Asianet Suvarna News Asianet Suvarna News

ಮಾನವಕೇಂದ್ರಿತ ಜಾಗತೀಕರಣವೇ ನಮ್ಮ ಗುರಿ; ನರೇಂದ್ರ ಮೋದಿ

ಭಾರತದ ಜಿ20 ಅಧ್ಯಕ್ಷತೆಯನ್ನು ಉಪಶಮನದ, ಸಾಮರಸ್ಯದ ಮತ್ತು ಭರವಸೆಯ ಅವಧಿಯನ್ನಾಗಿ ಮಾಡಲು ನಾವೆಲ್ಲರೂ ಒಟ್ಟಾಗಿ ಶ್ರಮಿಸೋಣ. ಮಾನವ ಕೇಂದ್ರಿತ ಜಾಗತೀಕರಣದ ಹೊಸ ಮಾದರಿಯನ್ನು ರೂಪಿಸಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದ ಪ್ರಧಾನಿ ಮೋದಿ

new type of human centric globalisation our goal says modi rav
Author
First Published Dec 1, 2022, 1:01 AM IST

ನರೇಂದ್ರ ಮೋದಿ, ಪ್ರಧಾನಮಂತ್ರಿ

19 ದೇಶಗಳು ಹಾಗೂ ಯುರೋಪಿಯನ್‌ ಒಕ್ಕೂಟವು ಜಗತ್ತಿನ ಸುಸ್ಥಿರ ಅಭಿವೃದ್ಧಿಯ ಕನಸು ಕಂಡು ಒಟ್ಟಾಗಿ ರೂಪಿಸಿಕೊಂಡ ಸಮೂಹವೇ ಜಿ20. ಆರ್ಥಿಕ ಸ್ಥಿರತೆ, ಜಾಗತಿಕ ಅರ್ಥವ್ಯವಸ್ಥೆಗೆ ಸಂಬಂಧಿಸಿದ ಸವಾಲುಗಳನ್ನು ಎದುರಿಸುವುದು, ಹವಾಮಾನ ಬದಲಾವಣೆಗೆ ತಡೆಯೊಡ್ಡುವುದೂ ಸೇರಿದಂತೆ ಈ ದೇಶಗಳು ಎದುರಿಸುವ ಯಾವುದೇ ರೀತಿಯ ಸಮಸ್ಯೆಗಳನ್ನು ಜಂಟಿಯಾಗಿ ಪರಿಹರಿಸಿಕೊಳ್ಳುವ ಸಂಕಲ್ಪ ಜಿ20 ಸಮೂಹದ ಹುಟ್ಟಿನ ಹಿಂದಿದೆ.

ಜಿ20 ಸಮೂಹದ ಹಿಂದಿನ 17 ಅಧ್ಯಕ್ಷತೆಗಳು ಗಮನಾರ್ಹವಾದ ಫಲಿತಾಂಶಗಳನ್ನು ನೀಡಿವೆ. ಸ್ಥೂಲ ಆರ್ಥಿಕ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳುವುದು, ಅಂತರರಾಷ್ಟ್ರೀಯ ತೆರಿಗೆಯನ್ನು ತರ್ಕಬದ್ಧಗೊಳಿಸುವುದು, ದೇಶಗಳ ಮೇಲಿನ ಸಾಲದ ಹೊರೆಯನ್ನು ನಿವಾರಿಸುವುದು ಈ ಫಲಿತಾಂಶಗಳಲ್ಲಿ ಕೆಲವು. ಈ ಸಾಧನೆಗಳಿಂದ ನಾವು ಪ್ರಯೋಜನ ಪಡೆಯುತ್ತೇವೆ ಮತ್ತು ಅವುಗಳನ್ನು ಮತ್ತಷ್ಟುಬಲಪಡಿಸುತ್ತೇವೆ.

Gujarat Election: ಗುಜರಾತ್‌ ವಿಧಾನಸಭೆಗೆ ಇಂದು ಮೊದಲ ಹಂತದ ಮತದಾನ

ಭಾರತ ಇದೀಗ ಜಿ20 ಸಮೂಹದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುತ್ತಿದೆ. ಡಿ.1ರಿಂದ ಒಂದು ವರ್ಷದ ಕಾಲ ಭಾರತವು ಜಿ20 ಸಮೂಹದ ನೇತೃತ್ವವನ್ನು ವಹಿಸಿಕೊಳ್ಳಲಿದೆ. ದೇಶವು ಈ ಪ್ರಮುಖ ಸ್ಥಾನವನ್ನು ಅಲಂಕರಿಸಿರುವಾಗ ನಾನು ನನಗೇ ಒಂದು ಪ್ರಶ್ನೆ ಕೇಳಿಕೊಳ್ಳುತ್ತಿದ್ದೇನೆ: ಜಿ20 ಇನ್ನೂ ಮುಂದೆ ಹೋಗಬಹುದೇ? ಒಟ್ಟಾರೆಯಾಗಿ ಮನುಕುಲಕ್ಕೆ ಪ್ರಯೋಜನವಾಗುವಂತೆ ನಾವು ಮೂಲಭೂತ ಮನಸ್ಥಿತಿಯ ಬದಲಾವಣೆಯನ್ನು ವೇಗಗೊಳಿಸಬಹುದೇ?

ನಾವು ಇದನ್ನು ಮಾಡಬಹುದು ಎಂದು ನನಗೆ ಭರವಸೆ ಇದೆ.

ಸ್ಪರ್ಧೆಯಲ್ಲ, ಸಾಮರಸ್ಯದ ಗುರಿ

ನಮ್ಮ ಮನಸ್ಥಿತಿಗಳು ನಮ್ಮ ಪರಿಸ್ಥಿತಿಗಳಿಗೆ ಅನುಗುಣವಾಗಿ ರೂಪುಗೊಳ್ಳುತ್ತವೆ. ಇತಿಹಾಸದುದ್ದಕ್ಕೂ, ಮನುಕುಲವು ಅಭಾವದಲ್ಲಿಯೇ ಜೀವಿಸಿದೆ. ಸೀಮಿತ ಸಂಪನ್ಮೂಲಗಳಿಗಾಗಿ ನಾವು ಹೋರಾಡಿದ್ದೇವೆ. ಏಕೆಂದರೆ ನಮ್ಮ ಉಳಿವು ಇತರರಿಗೆ ಅದನ್ನು ನಿರಾಕರಿಸುವುದರ ಮೇಲೆ ಅವಲಂಬಿತವಾಗಿತ್ತು. ಆಲೋಚನೆಗಳು, ಸಿದ್ಧಾಂತಗಳು ಮತ್ತು ಗುರುತುಗಳ ನಡುವೆ ಸಂಘರ್ಷ ಮತ್ತು ಸ್ಪರ್ಧೆ ಸಾಮಾನ್ಯವಾಗಿವೆ.

ದುರದೃಷ್ಟವಶಾತ್‌, ನಾವು ಇಂದಿಗೂ ಇತರರ ಲಾಭವನ್ನು ನಮ್ಮ ನಷ್ಟವೆಂದು ಪರಿಗಣಿಸುವ ಅದೇ ಮನಸ್ಥಿತಿಯಲ್ಲಿದ್ದೇವೆ. ದೇಶಗಳು ಭೂಪ್ರದೇಶ ಅಥವಾ ಸಂಪನ್ಮೂಲಗಳಿಗಾಗಿ ಹೋರಾಡುವಾಗ ನಾವು ಅದನ್ನು ಸುಮ್ಮನೆ ನೋಡುತ್ತೇವೆ. ಅಗತ್ಯ ವಸ್ತುಗಳ ಸರಬರಾಜುಗಳಲ್ಲಿ ತಾರತಮ್ಯ ನಡೆದಾಗ ನಾವು ಅದನ್ನು ನೋಡುತ್ತೇವೆ. ಲಸಿಕೆಗಳು ಬಿಲಿಯನ್‌ಗಟ್ಟಲೆ ಜನರಿಗೆ ಇನ್ನೂ ತಲುಪದಿದ್ದಾಗಲೂ ಕೆಲವರು ಮಾತ್ರವೇ ಅವುಗಳನ್ನು ಸಂಗ್ರಹಿಸಿಟ್ಟುಕೊಂಡಾಗ ನಾವು ಅದನ್ನು ಮೌನವಾಗಿ ನೋಡುತ್ತೇವೆ.

Q2 GDP Data: ಜಾಗತಿಕ ಸವಾಲುಗಳ ನಡುವೆ ರಿಲೀಫ್‌ ನೀಡಿದ ಭಾರತದ ಆರ್ಥಿಕತೆ, ಶೇ.6.3ಗೆ ಏರಿಕೆ!

ಸಂಘರ್ಷ ಮತ್ತು ದುರಾಸೆಗಳು ಮಾನವ ಸಹಜ ಸ್ವಭಾವ ಎಂದು ಕೆಲವರು ವಾದಿಸಬಹುದು. ಅದನ್ನು ನಾನು ಒಪ್ಪುವುದಿಲ್ಲ. ಮನುಷ್ಯರು ಸ್ವಾಭಾವಿಕವಾಗಿ ಸ್ವಾರ್ಥಿಗಳಾಗಿದ್ದರೆ, ನಮ್ಮೆಲ್ಲರ ಮೂಲಭೂತ ಏಕತ್ವವನ್ನು ಪ್ರತಿಪಾದಿಸುವ ಅನೇಕ ಆಧ್ಯಾತ್ಮಿಕ ಪರಂಪರೆಗಳ ಸಾರಗಳು ಏನನ್ನು ಹೇಳುತ್ತವೆ?

ಅಂತಹ ಒಂದು ಪರಂಪರೆ ಭಾರತದಲ್ಲಿ ಜನಪ್ರಿಯವಾಗಿದೆ. ಎಲ್ಲ ಜೀವಿಗಳು ಮತ್ತು ನಿರ್ಜೀವ ವಸ್ತುಗಳು ಪಂಚಭೂತಗಳಿಂದ ಮಾಡಲ್ಪಟ್ಟಿವೆ ಎನ್ನಲಾಗುತ್ತದೆ. ಭೂಮಿ, ನೀರು, ಬೆಂಕಿ, ಗಾಳಿ ಮತ್ತು ಆಕಾಶ ಎಂಬ ಈ ಪಂಚಭೂತಗಳ ನಡುವಿನ ಸಾಮರಸ್ಯವು ‘ನಮ್ಮೊಳಗೆ ಮತ್ತು ನಮ್ಮ ನಡುವೆ’ ನಮ್ಮ ಭೌತಿಕ, ಸಾಮಾಜಿಕ ಮತ್ತು ಪರಿಸರ ಯೋಗಕ್ಷೇಮಕ್ಕೆ ಅತ್ಯಗತ್ಯವಾಗಿದೆ.

ಒಂದು ಭೂಮಿ, ಒಂದು ಭವಿಷ್ಯ

ಭಾರತದ ಜಿ20 ಅಧ್ಯಕ್ಷತೆಯು ಈ ಸಾರ್ವತ್ರಿಕ ಏಕತೆಯ ಭಾವನೆಯನ್ನು ಉತ್ತೇಜಿಸಲು ಕೆಲಸ ಮಾಡುತ್ತದೆ. ಆದ್ದರಿಂದ ನಮ್ಮ ಘೋಷವಾಕ್ಯ - ‘ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’. ಇದು ಕೇವಲ ಘೋಷಣೆಯಲ್ಲ. ಇದು ನಾವು ಒಟ್ಟಾರೆಯಾಗಿ ಅರಿತುಕೊಳ್ಳಲು ವಿಫಲರಾಗಿರುವ ಮಾನವ ಪರಿಸ್ಥಿತಿಗಳಲ್ಲಿನ ಇತ್ತೀಚಿನ ಬದಲಾವಣೆಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ.

ಇಂದು, ಪ್ರಪಂಚದ ಎಲ್ಲ ಜನರ ಮೂಲಭೂತ ಅಗತ್ಯಗಳನ್ನು ಪೂರೈಸಲು ಸಾಕಷ್ಟುಉತ್ಪಾದಿಸುವ ವಿಧಾನಗಳನ್ನು ನಾವು ಹೊಂದಿದ್ದೇವೆ. ಇಂದು, ನಾವು ನಮ್ಮ ಉಳಿವಿಗಾಗಿ ಹೋರಾಡಬೇಕಾದ ಅಗತ್ಯವಿಲ್ಲ. ನಮ್ಮ ಯುಗವು ಯುದ್ಧದ ಯುಗವಾಗಿರಬಾರದು. ವಾಸ್ತವವಾಗಿ, ಅದು ಆಗಲೇಬಾರದು!

ಇಂದು ನಾವು ಹವಾಮಾನ ಬದಲಾವಣೆ, ಭಯೋತ್ಪಾದನೆ ಮತ್ತು ಸಾಂಕ್ರಾಮಿಕ ರೋಗಗಳಂತಹ ದೊಡ್ಡ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಈ ಸವಾಲುಗಳನ್ನು ಪರಸ್ಪರ ಹೋರಾಡುವ ಮೂಲಕ ಅಲ್ಲ, ಒಟ್ಟಾಗಿ ಕೆಲಸಮಾಡುವ ಮೂಲಕ ಮಾತ್ರ ಪರಿಹರಿಸಬಹುದು.

ಭಾರತದ ಅನುಭವ ಜಗತ್ತಿಗೆ ಧಾರೆ

ಅದೃಷ್ಟವಶಾತ್‌, ಇಂದಿನ ತಂತ್ರಜ್ಞಾನವು ಮನುಕುಲದ ಸಮಸ್ಯೆಗಳನ್ನು ಪರಿಹರಿಸಲು ನಮಗೆ ಅವಕಾಶಗಳನ್ನು ಒದಗಿಸಿದೆ. ಇಂದು ನಾವು ಬದುಕುತ್ತಿರುವ ಬೃಹತ್‌ ವರ್ಚುವಲ್‌ ಜಗತ್ತು ಡಿಜಿಟಲ್‌ ತಂತ್ರಜ್ಞಾನಗಳ ಪ್ರಮಾಣವನ್ನು ತೋರಿಸುತ್ತದೆ.

ಜಗತ್ತಿನ ಜನಸಂಖ್ಯೆಯ ಆರನೇ ಒಂದು ಭಾಗದಷ್ಟುಜನರಿಗೆ ನೆಲೆಯಾಗಿರುವ ಮತ್ತು ಅಗಾಧವಾದ ಭಾಷಾ ವೈವಿಧ್ಯ, ಧರ್ಮಗಳು, ಪದ್ಧತಿಗಳು ಮತ್ತು ನಂಬಿಕೆಗಳೊಂದಿಗೆ ಭಾರತವು ಪ್ರಪಂಚದ ಸಂಕ್ಷಿಪ್ತ ರೂಪವಾಗಿದೆ.

ಸಾಮೂಹಿಕ ನಿರ್ಧಾರ ತೆಗೆದುಕೊಳ್ಳುವ ಪ್ರಾಚೀನ ಸಂಪ್ರದಾಯಗಳೊಂದಿಗೆ, ಭಾರತವು ಪ್ರಜಾಪ್ರಭುತ್ವದ ಮೂಲಭೂತ ಡಿಎನ್‌ಎಗೆ ಕೊಡುಗೆ ನೀಡಿದೆ. ಪ್ರಜಾಪ್ರಭುತ್ವದ ತಾಯಿಯಾಗಿರುವ ಭಾರತದಲ್ಲಿ ರಾಷ್ಟ್ರೀಯ ಒಮ್ಮತವು ಕಟ್ಟಪ್ಪಣೆಯಿಂದ ಹುಟ್ಟಿಲ್ಲ, ಬದಲಿಗೆ ಲಕ್ಷಾಂತರ ಮುಕ್ತ ಧ್ವನಿಗಳ ಸಂಯೋಜನೆಯಿಂದಾಗಿರುವ ಸಾಮರಸ್ಯದ ಮಧುರ ಗೀತೆಯಾಗಿದೆ.

ಇಂದು ಭಾರತವು ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆಯಾಗಿದೆ. ನಮ್ಮ ನಾಗರಿಕ-ಕೇಂದ್ರಿತ ಆಡಳಿತದ ಮಾದರಿಯು ನಮ್ಮ ಪ್ರತಿಭಾವಂತ ಯುವಜನರ ಸೃಜನಶೀಲ ಪ್ರತಿಭೆಯನ್ನು ಪೋಷಿಸುತ್ತದೆ, ಹಾಗೆಯೇ ತಳಸ್ತರದಲ್ಲಿರುವ ನಾಗರಿಕರ ಕಲ್ಯಾಣವನ್ನು ಸಹ ನೋಡಿಕೊಳ್ಳುತ್ತದೆ. ನಾವು ರಾಷ್ಟ್ರೀಯ ಅಭಿವೃದ್ಧಿಯನ್ನು ಮೇಲಿನಿಂದ ಕೆಳಕ್ಕೆ ಆಡಳಿತದ ಮಾದರಿಯಾಗಿ ಅಲ್ಲ, ಬದಲಿಗೆ ನಾಗರಿಕರ ನೇತೃತ್ವದ ‘ಜನಾಂದೋಲನ’ವನ್ನಾಗಿ ಮಾಡಲು ಪ್ರಯತ್ನಿಸಿದ್ದೇವೆ.

ಮುಕ್ತ, ಅಂತರ್ಗತ ಮತ್ತು ಅಂತರ್‌-ಕಾರ್ಯಸಾಧ್ಯವಾದ ಡಿಜಿಟಲ್‌ ಸಾರ್ವಜನಿಕ ಸರಕುಗಳನ್ನು ರಚಿಸಲು ನಾವು ತಂತ್ರಜ್ಞಾನವನ್ನು ಬಳಸಿದ್ದೇವೆ. ಇವು ಸಾಮಾಜಿಕ ಭದ್ರತೆ, ಹಣಕಾಸು ಸೇರ್ಪಡೆ ಮತ್ತು ಎಲೆಕ್ಟ್ರಾನಿಕ್‌ ಪಾವತಿಗಳಂತಹ ವಿವಿಧ ಕ್ಷೇತ್ರಗಳಲ್ಲಿ ಕ್ರಾಂತಿಕಾರಿ ಪ್ರಗತಿಯನ್ನು ಸಾಧಿಸಿವೆ. ಈ ಎಲ್ಲ ಕಾರಣಗಳಿಂದಾಗಿ, ಭಾರತದ ಅನುಭವಗಳು ಸಂಭವನೀಯ ಜಾಗತಿಕ ಪರಿಹಾರಗಳಿಗೆ ಒಳನೋಟಗಳನ್ನು ಒದಗಿಸಬಹುದು.

ಭಾರತದ ಅಧ್ಯಕ್ಷತೆ ಹೇಗಿರುತ್ತದೆ?

ನಮ್ಮ ಜಿ20 ಅಧ್ಯಕ್ಷತೆಯ ಅವಧಿಯಲ್ಲಿ, ಭಾರತದ ಅನುಭವಗಳು, ಕಲಿಕೆಗಳು ಮತ್ತು ಮಾದರಿಗಳನ್ನು ಇತರರಿಗೆ, ವಿಶೇಷವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಸಂಭವನೀಯ ಮಾದರಿಗಳಾಗಿ ಪ್ರಸ್ತುತಪಡಿಸುತ್ತೇವೆ. ನಮ್ಮ ಜಿ20 ಆದ್ಯತೆಗಳು, ನಮ್ಮ ಜಿ20 ಭಾಗೀದಾರರ ಜೊತೆಗಿನ ಸಮಾಲೋಚನೆಯಿಂದ ಮಾತ್ರ ರೂಪಿಸಲ್ಪಡುವುದಿಲ್ಲ, ಬದಲಿಗೆ ಅವರ ಧ್ವನಿಗಳನ್ನು ಕೇಳಿರದ ಆರ್ಥಿಕವಾಗಿ ಸುದೃಢವಾಗಿಲ್ಲದ ದೇಶಗಳ ಜೊತೆಗಿನ ನಮ್ಮ ಸಮಾಲೋಚನೆಗಳಿಂದಲೂ ರೂಪಿತವಾಗುತ್ತವೆ.

ನಮ್ಮ ಆದ್ಯತೆಗಳು ‘ಒಂದು ಭೂಮಿ’ಯ ಯೋಗಕ್ಷೇಮಕ್ಕೆ ಗಮನಹರಿಸುತ್ತವೆ. ನಮ್ಮ ‘ಒಂದು ಕುಟುಂಬ’ದಲ್ಲಿ ಸಾಮರಸ್ಯವನ್ನು ಸೃಷ್ಟಿಸುತ್ತವೆ ಮತ್ತು ನಮ್ಮ ‘ಒಂದು ಭವಿಷ್ಯ’ಕ್ಕೆ ಭರವಸೆಯನ್ನು ನೀಡುತ್ತವೆ. ನಮ್ಮ ಭೂ ಗ್ರಹವನ್ನು ಸುರಕ್ಷಿತವಾಗಿರಿಸಲು, ನಾವು ಸುಸ್ಥಿರ ಮತ್ತು ಪರಿಸರ ಸ್ನೇಹಿ ಜೀವನಶೈಲಿಯನ್ನು ಪ್ರೋತ್ಸಾಹಿಸುತ್ತೇವೆ. ಇದು ಪ್ರಕೃತಿಯ ಬಗೆಗಿರುವ ಭಾರತದ ಪಾಲಕ ಪರಂಪರೆಯನ್ನು ಆಧರಿಸಿದೆ.

ಭಾರತ ಈಗ ಸ್ಮಾರ್ಟ್‌ಫೋನ್‌ ಹಬ್‌: ಒಂದೇ ವರ್ಷದಲ್ಲಿ ಮೊಬೈಲ್‌ ರಫ್ತು ಡಬಲ್‌

ಮನುಕುಲದಲ್ಲಿ ಸಾಮರಸ್ಯವನ್ನು ಉತ್ತೇಜಿಸಲು, ಆಹಾರ, ರಸಗೊಬ್ಬರಗಳು ಮತ್ತು ವೈದ್ಯಕೀಯ ಉತ್ಪನ್ನಗಳ ಜಾಗತಿಕ ಪೂರೈಕೆಯನ್ನು ರಾಜಕೀಯ ರಹಿತಗೊಳಿಸಲು ನಾವು ಪ್ರಯತ್ನಿಸುತ್ತೇವೆ. ಆದ್ದರಿಂದ ಭೌಗೋಳಿಕ-ರಾಜಕೀಯ ಉದ್ವಿಗ್ನತೆಗಳು ಮಾನವೀಯ ಬಿಕ್ಕಟ್ಟುಗಳಿಗೆ ಕಾರಣವಾಗುವುದಿಲ್ಲ. ನಮ್ಮ ಸ್ವಂತ ಕುಟುಂಬಗಳಂತೆ, ಇತರರ ಅಗತ್ಯತೆಗಳು ಯಾವಾಗಲೂ ನಮ್ಮ ಮೊದಲ ಕಾಳಜಿಯಾಗಿರಬೇಕು.

ಎಲ್ಲರೂ ಸೇರಿ ಜಗತ್ತನ್ನು ಸುರಕ್ಷಿತವಾಗಿಸೋಣ

ನಮ್ಮ ಭವಿಷ್ಯದ ಪೀಳಿಗೆಗೆ ಭರವಸೆಯನ್ನು ತುಂಬಲು, ಸಾಮೂಹಿಕ ವಿನಾಶದ ಶಸ್ತಾ್ರಸ್ತ್ರಗಳಿಂದ ಉಂಟಾಗುವ ಅಪಾಯಗಳನ್ನು ತಗ್ಗಿಸಲು ಮತ್ತು ಜಾಗತಿಕ ಭದ್ರತೆಯನ್ನು ಹೆಚ್ಚಿಸಲು ನಾವು ಅತ್ಯಂತ ಶಕ್ತಿಶಾಲಿ ದೇಶಗಳ ನಡುವೆ ಪ್ರಾಮಾಣಿಕ ಸಂವಾದವನ್ನು ಪ್ರೋತ್ಸಾಹಿಸುತ್ತೇವೆ. ಭಾರತದ ಜಿ20 ಕಾರ್ಯಸೂಚಿಯು ಅಂತರ್ಗತ, ಮಹತ್ವಾಕಾಂಕ್ಷಿ, ಕ್ರಿಯಾಶೀಲ ಮತ್ತು ನಿರ್ಣಾಯಕವಾಗಿರುತ್ತದೆ. ಭಾರತದ ಜಿ20 ಅಧ್ಯಕ್ಷತೆಯನ್ನು ಉಪಶಮನದ, ಸಾಮರಸ್ಯದ ಮತ್ತು ಭರವಸೆಯ ಅಧ್ಯಕ್ಷತೆಯ ಅವಧಿಯನ್ನಾಗಿ ಮಾಡಲು ನಾವೆಲ್ಲರೂ ಒಟ್ಟಾಗಿ ಸೇರೋಣ. ಮಾನವ ಕೇಂದ್ರಿತ ಜಾಗತೀಕರಣದ ಹೊಸ ಮಾದರಿಯನ್ನು ರೂಪಿಸಲು ನಾವು ಒಟ್ಟಾಗಿ ಕೆಲಸ ಮಾಡೋಣ.

Follow Us:
Download App:
  • android
  • ios