ಇವಿಎಂ ಅನುಮಾನಿಸಿದ ಕಾಂಗ್ರೆಸ್‌ಗೆ ಮೋದಿ ಚಾಟಿ
ಚುನಾವಣಾ ಪ್ರಕ್ರಿಯೆಯ ಉದ್ದಕ್ಕೂ ವಿದ್ಯುನ್ಮಾನ ಮತಯಂತ್ರಗಳು (ಇವಿಎಂ) ಮತ್ತು ಚುನಾವಣಾ ಆಯೋಗದ ಮೇಲೆ ಅನುಮಾನಗಳನ್ನು ವ್ಯಕ್ತಪಡಿಸಿದ್ದ ಕಾಂಗ್ರೆಸ್ ಹಾಗೂ ಇಂಡಿಯಾ ಕೂಟದ ನಾಯಕರನ್ನು ಪ್ರಧಾನಿ ನರೇಂದ್ರ ಮೋದಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ನವದೆಹಲಿ (ಜೂ.8): ಚುನಾವಣಾ ಪ್ರಕ್ರಿಯೆಯ ಉದ್ದಕ್ಕೂ ವಿದ್ಯುನ್ಮಾನ ಮತಯಂತ್ರಗಳು (ಇವಿಎಂ) ಮತ್ತು ಚುನಾವಣಾ ಆಯೋಗದ ಮೇಲೆ ಅನುಮಾನಗಳನ್ನು ವ್ಯಕ್ತಪಡಿಸಿದ್ದ ಕಾಂಗ್ರೆಸ್ ಹಾಗೂ ಇಂಡಿಯಾ ಕೂಟದ ನಾಯಕರನ್ನು ಪ್ರಧಾನಿ ನರೇಂದ್ರ ಮೋದಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
‘ಫಲಿತಾಂಶಗಳು ತಮಗೆ ಸರಿಹೊಂದುವುದಿಲ್ಲ ಎಂದರೆ ಅವರು ದೇಶಾದ್ಯಂತ ಬೆಂಕಿ ಹಚ್ಚಲು ಬಯಸಿದ್ದರು. ಆದಾಗ್ಯೂ, ಜೂನ್ 4ರ ಸಂಜೆಯ ವೇಳೆಗೆ ಇವಿಎಂಗಳು ಅವುಗಳನ್ನು ಮೌನಗೊಳಿಸಿದವು’ ಎಂದು ಹೇಳಿದ್ದಾರೆ. ಈ ಮೂಲಕ ಇವಿಎಂ ತಿರುಚಲು ಅಸಾಧ್ಯವಾಗಿದ್ದರಿಂದಲೇ ವಿಪಕ್ಷಗಳು ಉತ್ತಮ ಪ್ರದರ್ಶನ ತೋರಿದವು ಎಂಬುದನ್ನು ಪರೋಕ್ಷವಾಗಿ ಉಲ್ಲೇಖಿಸಿದ್ದಾರೆ.
ಭಾರತಕ್ಕೆ ಸರಿಯಾದ ನಾಯಕನೆಂದರೆ ಮೋದಿ: ಚಂದ್ರಬಾಬು ನಾಯ್ಡು
ಎನ್‌ಡಿಎ ಸಂಸದೀಯ ಸಭೆಯಲ್ಲಿ ಶುಕ್ರವಾರ ಮಾತನಾಡಿದ ಮೋದಿ, ‘ಜೂ.4 ರಂದು ಫಲಿತಾಂಶಗಳು ಹೊರಬರುತ್ತಿರುವಾಗ, ನಾನು ಕೆಲಸದಲ್ಲಿ ನಿರತನಾಗಿದ್ದೆ. ನಂತರ ಫೋನ್ ಕರೆಗಳು ಬರಲಾರಂಭಿಸಿದವು. ನಾನು ಯಾರೋ ಒಬ್ಬರನ್ನು ಆಗ ‘ಸಂಖ್ಯೆಗಳು ಸರಿಯಾಗಿ ಬರುತ್ತಿವೆಯೇ? ಇವಿಎಂ ಜಿಂದಾ ಹೈ ಕಿ ಮರ್ ಗಯಾ (ಇವಿಎಂ ಸತ್ತಿದೆಯೇ ಅಥವಾ ಜೀವಂತವಾಗಿದೆಯೇ) ಹೇಳಿ ಎಂದೆ’ ಎಂದು ಚಟಾಕಿ ಹಾರಿಸಿದರು.
ಸಚಿವ ಸಂಪುಟ ಬಗ್ಗೆ ಟೀವಿ ಸುದ್ದಿಗಳು ಸುಳ್ಳು: ಯಾರೂ ನಂಬಬೇಡಿ ಎಂದ ಪ್ರಧಾನಿ ಮೋದಿ
‘ಜೂ.4ಕ್ಕೂ ಮುನ್ನ ವಿಪಕ್ಷ ನಾಯಕರು ಇವಿಎಂಗಳನ್ನು ದೂಷಿಸುತ್ತಿದ್ದರು ಮತ್ತು ಭಾರತದ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಜನರು ನಂಬಿಕೆ ಕಳೆದುಕೊಳ್ಳುವಂತೆ ಮಾಡಲು ಸಂಚು ರೂಪಿಸಿದ್ದರು. ಅವರು ಇವಿಎಂನ ಶವಯಾತ್ರೆ ಮಾಡುತ್ತಾರೆ ಎಂದು ಭಾವಿಸಿದ್ದೆವು. ಆದರೆ ಜೂನ್ 4 ರ ಸಂಜೆಯ ವೇಳೆಗೆ, ಅವೇ ಇವಿಎಂಗಳು ಅವರನ್ನು ಮೌನಗೊಳಿಸಿದವು. ಇದು ಭಾರತದ ಪ್ರಜಾಪ್ರಭುತ್ವದ ಶಕ್ತಿ ಹಾಗೂ ನ್ಯಾಯದ ಪ್ರತೀಕ. ನಾನು ಇನ್ನು 5 ವರ್ಷ ಇವಿಎಂ ಬಗ್ಗೆ ಯಾವುದೇ ಟೀಕೆ ಕೇಳಿಬರುವುದಿಲ್ಲ ಎಂಬ ವಿಶ್ವಾಸದಲ್ಲಿದ್ದೇನೆ. ಆದರೆ 2029ರ ಚುನಾವಣೆ ವೇಳೆ ಮತ್ತೆ ಅವರು ಮತ್ತೆ ಇವಿಎಂ ಬಗ್ಗೆ ವಾದಿಸುತ್ತಾರೆ’ ಎಂದರು.