ಅಜಿತ್ ಆರೋಪಕ್ಕೆ ಸುಧಾಮೂರ್ತಿ ಹೆಸರನ್ನು ಎಳೆದು ತಂದ ಸಂಸದೆ ಸುಪ್ರಿಯಾ ಸುಳೆ
ಮಹಾರಾಷ್ಟ್ರದಲ್ಲಿ ಬಿಟ್‌ಕಾಯಿನ್ ವ್ಯವಹಾರದ ಕುರಿತ ಆಡಿಯೋದಲ್ಲಿರುವ ಧ್ವನಿ ಸುಪ್ರಿಯಾ ಸುಳೆ ಮತ್ತು ನಾನಾ ಪಟೋಲೆ ಅವರದ್ದೇ ಎಂದು ಅಜಿತ್ ಪವಾರ್ ಹೇಳಿದ್ದಾರೆ. ಆದರೆ, ಧ್ವನಿ ನಕಲು ಮಾಡಲಾಗಿದೆ ಎಂದು ಸುಪ್ರಿಯಾ ಅಲ್ಲಗಳೆದಿದ್ದಾರೆ.
ಪುಣೆ: ವಿಧಾನಸಭಾ ಚುನಾವಣೆಗೂ ಮುನ್ನಾ ದಿನ ಮಹಾರಾಷ್ಟ್ರದಲ್ಲಿ ಭಾರೀ ರಾಜಕೀಯ ಸಂಚಲನಕ್ಕೆ ಕಾರಣವಾಗಿರುವ ಬಿಟ್ಕಾಯಿನ್ ವ್ಯವಹಾರದ ಕುರಿತ ಆಡಿಯೋದಲ್ಲಿರಿರುವುದು ಎನ್‌ಸಿಪಿ (ಪವಾರ್ ಬಣ) ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ ಮತ್ತು ಕಾಂಗ್ರೆಸ್ ನಾಯಕ ನಾನಾ ಪಟೋಲೆ ಅವರದ್ದೇ ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ, ಎನ್‌ಸಿಪಿ ನಾಯಕ ಅಜಿತ್ ಪವಾರ್ ಹೇಳಿಕೊಂಡಿದ್ದಾರೆ.
ಸುಪ್ರಿಯಾ ಸುಳೆ ಮತ್ತು ನಾನಾ ಪಟೋಲೆ, ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಪ್ರಚಾರಕ್ಕೆ ಅಕ್ರಮವಾಗಿ ಬಿಟ್ಕಾಯಿನ್ ಹಣ ಬಳಸುತ್ತಿದ್ದಾರೆ ಎಂದು ಆರೋಪಿಸುವ ಹಾಗೂ ಅವರ ಬಿಟ್‌ಕಾಯಿನ್ ವ್ಯವಹಾರದ ಸಂಭಾಷಣೆ ಇರುವ ಆಡಿಯೋ ತುಣುಕೊಂದು ಮಂಗಳವಾರ ಬಿಡುಗಡೆಯಾಗಿತ್ತು.
ಈ ಕುರಿತು ಬಾರಾಮತಿಯಲ್ಲಿ ಪ್ರತಿಕ್ರಿಯೆ ನೀಡಿರುವ ಅಜಿತ್ ಪವಾರ್, ‘ನಾನು ಪಟೋಲೆ ಅವರನ್ನು ಬಹಳ ವರ್ಷಗಳಿಂದ ಬಲ್ಲೆ. ಅದು ಅವರದ್ದೇ ಧ್ವನಿ. ಜೊತೆಗೆ ಮತ್ತೊಂದು ಧ್ವನಿ ಸುಪ್ರಿಯಾ ಸುಳೆ ಅವರದ್ದೇ’ ಎಂದರು. ಇನ್ನು ದಿಲ್ಲಿಯಲ್ಲಿ ಮಾತನಾಡಿದ ಬಿಜೆಪಿ ವಕ್ತಾರ ಸಂಬಿತ್ ಪಾತ್ರ, ‘ಈ ಪ್ರಕರಣದ ಬಗ್ಗೆ ರಾಹುಲ್ ಗಾಂಧಿ ಅವರೇ ಉತ್ತರಿಸಬೇಕು’ ಎಂದು ಆಗ್ರಹಿಸಿದರು.
ಇದನ್ನೂ ಓದಿ: ಮತ ಸಮರ ಅಂತ್ಯ; ಮಹಾರಾಷ್ಟ್ರದಲ್ಲಿ ಶೇಕಡಾ 4ರಷ್ಟು ಮತದಾನ ಹೆಚ್ಚಳ
ಇದರ ನಡುವೆ ಆಡಿಯೋ ಬಿಡುಗಡೆ ಮಾಡಿದ್ದ ನಿವೃತ್ತ ಐಪಿಎಸ್ ಅಧಿಕಾರಿ ರವೀಂದ್ರನಾಥ ಪಾಟೀಲ್, ಚುನಾವಣಾ ಆಯೋಗ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಆದರೆ ತಮ್ಮ ಮೇಲಿನ ಆರೋಪವನ್ನು ಸುಪ್ರಿಯಾ ಸ್ಪಷ್ಟವಾಗಿ ಅಲ್ಲಗಳೆದಿದ್ದಾರೆ. ‘ಅಜಿತ್ ಪವಾರ್ ಅವರು ಏನು ಬೇಕಾದರೂ ಹೇಳಬಲ್ಲ ಶಕ್ತಿ ಹೊಂದಿದ್ದಾರೆ. ಆಡಿಯೋ ನಕಲಿ. ಅದನ್ನು ಕೃತಕ ಬುದ್ಧಿಮತ್ತೆ ಬಳಸಿ ಸೃಷ್ಟಿಸಲಾಗಿದೆ. ಇತ್ತೀಚೆಗೆ ಸಂಸದೆ ಸುಧಾಮೂರ್ತಿ ಧ್ವನಿಯನ್ನೂ ಹೀಗೇ ಮಾಡಲಾಗಿತ್ತು. ಈ ಕುರಿತು ತನಿಖೆ ನಡೆಸಬೇಕು ಎಂದು ನಾನು ಈಗಾಗಲೇ ದೂರು ಕೂಡಾ ನೀಡಿದ್ದೇನೆ‘ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರ ಮತಲಂಚ: ಪ್ರಮುಖ ಆರೋಪಿ ಶಫಿ ಬಂಧನ, ಅಮಾಯಕರ ಖಾತೆ ಮೂಲಕ ಅಕ್ರಮ ಹಣ ವರ್ಗಾವಣೆ