ರೈಲಿನ ವಾಶ್ ರೂಮ್ ಪಕ್ಕ ಕುಳಿತು ನವನಧುವಿನ ಪಯಣ: ಫೋಟೋ ವೈರಲ್, ನೆಟ್ಟಿಗರ ಕ್ಲಾಸ್
ನವವಧುವೊಬ್ಬಳು ರೈಲಿನ ನಡೆದಾಡುವ ಜಾಗದಲ್ಲಿ ಕುಳಿತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫೋಟೋವನ್ನು ಪೋಸ್ಟ್ ಮಾಡಿದ ವ್ಯಕ್ತಿ ರೈಲ್ವೆ ಸಚಿವರನ್ನು ಟ್ಯಾಗ್ ಮಾಡಿ ವ್ಯಂಗ್ಯ ಮಾಡಿದ್ದಾರೆ.
ಆಗಷ್ಟೇ ಮದುವೆಯಾಗಿರುವ ಮದುಮಗಳನ್ನು ದಕ್ಷಿಣ ಭಾರತದ ರಾಜ್ಯಗಳಲ್ಲಿ ಪಬ್ಲಿಕ್ ಟ್ರಾನ್ಸ್‌ಫೋರ್ಟ್ ವಾಹನಗಳಲ್ಲಿ ಕರೆದುಕೊಂಡು ಹೋಗುವುದು ತೀರಾ ಕಡಿಮೆ. ಎಂತಹ ಬಡವರೇ ಆದರೂ ಕನಿಷ್ಠ ಮದುವೆ ದಿನ ಮದುಮಗಳನ್ನು ಅಥವಾ ವಧುವರರನ್ನು ಖಾಸಗಿ ವಾಹನಗಳಲ್ಲಿ ಕರೆದುಕೊಂಡು ಹೋಗುತ್ತಾರೆ. ಖಾಸಗಿ ಬಸ್, ಕಾರು ಜೀಪ್ ವ್ಯಾನ್‌ಗಳಲ್ಲಿ ದಿಬ್ಬಣ ಹೋಗುತ್ತಾರೆ. ಆದರೆ ಉತ್ತರ ಭಾರತದಲ್ಲಿ ಹಾಗಲ್ಲ, ಮದುವೆ ದಿಬ್ಬಣಕ್ಕೂ ಜನ ರೈಲು ಬಳಸುತ್ತಾರೆ. ಬಳಸುವುದು ತಪ್ಪಲ್ಲ, ಬಿಡಿ, ಐಷಾರಾಮಿ ಕಾರುಗಳ ಬಾಡಿಗೆ ಪಡೆಯಲು ಎಲ್ಲರಿಗೂ ಸಾಧ್ಯವಾಗದು, ಎಲ್ಲರ ಆರ್ಥಿಕ ಸ್ಥಿತಿ ಒಂದೇ ರೀತಿ ಇರುವುದು ಇಲ್ಲ, ಅದೆಲ್ಲವನ್ನು ಒಪ್ಪಿಕೊಳ್ಳೋಣ ಆದರೆ ವಧುವಿಗೆ ಕನಿಷ್ಠ ರೈಲಿನಲ್ಲಿ ಕುಳಿತುಕೊಳ್ಳುವುದಕ್ಕಾದರೂ ಜಾಗ ಇರಬೇಕು, ಬೇರೆ ದಿನಗಳಲ್ಲಿ ಹೋಗಲಿ ಬಿಡಿ ಕನಿಷ್ಠ ಮದುವೆ ದಿಬ್ಬಣ ಹೋಗುವ ಸಮಯದಲ್ಲಾದರೂ ರೈಲು ಬುಕ್ ಮಾಡಬೇಕು ತಾನೇ ಅದು ಇಲ್ಲ, ರೈಲಿನಲ್ಲಿ ನಡೆದಾಡುವ ಜಾಗದಲ್ಲೇ ವಧುವನ್ನು ಕೂರಿಸಿಕೊಂಡು ಕರೆದುಕೊಂಡು ಹೋಗುತ್ತಿದ್ದಾರೆ. ಈ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಜನ ಈ ಫೋಟೋವನ್ನಿಟ್ಟುಕೊಂಡು ಭಾರತೀಯ ರೈಲ್ವೆ, ಮದುವೆ, ಆರ್ಥಿಕ ಸ್ಥಿತಿ, ಮುಂದಿನ ಜೀವನದ ಬಗ್ಗೆ ಸಾಕಷ್ಟು ಚರ್ಚೆ ಮಾಡಿದ್ದು, ಈ ಪೋಸ್ಟ್ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ವಿವಾದ ಶುರುವಾಗಿದ್ದು ಹೇಗೆ?
ಟ್ವಿಟ್ಟರ್‌ನಲ್ಲಿ ಜಿತೇಶ್ ಎಂಬ ವ್ಯಕ್ತಿಯೊಬ್ಬ ನವವಧುವೊಬ್ಬಳು ರೈಲಿನ ಟಾಯ್ಲೆಟ್ ಪಕ್ಕದಲ್ಲಿರುವ ನಡೆದಾಡುವ ಜಾಗದಲ್ಲಿ ಮುದುಡಿ ಕುಳಿತಿರುವ ಫೋಟೋವನ್ನು ಹಾಕಿ ಅದನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರಿಗೆ ಟ್ಯಾಗ್ ಮಾಡಿದ್ದು, ಥ್ಯಾಂಕ್ಯು ಅಶ್ವಿನ್ ವೈಷ್ಣವ್ ಜೀ ನಿಮ್ಮಿಂದಾಗಿ ನನ್ನ ಪತ್ನಿಗೆ ಇಂದು ಈ ರೀತಿ ಜಾಗತಿಕ ಗುಣಮಟ್ಟದ ರೈಲು ಸೌಲಭ್ಯ ಸಿಕ್ಕಿದೆ ನಾನು ಯಾವಾಗಲೂ ನಿಮಗೆ ಋಣಿಯಾಗಿರುತ್ತೇನೆ ಎಂದು ಬರೆದು ವ್ಯಂಗ್ಯಾತ್ಮಕವಾಗಿ ಪೋಸ್ಟ್ ಮಾಡಿದ್ದಾರೆ. ಇದು ಅನೇಕರನ್ನು ರೊಚ್ಚಿಗೆಬ್ಬಿಸಿದ್ದು, ಅನೇಕರು ಈತನಿಗೆ ಕಾಮೆಂಟ್‌ನಲ್ಲೇ ಉಗಿದಿದ್ದಾರೆ. ಈತನ ಈ ಪೋಸ್ಟ್‌ಗೆ ರೈಲ್ವೆ ಇಲಾಖೆಯೂ ಪ್ರತಿಕ್ರಿಯಯಿಸಿದ್ದು, ನಿಮ್ಮ ಪ್ರಯಾಣದ ವಿವರವನ್ನು ನೀಡುವಂತೆ ವಿನಂತಿಸುತ್ತಿದ್ದೇವೆ. ಪಿಎನ್‌ಆರ್, ಯುಟಿಎಸ್ ನಂಬರ್, ಮೊಬೈಲ್ ನಂಬರನ್ನು ಹಂಚಿಕೊಳ್ಳುವಂತೆ ರೈಲ್ವೆ ಆ ಪೋಸ್ಟ್ ಮಾಡಿದ ಜಿತೇಶ್ ಎಂಬ ವ್ಯಕ್ತಿಗೆ ಮನವಿ ಮಾಡಿದೆ. ಕೂಡಲೇ ಡಿಎಂ ಮಾಡಿ, ನಾವು ಕೂಡಲೇ ನಿಮ್ಮ ದೂರಿನ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ. ಅಲ್ಲದೇ ನೀವು ನಿಮ್ಮ ದೂರನ್ನು ನೇರವಾಗಿ http://railmadad.indianrailways.gov.in or ಗೆ ನೀಡಬಹುದು ಹಾಗೂ ಶೀಘ್ರ ಪರಿಹಾರಕ್ಕೆ 139ಗೆ ಕರೆ ಮಾಡಬಹುದು ಎಂದು ಮನವಿ ಮಾಡಿದೆ. ಆದರೆ ಈ ವ್ಯಕ್ತಿ ರೈಲ್ವೆಯ ಯಾವ ಮನವಿಗೂ ಪ್ರತಿಕ್ರಿಯಿಸದೇ ಬೇರೆಯವರ ಕಾಮೆಂಟ್‌ಗೆಲ್ಲಾ ಪ್ರತಿಕ್ರಿಯಿಸಲು ಶುರು ಮಾಡಿದ್ದಾನೆ. ಇದು ನೆಟ್ಟಿಗರನ್ನು ತೀವ್ರ ಆಕ್ರೋಶಗೊಳ್ಳುವಂತೆ ಮಾಡಿದೆ.
ಅನೇಕರು ಕನಿಷ್ಠ ಮೊದಲೇ ತನಗೂ ಹಾಗೂ ತನ್ನ ಪತ್ನಿಗೆ ರೈಲನ್ನು ಬುಕ್ ಮಾಡಲಾಗದ ಇಂತಹ ಬೇಜವಾಬ್ದಾರಿಯುತ ವ್ಯಕ್ತಿಗೆ ಮಗಳನ್ನು ಕೊಡದಿರುವಂತೆ ಹೆಣ್ಣು ಹೆತ್ತವರನ್ನು ಮನವಿ ಮಾಡಿದ್ದಾರೆ. ಅಲ್ಲದೇ ತನ್ನ ಪ್ರಯಾಣದ ಬಗ್ಗೆ ವಿವರ ನೀಡದಿರುವ ಈತ ಸುಳ್ಳು ಹೇಳುತ್ತಿದ್ದಾನೆ ಎಂದು ಆರೋಪಿಸಿದ್ದು, ಆತನ ವಿರುದ್ಧ ಟಿಕೆಟ್ ರಹಿತ ಪ್ರಯಾಣದ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ರೈಲ್ವೆಗೆ ಆಗ್ರಹಿಸಿದ್ದಾರೆ. ಅಲ್ಲದೇ ಈತ ತನ್ನ ಪ್ರಯಾಣದ ಮಾಹಿತಿಯನ್ನು ನೀಡುತ್ತಿಲ್ಲ ಎಂದರೆ ಈತನ ಉದ್ದೇಶ ಕೇವಲ ಪ್ರಚಾರ ಪಡೆಯುವುದು ಹಾಗೂ ರೈಲ್ವೆಯ ಮಾನಕಳೆಯುವುದಾಗಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇಂತಹ ಬೇಜವಾಬ್ದಾರಿಯುತ ವ್ಯಕ್ತಿಗೆ ಯಾವ ಪೋಷಕರು ಕೂಡ ಹೆಣ್ಣು ಕೊಡಬೇಡಿ, ತನಗೆ ಹಾಗೂ ತನ್ನ ಪತ್ನಿಗೆ ಕನಿಷ್ಟ ಮಾನವೀಯ ಜೀವನ ಸೌಲಭ್ಯ ಮಾಡಿಕೊಳ್ಳಲಾಗದ ಇವನ ಜೊತೆ ಆ ಹೆಣ್ಣು ಹೇಗೆ ಬದುಕುತ್ತಾಳೆ, ಹದಗೆಟ್ಟ ಆರ್ಥಿಕ ಸ್ಥಿತಿಯಿಂದಾಗಿ ಇವರು ಮದುವೆಯ ನಂತರ ದಿನವೂ ಕಿತ್ತಾಡಬೇಕಾಗುವುದು ಎಂದು ಒಬ್ಬರು ಇದೇ ಫೋಟೋದ ಮೇಲೆ ಬರೆದು ಪೋಸ್ಟ್ ಮಾಡಿದ್ದಾರೆ. ಭಾರತದಲ್ಲಿ ಐಟಿಆರ್ ಪ್ರಕಾರ ಮದುವೆ ಹಾಗೂ ಲೈಂಗಿಕತೆಯ ನಿರ್ಧಾರ ಆಗಬೇಕು, ಯಾರಿಗೆ ಹಣ ಇಲ್ಲವೋ ಅವರಿಗೆ ಮದುವೆ ಇಲ್ಲ ಎಂದು ಒಬ್ಬರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.
ಇದನ್ನು ಓದಿ: ಮಕ್ಕಳೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತೀರಾ? ಈ ನಿಯಮಗಳನ್ನು ಪಾಲಿಸಿ!
ಇದನ್ನು ಓದಿ: 5 ಸೂಪರ್ ಟಿಪ್ಸ್ ಫಾಲೋ ಮಾಡಿದ್ರೆ ತತ್ಕಾಲ್‌ನಲ್ಲಿಯೂ ಸಿಗುತ್ತೆ ಕನ್ಫರ್ಮ್ ಟಿಕೆಟ್