ಆಸೀಸ್ ಕೋವಿಡ್ ಔಷಧ ಇಲಿಗಳ ಮೇಲೆ ಯಶಸ್ವಿ: ವೈರಸ್ 99.9% ಕಡಿಮೆ ಮಾಡಿದ ಔಷಧ!
* ಆಸೀಸ್ ಕೋವಿಡ್ ಔಷಧ ಇಲಿಗಳ ಮೇಲೆ ಯಶಸ್ವಿ
* ವೈರಸ್ ಅನ್ನು 99.9% ಕಡಿಮೆ ಮಾಡಿದ ಔಷಧ
* ಮಾನವ ಪ್ರಯೋಗ ಯಶಸ್ವಿಯಾದರೆ ವರ್ಷದಲ್ಲಿ ಮಾರುಕಟ್ಟೆಗೆ?
ಸಿಡ್ನಿ(ಮೇ.20): ವಿಶ್ವದಲ್ಲಿ ಮೊದಲ ಕೊರೋನಾ ಪ್ರಕರಣ ಪತ್ತೆಯಾಗಿ 18 ತಿಂಗಳು ಕಳೆದರೂ ಈವರೆಗೂ ಆ ವೈರಸ್ ನಿಗ್ರಹಿಸುವಂತಹ ಔಷಧ ದೊರೆತಿಲ್ಲ. ಕೊರೋನಾದಿಂದ ರಕ್ಷಣೆ ಪಡೆಯಲು ಲಸಿಕೆ, ಸೋಂಕಿಗೆ ತುತ್ತಾದರೆ ಚಿಕಿತ್ಸೆ ಮಾತ್ರ ನೀಡಲಾಗುತ್ತಿದೆ. ಕೊರೋನಾ ದಾಳಿಯಿಂದ ವಿಶ್ವವೇ ನಲುಗಿರುವಾಗಲೇ, ಅದಕ್ಕೆ ಔಷಧ ಕಂಡುಹಿಡಿಯುವ ಆಸ್ಪ್ರೇಲಿಯಾ ಪ್ರಯತ್ನಕ್ಕೆ ಆರಂಭಿಕ ಯಶಸ್ಸು ದೊರೆತಿದೆ.
ಗ್ರಿಫಿತ್ ವಿಶ್ವವಿದ್ಯಾಲಯದ ಮೆಂಜಿಸ್ ಆರೋಗ್ಯ ಸಂಸ್ಥೆಯ ಸಾರಥ್ಯದಲ್ಲಿ ಆಸ್ಪ್ರೇಲಿಯಾ ಹಾಗೂ ಅಮೆರಿಕದ ಸಂಶೋಧನಾ ತಂಡ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಇಲಿಗಳ ಮೇಲೆ ಈ ಔಷಧವನ್ನು ಪ್ರಯೋಗಿಸಿದಾಗ ಭರವಸೆಯ ಫಲಿತಾಂಶ ಸಿಕ್ಕಿದೆ. ಇಲಿಗಳ ದೇಹದಲ್ಲಿ ವೈರಸ್ ಪ್ರಮಾಣ ಶೇ.99.9ರಷ್ಟುಕಡಿಮೆಯಾಗಿದೆ.
ಇದೇ ಔಷಧವನ್ನು ಗಂಭೀರ ಸ್ವರೂಪದ ಕೊರೋನಾ ರೋಗಿಗಳಿಗೆ 5 ದಿನಗಳ ಕಾಲ ಇಂಜೆಕ್ಷನ್ ರೂಪದಲ್ಲಿ ನೀಡಿದರೆ ಅಥವಾ ಕೊರೋನಾ ಸೋಂಕಿತರಿಗೆ ಒಂದು ಬಾರಿ ನೀಡಿದರೆ ಅವರು ಸೋಂಕಿನಿಂದಲೇ ಪಾರಾಗಬಹುದು ಎಂಬ ಚರ್ಚೆ ನಡೆಯುತ್ತಿದೆ. ಅದು ಸಾಕಾರಗೊಳ್ಳುವುದಕ್ಕೆ ಮಾನವರ ಮೇಲಿನ ಪ್ರಯೋಗ ಯಶಸ್ವಿಯಾಗಬೇಕಿದೆ ಎಂದು ತಜ್ಞರು ತಿಳಿಸಿದ್ದಾರೆ.
ಔಷಧ ಹೇಗೆ ಕೆಲಸ ಮಾಡುತ್ತೆ?:
ಯಾವುದೇ ವೈರಾಣುವಿನಲ್ಲಿ ತನ್ನ ರೀತಿಯ ಮತ್ತಷ್ಟುವೈರಸ್‌ಗಳ ಪ್ರತಿಕೃತಿ ಸೃಷ್ಟಿಸುವುದು ಹೇಗೆ ಎಂಬ ಮಾಹಿತಿ ಇರುತ್ತದೆ. ಇದು ವೈರಾಣುವಿನ ಆರ್‌ಎನ್‌ಎಯಲ್ಲಿ ಅಡಕವಾಗಿರುತ್ತದೆ. ಒಮ್ಮೆ ವೈರಸ್ ಮಾನವರ ಜೀವಕೋಶ ಪ್ರವೇಶಿಸುತ್ತಿದ್ದಂತೆ ಜೀವಕೋಶಗಳ ಕಾರ್ಯನಿರ್ವಹಣೆಯನ್ನೇ ಆಕ್ರಮಿಸಿಕೊಂಡು ತನ್ನಂತಹ ಮತ್ತಷ್ಟುವೈರಸ್‌ಗಳನ್ನು ಸೃಷ್ಟಿಸುತ್ತದೆ. ಕೆಲವೊಮ್ಮೆ ಮಾನವರ ಜೀವಕೋಶದಲ್ಲಿನ ಡಿಎನ್‌ಎಗೆ ತನ್ನ ಆರ್‌ಎನ್‌ಎಯನ್ನೇ ಕಾಪಿ ಮಾಡಿ ಹೆಚ್ಚು ಹೆಚ್ಚು ವೈರಸ್ ಸೃಷ್ಟಿಯಾಗುವಂತೆ ನೋಡಿಕೊಳ್ಳುತ್ತದೆ. ತನ್ಮೂಲಕ ಜೀವಕೋಶ ಹೊಸ ವೈರಸ್‌ನ ಉತ್ಪಾದನಾ ಘಟಕವಾಗಿ ಮಾರ್ಪಡುತ್ತದೆ.
ಆಸ್ಪ್ರೇಲಿಯಾ ವಿಜ್ಞಾನಿಗಳು ಇದಕ್ಕಾಗಿ ಸಣ್ಣದಾಗಿ ಮಧ್ಯಪ್ರವೇಶಿಸುವ ಆರ್‌ಎನ್‌ಎ (ಎಸ್‌ಐಆರ್‌ಎನ್‌ಎ) ಎಂಬ ತಂತ್ರಜ್ಞಾನವನ್ನು ಶೋಧಿಸಿದ್ದಾರೆ. ಎಸ್‌ಐಆರ್‌ಎನ್‌ಎ ಎಂಬ ಕಣಗಳು ದೇಹದ ಜೀವಕೋಶಕ್ಕೆ ವೈರಸ್‌ಗಳು ಕಾಪಿ ಆಗುವುದನ್ನು ತಡೆಯುತ್ತವೆ. ವೈರಸ್‌ನಲ್ಲಿರುವ ಆರ್‌ಎನ್‌ಎಯನ್ನೇ ಬಂಧಿಸುತ್ತವೆ. ಹೀಗಾಗಿ ಅವು ದೇಹದ ಜೀವಕೋಶಕ್ಕೆ ನಕಲಾಗುವುದಿಲ್ಲ. ವೈರಾಣುಗಳ ಸಂತತಿ ವೃದ್ಧಿಯಾಗುವುದಿಲ್ಲ. ಇದರಿಂದ ವೈರಸ್ ದಾಳಿಯಿಂದ ಮಾನವರಿಗೆ ಹೆಚ್ಚೇನೂ ತೊಂದರೆಯಾಗುವುದಿಲ್ಲ.
ಈ ಪ್ರಯೋಗ ಇಲಿಗಳ ಮೇಲೆ ಯಶಸ್ವಿಯಾಗಿದೆ. ಇಲಿಗಳ ದೇಹದಲ್ಲಿನ ವೈರಸ್ ಪ್ರಮಾಣ ಶೇ.99.9ರಷ್ಟುಕಡಿಮೆಯಾಗಿದೆ. ಆದರೆ ಪ್ರಾಣಿಗಳ ಮೇಲಿನ ಪ್ರಯೋಗ ಮಾನವರ ಮೇಲೂ ಯಶಸ್ವಿಯಾಗುತ್ತದೆ ಎಂದು ಭಾವಿಸಲಾಗದು. ಒಂದು ವೇಳೆ ಮಾನವರ ಮೇಲೆ ಕ್ಲಿನಿಕಲ್ ಪ್ರಯೋಗ ತ್ವರಿತವಾಗಿ ನಡೆದು, ಯಶಸ್ವಿಯಾಗಿ ಸರ್ಕಾರಗಳು ಅನುಮತಿ ನೀಡಿದರೆ ಕನಿಷ್ಠ ಒಂದು ವರ್ಷದ ಬಳಿಕ ಈ ಔಷಧ ಲಭ್ಯವಾಗಬಹುದು ಎನ್ನಲಾಗುತ್ತಿದೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona