ಮದುವೆ ಸಮಾರಂಭದ ನಂತರ, ಭವಾನಿ ತಲ್ವಾರ್ ವರ್ಮಾ ಎಂಬ ನವವಧು ತಾನೇ ಕಾರ್ ಓಡಿಸಿಕೊಂಡು ಗಂಡನ ಮನೆಗೆ ಹೋಗುವ ವಿಡಿಯೋ ವೈರಲ್ ಆಗಿದೆ. ಭಾರವಾದ ಉಡುಗೆಯಲ್ಲಿದ್ದರೂ ಉತ್ಸಾಹದಿಂದ ಡ್ರೈವಿಂಗ್ ಮಾಡುವ ಆಕೆಗೆ ಪತಿ ಸಾಥ್ ನೀಡಿದ್ದು, ಈ ಸುಂದರ ಕ್ಷಣ ನೆಟ್ಟಿಗರ ಮನಗೆದ್ದಿದೆ.

ಮದುವೆ ಸಮಾರಂಭಗಳು ಮತ್ತು ಮೋಜಿನ ಕ್ಷಣಗಳ ವಿಡಿಯೋಗಳು ಪ್ರತಿದಿನ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಅಂತಹುದೇ ಒಂದು ವಿಡಿಯೋ ಈಗ ಸೋಶಿಯಲ್ ಮೀಡಿಯಾದ ಗಮನ ಸೆಳೆಯುತ್ತಿದೆ.

ಇದು ಬಿದಾಯಿ (ವಿದಾಯ - ಮದುವೆಯ ಒಂದು ಶಾಸ್ತ್ರ) ಸಮಾರಂಭದ ನಂತರ ಗಂಡನ ಮನೆಗೆ ತಾನೇ ಕಾರ್ ಓಡಿಸಿಕೊಂಡು ಹೋಗುವ ನವವಧುವಿನ ವಿಡಿಯೋ. ಸಾಮಾನ್ಯವಾಗಿ, ಈ ಹೊತ್ತಿಗೆ ಹೆಚ್ಚಿನ ಮದುಮಕ್ಕಳು ಭಾರೀ ಮದುವೆ ಬಟ್ಟೆ ಮತ್ತು ಆಭರಣಗಳಿಂದ ಸುಸ್ತಾಗಿರುತ್ತಾರೆ. ಆದರೆ, ಭವಾನಿ ತಲ್ವಾರ್ ವರ್ಮಾ ಎಂಬ ಈ ವಧುವಿಗೆ ಅದೆಲ್ಲಾ ಸಮಸ್ಯೆಯೇ ಆಗಿರಲಿಲ್ಲ. ಬದಲಿಗೆ, ಡ್ರೈವಿಂಗ್ ಸೀಟಿನಲ್ಲಿ ಕುಳಿತು ನಗುತ್ತಾ ಗಂಡನನ್ನು ಪಕ್ಕದಲ್ಲಿ ಕೂರಿಸಿಕೊಂಡು ಹೋಗುವ ಆಕೆಯ ವಿಡಿಯೋ ಜನರ ಗಮನ ಸೆಳೆದಿದೆ.

ದೇವ್ರೇ ಕಾಪಾಡು ಎಂದು ಬೇಡಿಕೊಂಡ ಗಂಡ:

ವೈರಲ್ ಆಗಿರುವ ವಿಡಿಯೋದಲ್ಲಿ, ಭವಾನಿ ಕಾರ್ ಓಡಿಸಲು ಸಿದ್ಧಳಾಗುವುದನ್ನು ನೋಡಬಹುದು. ಗಂಡ ಅದನ್ನು ನೋಡಿ ನಗುತ್ತಾ ಪಕ್ಕದಲ್ಲೇ ಇದ್ದಾನೆ. ಗಂಡನಿಗೆ ಕಾರಿನಲ್ಲಿ ಹತ್ತಲು ಹೇಳಿ, ಮನೆಗೆ ಹೋಗುವ ಸಮಯವಾಯ್ತು ಎಂದು ತಮಾಷೆಯಾಗಿ ಹೇಳುವುದು ಕೇಳಿಸುತ್ತದೆ. ನಂತರ ಗಂಡ ಆಕೆಯನ್ನು ಡ್ರೈವರ್ ಸೀಟಿನಲ್ಲಿ ಕೂರಿಸುತ್ತಾನೆ. ಆಕೆಯ ಭಾರವಾದ ಬಟ್ಟೆಗಳನ್ನು ಸರಿಪಡಿಸಿ, ಆಕೆ ಸುರಕ್ಷಿತವಾಗಿ ಕೂರಲು ಸಹಾಯ ಮಾಡುವುದನ್ನು ವಿಡಿಯೋದಲ್ಲಿ ನೋಡಬಹುದು. ಬಳಿಕ, ಆಕೆ ಡ್ರೈವಿಂಗ್ ಸೀಟಿನಲ್ಲಿ ಕುಳಿತು ವಾಹನ ಓಡಿಸುತ್ತಾಳೆ. ಗಂಡ ತಮಾಷೆಗಾಗಿ ದೇವರೇ ನನ್ನನ್ನು ನೀನೇ ಕಾಪಾಡು ಎಂದು ಪ್ರಾರ್ಥಿಸುವಂತೆ ನಟಿಸುತ್ತಾನೆ.

ಆಕೆ ನಗುತ್ತಲೇ ಕಾರ್ ಓಡಿಸಿಕೊಂಡು ಹೋಗುತ್ತಾಳೆ. ಪಕ್ಕದಲ್ಲಿ ಗಂಡ ಕುಳಿತಿರುವುದನ್ನು ನೋಡಬಹುದು. ಏನೇ ಆದರೂ, ಈ ಸುಂದರ ವಿಡಿಯೋಗೆ ಅನೇಕರು ಕಾಮೆಂಟ್ ಮಾಡಿದ್ದಾರೆ. ತಮ್ಮ ಮದುವೆಯಲ್ಲೂ ಹೀಗೆ ಮಾಡಬೇಕು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ದಂಪತಿಗೆ ಶುಭ ಹಾರೈಸಿದವರೂ ಇದ್ದಾರೆ.

View post on Instagram