ವಿಪಕ್ಷಗಳ ಸಭೆಗೆ ಸಡ್ಡು ಹೊಡೆದಿರುವ ಎನ್‌ಡಿಎ ಮೈತ್ರಿಕೂಟ ದೆಹಲಿಯಲ್ಲಿ ಭಾನುವಾರ ಎಲ್ಲಾ 38 ಪಕ್ಷಗಳ ಸಭೆ ನಡೆಸಿದ್ದು, ಭಾರಿ ಬಲಪ್ರದರ್ಶನ ಮಾಡಿದೆ. ಈ ಮೂಲಕ 2024ರ ಚುನಾವಣೆಗೆ ತಾನೂ ಸಜ್ಜು ಎಂಬ ಸಂದೇಶ ಸಾರಿದೆ. 

ನವದೆಹಲಿ (ಜು.19): ವಿಪಕ್ಷಗಳ ಸಭೆಗೆ ಸಡ್ಡು ಹೊಡೆದಿರುವ ಎನ್‌ಡಿಎ ಮೈತ್ರಿಕೂಟ ದೆಹಲಿಯಲ್ಲಿ ಭಾನುವಾರ ಎಲ್ಲಾ 38 ಪಕ್ಷಗಳ ಸಭೆ ನಡೆಸಿದ್ದು, ಭಾರಿ ಬಲಪ್ರದರ್ಶನ ಮಾಡಿದೆ. ಈ ಮೂಲಕ 2024ರ ಚುನಾವಣೆಗೆ ತಾನೂ ಸಜ್ಜು ಎಂಬ ಸಂದೇಶ ಸಾರಿದೆ. ಈ ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ‘ಎನ್‌ಡಿಎ ಪ್ರಾದೇಶಿಕ ಆಕಾಂಕ್ಷೆಯ ಸುಂದರ ಕಾಮನಬಿಲ್ಲು’ ಎಂದು ಬಣ್ಣಿಸಿದ್ದಾರೆ. ಅಲ್ಲದೇ ‘ಎನ್‌.ಡಿ.ಎ.’ ಎಂದರೆ ‘ನ್ಯೂ-ಇಂಡಿಯಾ, ಡೆವಲಪ್‌ ನೇಷನ್‌ ಹಾಗೂ ಆ್ಯಸ್ಪಿರೇಶನ್‌’ (ನವಭಾರತ, ಅಭಿವೃದ್ಧಿ ಹೊಂದಿದ ದೇಶ ಹಾಗೂ ಆಕಾಂಕ್ಷೆ) ಎಂದು ಮೋದಿ ಅವರು ಹೊಸ ವ್ಯಾಖ್ಯಾನ ನೀಡಿದ್ದು, ಹೊಸದಾಗಿ ರಚಿತವಾಗಿರುವ ವಿಪಕ್ಷಗಳ ಕೂಟ ‘ಇಂಡಿಯಾ’ಗೆ ಟಾಂಗ್‌ ನೀಡಿದ್ದಾರೆ. 

ಅಲ್ಲದೆ, ಸತತ 3ನೇ ಬಾರಿ 2024ರಲ್ಲಿ ಎನ್‌ಡಿಎ ಗೆದ್ದು ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಮಂಗಳವಾರ ಸಂಜೆ ದಿಲ್ಲಿಯ ಹೋಟೆಲ್‌ ಅಶೋಕದಲ್ಲಿ ನಡೆದ ಎನ್‌ಡಿಎ ಅಂಗಪಕ್ಷಗಳ ಸಭೆಯಲ್ಲಿ ಸುದೀರ್ಘವಾಗಿ ಮಾತನಾಡಿದ ಮೋದಿ, ‘ಎನ್‌ಡಿಎ ಕೂಟವನ್ನು ಯಾವುದೇ ಪಕ್ಷವನ್ನು ವಿರೋಧ ಮಾಡುವುದಕ್ಕಾಗಿ ನಿರ್ಮಾಣ ಮಾಡಲಾಗಿಲ್ಲ. ದೇಶದಲ್ಲಿ ಸ್ಥಿರತೆ ತರುವುದಕ್ಕಾಗಿ ರಚಿಸಲಾಗಿದೆ. ಭಾರತದಲ್ಲಿ ಬಹಳ ಹಿಂದಿನಿಂದಲೂ ಮೈತ್ರಿಕೂಟದ ರಚನೆಗಳು ಆಗಿವೆ. ಆದರೆ ನಕಾರಾತ್ಮಕತೆಯೊಂದಿಗೆ ಆರಂಭವಾದ ಯಾವುದೇ ಮೈತ್ರಿಕೂಟಗಳು ಸಫಲವಾಗಿಲ್ಲ’ ಎಂದು ವಿಪಕ್ಷಗಳ ಮೈತ್ರಿಕೂಟವನ್ನು ಉದ್ದೇಶಿಸಿ ಪ್ರಹಾರ ನಡೆಸಿದರು.

ಆರೆಸ್ಸೆಸ್‌ ಸಂಸ್ಥೆಗೆ ನೀಡಿದ್ದ ಜಾಗಕ್ಕೆ ತಡೆ: ಕೋಟ ಶ್ರೀನಿವಾಸ ಪೂಜಾರಿ ಆಕ್ರೋಶ

‘1990ರಲ್ಲಿ ದೇಶವನ್ನು ಅಸ್ಥಿರಗೊಳಿಸಲು ಕಾಂಗ್ರೆಸ್‌ ಈ ಮೈತ್ರಿಕೂಟವನ್ನು ಬಳಕೆ ಮಾಡಿತು. ಈ ಕೂಟಗಳು ಸರ್ಕಾರ ರಚನೆ ಮಾಡಿದವು. ಆದರೆ ಇದೇ ಕೂಟಗಳನ್ನು ಸರ್ಕಾರಗಳನ್ನು ಅಸ್ಥಿರಗೊಳಿಸಲು ಕಾಂಗ್ರೆಸ್‌ ಬಳಸಿಕೊಂಡಿತು. ಬಳಿಕ 2014ರವರೆಗೆ ಮೈತ್ರಿಕೂಟಗಳು ಹೇಗೋ ಉಳಿದುಕೊಂಡವು. ಆದರೆ ನೀತಿಗಳ ಪಕ್ಷಪಾತ ಮತ್ತು ಹೈಕಮಾಂಡ್‌ ಪ್ರಧಾನಿಗಿಂತ ಮೇಲ್ಮಟ್ಟದಲ್ಲಿದ್ದವು’ ಎಂದು ಅವರು ‘ಸೂಪರ್‌ ಪಿಎಂ’ ಹಣೆಪಟ್ಟಿಹೊತ್ತಿದ್ದ ಸೋನಿಯಾ ಗಾಂಧಿ ಹೆಸರೆತ್ತದೇ ಕುಟುಕಿದರು.

ಹಿರಿಯರ ಸ್ಮರಿಸಿದ ಮೋದಿ: ಎನ್‌ಡಿಎ ಈಗ 25 ವರ್ಷಗಳನ್ನು ಪೂರೈಸಿದ್ದು, ಈ ಸಮಯದಲ್ಲಿ ದೇಶದ ಅಭಿವೃದ್ಧಿಯ ವೇಗಕ್ಕೆ ಭಾರಿ ಕೊಡುಗೆ ನೀಡಿದೆ. ಎನ್‌ಡಿಎ ವಾಜಪೇಯಿ, ಅಡ್ವಾಣಿ ಅವರಂತಹ ಮಹಾನ್‌ ವ್ಯಕ್ತಿಗಳನ್ನು ಹೊಂದಿತ್ತು. ಇವರು ಈ ಮೈತ್ರಿಕೂಟವನ್ನು ರೂಪಿಸಲು ಪ್ರಮುಖ ಪಾತ್ರ ವಹಿಸಿದ್ದಲ್ಲದೇ, ನಿರಂತರವಾಗಿ ನಮಗೆ ಮಾರ್ಗದರ್ಶನ ಮಾಡಿದರು. ಅಲ್ಲದೇ ಬಾಳಾ ಠಾಕ್ರೆ, ಅಜಿತ್‌ ಸಿಂಗ್‌, ಶರದ್‌ ಯಾದವ್‌, ಪ್ರಕಾಶ್‌ ಸಿಂಗ್‌ ಬಾದಲ್‌ರಂತಹ ನಾಯಕರು ಸಹ ಎನ್‌ಡಿಎ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಎನ್‌ಡಿಎ ಎಂಬುದು ಒಂದು ಬಲವಂತದ ಕೂಟವಲ್ಲ. ಇಲ್ಲಿ ಪ್ರತಿಯೊಬ್ಬರು ಗುರುತಿಸಲ್ಪಡುತ್ತಾರೆ. ಪ್ರತಿಯೊಬ್ಬರು ಕೊಡುಗೆ ನೀಡುತ್ತಾರೆ. ಎನ್‌ಡಿಎಗಿಂತ ಯಾವುದೇ ಪಕ್ಷಗಳು ಇಲ್ಲಿ ಮಿಗಿಲಲ್ಲ. 2014 ಮತ್ತು 2019ರಲ್ಲಿ ಬಿಜೆಪಿ ಸ್ಪಷ್ಟಬಹುಮತ ಪಡೆದುಕೊಂಡರೂ ಸಹ ನಾವು ಎನ್‌ಡಿಎ ಮೈತ್ರಿಕೂಟ ವಿಸರ್ಜಿಸಲಿಲ್ಲ’ ಎಂದರು. ನಾನೂ ತಪ್ಪುಗಳನ್ನು ಮಾಡಬಹುದು. ಆದರೆ ದುರುದ್ದೇಶದಿಂದ ಏನನ್ನೂ ಮಾಡುವುದಿಲ್ಲ ಎಂದು ಹೇಳಿದರು.

ಎನ್‌ಡಿಎ ಅಭಿವೃದ್ಧಿಯ ಪರ: ‘ಎನ್‌ಡಿಎ ಸದಾ ಅಭಿವೃದ್ಧಿ ಪರ ಕೆಲಸಗಳನ್ನು ಮಾಡಿದೆ. ವಿಪಕ್ಷದಲ್ಲಿದ್ದಾಗಲೂ ದೇಶಕ್ಕೆ ಅನುಕೂಲವಾಗುವಂತಹ ಕೆಲಸಗಳನ್ನು ಮಾಡಿದೆ. ಇದಕ್ಕಾಗಿ ನಾವು ವಿದೇಶಗಳ ಸಹಾಯ ಪಡೆದುಕೊಂಡಿಲ್ಲ. ಜನರ ಸಬಲೀಕರಣ, ಅಭಿವೃದ್ಧಿ ಮತ್ತು ರಾಷ್ಟ್ರದ ಭದ್ರತೆ ಎನ್‌ಡಿಎ ಮೈತ್ರಿಕೂಟದ ಪ್ರಮುಖ ಆಶಯವಾಗಿದೆ. ಕಳೆದ 9 ವರ್ಷದಲ್ಲಿ ಬಡವರು ಅಭಿವೃದ್ಧಿಗಾಗಿ ಕೆಲಸ ಮಾಡಿದ್ದೇವೆ. ನಾವು ಸದಾ ಮಹಾತ್ಮ ಗಾಂಧಿ, ಅಂಬೇಡ್ಕರ್‌ ಮತ್ತು ಲೋಹಿಯಾ ಅವರ ಹಾದಿಯಲ್ಲೇ ನಡೆಯುತ್ತಿದ್ದೇವೆ. ನಾವು ಇಡೀ ರಾಷ್ಟ್ರವನ್ನು ಒಂದುಗೂಡಿಸುತ್ತಿದ್ದರೆ ವಿಪಕ್ಷಗಳು ಅದನ್ನು ಬೇರ್ಪಡಿಸುತ್ತಿವೆ. ರಾಜಕೀಯದಲ್ಲಿ ವಿರೋಧ ಇರಬೇಕೆ ಹೊರತು ದ್ವೇಷವಲ್ಲ. ವಿಪಕ್ಷಗಳು ಸದಾ ನಮ್ಮನ್ನು ದ್ವೇಷಿಸುತ್ತಿದೆ. ನಾವು ವರ್ತಮಾನದಲ್ಲಷ್ಟೇ ಅಲ್ಲದೇ ಉಜ್ವಲ ಭವಿಷ್ಯಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಹಾಗಾಗಿ 3ನೇ ಬಾರಿಗೆ ಜನ ಎನ್‌ಡಿಎ ಗೆಲ್ಲಿಸಲಿದ್ದಾರೆ. 2014ರಲ್ಲಿ ಶೇ.38, 2019ರಲ್ಲಿ ಶೇ.45ರಷ್ಟುಮತ ಪಡೆದಿದ್ದ ಎನ್‌ಡಿಎ 2024ರಲ್ಲಿ ಶೇ.50ಕ್ಕಿಂತ ಹೆಚ್ಚು ಮತ ಗಳಿಸಲಿದೆ’ ಎಂದು ಭರವಸೆ ವ್ಯಕ್ತಪಡಿಸಿದರು.

ವಿಪಕ್ಷಗಳು ಒಂದಾಗುವುದಿಲ್ಲ: ವಿಪಕ್ಷಗಳ ಮೈತ್ರಿಕೂಟವನ್ನು ಟೀಕಿಸಿದ ಮೋದಿ, ಸದಾ ದೇಶವನ್ನು ಬೇರ್ಪಡಿಸುವ ಕೆಲಸ ಮಾಡುವ ವಿಪಕ್ಷ ನಾಯಕರು, ಸಾಮಾನ್ಯ ಜನರ ಜ್ಞಾನವನ್ನು ಕೀಳಾಗಿ ನೋಡುತ್ತಿದ್ದಾರೆ. ವಿಪಕ್ಷಗಳು ಸ್ವಾರ್ಥದಿಂದಲೇ ಒಂದಾಗಿವೆ. ಅವುಗಳನ್ನು ಒಂದುಗೂಡಿಸಿರುವ ಸ್ವಾರ್ಥದ ಅಂಟು ಯಾವುದು ಎಂಬುದು ಜನರಿಗೆ ಅರ್ಥವಾಗಿದೆ. ಅಲ್ಲದೇ ಕೇಂದ್ರ ಸರ್ಕಾರದ ಹಲವು ಯೋಜನೆಗಳು ಜಾರಿಯಾಗಲು ವಿಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳಲ್ಲಿ ಬಿಡುವುದಿಲ್ಲ. ಏಕೆಂದರೆ ಇವು ಜಾರಿಯಾದರೆ ಆ ಪಕ್ಷಗಳಿಗೆ ಉಳಿಗಾಲವಿಲ್ಲ ಎಂದು ಹೇಳಿದರು.

ರೈತರ ಆತ್ಮಹತ್ಯೆ ಬಗ್ಗೆ ಸರ್ಕಾರಕ್ಕೆ ಚಿಂತೆಯಿಲ್ಲ: ಎಚ್‌ಡಿಕೆ ಆಕ್ರೋಶ

ಸಭೆಯಲ್ಲಿ ಎನ್‌ಡಿಎ ಮೈತ್ರಿಕೂಟದ 38 ಪಕ್ಷಗಳು ಭಾಗಿಯಾಗಿದ್ದವು. ಜೆ.ಪಿ. ನಡ್ಡಾ, ಅಮಿತ್‌ ಶಾ, ಏಕನಾಥ್‌ ಶಿಂಧೆ, ಚಿರಾಗ್‌ ಪಾಸ್ವಾನ್‌, ಅಜಿತ್‌ ಪವಾರ್‌, ಪ್ರಫುಲ್‌ ಪಟೇಲ್‌, ಪವನ್‌ ಕಲ್ಯಾಣ್‌, ಎಡಪ್ಪಾಡಿ ಪಳನಿಸ್ವಾಮಿ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು. ಇದು ಮೋದಿ ನೇತೃತ್ವದ ಎನ್‌ಡಿಎ-2 ಸರ್ಕಾರ ರಚನೆಯಾದ ಮೇಲೆ ನಡೆಯುತ್ತಿರುವ ಮೊದಲ ಸಭೆಯಾಗಿದೆ.