ಬೆಂಗಳೂರು ನಂ.2, ನಿತಿನ್ ಗಡ್ಕರಿ ವರದಿಯಿಂದ ಸಿಲಿಕಾನ್ ಸಿಟಿ ಜನರಲ್ಲಿ ಹೆಚ್ಚಿದ ಆತಂಕ!
ಬೆಂಗಳೂರು ನಂಬರ್ 1, ಇದು ಹೆಮ್ಮೆ ಪಡುವ ವಿಚಾರವಲ್ಲ. ಕೇಂದ್ರ ಸಚಿವ ನಿತಿನ್ ಗಡ್ಕರಿ ಬೆಂಗಳೂರು ಹೆಸರು ಹೇಳುತ್ತಿದ್ದಂತೆ ಸಿಲಿಕಾನ್ ಸಿಟಿ ಮಂದಿಯಲ್ಲಿ ಆತಂಕ ಹೆಚ್ಚಾಗಿದೆ.
ನವದೆಹಲಿ(ಡಿ.15) ಸ್ಟಾರ್ಟ್ ಅಪ್, ಗರಿಷ್ಠ ವೇತನ, ಉದ್ಯೋಗ ಅವಕಾಶ ಸೇರಿದಂತೆ ಹಲವು ಕ್ಷೇತ್ರದಲ್ಲಿ ಬೆಂಗಳೂರು ನಂಬರ್ 1. ವಿಶ್ವದ ಭೂಪಟದಲ್ಲಿ ಬೆಂಗಳೂರು ಗುರುತಿಸಿಕೊಂಡಿದೆ. ತಂತ್ರಜ್ಞಾನ ಹಾಗೂ ಅದರ ಬಳಕೆಯಲ್ಲೂ ಬೆಂಗಳೂರು ಮುಂದಿದೆ. ಆದರೆ ಇತ್ತೀಚೆಗೆ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಸಂಸತ್ತಿನಲ್ಲಿ ತೆರೆದಿಟ್ಟ ವರದಿ ಬೆಂಗಳೂರಿಗರ ಆತಂಕ ಹೆಚ್ಚಿಸಿದೆ. ಬೆಂಗಳೂರು ನಂಬರ್ 2 ಎಂದು ನಿತಿನ್ ಗಡ್ಕರಿ ಅಂಕಿ ಅಂಶ ತೆರೆದಿಟ್ಟಿದ್ದಾರೆ. ಆದರೆ ಇದು ಅಪಘಾತದಲ್ಲಿ. ಭಾರತದ ಪ್ರಮುಖ ನಗರಗಳ ಪೈಕಿ ಗರಿಷ್ಠ ಅಪಘಾತವಾಗುತ್ತಿರುವ ನಗರಗಳ ಪಟ್ಟಿಯನ್ನು ನಿತಿನ್ ಗಡ್ಕರಿ ನೀಡಿದ್ದಾರೆ. ಇದರಲ್ಲಿ ಬೆಂಗಳೂರು 2ನೇ ಸ್ಥಾನದಲ್ಲಿದೆ.
ನಗರದಲ್ಲಿ ಹೆಚ್ಚುತ್ತಿರುವ ಅಪಘಾತ ಪ್ರಕರಣಗಳು ಜನರ ಆಂತಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ನಿತಿನ್ ಗಡ್ಕರಿ ದೇಶದ ಅಪಘಾತ ಪ್ರಕರಣಗಳ ಚಿತ್ರಣ ಮುಂದಿಟ್ಟಿದ್ದಾರೆ. ಇದು ಬೆಂಗಳೂರಿಗರ ಆತಂಕ ಹೆಚ್ಚಿಸಿದೆ. ಕಾರಣ ಗರಿಷ್ಠ ಅಪಘಾತ ಪ್ರಕರಣ ಹಾಗೂ ಮೃತ ಸಂಖ್ಯೆಯಲ್ಲಿ ದೆಹಲಿ ಮೊದಲ ಸ್ಥಾನದಲ್ಲಿದ್ದರೆ, ಬೆಂಗಳೂರು 2ನೇ ಸ್ಥಾನದಲ್ಲಿದೆ. ಜೈಪುರ ಮೂರನೇ ಸ್ಥಾನದಲ್ಲಿದೆ.
ಪುಷ್ಪ 2 ಚಿತ್ರ ನೋಡಲು ಧಾವಂತದಲ್ಲಿ ತೆರಳಿದ ಬೆಂಗಳೂರಿನ 19 ವರ್ಷದ ಯುವಕ ರೈಲಿಗೆ ಬಲಿ!
ಗರಿಷ್ಠ ಅಪಘಾತ ಹಾಗೂ ಸಾವು ( ರಾಜ್ಯ)
ದೆಹಲಿ: 1,457 ಸಾವು
ಬೆಂಗಳೂರು: 915 ಸಾವು
ಜೈಪುರ: 850 ಸಾವು
ಸದನದಲ್ಲಿ ಅಪಘಾತ ಕುರಿತು ಮಾಹಿತಿ ನೀಡಿದ ನಿತಿನ್ ಗಡ್ಕರಿ, ಭಾರತದಲ್ಲಿ ಪ್ರತಿ ವರ್ಷ ಸುಮಾರು 1,78,000 ಮಂದಿ ಅಪಘಾತದಲ್ಲಿ ಮೃತಪಡುತ್ತಿದ್ದಾರೆ. ಈ ಪೈಕಿ ಶೇಕಡಾ 60 ರಷ್ಟು ಮಂದಿ 18 ರಿಂದ 34 ವಯಸ್ಸಿನವರು ಎಂದು ಗಡ್ಕರಿ ಹೇಳಿದ್ದಾರೆ. 2024ರ ವೇಳೆ ಅಪಘಾತ ಪ್ರಮಾಣವನ್ನು ಶೇಕಡಾ 50 ರಷ್ಟು ಕಡಿಮೆ ಮಾಡುವ ಗುರಿ ಇಟ್ಟುಕೊಂಡಿದ್ದೆವು. ಆದರೆ ಈ ಪ್ರಮಾಣ ಕಡಿಮೆಯಾಗುವುದು ಬದಿಗಿರಲಿ, ಹೆಚ್ಚಾಗಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. ಇದೇ ವಿಚಾರವಾಗಿ ಅಂತಾರಾಷ್ಟ್ರೀಯ ರಸ್ತೆ ಸುರಕ್ಷತಾ ಸಮ್ಮೇಳನ, ಸಭೆಯಲ್ಲಿ ಮುಖ ತೋರಿಸಲು ನನಗೆ ನಾಚಿಕೆಯಾಗುತ್ತದೆ. ಹೀಗಾಗಿ ಇಂತಹ ಸಮ್ಮೇಳನಗಳಲ್ಲಿ ನಾನು ಮುಖ ಕಾಣಿಸದಂತೆ ಮಾಡುತ್ತೇನೆ ಎಂದು ನಿತಿನ್ ಗಡ್ಕರಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಗರಿಷ್ಠ ಅಪಘಾತ ಹಾಗೂ ಮೃತ ಸಂಖ್ಯೆಗಳ ರಾಜ್ಯದ ಪಟ್ಟಿಯನ್ನೂ ನಿತಿನ್ ಗಡ್ಕರಿ ನೀಡಿದ್ದಾರೆ. ಈ ಪೈಕಿ ಉತ್ತರ ಪ್ರದೇಶದಲ್ಲಿ ಅಪಘಾತದಿಂದ 23,652 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಗರಿಷ್ಠ ಸಾವು ಉತ್ತರ ಪ್ರದೇಶದಲ್ಲಿ ಆಗಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. ಇನ್ನುಳಿದ 3 ರಾಜ್ಯಗಳ ಮಾಹಿತಿ ಇಲ್ಲಿದೆ.
ಗರಿಷ್ಠ ಅಪಘಾತ ಗಾಗೂ ಸಾವು(ರಾಜ್ಯ)
ಉತ್ತರ ಪ್ರದೇಶ:23,652 ಸಾವು
ತಮಿಳುನಾಡು:18,347 ಸಾವು
ಮಹಾರಾಷ್ಟ್ರ:15,366 ಸಾವು
ಮಧ್ಯಪ್ರದೇಶ:13,798 ಸಾವು