ಟೋಲ್ ಚಾರ್ಜ್‌ನಿಂದ ಬೇಸತ್ತು ಹೋಗಿದ್ದ ಸವಾರರಿಗೆ ಇದೀಗ ರಿಲೀಫ್ ಸಿಕ್ಕಿದೆ. ಇದೀಗ ಟೋಲ್ ಚಾರ್ಜ್ ಶೇಕಡಾ 50 ರಷ್ಟು ಇಳಿಕೆ ಮಾಡಿದೆ. ಇದರಿಂದ ಸದ್ಯ ಪಾವತಿ ಮಾಡುವ ಟೋಲ್ ಅರ್ಧದಷ್ಟು ಪಾವತಿ ಮಾಡಿದರೆ ಸಾಕು.

ನವದೆಹಲಿ (ಜು.05) ದೇಶದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಿಂದ ಸಾರಿಗೆ ವೆಚ್ಚ ದುಬಾರಿಯಾಗಿದೆ. ಇದರ ಜೊತೆಗೆ ಟೋಲ್ ಪಾವತಿ ಕೂಡ ದುಬಾರಿಯಾಗಿರುವ ಕಾರಣ ವಾಹನ ಸವಾರರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದರು. ದುಬಾರಿ ಟೋಲ್ ಚಾರ್ಜ್‌ನಿಂದ ಪ್ರಯಾಣ ಮತ್ತಷ್ಟು ದುಬಾರಿಯಾಗಿತ್ತು. ಇದೀಗ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಟೋಲ್ ದರ ಶೇಕಡಾ 50 ರಷ್ಟು ಕಡಿತ ಮಾಡಿದೆ. ರಾಷ್ಟ್ರೀಯ ಹೆದ್ದಾರಿ ಟೋಲ್ ದರ ಶೇಕಡಾ 50 ರಷ್ಟು ಕಡಿತ ಮಾಡಲಾಗಿದೆ. ಆದರೆ ಈ ಶೇಕಾಡ 50 ರಷ್ಟು ಕಡಿತದಲ್ಲಿ ಎಲ್ಲಾ ಟೋಲ್ ರಸ್ತೆ ಅನ್ವಯವಾಗುವುದಿಲ್ಲ. ಯಾವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುರಂಗ ಮಾರ್ಗ, ಫ್ಲೈ ಓವರ್, ಸೇತುವೆ ಸೇರಿದಂತೆ ಎಲಿವೇಟೆಡ್ ರಸ್ತೆಗಳ ರಚನೆ ಇದೆಯೋ ಈ ಟೋಲ್ ರಸ್ತೆಗಳ ದರ ಅರ್ಧದಷ್ಟು ಕಡಿತ ಮಾಡಲಾಗಿದೆ.

ರಾಷ್ಟ್ರೀಯ ಹೆದ್ದಾರಿಯ ಸೇತುವೆ,ಸುರಂಗ, ಫ್ಲೈಓವರ್ ಸೇರಿದಂತೆ ಎಲಿವೆಟೆಡ್ ರಸ್ತೆಗಳ ಟೋಲ್ ದರ ಪರಿಷ್ಕರಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಒಟ್ಟು ಉದ್ದದ ಐದುಪಟ್ಟು ಅಥವಾ ಎಲಿವೇಟೆಡ್ ಹೆದ್ದಾರಿ ಭಾಗದ ಒಟ್ಟು ಉದ್ದ ಇವೆಡರಲ್ಲಿ ಯಾವುದು ಕಡಿಮೆ ಆಗುತ್ತೋ ಅದರ ಪ್ರಕಾರ ಟೋಲ್ ಶುಲ್ಕ ವಿಧಿಸಲಾಗುತ್ತಿದೆ. ಇದು ಪರಿಷ್ಕೃತ ನಿಯಮವಾಗಿದೆ. ಇದರಿಂದ ಹೆದ್ದಾರಿಯ ಎಲಿವೇಟೆಡ್ ಟೋಲ್ ರಸ್ತೆಗಳ ಶುಲ್ಕ ಶೇಕಡಾ 50 ರಷ್ಟು ಕಡಿಮೆಯಾಗಲಿದೆ. ಇದರಿಂದ ವಾಹನ ಸವಾರರು ನಿರಾಳರಾಗಿದ್ದಾರೆ. ವಿಶೇಷ ರಚನೆಯಿರುವ ರಾಷ್ಟ್ರೀಯ ಹೆದ್ದಾರಿ ಭಾಗದಲ್ಲಿ ಆ ರಚನೆಯ ಉದ್ದವನ್ನು ಮೊದಲು 10 ರಿಂದ ಗುಣಿಸಿ, ಅದನ್ನು ಆ ವಿಭಾಗದ ಒಟ್ಟು ಉದ್ದಕ್ಕೆ ಸೇರಿಸಲಾಗುತ್ತದೆ. ನಂತರ ಆ ವಿಶೇಷ ರಚನೆಯ ಉದ್ದವನ್ನು ಮತ್ತೆ ಕಳೆಯಲಾಗುತ್ತದೆ. ಅದೇ ಸಮಯದಲ್ಲಿ, ಆ ವಿಭಾಗದ ಒಟ್ಟು ಉದ್ದವನ್ನು 5 ರಿಂದ ಗುಣಿಸಲಾಗುತ್ತದೆ. ಈ ಎರಡು ಲೆಕ್ಕಗಳಲ್ಲಿ ಯಾವುದು ಕಡಿಮೆ ಬರುತ್ತದೆಯೋ ಅದನ್ನು ಆಧರಿಸಿ ಟೋಲ್ ಶುಲ್ಕ ನಿರ್ಧರಿಸಲಾಗುತ್ತದೆ.

ಈ ರಿಯಾಯಿತಿ ನಿರ್ಧಾರದಿಂದ ದೂರದ ಪ್ರಯಾಣ ಮಾಡುವವರಿಗೆ ಹೆಚ್ಚಿನ ಲಾಭವಾಗಲಿದೆ. ಪ್ರಸ್ತುತ ಕೆಲವು ಪ್ರದೇಶಗಳಲ್ಲಿ ಪ್ರಯಾಣಿಕರು ಸಣ್ಣ ಮೇಲ್ಸೇತುವೆಗಳಿಗೂ ಭಾರಿ ಟೋಲ್ ಪಾವತಿಸಬೇಕಾಗುತ್ತದೆ. ಇದರಿಂದ ಅವರ ಪ್ರಯಾಣ ವೆಚ್ಚ ಹೆಚ್ಚಾಗುತ್ತಿದೆ. ಹೊಸ ಮಾರ್ಗಸೂಚಿಗಳು ಆ ಭಾರವನ್ನು ಗಣನೀಯವಾಗಿ ಕಡಿಮೆ ಮಾಡಲಿವೆ.

2008ರ ಟೋಲ್ ಶುಲ್ಕ ನಿಯಮಕ್ಕೆ ತಿದ್ದುಪಡಿ

ಹೆದ್ದಾರಿಗಳಲ್ಲಿ ಟೋಲ್ ಪ್ಲಾಜಾಗಳಲ್ಲಿ ಟೋಲ್ ಶುಲ್ಕ ವಿಧಿಸಲು 2008ರ ಟೋಲ್ ಪ್ಲಾಜಾ ನಿಯಮ ಅನುಸರಿಸಲಾಗುತ್ತದೆ. ಇದೀಗ 2008ರ ಈ ಟೋಲ್ ಪ್ಲಾಜಾ ನಿಯಮಕ್ಕೆ ತಿದ್ದುಪಡಿ ತರಲಾಗಿದೆ. ಈ ಮೂಲಕ ಹೊಸ ಟೋಲ್ ದರ ಜಾರಿಗೆ ಮಾಡಲಾಗಿದೆ. ಸದ್ಯ ಮಾಡಿರುವ ತಿದ್ದುಪಡಿ ಹೆದ್ದಾರಿ ರಸ್ತೆಯ ಸುರಂಗ, ಫ್ಲೈಓವರ್, ಸೇತುವೆ ಸೇರಿದಂತೆ ಎಲಿವೇಟೆಡ್ ಟೋಲ್ ರಸ್ತೆಗಳಿಗೆ ಅನ್ವಯವಾಗಲಿದೆ.

ದ್ವಿಚಕ್ರ ವಾಹನಕ್ಕಿಲ್ಲ ಟೋಲ್

ಇತ್ತೀಚೆಗೆ ಹೆದ್ದಾರಿ ರಸ್ತೆಗಳ ಟೋಲ್‌ಗಳಲ್ಲಿ ದ್ವಿಚಕ್ರ ವಾಹನ್ಕೂ ಟೋಲ್ ಶುಲ್ಕ ವಿಧಿಸಲಾಗುತ್ತದೆ ಅನ್ನೋ ಮಾತುಗಳು ಕೇಳಿಬಂದಿತ್ತು. ಆದರೆ ಈ ಕುರಿತು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿಕ್ ಗಡ್ಕರಿ ಸ್ಪಷ್ಟನೆ ನೀಡಿದ್ದರು. ಈ ರೀತಿಯ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದರು. ರಾಷ್ಟ್ರೀಯ ಹೆದ್ದಾರಿ ರಸ್ತೆಗಳಲ್ಲಿ ದ್ವಿಚಕ್ರ ವಾಹನಕ್ಕೆ ಟೋಲ್ ಶುಲ್ಕ ವಿಧಿಸುವುದಿಲ್ಲ. ಇದು ಸತ್ಯಕ್ಕೆ ದೂರವಾದ ಮಾಹಿತಿ. ಕೇಂದ್ರ ಸರ್ಕಾರದ ಮುಂದೆ ದ್ವಿಚಕ್ರ ವಾಹನಕ್ಕೆ ಟೋಲ್ ಶುಲ್ಕ ವಿಧಿಸುವ ಯಾವುದೇ ಆಲೋಚನೆಯೂ ಇಲ್ಲ ಎಂದು ನಿತಿನ್ ಗಡ್ಕರಿ ಸ್ಪಷ್ಟಪಡಿಸಿದ್ದರು.