ತಮಿಳುನಾಡಿನ ಚೆನ್ನೈನಲ್ಲಿರುವ ವುಮ್ಮಿಡಿ ಬಂಗಾರು ಚೆಟ್ಟಿ ಕುಟುಂಬದವರು ದೇಶಕ್ಕೆ ಸ್ವಾತಂತ್ರ್ಯ ಸಿಗುವುದಕ್ಕೂ ಮುನ್ನ ಸೆಂಗೋಲ್‌ ತಯಾರಿಸಿ ಕೊಟ್ಟಿದ್ದರು. ಆ ಕುಟುಂಬದವರಿಗೆ ಹೊಸ ಸಂಸತ್‌ ಭವನದ ಉದ್ಘಾಟನೆಗೆ ಈಗ ಆಹ್ವಾನ ಕಳುಹಿಸಲಾಗಿದ್ದು, ಸಮಾರಂಭದಲ್ಲಿ ಭಾಗವಹಿಸಲು ತುದಿಗಾಲಿನಲ್ಲಿ ನಿಂತಿರುವುದಾಗಿ ಕುಟುಂಬ ಹೇಳಿಕೊಂಡಿದೆ.

ಚೆನ್ನೈ (ಮೇ 27,2023): ‘ಇದು ನಮಗೆ ಜೀವಮಾನದಲ್ಲೊಮ್ಮೆ ಸಿಗಬಹುದಾದ ಅವಕಾಶ. ಸಂಸತ್‌ ಭವನ ಪ್ರವೇಶಿಸಿ ನಮ್ಮ ಕುಟುಂಬದವರು ತಯಾರಿಸಿದ ಐತಿಹಾಸಿಕ ರಾಜದಂಡವನ್ನು ಅಲ್ಲಿ ಪ್ರತಿಷ್ಠಾಪಿಸುವುದನ್ನು ನೋಡುವುದಕ್ಕೆ ಕಾತರರಾಗಿದ್ದೇವೆ’ ಎಂದು 75 ವರ್ಷಗಳ ಹಿಂದೆ ಚಿನ್ನದ ಸೆಂಗೋಲ್‌ ತಯಾರಿಸಿದ್ದ ಅಕ್ಕಸಾಲಿಗರ ಕುಟುಂಬ ತೀವ್ರ ಹರ್ಷ ವ್ಯಕ್ತಪಡಿಸಿದೆ.

ತಮಿಳುನಾಡಿನ ಚೆನ್ನೈನಲ್ಲಿರುವ ವುಮ್ಮಿಡಿ ಬಂಗಾರು ಚೆಟ್ಟಿ ಕುಟುಂಬದವರು ದೇಶಕ್ಕೆ ಸ್ವಾತಂತ್ರ್ಯ ಸಿಗುವುದಕ್ಕೂ ಮುನ್ನ ಸೆಂಗೋಲ್‌ ತಯಾರಿಸಿ ಕೊಟ್ಟಿದ್ದರು. ಆ ಕುಟುಂಬದವರಿಗೆ ಹೊಸ ಸಂಸತ್‌ ಭವನದ ಉದ್ಘಾಟನೆಗೆ ಈಗ ಆಹ್ವಾನ ಕಳುಹಿಸಲಾಗಿದ್ದು, ಸಮಾರಂಭದಲ್ಲಿ ಭಾಗವಹಿಸಲು ತುದಿಗಾಲಿನಲ್ಲಿ ನಿಂತಿರುವುದಾಗಿ ಕುಟುಂಬ ಹೇಳಿಕೊಂಡಿದೆ. ಸೆಂಗೋಲ್‌ ತಯಾರಿಸುವ ವೇಳೆ 20 ವರ್ಷದವರಾಗಿದ್ದ ಮತ್ತು ಅದನ್ನು ತಯಾರಿಸಲು ತಮ್ಮ ಕುಟುಂಬದವರಿಗೆ ನೆರವಾಗಿದ್ದ ವುಮ್ಮಿಡಿ ಎತಿರಾಜು (95) ಈ ಕುರಿತು ಪ್ರತಿಕ್ರಿಯೆ ನೀಡಿ, ‘ನಮಗೆ ಕೇವಲ ಹೆಮ್ಮೆಯಷ್ಟೇ ಅಲ್ಲ, ತುಂಬಾ ಸಂತೋಷವಾಗುತ್ತಿದೆ’ ಎಂದಿದ್ದಾರೆ.

ಇದನ್ನು ಓದಿ: ಸೆಂಗೋಲ್‌ ಪತ್ತೆಗೆ 2 ವರ್ಷ ಶೋಧ ನಡೆಸಿದ್ದ ಪ್ರಧಾನಿ ಕಚೇರಿ: ಬೆಳಕಿಗೆ ಬಂದಿದ್ದು ಹೀಗೆ ನೋಡಿ..

1947ರಲ್ಲಿ ಕೇಂದ್ರ ಸರ್ಕಾರದ ಮನವಿಯ ಮೇಲೆ ತಮಿಳುನಾಡಿನ ಶೈವ ಮಠವೊಂದರ ಸೂಚನೆಯಂತೆ ಚೆನ್ನೈನ ವುಮ್ಮಿಡಿ ಬಂಗಾರು ಚೆಟ್ಟಿ ಕುಟುಂಬ ರಾಜದಂಡವನ್ನು ತಯಾರಿಸಿ ಕೊಟ್ಟಿತ್ತು. ನಂತರ ಅದು ಏನಾಯಿತು ಎಂಬುದು ಆ ಕುಟುಂಬಕ್ಕೆ ತಿಳಿದಿರಲಿಲ್ಲ. ‘ಕಳೆದ ಒಂದು ವರ್ಷದಿಂದ ನಾವು ರಾಜದಂಡ ಎಲ್ಲಿದೆ ಎಂಬುದನ್ನು ಪತ್ತೆಹಚ್ಚಲು ದೇಶದಲ್ಲಿರುವ ಬಹುತೇಕ ಎಲ್ಲಾ ಮ್ಯೂಸಿಯಂಗಳಿಗೂ ಪತ್ರ ಬರೆದಿದ್ದೆವು. ಎಲ್ಲಿಂದಲೂ ಉತ್ತರ ಬರಲಿಲ್ಲ. ಯಾವುದಕ್ಕೂ ಇರಲಿ ಎಂದು ಅಲಹಾಬಾದ್‌ನ ಮ್ಯೂಸಿಯಂಗೂ ಪತ್ರ ಬರೆದಿದ್ದೆವು. ನಾಲ್ಕು ತಿಂಗಳ ಬಳಿಕ ಅಲ್ಲಿಂದ ರಾಜದಂಡವನ್ನು ಹೋಲುವ ಒಂದು ವಸ್ತು ನಮ್ಮಲ್ಲಿದೆ ಎಂಬ ಉತ್ತರ ಬಂತು. ಅದರ ಮೇಲಿದ್ದ ಬರಹವನ್ನು ಪರಿಶೀಲಿಸಿದಾಗ ಅದು ನಮ್ಮ ಕುಟುಂಬದವರು ತಯಾರಿಸಿದ ಸೆಂಗೋಲ್‌ ಎಂಬುದು ತಿಳಿಯಿತು’ ಎಂದು ವುಮ್ಮಿಡಿ ಬಂಗಾರು ಜುವೆಲರ್ಸ್‌ ಕುಟುಂಬದ ಅಮರೇಂದ್ರನ್‌ ವುಮ್ಮಿಡಿ ಹೇಳಿದ್ದಾರೆ.

‘ಸಂಪ್ರದಾಯಗಳ ಬಗ್ಗೆ ಆಳವಾದ ಜ್ಞಾನ ಹೊಂದಿದ್ದ ಸಿ.ರಾಜಗೋಪಾಲಾಚಾರಿ ಅವರು ಸೆಂಗೋಲ್‌ ತಯಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸಂಸತ್‌ ಭವನವನ್ನು ಪ್ರವೇಶಿಸಿ ನಮ್ಮ ಕುಟುಂಬದ ಐತಿಹಾಸಿಕ ತುಣುಕೊಂದು ಅಲ್ಲಿ ಪ್ರತಿಷ್ಠಾಪನೆಯಾಗುತ್ತಿರುವುದನ್ನು ನೋಡಲು ಕಾತರರಾಗಿದ್ದೇವೆ. ಆ ಕ್ಷಣವನ್ನು ಊಹಿಸಿಕೊಳ್ಳಲೂ ಆಗುತ್ತಿಲ್ಲ. ಇದು ನಮಗೆ ಜೀವಮಾನದಲ್ಲೊಮ್ಮೆ ಸಿಗಬಹುದಾದ ಅವಕಾಶ’ ಎಂದೂ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮೇ 28ಕ್ಕೆ ನೂತನ ಸಂಸತ್‌ ಭವನ ಉದ್ಘಾಟನೆ? ಮೋದಿ ಸರ್ಕಾರಕ್ಕೆ 9 ವರ್ಷ ತುಂಬಿದ ಬೆನ್ನಲ್ಲೇ ಲೋಕಾರ್ಪಣೆ