ನೂತನ ಸಂಸತ್ ಭವನ ಲೋಕಾರ್ಪಣೆ: ಶೃಂಗೇರಿ ಶಾರದಾ ಪೀಠದ ಪುರೋಹಿತರಿಂದ ಪೂಜಾ ಕೈಂಕರ್ಯ
ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ರಾಷ್ಟ್ರವಾದ ಭಾರತ, ಜಗತ್ತಿನ ಅತಿ ಉತ್ತಮ ವಾಸ್ತುಶಿಲ್ಪ ರಚನೆಯನ್ನು ಹೊಂದಿರುವ ಸಂಸತ್ ಭವನವನ್ನು ಹೊಂದಿದ್ದರೂ ಸಹ ಆ ಕಟ್ಟಡ ಬರೋಬ್ಬರಿ 96 ವರ್ಷಗಳ ಹಳೆಯದ್ದಾದ ಕಾರಣ ಹೊಸ ಕಟ್ಟಡ ನಿರ್ಮಾಣ ಮಾಡಲಾಗಿದೆ.
ನವದೆಹಲಿ (ಮೇ 28, 2023): ಆಧುನೀಕರಣದತ್ತ ದಾಪುಗಾಲು ಹಾಕುತ್ತಿರುವ ನವ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳು ತುಂಬಿದ ಬೆನ್ನಲ್ಲೇ ಆಧುನಿಕ ಸ್ಪರ್ಶದೊಂದಿಗೆ ಹೊಸ ಸಂಸತ್ ಭವನ ಲೋಕಾರ್ಪಣೆಯಾಗುತ್ತಿದೆ. ಬೆಳಗ್ಗೆ 7.25ರ ಸುಮಾರಿಗೆ ಪ್ರಧಾನಿ ಮೋದಿ ನೂತನ ಸಂಸತ್ ಭವನಕ್ಕೆ ಆಗಮಿಸಿದ್ದು,ಪೂಜಾ ಕೈಂಕರ್ಯ ನಡೆಸಿದ್ದಾರೆ. ಶೃಂಗೇರಿ ಶಾರದಾ ಪೀಠದ ಪುರೋಹಿತರು ಈ ಪೂಜಾ ಕೈಂಕರ್ಯ ನಡೆಸುತ್ತಿರುವುದು ವಿಶೇಷವಾಗಿದೆ.
ಗಾಂಧಿ ಪ್ರತಿಮೆಗೆ ಪುಷ್ಪಾರ್ಚನೆ ಬಳಿಕ ಪ್ರಧಾನಿ ಮೋದಿ ಹೋಮ ಹವನ ನಡೆಸುತ್ತಿದ್ದು, ಮೋದಿಗೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಸಾಥ್ ನೀಡಿದ್ದಾರೆ. ಗಣಪತಿ ಹೋಮವನ್ನೂ ಸಹ ಪ್ರಧಾನಿ ಮೋದಿ ಮಾಡಿದ್ದಾರೆ. ಮಧ್ಯಾಹ್ನದವರೆಗೂ ವಿಶೇಷ ಕಾರ್ಯಕ್ರಮಗಳು ನಡೆಯಲಿದ್ದು, ನೂತನ ಸಂಸತ್ ಭವನದ ಉದ್ಘಾಟನಾ ಕಾರ್ಯಕ್ರಮ ಅದ್ಧೂರಿಯಾಗಿ ಹಾಗೂ ಪೂಜಾ ಕೈಂಕರ್ಯಗಳೊಂದಿಗೆ ಸಾಂಸ್ಕೃತಿಕವಾಗಿ ನಡೆಯಲಿದೆ.
ಇದನ್ನು ಓದಿ: ಸೆಂಗೋಲ್ ತಯಾರಿಸಿದ ತಮಿಳುನಾಡಿನ ಕುಟುಂಬಕ್ಕೆ ಸಂಸತ್ ಭವನ ಉದ್ಘಾಟನೆಗೆ ಆಹ್ವಾನ:ರಾಜದಂಡ ನಿರ್ಮಾತೃರ ಹರ್ಷ!
ಶೃಂಗೇರಿಯ ಸೀತಾರಾಮ ಶರ್ಮಾ, ಶ್ರೀರಾಮ ಶರ್ಮ, ಲಕ್ಷ್ಮೇಶ ತಂತ್ರಿ, ನಾಗರಾಜ ಅಡಿಗ, ಋುಷ್ಯಶೃಂಗ ಭಟ್ಟರು ಪಾಲ್ಗೊಂಡಿದ್ದಾರೆ. 3 ವರ್ಷದ ಹಿಂದೆ ಸಂಸತ್‌ನ ಶಂಕುಸ್ಥಾಪನೆ ವೇಳೆ ಡಾ.ಶಿವಕುಮಾರ ಶರ್ಮ, ಶ್ರೀ ಗಣೇಶ ಸೋಮಯಾಜಿ, ಲಕ್ಷ್ಮೀನಾರಾಯಣ ಸೋಮಯಾಜಿ, ದೆಹಲಿಯಲ್ಲಿರುವ ಶೃಂಗೇರಿ ಶಾರದಾ ಪೀಠ ಶಾಖಾ ಮಠದ ನಾಗರಾಜ ಅಡಿಗ, ಋುಷ್ಯಶೃಂಗಭಟ್ಟರು, ದೆಹಲಿ ಶಾರದಾ ಪೀಠದ ವೇದಶಾಲೆಯ ಪ್ರಾಧ್ಯಾಪಕ ರಾಘವೇಂದ್ರ ಭಟ್ ಸಹಿತ 6 ಜನ ವಿದ್ವಾಂಸರ ತಂಡ ಭೂಮಿಪೂಜೆ ನೆರವೇರಿಸಿತ್ತು. ಶೃಂಗೇರಿ ಪೀಠದಿಂದ ಜಗದ್ಗುರುಗಳ ಆಶೀರ್ವಾದದೊಂದಿಗೆ ಕೊಂಡೊಯ್ಯಲಾಗಿದ್ದ ಶಂಕು, ನವರತ್ನ, ಬೆಳ್ಳಿ ಇಟ್ಟಿಗೆ ಸಹಿತ ವಸ್ತುಗಳೊಂದಿಗೆ ಶಂಕುಸ್ಥಾಪನೆ ಮಾಡಲಾಗಿತ್ತು.
ಅಲ್ಲದೆ, ಪ್ರಧಾನಿ ಮೋದಿ ಸೆಂಗೋಲ್ ಅನ್ನು ಪಡೆದು, ಬಳಿಕ ಅದಕ್ಕೆ ವಿಶೇಷ ಪೂಜೆ ನಡೆಸಿ, ನಂತರ ಸೆಂಗೋಲ್ ಅಥವಾ ಚಿನ್ನದ ರಾಜದಂಡವನ್ನು ಸಂಸತ್ ಭವನದಲ್ಲಿ ಪ್ರತಿಷ್ಠಾಪನೆ ಮಾಡಲಾಯ್ತು.
ಪ್ರಧಾನಿ ನರೇಂದ್ರ ಮೋದಿ ಅವರು ಈ ಹೊಸ ಕಟ್ಟಡವನ್ನು ಉದ್ಘಾಟನೆ ಮಾಡಿದ್ದು, ಮುಂದಿನ ಮುಂಗಾರು ಅಧಿವೇಶನ ಇದೇ ಕಟ್ಟಡದಲ್ಲಿ ನಡೆಯಲಿದೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ರಾಷ್ಟ್ರವಾದ ಭಾರತ, ಜಗತ್ತಿನ ಅತಿ ಉತ್ತಮ ವಾಸ್ತುಶಿಲ್ಪ ರಚನೆಯನ್ನು ಹೊಂದಿರುವ ಸಂಸತ್ ಭವನವನ್ನು ಹೊಂದಿದ್ದರೂ ಸಹ ಆ ಕಟ್ಟಡ ಬರೋಬ್ಬರಿ 96 ವರ್ಷಗಳ ಹಳೆಯದ್ದಾದ ಕಾರಣ ಹೊಸ ಕಟ್ಟಡ ನಿರ್ಮಾಣ ಮಾಡಲಾಗಿದೆ.
ಇದನ್ನೂ ಓದಿ: ಸೆಂಗೋಲ್ ಪತ್ತೆಗೆ 2 ವರ್ಷ ಶೋಧ ನಡೆಸಿದ್ದ ಪ್ರಧಾನಿ ಕಚೇರಿ: ಬೆಳಕಿಗೆ ಬಂದಿದ್ದು ಹೀಗೆ ನೋಡಿ..
ಹೊಸ ಕಟ್ಟಡದ ವಿಶೇಷತೆ ಏನು?
ಒಟ್ಟಾರೆ 64500 ಚದರ ಮೀ. ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುವ ಹೊಸ ಸಂಸತ್ ಕಟ್ಟಡ ತ್ರಿಕೋನಾಕಾರದಲ್ಲಿದ್ದು, ಭೂಕಂಪದಿಂದಲೂ ರಕ್ಷಣೆ ಹೊಂದಿದೆ. ಈ ಭವನದ ನಿರ್ಮಾಣಕ್ಕೆ 2020ರ ಡಿ.10ರಂದು ಪ್ರಧಾನಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು. ಕೇವಲ ಎರಡೂವರೆ ವರ್ಷಗಳಲ್ಲಿ ಬೃಹತ್ ಕಟ್ಟಡ ನಿರ್ಮಾಣದ ಮೂಲಕ ಹೊಸ ದಾಖಲೆ ಬರೆಯಲಾಗಿದೆ. 1200 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗಿರುವ ಹೊಸ ಭವನ 4 ಅಂತಸ್ತು ಹೊಂದಿದ್ದು, ಇದರಲ್ಲಿರುವ ಲೋಕಸಭೆ ಹಳೆಯದ್ದಕ್ಕಿಂತ 17 ಸಾವಿರ ಚದರ ಮೀ. ದೊಡ್ಡದಾಗಿದೆ. ಅಂದರೆ 3 ಪಟ್ಟು ದೊಡ್ಡದಾಗಿದೆ. ಅಲ್ಲದೇ ಈ ಕಟ್ಟಡದಲ್ಲಿ ಹಲವು ಆಧುನಿಕ ಸೌಲಭ್ಯಗಳಿದ್ದು, ಎಐ ಸ್ಪರ್ಶವನ್ನು ನೀಡಲಾಗಿದೆ.
4 ಅಂತಸ್ತು, 3 ಪ್ರವೇಶ ದ್ವಾರಗಳು
ಹೊಸ ಸಂಸತ್ ಭವನ 4 ಅಂತಸ್ತು ಹೊಂದಿದೆ. ತ್ರಿಕೋನಾಕಾರದಲ್ಲಿ ನಿರ್ಮಾಣ ಮಾಡಿರುವುದರಿಂದ ಹೆಚ್ಚು ಸ್ಥಳವನ್ನು ಬಳಸಿಕೊಂಡಂತಾಗಿದೆ. ಭವನಕ್ಕೆ 3 ಮುಖ್ಯದ್ವಾರಗಳನ್ನು ನಿರ್ಮಾಣ ಮಾಡಲಾಗಿದ್ದು, ಇವುಗಳಿಗೆ ಜ್ಞಾನ ದ್ವಾರ, ಶಕ್ತಿ ದ್ವಾರ ಮತ್ತು ಕರ್ಮ ದ್ವಾರ ಎಂದು ಹೆಸರಿಡಲಾಗಿದೆ. ಸಂಸತ್ ಭವನಕ್ಕೆ ಸಂಸದರು ಹಾಗೂ ವಿಐಪಿಗಳಿಗೆ ಪ್ರತ್ಯೇಕ ಪ್ರವೇಶ ಒದಗಿಸಲಾಗಿದೆ. ಸಂಸದರಿಗಾಗಿ 800 ಕೊಠಡಿಗಳ ನಿರ್ಮಾಣಗೊಂಡಿದೆ. ಮಂತ್ರಿ ಮಂಡಲದ ಬಳಕೆಗೆ 92 ಕೊಠಡಿಗಳು ಹಾಗೂ 6 ಸಮಿತಿ ಕೊಠಡಿಗಳಿವೆ.
ಇದನ್ನೂ ಓದಿ: ಮೇ 28ಕ್ಕೆ ನೂತನ ಸಂಸತ್ ಭವನ ಉದ್ಘಾಟನೆ? ಮೋದಿ ಸರ್ಕಾರಕ್ಕೆ 9 ವರ್ಷ ತುಂಬಿದ ಬೆನ್ನಲ್ಲೇ ಲೋಕಾರ್ಪಣೆ
ನವಿಲಿನಾಕಾರದ ಲೋಕಸಭೆ
ಲೋಕಸಭೆ ಹಾಲ್ ಅನ್ನು ರಾಷ್ಟ್ರಪಕ್ಷಿ ನವಿಲನ್ನು ಆಧಾರವಾಗಿಟ್ಟುಕೊಂಡು ನಿರ್ಮಿಸಲಾಗಿದೆ. ಪ್ರಸ್ತುತ ಇರುವ ಸಂಸತ್ ಕಟ್ಟಡದಲ್ಲಿರುವ 552 ಸೀಟುಗಳ ಬದಲಾಗಿ ಇದರಲ್ಲಿ 888 ಸೀಟುಗಳನ್ನು ಅಳವಡಿಸಲಾಗಿದೆ. ಇದು ಈಗಿರುವ ಲೋಕಸಭೆಗಿಂತ 3 ಪಟ್ಟು ದೊಡ್ಡದಾಗಿದೆ. ಲೋಕಸಭೆ ಚೇಂಬರ್ ಅನ್ನು 3,015 ಚ.ಮೀ. ವಿಸ್ತೀರ್ಣದಲ್ಲಿ ನಿರ್ಮಾಣ ಮಾಡಲಾಗಿದೆ. ಇಲ್ಲಿನ ಸಂದರ್ಶಕರ ಗ್ಯಾಲರಿಯಲ್ಲಿ 330ಕ್ಕೂ ಹೆಚ್ಚು ಜನರು ಕೂರಬಹುದಾಗಿದೆ. ಸಂಸತ್ತಿನ ಜಂಟಿ ಅಧಿವೇಶನವೂ ಸಹ ಇಲ್ಲೇ ನಡೆಯಲಿದ್ದು, ಈ ವೇಳೆ ಆಸನ ಸಾಮರ್ಥ್ಯವನ್ನು 1,272ಕ್ಕೆ ಹೆಚ್ಚಳ ಮಾಡಬಹುದಾಗಿದೆ.
ಕಮಲದಾಕಾರದ ರಾಜ್ಯಸಭೆ
ಹೊಸ ಸಂಸತ್ ಭವನದಲ್ಲಿ ರಾಜ್ಯಸಭೆ ಚೇಂಬರ್ ಅನ್ನು ರಾಷ್ಟ್ರೀಯ ಪುಷ್ಪವಾದ ಕಮಲದ ಆಕಾರದಲ್ಲಿ ನಿರ್ಮಾಣ ಮಾಡಲಾಗಿದೆ. ಹೊಸ ರಾಜ್ಯ ಸಭಾ ಚೇಂಬರ್ 384 ಆಸನಗಳ ಸಾಮರ್ಥ್ಯವನ್ನು ಹೊಂದಿದ್ದು, ಹಳೆಯ ರಾಜ್ಯಸಭೆ ಕಟ್ಟಡ 245 ಆಸನದ ವ್ಯವಸ್ಥೆ ಇತ್ತು. ಮುಂದಿನ ದಿನಗಳಲ್ಲಿ ರಾಜ್ಯಸಭಾ ಸ್ಥಾನಗಳು ಅಧಿಕವಾದರೂ ಸಹ ಇಲ್ಲಿ ಸ್ಥಳಾವಕಾಶದ ಕೊರತೆ ಉಂಟಾಗುವುದಿಲ್ಲ. ರಾಜ್ಯಸಭೆ ಭವನ ಒಟ್ಟು 3,220 ಚ.ಮೀ. ವಿಸ್ತೀರ್ಣದಲ್ಲಿ ನಿರ್ಮಾಣ ಮಾಡಲಾಗಿದೆ. ಇಲ್ಲಿರುವ ಸಂದರ್ಶಕರ ಗ್ಯಾಲರಿಯಲ್ಲೂ ಸಹ 330ಕ್ಕೂ ಹೆಚ್ಚು ಜನರು ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ; ಮಾರ್ಚ್‌ನಲ್ಲಿ ಹೊಸ ಸಂಸತ್ ಭವನ ಉದ್ಘಾಟನೆ: ಹಳೆಯ ಸಂಸತ್ ಭವನದಲ್ಲೇ ಬಜೆಟ್ ಮಂಡನೆ..!