Asianet Suvarna News Asianet Suvarna News

ಇಂದು ಮೋದಿ ಮೆಗಾ ಶೋ: ಅಯೋಧ್ಯೆಯಲ್ಲಿ 15,000 ಕೋಟಿ ರೂ. ಯೋಜನೆಗೆ ಚಾಲನೆ

ರಾಮ ಮಂದಿರ ಉದ್ಘಾಟನೆಗೂ ಮುನ್ನ ನಡೆಯಲಿರುವ ಈ ಭೇಟಿ ವೇಳೆ ಅಯೋಧ್ಯೆಯಲ್ಲಿ ಹೊಸ ವಿಮಾನ ನಿಲ್ದಾಣ, ಮರು ಅಭಿವೃದ್ಧಿಗೊಂಡ ರೈಲು ನಿಲ್ದಾಣವನ್ನು ಮೋದಿ ಉದ್ಘಾಟಿಸಲಿದ್ದಾರೆ.

new airport revamped railway station pm modi s big ayodhya visit today ash
Author
First Published Dec 30, 2023, 8:18 AM IST

ಅಯೋಧ್ಯೆ (ಡಿಸೆಂಬರ್ 30, 2023): ನೂತನ ರಾಮ ಮಂದಿರದ ಮೂಲಕ ಕೋಟ್ಯಂತರ ಭಕ್ತರ ಸ್ವಾಗತಕ್ಕೆ ಸಜ್ಜಾಗಿರುವ ರಾಮನ ನಗರಿ ಅಯೋಧ್ಯೆಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಭೇಟಿ ನೀಡಲಿದ್ದಾರೆ. ರಾಮ ಮಂದಿರ ಉದ್ಘಾಟನೆಗೂ ಮುನ್ನ ನಡೆಯಲಿರುವ ಈ ಭೇಟಿ ವೇಳೆ ಅಯೋಧ್ಯೆಯಲ್ಲಿ ಹೊಸ ವಿಮಾನ ನಿಲ್ದಾಣ, ಮರು ಅಭಿವೃದ್ಧಿಗೊಂಡ ರೈಲು ನಿಲ್ದಾಣವನ್ನು ಮೋದಿ ಉದ್ಘಾಟಿಸಲಿದ್ದಾರೆ.

ಜೊತೆಗೆ 11 ಸಾವಿರ ಕೋಟಿ ರೂ. ಮೌಲ್ಯದ ಅಯೋಧ್ಯೆ ಅಭಿವೃದ್ಧಿ ಕಾಮಗಾರಿ ಹಾಗೂ ಉತ್ತರ ಪ್ರದೇಶದ 4600 ಕೋಟಿ ರೂ. ಅಭಿವೃದ್ಧಿ ಯೋಜನೆಗಳಿಗೂ ಪ್ರಧಾನಿ ಚಾಲನೆ ನೀಡಲಿದ್ದಾರೆ. ಹೀಗಾಗಿ ಪ್ರಧಾನಿ ಸ್ವಾಗತಕ್ಕೆ ರಾಮಜನ್ಮಭೂಮಿ ಸಿಂಗಾರಗೊಂಡಿದೆ. ಇನ್ನು 6 ವಂದೇ ಭಾರತ್ ಹಾಗೂ ಅಯೋಧ್ಯೆ ಮೂಲಕ ಹಾದುಹೋಗುವ ರೈಲು ಸೇರಿ 2 ಅಮೃತ್ ಭಾರತ್ ರೈಲುಗಳಿಗೂ ಪ್ರಧಾನಿ ಹಸಿರು ನಿಶಾನೆ ತೋರಲಿದ್ದಾರೆ.

 

ಕರ್ನಾಟಕದ 3 ರೈಲಿಗೆ ಪ್ರಧಾನಿ ಇಂದು ಚಾಲನೆ

ಇದಲ್ಲದೇ ರಾಮ ಮಂದಿರಕ್ಕೆ ಪ್ರವೇಶವನ್ನು ಹೆಚ್ಚಿಸಲು ರೂಪಿಸಲಾಗಿರುವ ನಾಲ್ಕು ರಸ್ತೆಗಳಾದ ರಾಮಪಥ, ಭಕ್ತಿಪಥ, ಧರ್ಮಪಥ ಮತ್ತು ಶ್ರೀ ರಾಮ ಜನ್ಮಭೂಮಿ ಪಥಗಳನ್ನು ಸಹ ಅವರು ಉದ್ಘಾಟಿಸಲಿದ್ದಾರೆ. 2183 ಕೋಟಿ ರೂ. ವೆಚ್ಚದ ಹೊಸ ಅಯೋಧ್ಯೆ ಟೌನ್‌ಶಿಪ್‌ ಯೋಜನೆಗೆ ಶಂಕುಸ್ಥಾಪನೆ ಮಾಡಲಿದ್ದಾರೆ.

15 ಕಿ.ಮೀ. ರೋಡ್‌ ಶೋ: 
ಈ ನಡುವೆ, ವಿಮಾನ ನಿಲ್ದಾಣದಿಂದ ರೈಲು ನಿಲ್ದಾಣಕ್ಕೆ ತೆರಳುವಾಗ ಮೋದಿ ಸುಮಾರು 15 ಕಿ.ಮೀ. ದೂರದ ಪ್ರದೇಶದಲ್ಲಿ ರೋಡ್‌ಶೋ ನಡೆಸಲಿದ್ದಾರೆ. ಮೋದಿ ಏರ್‌ಪೋರ್ಟ್‌ ಉದ್ಘಾಟಿಸುತ್ತಿದ್ದಂತೆಯೇ, ಬೆಳಗ್ಗೆ 10 ಗಂಟೆಗೆ ದೆಹಲಿ ಬಿಡಲಿರುವ ಮೊದಲ ವಿಮಾನವು (ಏರ್‌ ಇಂಡಿಯಾ ವಿಮಾನ) 11.20 ಕ್ಕೆ ಅಯೋಧ್ಯೆ ತಲುಪಲಿದೆ. 

ಕಾರ್ಯಕ್ರಮದ ವಿವರ ನೀಡಿರುವ ಅಧಿಕಾರಿಗಳು, ‘ಪ್ರಧಾನಿ ಅವರು ಬೆಳಗ್ಗೆ 10.45ಕ್ಕೆ ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಬರಲಿದ್ದಾರೆ. ಅಲ್ಲಿಂದ ಅವರು ನೇರವಾಗಿ ರೈಲು ನಿಲ್ದಾಣಕ್ಕೆ ತೆರಳಿ ಮರು ಅಭಿವೃದ್ಧಿ ಮಾಡಿದ ‘ಅಯೋಧ್ಯೆ ಧಾಮ ಜಂಕ್ಷನ್‌’ ರೈಲು ನಿಲ್ದಾಣವನ್ನು ಉದ್ಘಾಟಿಸುತ್ತಾರೆ. ನಂತರ ಅವರು ವಿಮಾನ ನಿಲ್ದಾಣಕ್ಕೆ ಹಿಂತಿರುಗಿ ‘ಮಹರ್ಷಿ ವಾಲ್ಮೀಕಿ ವಿಮಾನ ನಿಲ್ದಾಣ’ದ ಉದ್ಘಾಟನೆ ಮಾಡುತ್ತಾರೆ. ಅಯೋಧ್ಯೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಲ್ಲಿಂದಲೆ ಚಾಲನೆ ನೀಡುತ್ತಾರೆ. ನಂತರ ಅವರು ಏರ್‌ಪೋರ್ಟ್‌ ಸನಿಹ ಬೃಹತ್‌ ಜನಸಭೆ (ರ‍್ಯಾಲಿ) ನಡೆಸಲಿದ್ದು, ಸಭೆಗೆ ಸುಮಾರು 1.5 ಲಕ್ಷ ಜನರು ಸೇರುವ ನಿರೀಕ್ಷೆಯಿದೆ. ನಂತರ ಪ್ರಧಾನಿ ಅಯೋಧ್ಯೆಯಿಂದ ನಿರ್ಗಮಿಸಲಿದ್ದಾರೆ’ ಎಂದು ಹೇಳಿದರು.

ಅಯೋಧ್ಯೆಯ ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ First Look!

ಖಲಿಸ್ತಾನಿ ಉಗ್ರ ಪನ್ನು ಬೆದರಿಕೆ: ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನು, ಪ್ರಧಾನಿ ನರೇಂದ್ರ ಮೋದಿ ಅವರ ಅಯೋಧ್ಯೆ ರ‍್ಯಾಲಿಯನ್ನು ಗುರಿಯಾಗಿಸಿ ದಾಳಿ ಮಾಡುವಂತೆ ಉತ್ತರ ಪ್ರದೇಶದ ಮುಸ್ಲಿಮರಿಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಅಯೋಧ್ಯೆ ತುಂಬ ಭಾರಿ ಸರ್ಪಗಾವಲು ಹಾಕಲಾಗಿದೆ. ಅರೆಸೇನಾ ಪಡೆಗಳು ಸೇರಿದಂತೆ ವಿವಿಧ ಪಡೆಗಳನ್ನು ನಿಯೋಜಿಸಲಾಗಿದೆ.

Follow Us:
Download App:
  • android
  • ios