National Youth Day: ಜಗತ್ತಿನಲ್ಲೇ ಭಾರತ ಶಕ್ತಿಯ ಉತ್ತುಂಗಕ್ಕೇರಲಿದೆ, ವಿವೇಕಾನಂದರ ಭವಿಷ್ಯ ನಿಜವಾಗಿಸೋಣ!
ಸ್ವಾಮಿ ವಿವೇಕಾನಂದರ (Vivekananda) ಜ್ಞಾನವು ಸ್ವಾಭಿಮಾನ ಮತ್ತು ರಾಷ್ಟ್ರೀಯ ಜಾಗೃತಿಯನ್ನು ಮರುಸ್ಥಾಪಿಸಿತು. ಅವರು ಜನಸಾಮಾನ್ಯರಿಗೆ ತಮ್ಮ ಪ್ರಗತಿಗಾಗಿ ಮತ್ತು ರಾಷ್ಟ್ರದ ಉನ್ನತಿಗಾಗಿ ಕೆಲಸ ಮಾಡುವಂತೆ ಕರೆ ನೀಡಿದರು.
ಸ್ವಾಮಿ ವಿವೇಕಾನಂದರ ಜಯಂತಿಯಾದ (Vivekananda Jayanti) ಜ.12ನ್ನು ರಾಷ್ಟ್ರೀಯ ಯುವ ದಿನ ಎಂದು ಕರೆಯಲಾಗುತ್ತಿದೆ. ಈ ದಿನ ಪ್ರತಿಯೊಬ್ಬ ವ್ಯಕ್ತಿಯಲ್ಲಿ ಗಮನಾರ್ಹವಾದ ಮಂಥನಕ್ಕೆ ಕಾರಣವಾಗುತ್ತದೆ. ಹೊಸ ವರ್ಷದ ಸಂದರ್ಭದಲ್ಲಿ ಮಾಡುವ ಸಾಧನೆಯ ಸಂಕಲ್ಪವನ್ನು ಮತ್ತಷ್ಟುಬಲಪಡಿಸಲು ಇದು ಮತ್ತೊಂದು ತ್ವರಿತ ಅವಕಾಶವಾಗಿದೆ.
ಆಜಾದಿ ಕಾ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ, ರಾಷ್ಟ್ರ ಸ್ವಾತಂತ್ರ್ಯದ ಶತಮಾನದವರೆಗೆ ಅಮೃತಕಾಲದ ಪರಿವರ್ತನಾ ಯಾತ್ರೆಯನ್ನು ಕೈಗೊಳ್ಳಲು ರಾಷ್ಟ್ರವು ನೀಲನಕ್ಷೆಯನ್ನು ಸಿದ್ಧಪಡಿಸುತ್ತಿದೆ. ಇಂದಿನ ಯುವ ಪೀಳಿಗೆಯು ರಾಷ್ಟ್ರದ ಈ ಉದ್ದೇಶಿತ ಪ್ರಯಾಣದಲ್ಲಿ ಅತ್ಯಂತ ಮಹತ್ವದ ಜವಾಬ್ದಾರಿಯನ್ನು ಹೊಂದಿದೆ. ಹೀಗಾಗಿ, ರಾಷ್ಟ್ರೀಯ ಯುವ ದಿನವು ಯುವಜನರ ಸಾಮರ್ಥ್ಯವನ್ನು ಹೊರತೆಗೆಯಲು ಮತ್ತು ಸಾಧ್ಯತೆಗಳನ್ನು ವಾಸ್ತವವಾಗಿ ಪರಿವರ್ತಿಸಲು ನೆರವಾಗುತ್ತದೆ.
ಜಗತ್ತಿಗೆ ಭಾರತದ ಶಕ್ತಿ ತೋರಿದರು
ಸ್ವಾಮಿ ವಿವೇಕಾನಂದರ ಜ್ಞಾನವು ಸ್ವಾಭಿಮಾನ ಮತ್ತು ರಾಷ್ಟ್ರೀಯ ಜಾಗೃತಿಯನ್ನು ಮರುಸ್ಥಾಪಿಸಿತು. ಅವರು ಜನಸಾಮಾನ್ಯರಿಗೆ ತಮ್ಮ ಪ್ರಗತಿಗಾಗಿ ಮತ್ತು ರಾಷ್ಟ್ರದ ಉನ್ನತಿಗಾಗಿ ಕೆಲಸ ಮಾಡುವಂತೆ ಕರೆ ನೀಡಿದರು. ಜನಮಾನಸದಲ್ಲಿ ವಿವೇಕಾನಂದರು ಮೂಡಿಸಿದ ವಿವೇಕವು ಬ್ರಿಟಿಷ್ ರಾಜ್‌ನ ಪ್ರತಿಕೂಲ ಪರಿಸ್ಥಿತಿಯ ಹೊರತಾಗಿಯೂ, ಭಾರತವು ಜೀವಂತವಾಗಿದೆ ಮತ್ತು ಪ್ರಪಂಚದ ಇತರ ರಾಷ್ಟ್ರಗಳಿಗೆ ಒಂದು ಸಂದೇಶವಾಗಿದೆ ಎಂಬ ನಂಬಿಕೆಗೆ ಕಾರಣವಾಯಿತು. ಶಿಕಾಗೋ ವಿಶ್ವ ಧರ್ಮ ಸಂಸತ್ತಿನಲ್ಲಿ ಅವರ ಭಾಗವಹಿಸುವಿಕೆ ಮತ್ತು ನಂತರದ ಪ್ರವಾಸಗಳು ಪಾಶ್ಚಿಮಾತ್ಯ ಜಗತ್ತಿಗೆ ವೇದಾಂತ ತತ್ವಶಾಸ್ತ್ರದ ಪರಿಚಯಕ್ಕೆ ಸಾಕ್ಷಿಯಾದವು. ದೇಶಭಕ್ತಿಯ ಭಾವನೆಗಳ ಮೊದಲ ಶಿಲ್ಪಿಯಾದ ಅವರು, ಮುಂದಿನ 50 ವರ್ಷಗಳವರೆಗೆ ಭಾರತ ಮಾತೆಯನ್ನು ದೇವರ ಹಾಗೆ ಆರಾಧಿಸುವಂತೆ ಭಾಷೆ, ಸಂಸ್ಕೃತಿ ಮತ್ತು ಧಾರ್ಮಿಕ ಭಿನ್ನತೆಗಳನ್ನು ಹೊಂದಿರುವ ದೇಶವಾಸಿಗಳಿಗೆ ಕರೆ ನೀಡಿದರು.
ವಿವೇಕಾನಂದರ 1893 ರ ಚಿಕಾಗೋ ಭಾಷಣಕ್ಕೆ 128 ವರ್ಷ: 9/11 ದಾಳಿಗಳಿಗೂ ಪರಿಹಾರಗಳಿವೆ ಎಂದ ಮೋದಿ!
2 ಭವಿಷ್ಯವಾಣಿಗಳು ನಿಜವಾಗಿವೆ
ಸ್ವಾಮಿ ವಿವೇಕಾನಂದರ ಕಾಲದಿಂದ ಈವರೆಗೆ ಪ್ರಪಂಚವು ಅನೇಕ ದೃಷ್ಟಿಯಲ್ಲಿ ಬದಲಾಗಿದೆ ಮತ್ತು ಎರಡು ಮಹಾಯುದ್ಧಗಳಿಗೆ ಸಾಕ್ಷಿಯಾಗಿದೆ. ವಿವೇಕಾನಂದರಿಗೆ ಐತಿಹಾಸಿಕ ಶಕ್ತಿಗಳ ಬಗೆಗಿನ ಆಧ್ಯಾತ್ಮಿಕ ಪ್ರಜ್ಞೆ, ಗಾಢವಾದ ಮತ್ತು ಬಲವಾದ ಅರಿವು ಇತ್ತು. ಆದ್ದರಿಂದಲೇ 19ನೇ ಶತಮಾನದ ಕೊನೆಯ ದಶಕದಲ್ಲಿ ಅವರು ಮಿಶಿಗನ್ ವಿಶ್ವವಿದ್ಯಾಲಯದಲ್ಲಿ ಮಾಡಿದ ಭಾಷಣದ ಮೂರು ಭವಿಷ್ಯವಾಣಿಗಳಲ್ಲಿ ಎರಡು ಭವಿಷ್ಯವಾಣಿಗಳು ನಿಜವಾದವು. ಮುಂದಿನ 50 ವರ್ಷಗಳಲ್ಲಿ ಭಾರತಕ್ಕೆ ಸ್ವಾತಂತ್ರ್ಯ, ರಷ್ಯಾದಲ್ಲಿ ಕಾರ್ಮಿಕ ಕ್ರಾಂತಿ ಮತ್ತು ಕಮ್ಯುನಿಸಂನ ಅವನತಿಯ ಬಗ್ಗೆ ಅವರ ಭವಿಷ್ಯವಾಣಿಗಳು ನಿಜವಾದವು.
ಭಾರತವು ಸಮೃದ್ಧಿ ಮತ್ತು ಶಕ್ತಿಯ ಎತ್ತರಕ್ಕೆ ಏರುವ ಮತ್ತೊಂದು ಭವಿಷ್ಯವು ನಿಜವಾಗಲು ಕಾಯುತ್ತಿದೆ. ಹೀಗಾಗಿ, ಯುವಜನರು ಈ ಭವಿಷ್ಯವನ್ನು ನಿಜವಾಗಿಸಲು ದೇಶವನ್ನು ಬಯಸಿದ ಎತ್ತರಕ್ಕೆ ಕೊಂಡೊಯ್ಯಲಿದ್ದಾರೆ. ರಾಷ್ಟ್ರ ನಿರ್ಮಾಣದಲ್ಲಿ ಯುವಜನರ ಪಾತ್ರದ ಮಹತ್ವದ ಬಗ್ಗೆ ಸ್ವಾಮಿ ವಿವೇಕಾನಂದರು, ‘ನನಗೆ ಯುವ ಪೀಳಿಗೆಯ ಮೇಲೆ, ಆಧುನಿಕ ತಲೆಮಾರಿನ ಮೇಲೆ ನಂಬಿಕೆ ಇದೆ. ಈ ತಲೆಮಾರಿನಿಂದ ನನ್ನ ಕಾರ್ಯಕರ್ತರು ಹೊರಬರುತ್ತಾರೆ. ಅವರು ಇಡೀ ಸಮಸ್ಯೆಯನ್ನು ಪರಿಹರಿಸಲು ಸಿಂಹಗಳಂತೆ ಕೆಲಸ ಮಾಡುತ್ತಾರೆ’ ಎಂದು ಹೇಳಿದ್ದರು.
ನಮ್ಮ ದೇಶ ಜಗತ್ತಿನಲ್ಲೇ ಯುವಕ!
ಭಾರತವು ಯುವ ಮತ್ತು ಮಹತ್ವಾಕಾಂಕ್ಷಿ ದೇಶವಾಗಿದೆ. ನಮ್ಮ ಜನಸಂಖ್ಯೆಯ ಶೇ.65ರಷ್ಟುಮಂದಿ 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ನಮ್ಮ ಜನಸಂಖ್ಯೆಯ ಶೇ.62ರಷ್ಟುಮಂದಿ 15-59 ವರ್ಷಗಳ ದುಡಿಯುವ ವಯಸ್ಸಿನ ಗುಂಪಿನಲ್ಲಿದ್ದಾರೆ. 2022-23ರಲ್ಲಿ ಭಾರತದಲ್ಲಿ ಜನರ ಸರಾಸರಿ ವಯಸ್ಸು 28 ವರ್ಷವಾಗಿದ್ದರೆ, ಚೀನಾದಲ್ಲಿ 37 ಮತ್ತು ಪಶ್ಚಿಮ ಯುರೋಪ್‌ನಲ್ಲಿ 45 ವರ್ಷಗಳಾಗಿವೆ. ಇದು ಭಾರತದ ದುಡಿಯುವ ಜನಸಂಖ್ಯೆಯು ದುಡಿಯದ ಜನರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿರುತ್ತದೆ ಎಂಬುದನ್ನು ಪ್ರತಿಬಿಂಬಿಸುತ್ತದೆ. ಇದು ಜನಸಂಖ್ಯೆಯ ಲಾಭದ ಅನುಕೂಲಕರ ಸ್ಥಿತಿಗೆ ಕಾರಣವಾಗುತ್ತದೆ.
ಸರ್ಕಾರದ ಪರಿಸರ ವ್ಯವಸ್ಥೆ ಮತ್ತು ಬಲವಾದ ನಾಯಕತ್ವದ ಬೆಂಬಲ ಪಡೆದಿರುವ ನಮ್ಮ ಯುವ ಪೀಳಿಗೆಯ ದೃಢ ನಿಶ್ಚಯವು ಸುದೀರ್ಘ ಪಯಣದ ಮೊಳಕೆಯನ್ನು ಪ್ರತಿಬಿಂಬಿಸುತ್ತಿದೆ. ಈಗ ಭಾರತ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ. ಹೆಚ್ಚುತ್ತಿರುವ ಯುನಿಕಾರ್ನ್ ಸ್ಟಾರ್ಟಪ್‌ಗಳು, ಒಲಿಂಪಿಕ್ಸ್‌ನಲ್ಲಿ ಭಾರತೀಯರ ಉತ್ತಮ ಪ್ರದರ್ಶನ, ಐಟಿ ಉದ್ಯಮದಲ್ಲಿ ಸಾಬೀತಾದ ಭಾರತದ ನಾಯಕತ್ವ, ಹೊರಹೊಮ್ಮುತ್ತಿರುವ ಮಹಿಳಾ ನಾಯಕತ್ವ, ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿ, ಬಾಹ್ಯಾಕಾಶ ಕ್ಷೇತ್ರದ ಸಾಧನೆಗಳು, ಲಸಿಕೆ ಅಭಿಯಾನ ಇತ್ಯಾದಿಗಳು ನಮಗೆ ಹೆಮ್ಮೆ ತಂದಿವೆ. ನಮ್ಮ ಆತ್ಮವು ಬಾಹ್ಯ ಜಗತ್ತಿನ ಉದ್ದೇಶಕ್ಕಾಗಿ ಕಾರ್ಯನಿರ್ವಹಿಸಲು ವೈಯಕ್ತಿಕ ಮತ್ತು ಸಾಮೂಹಿಕ ರೀತಿಯಲ್ಲಿ ಗಂಭೀರವಾದ ಆತ್ಮಾವಲೋಕನದ ಅಗತ್ಯವಿದೆ.
ಪ್ರಾಚೀನ ಜ್ಞಾನದಿಂದ ಕಲಿಯೋಣ
ಇಂದಿನ ಸಂಕೀರ್ಣ ಜಗತ್ತಿನ ಸವಾಲುಗಳು ಇಡೀ ಮನುಕುಲಕ್ಕೆ ಸವಾಲೊಡ್ಡುತ್ತಿವೆ. 21ನೇ ಶತಮಾನದ ಸವಾಲುಗಳ ವಿರುದ್ಧ ಸೆಣಸಲು ಯುವಜನರು ಭಾರತದ ಐತಿಹಾಸಿಕ ಮತ್ತು ಪ್ರಾಚೀನ ಜ್ಞಾನದಿಂದ ಕಲಿಯಬೇಕಾಗಿದೆ. ಇದನ್ನು ಸರಿಯಾಗಿ ನಿಭಾಯಿಸದಿದ್ದಲ್ಲಿ, ಬ್ರಹ್ಮಾಂಡದ ಅತ್ಯಂತ ಸುಂದರ ಸೃಷ್ಟಿಯಾದ ಮಾನವನ ವಿನಾಶ ಮತ್ತು ಬಿಕ್ಕಟ್ಟಿಗೆ ಕಾರಣವಾಗುವ ಗಂಭೀರ ಪರಿಣಾಮಗಳನ್ನು ಜಗತ್ತು ಎದುರಿಸಬೇಕಾಗುತ್ತದೆ. ಸಾಂಕ್ರಾಮಿಕ ರೋಗಗಳು, ಜಾಗತಿಕ ತಾಪಮಾನ, ಹವಾಮಾನ ಬದಲಾವಣೆ, ಜೈವಿಕ ಭಯೋತ್ಪಾದನೆ, ಮಾದಕ ವಸ್ತು ಕಳ್ಳಸಾಗಣೆ ಮತ್ತು ಬಾಹ್ಯಾಕಾಶ ಸಮರಗಳಿಂದ ಉದ್ಭವವಾಗುತ್ತಿರುವ ಬೆದರಿಕೆಗಳು ಯುವಕರು ತಮ್ಮ ಕ್ರಿಯೆಯ ಆಯಾಮಗಳನ್ನು ವಿಸ್ತರಿಸಲು ಅಗತ್ಯವಿರುವ ಕ್ಷೇತ್ರಗಳಾಗಿವೆ. ವಯಸ್ಸಾದ ಜನಸಂಖ್ಯೆಯ ಅವಶ್ಯಕತೆಗಳನ್ನು ಪೂರೈಸಲು ಯುವ ಪೀಳಿಗೆಯು ಸಹಾಯ ಹಸ್ತ ಚಾಚಬೇಕು ಮತ್ತು ಎಚ್ಚರಿಕೆಯ ಜವಾಬ್ದಾರಿಯನ್ನು ಹೊರಬೇಕು. ಈಗ ಯುವ ಪೀಳಿಗೆ ಹವಾಮಾನದ ಬಗ್ಗೆ ಹೆಚ್ಚು ಜಾಗೃತರಾಗಿರುವುದು ಸಂತಸದ ಸಂಗತಿಯಾಗಿದೆ.
Swami Vivekananda Jayanti: ವಿವೇಕಾನಂದರ ಕಲ್ಪನೆ ಮೋದಿ ಮೂಲಕ ಸಾಕಾರ
ಯುವಕರ ಕೈಲಿ ಬದಲಾವಣೆಯ ಜ್ಯೋತಿ
ಸದಾ ನಿರಂತರವಾಗಿರುವ ಒಂದು ವಿಷಯವೆಂದರೆ ‘ಬದಲಾವಣೆ.’ ಈಗ, ಯುವಕರು ಈ ಬದಲಾವಣೆಯ ಜ್ಯೋತಿಯನ್ನು ಹಿಡಿದಿದ್ದಾರೆ ಮತ್ತು ಅದರ ವೇಗ ಮತ್ತು ಪ್ರಮಾಣವು ಹಿಂದೆಂದಿಗಿಂತಲೂ ಹೆಚ್ಚುತ್ತಿದೆ. ಡಿಜಿಟಲ… ಆರ್ಥಿಕತೆಯಲ್ಲಿ ನಡೆಯುತ್ತಿರುವ ಮಾದರಿ ಬದಲಾವಣೆ ಮತ್ತು ಮೆಟಾವರ್ಸ್‌ನಂತಹ ಸಮಾನಾಂತರ ಉದಯೋನ್ಮುಖ ವರ್ಚುವಲ… ಪ್ರಪಂಚವು ಜಗತ್ತನ್ನು ಜಾಗತಿಕ ಗ್ರಾಮವನ್ನಾಗಿ ಮಾಡುತ್ತಿದೆ. ಇದು ‘ವಸುಧೈವ ಕುಟುಂಬಕಂ’ನ ಅರಿವು ಮೂಡಿಸುತ್ತಿದೆ. ಆದಾಗ್ಯೂ, ಅಂತಹ ಬೆಳವಣಿಗೆಗಳು ಮತ್ತು ಅವುಗಳ ಅಳವಡಿಕೆಗೆ ಗಂಭೀರವಾದ ಮತ್ತು ನಿರಂತರವಾದ ನೈತಿಕ ಮರುಚಿಂತನೆಯ ಅಗತ್ಯವಿರುತ್ತದೆ.
ಮುಂಬರುವ ಆವಿಷ್ಕಾರಗಳು ಮತ್ತು ತಾಂತ್ರಿಕ ಪ್ರಗತಿಗಳು ಮನುಕುಲದ ಹಿತವನ್ನು ಕಾಯುವ ಬಗ್ಗೆ ಜಾಗರೂಕರಾಗಿರುವುದು ಮತ್ತು ಅವುಗಳನ್ನು ತ್ವರಿತ ತಪಾಸಣೆಗೊಳಪಡಿಸುವುದು ಮೌಲ್ಯಾಧಾರಿತ ವ್ಯಕ್ತಿಗಳ ಜವಾಬ್ದಾರಿಯಾಗಿದೆ. ಅದರ ಬಗೆಗಿನ ನಿರ್ಲಕ್ಷ್ಯವು ಎಲ್ಲಾ ಪಾಲುದಾರರಿಗೆ ಭಾರಿ ಅನಾಹುತಗಳನ್ನು ಉಂಟುಮಾಡಬಹುದು. ಬಲವಾದ ವೈಯುಕ್ತಿಕ ತಳಹದಿಯ ಮೌಲ್ಯಗಳು ಸುಸ್ಥಿರ ರೀತಿಯಲ್ಲಿ ಸಾಮೂಹಿಕ ಒಳಿತನ್ನು ಸಾಧಿಸಬಹುದು. ಈ ಹಂತದಲ್ಲಿ ಪ್ರತಿಯೊಬ್ಬರೂ, ವಿಶೇಷವಾಗಿ ಯುವಜನರು, ಅಂತ್ಯದಷ್ಟೇ ಉದ್ದೇಶವೂ ಮುಖ್ಯವಾದುದು ಎಂಬುದನ್ನು ಅರಿತುಕೊಳ್ಳಲು ಇದು ಸಕಾಲವಾಗಿದೆ.
ವಿವೇಕರ ಕರೆ, ಮೋದಿಯಿಂದ ಪಾಲನೆ
ಕರ್ಮಯೋಗಿ ಸ್ವಾಮಿ ವಿವೇಕಾನಂದರು ಬೋಧಿಸಿದ ತೀವ್ರ ಚೈತನ್ಯದ ಚಟುವಟಿಕೆಗಳನ್ನು ಮೋದಿ ಸರ್ಕಾರ ಪಾಲಿಸುತ್ತಿದೆ. ಅದು ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿ ಪ್ರತಿಫಲಿಸುತ್ತಿದೆ. ಕಾಲಮಿತಿಯಲ್ಲಿ 150 ಕೋಟಿಗೂ ಹೆಚ್ಚು ಡೋಸ್ ಲಸಿಕೆಗಳನ್ನು ನೀಡುವುದು, 95ಕ್ಕೂ ಹೆಚ್ಚು ದೇಶಗಳಿಗೆ ದೇಶೀಯವಾಗಿ ತಯಾರಿಸಿದ ಲಸಿಕೆಗಳು ಮತ್ತು ನೆರವು ಒದಗಿಸುವ ಲಸಿಕೆ ಮೈತ್ರಿ ಉಪಕ್ರಮ, ಸ್ವಚ್ಛ ಭಾರತ ಅಭಿಯಾನ, ಮೂಲಸೌಕರ್ಯ ಅಭಿವೃದ್ಧಿ, ಆತ್ಮನಿರ್ಭರ ಭಾರತ ಅಭಿಯಾನ, ಅಂತರರಾಷ್ಟ್ರೀಯ ಸೌರ ಒಕ್ಕೂಟ ಅವುಗಳಲ್ಲಿ ಕೆಲವು. 2024-25ರ ವೇಳೆಗೆ ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಮತ್ತು ಜಗತ್ತಿನ ಜ್ಞಾನದ ಸೂಪರ್ ಪವರ್ ಮಾಡಲು ನೀತಿಗಳನ್ನು ವಿನ್ಯಾಸಗೊಳಿಸಲಾಗಿದೆ.
ರಾಷ್ಟ್ರೀಯ ಶಿಕ್ಷಣ ನೀತಿ, ಕೈಗಾರಿಕೆ-ಶಿಕ್ಷಣ ಸಂಬಂಧಗಳು, ವಾಣಿಜ್ಯೋದ್ಯಮ ಕೌಶಲ್ಯಗಳ ಪೋಷಣೆ, ವಿಶ್ವ ದರ್ಜೆಯ ಮೂಲಸೌಕರ್ಯ, ಕ್ರೀಡಾ ಸಂಸ್ಕೃತಿಯ ಉತ್ತೇಜನ, ಸುಧಾರಿತ ಆರ್ ಅಂಡ್ ಡಿ ಪರಿಸರ ವ್ಯವಸ್ಥೆ ಮುಂತಾದವು ಯುವಜನರನ್ನು ರಾಷ್ಟ್ರ ನಿರ್ಮಾಣದಲ್ಲಿ ಸೇರಿಸುವ ಕೆಲವು ಕ್ರಮಗಳಾಗಿವೆ. ದೃಢವಾದ ಕ್ರಮಗಳು ಸಮಾಜಗಳ ಕೆಳವರ್ಗದವರ ಸಾಮಾಜಿಕ ಉನ್ನತಿಗೆ ಮತ್ತು ನ್ಯಾಯಯುತ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತವೆ. ಆದಾಗ್ಯೂ, ನಾಗರಿಕ ಸಮಾಜಗಳು, ಸ್ಥಳೀಯ ಮತ್ತು ರಾಜ್ಯ ಸರ್ಕಾರಗಳು, ಖಾಸಗಿ ಪಾಲುದಾರರು, ಮಾಧ್ಯಮ ಮತ್ತು ಸಕ್ರಿಯ ನಾಗರಿಕರು ಮತ್ತು ಎಲ್ಲಾ ಇತರ ಸಂಬಂಧಿತ ಮಧ್ಯಸ್ಥಗಾರರ ತ್ವರಿತ ಪ್ರಯತ್ನಗಳೊಂದಿಗೆ ಇವುಗಳ ಅನುಷ್ಠಾನವಾಗಬೇಕಿದೆ.
ಈ ರಾಷ್ಟ್ರೀಯ ಯುವ ದಿನವು ರಾಷ್ಟ್ರೀಯ ಗುರಿಗಳೊಂದಿಗೆ ಸಂಯೋಜಿಸಲಾದ ನಮ್ಮ ವೈಯಕ್ತಿಕ ಗುರಿಯನ್ನು ಸಾಧಿಸಲು, ಸೂಕ್ತ ವಿಧಾನ ಮತ್ತು ಪಾತ್ರವನ್ನು ಒತ್ತಿಹೇಳುವ ಮೂಲಕ ಚಟುವಟಿಕೆಗಳ ಮನೋಭಾವವನ್ನು ಸುಧಾರಿಸಲು ಸೂಕ್ತವಾದ ಕ್ಷಣವಾಗಿದೆ. ಭಾರತವನ್ನು 21ನೇ ಶತಮಾನದ ನಾಯಕನನ್ನಾಗಿ ಮಾಡುವ ಸಾಧ್ಯತೆಗಳನ್ನು ಅಮೃತಕಾಲದ ಸಮಯದಲ್ಲಿ ನಮ್ಮ ಕ್ರಿಯೆಗಳಿಂದ ವಾಸ್ತವವಾಗಿ ಪರಿವರ್ತಿಸುವ ಮೂಲಕ ವಿವೇಕಾನಂದರ ಮೂರನೇ ಭವಿಷ್ಯವಾಣಿಯನ್ನು ನಿಜವಾಗಿಸೋಣ.
- ಅರ್ಜುನ್ ರಾಮ್ ಮೇಘವಾಲ್
- ಕೇಂದ್ರ ಸಂಸ್ಕೃತಿ ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ
(ಆಧಾರ: ಮೈ ಇಂಡಿಯಾ, ದಿ ಇಂಡಿಯಾ ಎಟರ್ನಲ್)