ಸೆಂಗೋಲ್‌ ಪತ್ತೆಗೆ 2 ವರ್ಷ ಶೋಧ ನಡೆಸಿದ್ದ ಪ್ರಧಾನಿ ಕಚೇರಿ: ಬೆಳಕಿಗೆ ಬಂದಿದ್ದು ಹೀಗೆ ನೋಡಿ..

2021ರಲ್ಲಿ ಅಂಕಣಕಾರ ಎಸ್‌.ಗುರುಮೂರ್ತಿ ಅವರು ‘ತುಘಲಕ್‌’ ಪತ್ರಿಕೆಯಲ್ಲಿ ಬರೆದ ಲೇಖನವೊಂದರಿಂದ ‘ಸೆಂಗೋಲ್‌’ ಹುಡುಕಾಟ ಆರಂಭವಾಗುತ್ತದೆ.

how modi govt found the sengol it took 2 years a thuglak article letter to pmo and a time report ash

ನವದೆಹಲಿ (ಮೇ 27, 2023): ಹೊಸ ಸಂಸತ್‌ ಭವನದಲ್ಲಿ ಕೇಂದ್ರ ಸರ್ಕಾರ ಸ್ಥಾಪಿಸಲು ಉದ್ದೇಶಿಸಿರುವ ಚಿನ್ನದ ರಾಜದಂಡ (ಸೆಂಗೋಲ್‌) ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ರಾಜದಂಡವನ್ನು 1947ರಲ್ಲಿ ದೇಶದ ಸ್ವಾತಂತ್ರ್ಯ ಹಸ್ತಾಂತರಕ್ಕೆ ಬಳಸಲಾಗಿತ್ತು ಎಂಬ ಸಂಗತಿ ಕೇಂದ್ರ ಸರ್ಕಾರಕ್ಕೆ ತಿಳಿದಿದ್ದು ಹೇಗೆ ಮತ್ತು ಪ್ರಧಾನಿ ಕಾರ್ಯಾಲಯ ಆ ಸಂಗತಿಯನ್ನು ಖಚಿತಪಡಿಸಿಕೊಂಡಿದ್ದು ಹೇಗೆ ಎಂಬ ಸಂಗತಿ ಕುತೂಹಲಕಾರಿಯಾಗಿದೆ.

2021ರಲ್ಲಿ ಅಂಕಣಕಾರ ಎಸ್‌.ಗುರುಮೂರ್ತಿ ಅವರು ‘ತುಘಲಕ್‌’ ಪತ್ರಿಕೆಯಲ್ಲಿ ಬರೆದ ಲೇಖನವೊಂದರಿಂದ ‘ಸೆಂಗೋಲ್‌’ ಹುಡುಕಾಟ ಆರಂಭವಾಗುತ್ತದೆ. ಬಳಿಕ ಸತತ 2 ವರ್ಷಗಳ ಕಾಲ ಕೇಂದ್ರ ಸರ್ಕಾರ ರಾಜದಂಡದ ಬೆನ್ನುಬಿದ್ದು, 1947ರ ಆಗಸ್ಟ್‌ 14ರ ರಾತ್ರಿ ದೇಶಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಹಸ್ತಾಂತರದ ಚಿಹ್ನೆಯಾಗಿ ‘ಸೆಂಗೋಲ್‌ ಹಸ್ತಾಂತರ ಸಮಾರಂಭ’ ನಡೆದಿತ್ತು ಎಂಬುದನ್ನು ಖಚಿತಪಡಿಸಿಕೊಂಡು, ಕೊನೆಗೆ ಅದನ್ನು ಸಂಸತ್‌ ಭವನದಲ್ಲಿ ಪ್ರತಿಷ್ಠಾಪನೆ ಮಾಡುವ ನಿರ್ಧಾರಕ್ಕೆ ಬಂದಿತು ಎಂದು ತಿಳಿದುಬಂದಿದೆ.

ಇದನ್ನು ಓದಿ: ಮೇ 28ಕ್ಕೆ ನೂತನ ಸಂಸತ್‌ ಭವನ ಉದ್ಘಾಟನೆ? ಮೋದಿ ಸರ್ಕಾರಕ್ಕೆ 9 ವರ್ಷ ತುಂಬಿದ ಬೆನ್ನಲ್ಲೇ ಲೋಕಾರ್ಪಣೆ

ಗುರುಮೂರ್ತಿ ಬರೆದ ಲೇಖನ:
2021ರ ಮೇ 5ರಂದು ‘ತುಘಲಕ್‌’ ಪತ್ರಿಕೆಯಲ್ಲಿ ಗುರುಮೂರ್ತಿ ಅವರು ಭಾರತದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರು ಅವರಿಗೆ ತಮಿಳುನಾಡಿನ ಸ್ವಾಮೀಜಿಯೊಬ್ಬರು ದೇಶದ ಸ್ವಾತಂತ್ರ್ಯ ಹಸ್ತಾಂತರದ ಪ್ರತೀಕವಾಗಿ ಸೆಂಗೋಲ್‌ ಹಸ್ತಾಂತರ ಮಾಡಿದ್ದರು ಎಂದು ಲೇಖನ ಬರೆದಿದ್ದರು. ಕೆಲ ದಿನಗಳ ನಂತರ ಖ್ಯಾತ ನೃತ್ಯಗಾತಿ ಡಾ.ಪದ್ಮಾ ಸುಬ್ರಮಣ್ಯಂ ಅವರು ಅದರ ಇಂಗ್ಲಿಷ್‌ ಪ್ರತಿಯನ್ನು ಪ್ರಧಾನಿ ಕಾರ್ಯಾಲಯಕ್ಕೆ ಕಳುಹಿಸಿದರು. ಅದರ ಜೊತೆಗೆ ಬರೆದ ಪತ್ರದಲ್ಲಿ ‘ಪವಿತ್ರ ಹಾಗೂ ಐತಿಹಾಸಿಕ ‘ಸೆಂಗೋಲ್‌ ಹಸ್ತಾಂತರ’ ಸಮಾರಂಭದ ಇತಿಹಾಸವನ್ನು ಜನರಿಂದ ಮರೆಮಾಚಲಾಗಿದೆ. ಮೋದಿ ಸರ್ಕಾರ 2021ರ ಸ್ವಾತಂತ್ರೋತ್ಸವದಂದು ಅದನ್ನು ಬಹಿರಂಗಗೊಳಿಸಬೇಕು’ ಎಂದು ಕೋರಿದ್ದರು.

ಪ್ರಧಾನಿ ಕಾರ್ಯಾಲಯದಿಂದ ಶೋಧ:
ಈ ಪತ್ರವನ್ನು ಗಮನಿಸಿದ ಪ್ರಧಾನಿ ಕಾರ್ಯಾಲಯ ಹಾಗೂ ಸಂಸ್ಕೃತಿ ಸಚಿವಾಲಯ ಹಳೆಯ ದಾಖಲೆಗಳ ಹುಡುಕಾಟಕ್ಕೆ ಇಳಿಯಿತು. ‘ಸೆಂಗೋಲ್‌’ನ ಅಧಿಕೃತತೆಯನ್ನು ಖಚಿತಪಡಿಸಿಕೊಳ್ಳಲು ಹಲವಾರು ಪತ್ರಿಕಾ ಲೇಖನಗಳು, ಪ್ರಸಿದ್ಧ ಲೇಖಕರು ಬರೆದ ಪುಸ್ತಕಗಳು ಹಾಗೂ ಆನ್‌ಲೈನ್‌ನಲ್ಲಿ ಲಭ್ಯವಿರುವ ಮಾಹಿತಿಗಳನ್ನು ಸೋಸಿ, ಕೊನೆಗೆ ನೆಹರೂ ಅವರ ಮನೆಯಲ್ಲೇ ಅವರಿಗೆ ‘ಸೆಂಗೋಲ್‌’ ಹಸ್ತಾಂತರ ಮಾಡಲಾಗಿತ್ತು ಎಂಬುದನ್ನು ಪತ್ತೆಹಚ್ಚಿತು.

ಇದನ್ನೂ ಓದಿ: ಬಜೆಟ್‌ ಅಧಿವೇಶನ: ನೂತನ ಸಂಸತ್ತಲ್ಲಿ ರಾಷ್ಟ್ರಪತಿ ಭಾಷಣ..?

ಈ ಮಾಹಿತಿಯನ್ನು ಖಚಿತಪಡಿಸಿಕೊಳ್ಳಲು ನೆಹರೂ ಸ್ಮಾರಕ ಮ್ಯೂಸಿಯಂನ ಚೇರ್ಮನ್‌ ನೃಪೇಂದ್ರ ಮಿಶ್ರಾ ಅವರಿಗೆ ಸೆಂಗೋಲ್‌ ಹಸ್ತಾಂತರ ಸಮಾರಂಭದ ಫೋಟೋ ಅಥವಾ ಮಾಹಿತಿಯೇನಾದರೂ ನೆಹರು ಅವರ ಖಾಸಗಿ ದಾಖಲೆಗಳಲ್ಲಿ ಲಭ್ಯವಿದೆಯೇ ಎಂದು ಹುಡುಕುವಂತೆ ಮನವಿ ಮಾಡಲಾಯಿತು. ಅವರು ಹುಡುಕಿದಾಗ 1947ರ ಆಗಸ್ಟ್‌ 25ರಂದು ‘ಟೈಮ್‌’ ನಿಯತಕಾಲಿಕೆ ತನ್ನ ‘ವಿದೇಶಿ ಸುದ್ದಿ’ ವಿಭಾಗದಲ್ಲಿ ಸೆಂಗೋಲ್‌ ಸಮಾರಂಭದ ಕುರಿತು ವಿಸ್ತಾರವಾಗಿ ಪ್ರಕಟಿಸಿದ್ದ ವರದಿ ಲಭಿಸಿತು.

ಹಲವು ಲೇಖನ, ಪುಸ್ತಕದಲ್ಲಿ ದಾಖಲೆ:
ಬಳಿಕ ನೃಪೇಂದ್ರ ಮಿಶ್ರಾ ಅವರು 2022ರ ಏಪ್ರಿಲ್‌ 26ರಂದು ಕೇಂದ್ರ ಸರ್ಕಾರಕ್ಕೆ ಈ ಮಾಹಿತಿಯ ಜೊತೆಗೆ, ಪೆರ್ರಿ ಆ್ಯಂಡರ್ಸನ್‌ ಬರೆದ ‘ದಿ ಇಂಡಿಯನ್‌ ಐಡಿಯಾಲಜಿ’ ಹಾಗೂ ತಾಯ್‌ ಯಾಂಗ್‌ ತಾನ್‌ ಮತ್ತು ಗ್ಯಾನೇಶ್‌ ಕುದೈಸಿಯಾ ಬರೆದ ‘ದಿ ಆಫ್ಟರ್‌ಮಾತ್‌ ಆಫ್‌ ಪಾರ್ಟಿಶನ್‌ ಇನ್‌ ಸೌತ್‌ ಏಷ್ಯಾ’ ಪುಸ್ತಕದಲ್ಲಿ ಸೆಂಗೋಲ್‌ ಬಗ್ಗೆ ಇರುವ ಪ್ರಸ್ತಾಪದ ಬಗ್ಗೆ ತಿಳಿಸಿಕೊಟ್ಟರು.
ಈ ನಡುವೆ ಸರ್ಕಾರಕ್ಕೆ ಡಿ.ಎಫ್‌.ಕಾರಕ ಅವರು 1850ರಲ್ಲಿ ಬರೆದ ಪುಸ್ತಕದಲ್ಲಿ ‘ತಂಜಾವೂರಿನ ಪುರೋಹಿತರು ಹೊಸ ರಾಜನಿಗೆ ರಾಜದಂಡವನ್ನು ಹಸ್ತಾಂತರಿಸುವ ರೀತಿಯಲ್ಲಿ ನೆಹರೂ ಅವರಿಗೆ ಸೆಂಗೋಲ್‌ ಹಸ್ತಾಂತರ ಮಾಡಿದ್ದರು’ ಎಂಬ ಮಾಹಿತಿ ಲಭಿಸಿತು. ಅದೇ ರೀತಿ, ಡಾ. ಬಾಬಾಸಾಹೇಬ್‌ ಅಂಬೇಡ್ಕರ್‌ 1955ರಲ್ಲಿ ಬರೆದ ಲೇಖನದಲ್ಲಿರುವ ಸೆಂಗೋಲ್‌ ಹಸ್ತಾಂತರ ಸಮಾರಂಭದ ಕುರಿತ ಮಾಹಿತಿ, ಡೊಮಿನಿಕ್‌ ಲೇಪಿಯೇರ್‌ ಹಾಗೂ ಲ್ಯಾರಿ ಕಾಲಿನ್ಸ್‌ ಬರೆದ ‘ಫ್ರೀಡಂ ಅಟ್‌ ಮಿಡ್‌ನೈಟ್‌’ ಪುಸ್ತಕ ಮತ್ತು ಯಾಸ್ಮಿನ್‌ ಖಾನ್‌ ಅವರ ‘ಗ್ರೇಟ್‌ ಪಾರ್ಟಿಷನ್‌: ದಿ ಮೇಕಿಂಗ್‌ ಆಫ್‌ ಇಂಡಿಯಾ ಅಂಡ್‌ ಪಾಕಿಸ್ತಾನ್‌’ ಕೃತಿಯಲ್ಲಿ ಸೆಂಗೋಲ್‌ ಬಗ್ಗೆ ಇರುವ ಮಾಹಿತಿಯೂ ದೊರೆಯಿತು. ಇದೇ ವೇಳೆ 1947ರ ಹಲವಾರು ಮಾಧ್ಯಮ ವರದಿಗಳನ್ನು ಪರಿಶೀಲಿಸಲಾಯಿತು.

ಇದನ್ನೂ ಓದಿ; ಮಾರ್ಚ್‌ನಲ್ಲಿ ಹೊಸ ಸಂಸತ್‌ ಭವನ ಉದ್ಘಾಟನೆ: ಹಳೆಯ ಸಂಸತ್‌ ಭವನದಲ್ಲೇ ಬಜೆಟ್‌ ಮಂಡನೆ..!

ತಮಿಳುನಾಡು ಸರ್ಕಾರದ ದಾಖಲೆ:
ತಮಿಳುನಾಡಿನ ಡಿಎಂಕೆ ಸರ್ಕಾರ ಪ್ರಕಟಿಸಿದ ಹಿಂದೂ ಧಾರ್ಮಿಕ ಮತ್ತು ಮುಜರಾಯಿ ನೀತಿ 2021-22ರಲ್ಲೂ 1947ರ ಸೆಂಗೋಲ್‌ ಪ್ರದಾನ ಸಮಾರಂಭದ ಬಗ್ಗೆ ಮಾಹಿತಿಯಿತ್ತು. ಈ ಎಲ್ಲ ಮಾಹಿತಿಯೊಂದಿಗೆ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ವೇಳೆ ರಾಜದಂಡವನ್ನು ಹಸ್ತಾಂತರಿಸುವ ಸಮಾರಂಭ ನಡೆದಿತ್ತು ಎಂಬುದನ್ನು ಕೇಂದ್ರ ಸರ್ಕಾರ ಖಚಿತಪಡಿಸಿಕೊಂಡಿತು. ಕೊನೆಗೆ 77 ವರ್ಷ ಹಳೆಯದಾದ ಸೆಂಗೋಲ್‌ ಅಲಹಾಬಾದ್‌ ಮ್ಯೂಸಿಯಂನಲ್ಲಿ ‘ಇದು ನೆಹರೂ ಅವರ ಚಿನ್ನದ ವಾಕಿಂಗ್‌ ಸ್ಟಿಕ್‌’ ಎಂಬ ಅಡಿಬರಹದೊಂದಿಗೆ ಪ್ರದರ್ಶನಕ್ಕಿರುವುದು ಕೇಂದ್ರ ಸರ್ಕಾರಕ್ಕೆ ತಿಳಿಯಿತು. ಅದನ್ನು ಅಂತಿಮವಾಗಿ ಈಗ ಹೊಸ ಸಂಸತ್‌ ಭವನದಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ.

Latest Videos
Follow Us:
Download App:
  • android
  • ios