ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಂಗ ಸಂಸ್ಥೆಯಾಗಿರುವ ಬೆಂಗಳೂರಿನ ‘ಜನಸೇವಾ ಟ್ರಸ್ಟ್‌’ಗೆ ಹಿಂದಿನ ಸರ್ಕಾರ ಜಮೀನು ಮಂಜೂರು ಮಾಡಿರುವ ಆದೇಶಕ್ಕೆ ರಾಜ್ಯ ಸರ್ಕಾರ ತಡೆ ನೀಡಿರುವುದನ್ನು ಹಿಂಪಡೆಯಬೇಕೆಂದು ಬಿಜೆಪಿ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದರು. 

ವಿಧಾನ ಪರಿಷತ್‌ (ಜು.18): ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಂಗ ಸಂಸ್ಥೆಯಾಗಿರುವ ಬೆಂಗಳೂರಿನ ‘ಜನಸೇವಾ ಟ್ರಸ್ಟ್‌’ಗೆ ಹಿಂದಿನ ಸರ್ಕಾರ ಜಮೀನು ಮಂಜೂರು ಮಾಡಿರುವ ಆದೇಶಕ್ಕೆ ರಾಜ್ಯ ಸರ್ಕಾರ ತಡೆ ನೀಡಿರುವುದನ್ನು ಹಿಂಪಡೆಯಬೇಕೆಂದು ಬಿಜೆಪಿ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದರು. ವಿಷಯ ಪ್ರಸ್ತಾಪಿಸಿದ ಅವರು, ರಾಜ್ಯದಲ್ಲಿ ಆರ್ಥಿಕವಾಗಿ ಹಿಂದುಳಿದವರು, ಬಡವರು, ಶೋಷಿತ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಸ್ಥಾಪನೆಯಾಗಿರುವ ಟ್ರಸ್ಟ್‌ಗೆ ಬೆಂಗಳೂರಿನ ದಕ್ಷಿಣ ತಾಲ್ಲೂಕಿನ ಕುರುಬರಹಳ್ಳಿ ಗ್ರಾಮದ ತಾವರೆಕೆರೆ ಹೋಬಳಿಯಲ್ಲಿ ಹಿಂದಿನ ಸರ್ಕಾರ 35 ಎಕರೆ 33 ಗುಂಟೆ ಜಮೀನು ಮಾಡಿದೆ. 

ಆದರೆ ಹೊಸ ಸರ್ಕಾರ ಆರ್‌ಎಸ್‌ಎಸ್‌ ಅಂಗ ಸಂಸ್ಥೆ ಎಂಬ ಒಂದೇ ಕಾರಣಕ್ಕೆ ಮಂಜೂರು ಮಾಡಿದ್ದ ಜಮೀನು ಹಂಚಿಕೆಗೆ ತಡೆ ನೀಡಿರುವುದು ಖಂಡನೀಯ. ಇದೊಂದು ಸೇಡಿನ ರಾಜಕಾರಣವಾಗಿದೆ. ದುರುದ್ದೇಶದಿಂದ ಕೂಡಿರುವ ಈ ಆದೇಶವನ್ನು ಸರ್ಕಾರ ಹಿಂಪಡೆಯಬೇಕೆಂದು ಆಗ್ರಹಿಸಿದರು. ಈ ಬಗ್ಗೆ ಸಂಬಂಧಪಟ್ಟಸಚಿವರಿಂದ ಉತ್ತರ ಕೊಡಿಸುವುದಾಗಿ ಸಭಾನಾಯಕ ಎನ್‌.ಎಸ್‌. ಬೋಸರಾಜು ಅವರ ಮಾತಿಗೆ ಒಪ್ಪದ ಅವರು ಇದೊಂದು ಗಂಭೀರ ವಿಷಯವಾಗಿದ್ದು, ತಕ್ಷಣ ಉತ್ತರ ನೀಡಬೇಕು ಹಾಗೂ ಚರ್ಚಿಸಲು ಅವಕಾಶ ನೀಡಬೇಕೆಂದು ಆಗ್ರಹಿಸಿದರು. ಆದರೆ ಇದಕ್ಕೆ ಒಪ್ಪದ ಸಭಾಪತಿ ನಿಯಮದ ಪ್ರಕಾರ ವಿಷಯ ಓದಲು ಮಾತ್ರ ಅವಕಾಶವಿದೆ. ಚರ್ಚಿಸಲು ಅವಕಾಶ ನೀಡುವುದಿಲ್ಲ ಎಂದರು. ಆದರೆ ಬಿಜೆಪಿ ಸದಸ್ಯರು ಪಟ್ಟು ಮುಂದುವರಿಸಿದಾಗ ಕೊನೆಗೆ ಸಭಾಪತಿ ಬುಧವಾರದೊಳಗೆ ಉತ್ತರ ಕೊಡಿಸಬೇಕೆಂದು ಸಭಾನಾಯಕರಿಗೆ ಸೂಚಿಸಿದರು.

ನಾವು ಅಧಿಕಾರ ಕಳೆದುಕೊಂಡಿದ್ದೇವೆ, ಜನರ ವಿಶ್ವಾಸ ಕಳೆದುಕೊಂಡಿಲ್ಲ: ಸಿ.ಟಿ.ರವಿ

ಆರ್‌ಎಸ್‌ಎಸ್‌ ಸಂಸ್ಥೆಗೆ ಜಮೀನು ಮಂಜೂರಿಗೆ ತಡೆ: ಹಿಂದಿನ ಸರ್ಕಾರ ಸಂಘ ಪರಿವಾರಕ್ಕೆ ಸೇರಿದ ಜನಸೇವಾ ಟ್ರಸ್ಟ್‌ಗೆ ಮಂಜೂರು ಮಾಡಿದ್ದ ಜಮೀನು ತಡೆಹಿಡಿದಿರುವ ಈಗಿನ ಕಾಂಗ್ರೆಸ್‌ ಸರ್ಕಾರದ ಕ್ರಮಕ್ಕೆ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಸಿದ್ದರಾಮಯ್ಯ ಅವಧಿಯಲ್ಲಿ ಸೇಡಿನ ರಾಜಕಾರಣ ನಡೆಯುತ್ತಿದೆ. ಅದರ ಪರಿಣಾಮ ಜನಸೇವಾ ಟ್ರಸ್ಟ್‌ಗೆ ನೀಡಿರುವ ಜಮೀನು ತಡೆ ಹಿಡಿಯುವ ಪ್ರಯತ್ನ ಮಾಡಿದ್ದಾರೆ. ಜನಸೇವಾ ಟ್ರಸ್ಟ್‌ ತನ್ನದೇ ಆದ ರೀತಿಯಲ್ಲಿ ಸೇವೆ ಮಾಡುತ್ತಿದೆ. ಈ ಬಗ್ಗೆ ನಮ್ಮ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಿ ಮುಂದಿನ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ಮಾಜಿ ಸಚಿವ ಆರ್‌.ಅಶೋಕ್‌ ಮಾತನಾಡಿ, ಹಿಂದಿನ ನಮ್ಮ ಸರ್ಕಾರ ಜಮೀನು ಕೊಟ್ಟಿತ್ತು. ಕಾಂಗ್ರೆಸ್‌ ಇದ್ದಾಗಲೂ ಚನ್ನೇನಹಳ್ಳಿಯಲ್ಲಿ ಭೂಮಿ ನೀಡಲಾಗಿತ್ತು. ಹಳ್ಳಿಗಾಡಿನ ವಿದ್ಯಾರ್ಥಿಗಳಿಗೆ ಓದಲು ಅವಕಾಶ ಇತ್ತು. ಆದಿಚುಂಚನಗಿರಿ, ಹಿಂದುಳಿದ ಮಠಗಳಿಗೂ ನೀಡಿದ್ದೆವು. ಅದೇ ರೀತಿ ರಾಷ್ಟೊ್ರೕತ್ಥಾನಕ್ಕೂ ಕೂಡ ಕೊಡಲಾಗಿತ್ತು. ಅದನ್ನು ತಡೆಹಿಡಿಯುವ ದ್ವೇಷದ ರಾಜಕಾರಣ ಮಾಡ್ತಿದ್ದಾರೆ. ಇವರ ನಿಜಬಣ್ಣ ಮುಂದೆ ಬಯಲಾಗಲಿದೆ. ಇವರ ದ್ವೇಷದ ರಾಜಕಾರಣವನ್ನು ನಾನು ಖಂಡಿಸುತ್ತೇನೆ ಎಂದರು.

ನುಡಿದಂತೆ ನಡೆಯುತ್ತಿದೆ ಕಾಂಗ್ರೆಸ್‌ ಪಕ್ಷ: ಸಚಿವ ಮಧು ಬಂಗಾರಪ್ಪ

ಶಾಸಕ ಬಿ.ವೈ.ವಿಜಯೇಂದ್ರ ಮಾತನಾಡಿ, ಇದು ನಿರೀಕ್ಷಿತವೇ ಆಗಿತ್ತು. ಈ ಸರ್ಕಾರ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಅಂತ ಅವರೇ ತೋರಿಸುತ್ತಿದ್ದಾರೆ. ಸಚಿವರು ಆರಂಭದಲ್ಲೇ ಆರೆಸ್ಸೆಸ್‌ಗೆ ಮಂಜೂರಾದ ಭೂಮಿ ವಾಪಸ್‌ ಬಗ್ಗೆ ಮಾತಾಡುತ್ತಾರೆ. ಜನಸೇವಾ ವಿದ್ಯಾ ಕೇಂದ್ರ ಲಕ್ಷಾಂತರ ಬಡಮಕ್ಕಳಿಗೆ ವಿದ್ಯೆ ಕೊಡುತ್ತಿರುವ ಸಂಸ್ಥೆ. ಅಂಥ ಸಂಸ್ಥೆಯಿಂದ ಭೂಮಿ ವಾಪಸ್‌ ಪಡೆಯುವುದು ಸರಿಯಿಲ್ಲ. ನಾನೂ ಕೂಡಾ ಅದೇ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದೇನೆ ಎಂದು ಹೇಳಿದರು.