ಛತ್ತೀಸ್‌ಗಢದ ಬಿಜಾಪುರದಲ್ಲಿ ನಕ್ಸಲರು ಭದ್ರತಾ ಪಡೆಯ ವಾಹನವನ್ನು ಐಇಡಿ ಸ್ಫೋಟಿಸಿ 8 ಪೊಲೀಸರನ್ನು ಹತ್ಯೆಗೈದಿದ್ದಾರೆ. ದಾಂತೇವಾಡ ಜಿಲ್ಲಾ ಮೀಸಲು ಗಾರ್ಡ್‌ ವಲಯಕ್ಕೆ ಸೇರಿದ ಈ ಸಿಬ್ಬಂದಿ ಜಂಟಿ ಕಾರ್ಯಾಚರಣೆ ಮುಗಿಸಿ ವಾಪಸ್ ಬರುತ್ತಿದ್ದಾಗ ಈ ಘಟನೆ ನಡೆದಿದೆ.

ಛತ್ತೀಸ್‌ಗಢ: ಛತ್ತೀಸ್‌ಗಢದ ಬಿಜಾಪುರದಲ್ಲಿ ನಕ್ಸಲರು ಮತ್ತೊಂದು ವಿಧ್ವಂಸಕ ಕೃತ್ಯ ನಡೆಸಿದ್ದು 8 ಪೊಲೀಸರು ಹುತಾತ್ಮರಾಗಿದ್ದಾರೆ. ಭದ್ರತಾ ಪಡೆಯ ವಾಹನವನ್ನು ಐಇಡಿ ಇಟ್ಟು ಸ್ಫೋಟಿಸಿದ ಪರಿಣಾಮ ವಾಹನದಲ್ಲಿದ್ದ 8 ಜಿಲ್ಲಾ ಮೀಸಲು ಗಾರ್ಡ್‌ಗಳು ಸಾವನ್ನಪ್ಪಿದ್ದಾರೆ. ಬಸ್ತರ್ ಪ್ರದೇಶದ ಇನ್ಸ್‌ಪೆಕ್ಟರ್ ಜನರಲ್‌ ಆಫ್ ಪೊಲೀಸ್ ಸುಂದರರಾಜ್‌ ಪಿ ಸುದ್ದಿಸಂಸ್ಥೆ ಪಿಟಿಐಗೆ ಈ ಮಾಹಿತಿ ನೀಡಿದ್ದಾರೆ. ಬಿಜಾಪುರದ ಬೆದ್ರೆ ಕುತ್ರು ರಸ್ತೆಯಲ್ಲಿ ಭದ್ರತಾ ಪಡೆಗೆ ಸೇರಿದ ವಾಹನ ಹೋಗುತ್ತಿದ್ದಾಗ ಬಾಂಬ್ ಸ್ಫೋಟಿಸಿ ಈ ದುರಂತ ನಡೆದಿದೆ. 

ಈ ದುರಂತದಲ್ಲಿ ಹುತಾತ್ಮರಾದ ಭದ್ರತಾ ಸಿಬ್ಬಂದಿ ದಾಂತೇವಾಡ ಜಿಲ್ಲಾ ಮೀಸಲು ಗಾರ್ಡ್‌ ವಲಯಕ್ಕೆ ಸೇರಿದವರಾಗಿದ್ದಾರೆ. ದಾಂತೇವಾಡ ನಾರಾಯಣಪುರ ಹಾಗೂ ಬಿಜಾಪುರದಲ್ಲಿ ದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಸ್ಕಾರ್ಫಿಯೋದಲ್ಲಿ ವಾಪಸ್ ಬರುತ್ತಿದ್ದಾಗ ಈ ದುರಂತ ನಡೆದಿದೆ ಎಂದು ಬಸ್ತರ್‌ನ ಐಜಿ ಹೇಳಿದ್ದಾರೆ. ರಾಜ್ಯ ಪೊಲೀಸ್ ಪಡೆಯ ವಿಭಾಗವಾದ ಡಿಆರ್‌ಜಿ ಮೇಲೆ ಮಾವೋವಾದಿಗಳು ದಾಳಿ ನಡೆಸಿದ್ದು, ಈ ದಾಳಿಯೂ ಎರಡು ವರ್ಷಗಳಲ್ಲೇ ಈ ಪ್ರದೇಶದಲ್ಲಿ ನಕ್ಸಲರು ನಡೆಸಿದ ಅತೀ ದೊಡ್ಡ ದಾಳಿಯಾಗಿದೆ. ಇದಕ್ಕೂ ಮೊದಲು 2023ರ ಏಪ್ರಿಲ್‌ನಲ್ಲಿ ಭದ್ರತಾ ಪಡೆಯ ವಾಹನವನ್ನು ನಕ್ಸಲರು ಸ್ಫೋಟಿಸಿದಾಗ 10 ಪೊಲೀಸ್ ಸಿಬ್ಬಂದಿ ಹಾಗೂ ಓರ್ವ ನಾಗರಿಕ ಚಾಲಕ ಸಾವನ್ನಪ್ಪಿದ್ದರು. ದಾಂತೇವಾಡ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ಕರೆದೊಯ್ಯುತತ್ತಿದ್ದ ವಾಹನ ಇದಾಗಿತ್ತು. 

ಛತ್ತೀಸ್‌ಗಢದ ಉಪಮುಖ್ಯಮಂತ್ರಿ ಅರುಣ್ ಸಾವೊ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದು, ಇದೊಂದು 'ಹೇಡಿತನ'ದ ಕೃತ್ಯ ಎಂದು ಕರೆದಿದ್ದಾರೆ. ಸೈನಿಕರ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ, ಮಾರ್ಚ್ 2026 ರೊಳಗೆ ಬಸ್ತಾರ್ ಅನ್ನು ನಕ್ಸಲಿಸಂ ಮುಕ್ತಗೊಳಿಸುವ ಭರವಸೆಯನ್ನು ನಮ್ಮ ಸರ್ಕಾರ ಈಡೇರಿಸಲಿದೆ ಎಂದು ಅರುಣ್ ಸಾವೊ ಹೇಳಿದ್ದಾರೆ. 

ಶನಿವಾರದಿಂದ ಬಸ್ತರ್‌ನಲ್ಲಿ ನಕ್ಸಲ್ ವಿರುದ್ಧದ ಕಾರ್ಯಾಚರಣೆ ನಡೆಯುತ್ತಿದ್ದು, ಈ ಕಾರ್ಯಾಚರಣೆಯಲ್ಲಿ ಒಟ್ಟು 5 ನಕ್ಸಲರು ಹತ್ಯೆಯಾಗಿದ್ದಾರೆ. ನಾರಾಯಣ್‌ಪುರ ಹಾಗೂ ದಾಂತೇವಾಡ ಗಡಿ ಪ್ರದೇಶದ ದಕ್ಷಿಣ ಅಬುಜಾಮದ್‌ನ ಕಾಡಿನಲ್ಲಿ ಭದ್ರತಾ ಪಡೆ ಹಾಗೂ ನಕ್ಸಲರ ಮಧ್ಯೆ ಗುಂಡಿನ ಚಕಮಕಿ ಶುರುವಾಗಿತ್ತು. ಈ ಕಾರ್ಯಾಚರಣೆ ವೇಳೆ ಭಾನುವಾರ 4 ನಕ್ಸಲರು ಸಾವನ್ನಪ್ಪಿದ್ದರು, ಹಾಗೂ ಸ್ವಲ್ಪ ಹೊತ್ತಿನಲ್ಲಿ ಅದೇ ಪ್ರದೇಶದಲ್ಲಿ ಮತ್ತೊಂದು ನಕ್ಸಲ್‌ ಶವ ಪತ್ತೆಯಾಗಿತ್ತು.