ಸಿಬ್ಬಂದಿ ಕೊರತೆ ಹಿನ್ನೆಲೆಯಲ್ಲಿ ನಕ್ಸಲ್‌ ನಿಗ್ರಹ ಪಡೆಯ(ಎಎನ್‌ಎಫ್‌) 56 ಸಿಬ್ಬಂದಿಯನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದರು.

ಬೆಂಗಳೂರು (ಆ.05): ಸಿಬ್ಬಂದಿ ಕೊರತೆ ಹಿನ್ನೆಲೆಯಲ್ಲಿ ನಕ್ಸಲ್‌ ನಿಗ್ರಹ ಪಡೆಯ(ಎಎನ್‌ಎಫ್‌) 56 ಸಿಬ್ಬಂದಿಯನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ನಕ್ಸಲರು ಇಲ್ಲವೆಂದು ಘೋಷಣೆ ಮಾಡಿದ್ದೇವೆ. ಈ ಹಿನ್ನೆಲೆಯಲ್ಲಿ ನಕ್ಸಲ್‌ ನಿಗ್ರಹ ಪಡೆ ರದ್ದುಪಡಿಸಬೇಕೆಂಬ ಚರ್ಚೆ ನಡೆದಿತ್ತು. ಕೊನೆಗೆ ಎಎನ್‌ಎಫ್‌ ರದ್ದು ಮಾಡುವ ಬದಲು ಸಿಬ್ಬಂದಿ ಕಡಿತ ಮಾಡಲು ನಿರ್ಧರಿಸಲಾಯಿತು ಎಂದರು. ಎಎನ್‌ಎಫ್‌ನ ಕೆಲ ಸಿಬ್ಬಂದಿಯನ್ನು ವಿಶೇಷ ಕಾರ್ಯ ಪಡೆ (ಸ್ಪೆಷಲ್‌ ಆ್ಯಕ್ಷನ್‌ ಫೋರ್ಸ್‌)ನ ಶಿವಮೊಗ್ಗ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಭಾಗಗಳಿಗೆ ನೇಮಿಸಲಾಗಿದೆ. ಅಂತೆಯೇ ಬೆಂಗಳೂರಿನಲ್ಲೂ ಸಿಬ್ಬಂದಿ ಕೊರತೆ ಹಿನ್ನೆಲೆಯಲ್ಲಿ ಎಎನ್‌ಎಫ್‌ ಸಿಬ್ಬಂದಿ ತೆಗೆದುಕೊಂಡಿದ್ದೇವೆ ಎಂದರು.

ಸಂಘರ್ಷ ಬಿಟ್ಟು ಒಳಮೀಸಲು ಜಾರಿ: ‘ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಜಾರಿ ವೇಳೆ ಸಣ್ಣ ಪುಟ್ಟ ವ್ಯತ್ಯಾಸ ಬಂದರೂ ಸರಿದೂಗಿಸಿಕೊಂಡು ಹೋಗಬೇಕು. ಯಾವುದೇ ಸಂಘರ್ಷ ಉಂಟಾಗದಂತೆ ಒಳ ಮೀಸಲಾತಿ ಜಾರಿಗೆ ಸಹಕರಿಸಬೇಕು’ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ನೇತೃತ್ವದಲ್ಲಿ ನಡೆದ ಕಾಂಗ್ರೆಸ್‌ ದಲಿತ ಸಚಿವರು, ಶಾಸಕರ ಸಭೆಯಲ್ಲಿ ನಿರ್ಣಯ ಮಾಡಲಾಗಿದೆ. ನ್ಯಾ.ನಾಗಮೋಹನ್‌ ದಾಸ್ ನೇತೃತ್ವದ ಏಕಸದಸ್ಯ ಆಯೋಗ ಆ.4 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವರದಿ ಸಲ್ಲಿಸಲಿದೆ. ವರದಿ ಸಲ್ಲಿಕೆಯಾದ ಬಳಿಕ ಮತ್ತೊಮ್ಮೆ ಸಭೆ ಸೇರಿ ಚರ್ಚಿಸಿ ನಂತರ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ತೀರ್ಮಾನಿಸಲಾಗಿದೆ.

ಒಳ ಮೀಸಲಾತಿ ಜಾರಿ ವೇಳೆ ಯಾವುದೇ ವ್ಯತ್ಯಾಸಗಳು ಬಂದರೂ ಸರಿದೂಗಿಸಿಕೊಂಡು ಹೋಗಬೇಕು. ಯಾವುದೇ ಸಂಘರ್ಷ ಉಂಟಾಗದಂತೆ ಒಳ ಮೀಸಲಾತಿ ಜಾರಿ ಮಾಡಲು ಸಹಕರಿಸಬೇಕು. ಈಗ ಒಳ ಮೀಸಲಾತಿ ಜಾರಿಯಾಗದಿದ್ದರೆ ಮತ್ತಷ್ಟು ಕಾಲ ಮುಂದೆ ಹೋಗುತ್ತದೆ ಎಂದು ಪರಮೇಶ್ವರ್‌ ಅವರು ಎರಡೂ ಬಣದ ದಲಿತ ನಾಯಕರಿಗೆ ಎಚ್ಚರಿಕೆ ನೀಡಿದರು ಎಂದು ತಿಳಿದುಬಂದಿದೆ. ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರ ಸದಾಶಿವನಗರ ನಿವಾಸದಲ್ಲಿ ಸಚಿವರಾದ ಕೆ.ಎಚ್.ಮುನಿಯಪ್ಪ, ಎಚ್.ಸಿ.ಮಹದೇವಪ್ಪ, ಶಿವರಾಜ್‌ ತಂಗಡಗಿ, ಆರ್.ಬಿ.ತಿಮ್ಮಾಪುರ ಹಾಗೂ ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಶಾಸಕರು ಹಾಗೂ ಪರಿಷತ್‌ ಸದಸ್ಯರು ಭಾಗವಹಿಸಿದ್ದರು.

ದಲಿತ ಸಿಎಂ ಚರ್ಚೆ ನಡೆದಿಲ್ಲ ಎಂದ ನಾಯಕರು: ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಕೂಗು ಶುರುವಾಗಿರುವ ವೇಳೆಯಲ್ಲೇ ದಲಿತ ಶಾಸಕರು, ಸಚಿವರು ಸಭೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ದಲಿತ ಮುಖ್ಯಮಂತ್ರಿ ಚರ್ಚೆ ನಡೆಯಲಿದೆ ಎಂದು ಹೇಳಲಾಗಿತ್ತು. ಆದರೆ, ಸಭೆಯಲ್ಲಿ ಭಾಗವಹಿಸಿದ್ದ ಹಿರಿಯ ಸಚಿವರು ದಲಿತ ಮುಖ್ಯಮಂತ್ರಿ ಕುರಿತು ಯಾವುದೇ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಕೇವಲ ಪರಿಶಿಷ್ಟ ಜಾತಿ ಶಾಸಕರು, ಸಚಿವರಲ್ಲದೆ ಪರಿಶಿಷ್ಟ ಪಂಗಡದ ಕೆ.ಎನ್‌. ರಾಜಣ್ಣ, ಸತೀಶ್ ಜಾರಕಿಹೊಳಿ ಅವರು ಸಹ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ವೇಳೆ ಮಹತ್ವದ ರಾಜಕೀಯ ಚರ್ಚೆಗಳು ನಡೆಯಲಿವೆ ಎಂದು ಹೇಳಲಾಗಿತ್ತು.