ನವದೆಹಲಿ(ಮಾ.15): ದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಹಾಗೂ ಪ್ರವಾಸಿ ವಾಹನಗಳ ಆಪರೇಟರ್‌ಗಳಿಗೆ ಅನುಕೂಲ ಮಾಡಿಕೊಡಲು ಆನ್‌ಲೈನ್‌ನಲ್ಲೇ ಆಲ್‌ ಇಂಡಿಯಾ ಟೂರಿಸ್ಟ್‌ ಪರ್ಮಿಟ್‌ ನೀಡುವ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಏ.1, 2021ರಿಂದ ಈ ವ್ಯವಸ್ಥೆ ಆರಂಭವಾಗಲಿದೆ. ಟೂರಿಸ್ಟ್‌ ಪರ್ಮಿಟ್‌ಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವಾಹನದ ಮಾಲಿಕರಿಗೆ 30 ದಿನದೊಳಗೆ ಪರ್ಮಿಟ್‌ ಸಿಗಲಿದೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ‘ಆಲ್‌ ಇಂಡಿಯಾ ಟೂರಿಸ್ಟ್‌ ವೆಹಿಕಲ್ಸ್‌ ಅಥರೈಸೇಶನ್‌ ಅಂಡ್‌ ಪರ್ಮಿಟ್‌ ರೂಲ್ಸ್‌-2021’ ಜಾರಿಗೆ ತಂದಿದೆ. ಅದು ಏ.1ರಿಂದ ಅನ್ವಯಿಸಲಿದ್ದು, ಈಗಾಗಲೇ ಹಳೆಯ ವ್ಯವಸ್ಥೆಯಡಿ ಪಡೆದಿರುವ ಟೂರಿಸ್ಟ್‌ ಪರ್ಮಿಟ್‌ಗಳು ಕೂಡ ಅವುಗಳ ಅವಧಿ ಮುಗಿಯುವವರೆಗೆ ಚಾಲ್ತಿಯಲ್ಲಿರುತ್ತವೆ. ಹೊಸ ವ್ಯವಸ್ಥೆಯಲ್ಲಿ ಪ್ರವಾಸಿ ವಾಹನಗಳ ಮಾಲಿಕರು ಅಗತ್ಯ ದಾಖಲೆ ಹಾಗೂ ಶುಲ್ಕದೊಂದಿಗೆ ಕನಿಷ್ಠ 3 ತಿಂಗಳಿನಿಂದ ಗರಿಷ್ಠ 3 ವರ್ಷದವರೆಗೆ ಪರ್ಮಿಟ್‌ಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಆನ್‌ಲೈನ್‌ನಲ್ಲೇ ಪರ್ಮಿಟ್‌ ಪಡೆಯಬಹುದು. ಇದರಿಂದ ಟೂರಿಸ್ಟ್‌ ಪರ್ಮಿಟ್‌ ಪಡೆಯುವ ಪ್ರಕ್ರಿಯೆ ಸರಳವಾಗುವುದರ ಜೊತೆಗೆ ರಾಜ್ಯ ಸರ್ಕಾರಗಳಿಗೆ ಬರುವ ಆದಾಯವೂ ಹೆಚ್ಚಲಿದೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ.

ಈಗಾಗಲೇ ಸರಕು ಸಾಗಣೆ ವಾಹನಗಳಿಗೆ ನ್ಯಾಷನಲ್‌ ಪರ್ಮಿಟ್‌ ನೀಡುವ ವ್ಯವಸ್ಥೆಯನ್ನು ಸಾರಿಗೆ ಸಚಿವಾಲಯ ಆನ್‌ಲೈನ್‌ಗೊಳಿಸಿದೆ. ಅದರ ಯಶಸ್ಸಿನಿಂದ ಪ್ರೇರಿತವಾಗಿ ಟೂರಿಸ್ಟ್‌ ವಾಹನಗಳಿಗೂ ಈ ವ್ಯವಸ್ಥೆ ತರುತ್ತಿದೆ. ಕೆಲ ಪ್ರದೇಶಗಳಲ್ಲಿ ವರ್ಷದ ಸೀಮಿತ ಅವಧಿಯಲ್ಲಿ ಮಾತ್ರ ಪ್ರವಾಸೋದ್ಯಮ ಚಟುವಟಿಕೆಗಳು ನಡೆಯುವುದರಿಂದ ಟ್ಯಾಕ್ಸಿ ಚಾಲಕರು ಸೀಮಿತ ಅವಧಿಯ ಪರ್ಮಿಟ್‌ ಪಡೆಯುವ ವ್ಯವಸ್ಥೆಯೂ ಇದರಡಿ ಇದೆ.