ ತೆರಳಿದ್ದಾರೆ. ನವ ಜೋಡಿಗಳನ್ನು ಬರಮಾಡಿಕೊಂಡು ಹಿಂದಿರುವಾಗ ಕಾರು ಅಪಘಾತಕ್ಕೀಡಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿದ ಕಾರು, ಟೂರಿಸ್ಟ್ ಬಸ್‌ಗೆ ಡಿಕ್ಕಿಯಾಗಿದೆ. ಭೀಕರ ಅಪಘಾತದಲ್ಲಿ ನವ ಜೋಡಿ ಹಾಗೂ ಅವರ ಪೋಷಕರು ಮೃತಪಟ್ಟಿದ್ದಾರೆ.
ಮನೆ ತಲುಪಲು ಇನ್ನೇನು ಕೇವಲ 7 ಕಿಲೋಮೀಟರ್ ದೂರ ಮಾತ್ರ ಉಳಿದಿತ್ತು. ಈ ವೇಳೆ ಸಂಭವಿಸಿದ ಅಪಘಾತ ನಾಲ್ವರ ಜೀವಕ್ಕೆ ಕುತ್ತು ತಂದಿತ್ತು. ಇತ್ತ ನವ ಜೋಡಿಗಳನ್ನು ಸಂಭ್ರಮದಿಂದ ಸ್ವಾಗತಿಸಲು ಮನೆಯಲ್ಲಿ ಎಲ್ಲಾ ತಯಾರಿ ಮಾಡಲಾಗಿತ್ತು. ಇದೇ ವಾರದಲ್ಲಿ ನಿಖಿಲ್ ಹುಟ್ಟು ಹಬ್ಬ ಕೂಡ ಆಗಮಿಸಿತ್ತು. ಹೀಗಾಗಿ ಮನೆಯಲ್ಲಿ ಸಂಭ್ರಮ ಜೋರಾಗಿತ್ತು. ಇಷ್ಟೇ ಅಲ್ಲ ಕ್ರಿಸ್ಮಸ್ ಹಬ್ಬದ ತಯಾರಿ ಕೂಡ ಇವರ ಮನೆಯಲ್ಲಿ ಆರಂಭಗೊಂಡಿತ್ತು.
ಮನೆಯಲ್ಲಿ ಸಂಭ್ರಮದ ವಾತಾವರಣ ಈ ಅಪಘಾತ ಸುದ್ದಿ ತಿಳಿಯುದ್ದಂತೆ ಮಾಯವಾಗಿದೆ. ಕುಟುಂಬಸ್ಥರು ತೀವ್ರ ಆಘಾತಗೊಂಡಿದ್ದಾರೆ. ನವ ಜೋಡಿ ಹೊಸ ಬದಕು ಆರಂಭಿಸಿ ಕೆಲವೇ ದಿನಗಳಾಗಿದೆ. ನವ ಜೋಡಿ ಅವರ ಅಪ್ಪಂದಿರು ಕೂಡ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.
ಘಟನೆ ಕುರಿತು ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅಪಘಾತಕ್ಕೆ ನಿಖರ ಕಾರಣ, ಮೋಟಾರು ವಾಹನ ನಿಯಮ ಪಾಲನೆ ಸೇರಿದಂತೆ ಹಲವು ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ಪ್ರಥಮ ಮಾಹಿತಿ ಪ್ರಕಾರ, ಕಾರು ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಆದರೆ ದುರಂತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಘಟನೆಯಿಂದ ಮಲ್ಲಶ್ಶೇರಿ ಗ್ರಾಮದ ನಿವಾಸಿಗಳು ತೀವ್ರ ನೊಂದಿದ್ದಾರೆ. ಹೊಸ ಬದುಕಿನ ಆರಂಭದಲ್ಲೇ ದುರಂತ ನಡೆದು ಹೋಗಿದೆ ಎಂದು ಗ್ರಾಮಸ್ಥರು ನೋವು ತೋಡಿಕೊಂಡಿದ್ದಾರೆ. ನಿಖಿಲ್ ಸಹೋದರಿ ವಿದೇಶದಲ್ಲಿದ್ದು, ಆಕೆಯ ಬರುವಿಕೆಕಾಗಿ ಕುಟುಂಬಸ್ಥರು ಕಾಯುತ್ತಿದ್ದಾರೆ.