ರಾಹುಲ್ ವಿಚಾರಣೆಗೆ ಪ್ರತಿಭಟನೆ, ಪೊಲೀಸರ ಮೇಲೆ ಉಗುಳಿದ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ!
- ರಾಹುಲ್ ಗಾಂಧಿ ಇಡಿ ವಿಚಾರಣೆ ವಿರೋಧಿಸಿ ಭಾರಿ ಪ್ರತಿಭಟನೆ
- ವಶಕ್ಕೆ ಪಡೆದ ಪೊಲೀಸರ ಮೇಲೆ ಉಗುಳಿದ ನೆಟ್ಟಾ ಡಿಸೋಜಾ
- ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ವಿರುದ್ಧ ವ್ಯಾಪಕ ಆಕ್ರೋಶ
ನವದೆಹಲಿ(ಜೂ.21): ನ್ಯಾಷನ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ರಾಹುಲ್ ಗಾಂಧಿಯನ್ನು ಇಡಿ ಅಧಿಕಾರಿಗಳು ಸತತ ವಿಚಾರಣೆ ನಡೆಸುತ್ತಿದ್ದಾರೆ. ಇಡಿ ವಿಚಾರಣೆ ವಿರೋಧಿಸಿ ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದೆ. ಉಗ್ರ ಪ್ರತಿಭಟನೆ ಮಾಡುತ್ತಿದ್ದ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ನೆಟ್ಟಾ ಡಿಸೋಜಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಡಿಸೋಜಾ ಪೊಲೀಸರ ಮೇಲೆ ಉಗುಳಿ ಎಲ್ಲರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.
ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರು , ನಾಯಕರು ಬ್ಯಾರಿಕೇಡ್ ತಳ್ಳಿ ಪೊಲೀಸರ ಮೇಲೆ ನೂಕಾಟ ತಳ್ಳಾಟ ನಡೆಸಿದ್ದಾರೆ. ಇದರಿಂದ ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ನೆಟ್ಟಾ ಡಿಸೋಜಾ ಅವರನ್ನು ವಶಕ್ಕೆ ಪಡೆದ ಪೊಲೀಸರು ವಾಹನದೊಳಕ್ಕೆ ಕೂಡಿ ಹಾಕಲು ಯತ್ನಿಸಿದ್ದಾರೆ. ಈ ವೇಳೆ ನೆಟ್ಟಾ ಡಿಸೋಜಾ ಮಹಿಳಾ ಪೊಲೀಸರ ಮೇಲೆ ಉಗುಳಿದ್ದಾರೆ.
ಹೆರಾಲ್ಡ್ ವಿಚಾರಣೆಗೆ ಟ್ವಿಸ್ಟ್ ಕೊಟ್ಟರಾ ರಾಹುಲ್ ಗಾಂಧಿ? ಸುದೀರ್ಘ ವಿಚಾರಣೆ, ಏನಿದರ ಗುಟ್ಟು?
ನೆಟ್ಟಾ ಡಿಸೋಜಾ ಅವರ ಈ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಅನಾಗರೀಕರಂತೆ ವರ್ತಿಸುತ್ತಿದ್ದಾರೆ. ಕರ್ತವ್ಯ ನಿರತ ಪೊಲೀಸ್ ಮೇಲೆ ಈ ರೀತಿಯ ವರ್ತನೆ ದೇಶ ಸಹಿಸುವುದಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಇಷ್ಟೇ ಅಲ್ಲ ಯಾರ ಮೇಲೂ ಉಗುಳುವಂತಿಲ್ಲ. ಜೊತೆಗೆ ಕೋವಿಡ್ ಸಮಯದಲ್ಲಿ ರಸ್ತೆಯಲ್ಲಿ ಉಗುಳಿದರೂ ನಿಯಮ ಉಲ್ಲಂಘನೆಯಾಗಿದೆ. ಹೀಗಿರುವಾಗ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆಯನ್ನು ಬಂಧಿಸಬೇಕು ಎಂಬ ಆಗ್ರಹವೂ ಕೇಳಿಬರುತ್ತಿದೆ.
ಇಡಿ ವಿಚಾರಣೆ ವಿರೋಧಿಸಿ ಕಾಂಗ್ರೆಸ್ ಸತತ ಹೋರಾಟ ನಡೆಸುತ್ತಿದೆ. ಉಗ್ರ ಸ್ವರೂಪದ ಹೋರಾಟ ನಡೆಸುತ್ತಿದೆ. ರಾಹುಲ್ ವಿಚಾರಣೆ ಭಾರತದ ಪ್ರಜಾಪ್ರಭುತ್ವ ದ್ವನಿಯನ್ನು ಸದ್ದಗಡಿಸುವ ಪ್ರಯತ್ನ ಅನ್ನೋ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ಕಾಂಗ್ರೆಸ್ ನಾಯಕರು ಪ್ರತಿಭಟನೆಯಲ್ಲಿ ವೀರಾವೇಷದಿಂದ ನಡೆದುಕೊಳ್ಳುತ್ತಿದ್ದಾರೆ.
ರಾಹುಲ್ ಗಾಂಧಿಗೆ ವಿಚಾರಣೆ ಸಂಕಷ್ಟ
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರನ್ನು ನ್ಯಾಷನಲ್ ಹೆರಾಲ್ಡ್ ಪರಭಾರೆ ಅಕ್ರಮಕ್ಕೆ ಸಂಬಂಧಿಸಿದಂತೆ 5ನೇ ದಿನವೂ ಜಾರಿ ನಿರ್ದೇಶನಾಲಯ (ಇ.ಡಿ.) ವಿಚಾರಣೆ ನಡೆಸುತ್ತಿದೆ. ಸೋಮವಾರ ಬೆಳಗ್ಗೆ 11.05ಕ್ಕೆ ರಾಹುಲ್ ಇ.ಡಿ. ಕಚೇರಿಗೆ ಹಾಜರಾಗಿ ಮಧ್ಯಾಹ್ನ 3 ಗಂಟೆವರೆಗೆ ಮೊದಲ ಹಂತದ ವಿಚಾರಣೆ ಎದುರಿಸಿದ ರಾಹುಲ್, ಭೋಜನ ವಿರಾಮದ ನಂತರ ಮತ್ತೆ 4.30ಕ್ಕೆ ಕಚೇರಿಗೆ ಮರಳಿದರು. ರಾತ್ರಿ 8ರವರೆಗೂ ವಿಚಾರಣೆ ಎದುರಿಸಿದರು. ಇದರಿಂದಾಗಿ 4 ದಿನದಲ್ಲಿ 40 ತಾಸು ವಿಚಾರಣೆಯನ್ನು ರಾಹುಲ್ ಎದುರಿಸಿದಂತಾಗಿದೆ. ಬಳಿಕ ಮಂಗಳವಾರ ಮತ್ತೆ ವಿಚಾರಣೆಗೆ ಹಾಜರಾಗಿದ್ದಾರೆ.
ರಾಹುಲ್ ವಿಚಾರಣೆ: ದೇಶಾದ್ಯಂತ ರಾಜಭವನ ಚಲೋ- ಇಡಿ, ಪೊಲೀಸ್ ವಿರುದ್ಧ ಕಾಂಗ್ರೆಸ್ ರೋಷಾವೇಷ
ರಾಹುಲ್ ಕೆಲವು ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸುತ್ತಿಲ್ಲ. ಹೀಗಾಗಿ ಅವರ ವಿಚಾರಣೆ ಇ.ಡಿ.ಗೆ ತೃಪ್ತಿ ತರುತ್ತಿಲ್ಲ. ಆದ್ದರಿಂದ ಅವರನ್ನು ವಿಚಾರಣೆಗೆ ಪದೇ ಪದೇ ಕರೆಯಲಾಗುತ್ತಿದೆ ಎಂದು ಕೆಲವು ಮಾಧ್ಯಮ ವರದಿಗಳು ಹೇಳಿವೆ.
ಕೋವಿಡೋತ್ತರ ಆರೋಗ್ಯ ಸಮಸ್ಯೆಗಳು ಹಾಗೂ ಶ್ವಾಸಕೋಶದ ಸೋಂಕಿಗೆ ತುತ್ತಾಗಿದ್ದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸೋಮವಾರ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಕಳೆದ 13ರಂದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ಶ್ವಾಸಕೋಶದ ಸೋಂಕಿಗೆ ಚಿಕಿತ್ಸೆ ನೀಡಲಾಗಿತ್ತು. ‘ಸೋನಿಯಾ ಈಗ ಡಿಸ್‌ಚಾಜ್‌ರ್ ಆಗಿದ್ದು, ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡ ಜೈರಾಂ ರಮೇಶ್ ಹೇಳಿದ್ದಾರೆ. ಜೂ.23ರಂದು ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಅವರು ಜಾರಿ ನಿರ್ದೇಶನಾಲಯದ (ಇ.ಡಿ.) ವಿಚಾರಣೆಗೆ ಹಾಜರಾಗಬೇಕಿದೆ.