ಪ್ರಧಾನಿ ನರೇಂದ್ರ ಮೋದಿಯವರು, ಫ್ರೆಂಡ್‌ಶಿಪ್ ಡೇಯಷ್ಟೇ ಉತ್ಸಾಹದಿಂದ ಆಗಸ್ಟ್ 7ರ ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಿಸಲು ಯುವಜನರಿಗೆ ಕರೆ ನೀಡಿದ್ದಾರೆ. ವಿಡಿಯೋದಲ್ಲಿ ಏನೆಲ್ಲ ಮನವಿ ಮಾಡಿದರು ಅನ್ನೋ ವಿವರ ಇಲ್ಲಿದೆ..
ನವದೆಹಲಿ: ದೇಶದಾದ್ಯಂತ ಯುವಜನರು 'ಫ್ರೆಂಡ್‌ಶಿಪ್ ಡೇ' (ಸ್ನೇಹಿತರ ದಿನಾಚರಣೆ) ಎಷ್ಟು ಉತ್ಸಾಹದಿಂದ ಆಚರಿಸಿದರೋ ಅದೇ ಉತ್ಸಾಹ ಮತ್ತು ಪ್ರೀತಿಯಿಂದ ಆಗಸ್ಟ್ 7ರಂದು 'ರಾಷ್ಟ್ರೀಯ ಕೈಮಗ್ಗ ದಿನ'ವನ್ನು (National Handloom Day) ಆಚರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಭಾರತೀಯ ಕೈಮಗ್ಗ ಉತ್ಪನ್ನಗಳನ್ನು ಖರೀದಿಸಿ ದೇಶದ ಲಕ್ಷಾಂತರ ನೇಕಾರರ ಜೀವನಕ್ಕೆ ಆಸರೆಯಾಗಬೇಕು ಎಂದು ಅವರು ಜನರಲ್ಲಿ ಮನವಿ ಮಾಡಿದ್ದಾರೆ.
ಪ್ರಧಾನಿ ಮೋದಿ ಗುರುವಾರ ತಮ್ಮ ಇನ್‌ಸ್ಟಾಗ್ರಾಮ್ ಹಾಗೂ ಎಕ್ಸ್ (ಟ್ವಿಟರ್) ಖಾತೆಗಳಲ್ಲಿ ನೇರ ವಿಡಿಯೋ ಸಂದೇಶ ಹಂಚಿಕೊಂಡಿದ್ದಾರೆ. ವಿಶೇಷವಾಗಿ ಇಂದಿನ ಯುವ ಪೀಳಿಗೆ (ಜೆನ್ ಜಿ - Gen Z) ಯೊಂದಿಗೆ ಸಾಮಾಜಿಕ ಮಾಧ್ಯಮಗಳ ಮೂಲಕ ನೇರ ಸಂಪರ್ಕ ಸಾಧಿಸುವ ಪ್ರಯತ್ನವಾಗಿ ವಿಡಿಯೋ ಹಂಚಿಕೊಳ್ಳಲಾಗಿದೆ.
ಫ್ರೆಂಡ್‌ಶಿಪ್ ಡೇ ಉದಾಹರಣೆ..
ವಿಡಿಯೋದಲ್ಲಿ ಮಾತನಾಡಿದ ಪ್ರಧಾನಿಯವರು, ಫ್ರೆಂಡ್‌ಶಿಪ್ ಡೇ ಸಂದರ್ಭದಲ್ಲಿ ಯುವಕರು ತಮ್ಮ ಸ್ನೇಹಿತರಿಗೆ ಬ್ಯಾಂಡ್ ಕಟ್ಟಿ ಪ್ರೀತಿ ಮತ್ತು ಸ್ನೇಹವನ್ನು ಹಂಚಿಕೊಂಡ ರೀತಿಯನ್ನು ನೆನಪಿಸಿಕೊಂಡರು. ಅದೇ ಮಾದರಿಯಲ್ಲಿ ಭಾರತೀಯ ಕೈಮಗ್ಗ ಪರಂಪರೆ ಗೌರವಿಸುತ್ತಾ ರಾಷ್ಟ್ರೀಯ ಕೈಮಗ್ಗ ದಿನವನ್ನೂ ಆಚರಿಸಬೇಕು ಎಂದು ಸೂಚಿಸಿದರು. ನೀವು ಫ್ರೆಂಡ್‌ಶಿಪ್ ಡೇ ಅನ್ನು ಎಷ್ಟು ಆತ್ಮೀಯವಾಗಿ ಆಚರಿಸಿದಿರೋ, ಅದೇ ಉತ್ಸಾಹದಿಂದ ಹ್ಯಾಂಡ್‌ಲೂಮ್ ಡೇಯನ್ನೂ ಆಚರಿಸಿ ಎಂದು ಮೋದಿ ಕರೆ ನೀಡಿದ್ದಾರೆ. ರಾಷ್ಟ್ರೀಯ ಕೈಮಗ್ಗ ದಿನವನ್ನು ಕೇವಲ ಸಾಂಕೇತಿಕ ಆಚರಣೆಯಾಗಿ ಸೀಮಿತಗೊಳಿಸದೆ, ಕೈಮಗ್ಗ ಉತ್ಪನ್ನಗಳನ್ನು ನಿಯಮಿತವಾಗಿ ಖರೀದಿಸುವ ಮೂಲಕ, ಧರಿಸುವ ಮೂಲಕ ಮತ್ತು ಬಳಸುವ ಮೂಲಕ ಅದಕ್ಕೊಂದು ನಿಜವಾದ ಅರ್ಥವನ್ನು ತರಬೇಕು ಎಂದು ಮೋದಿ ಆಶಿಸಿದರು. ಇದರಿಂದ ದೇಶೀಯ ಕೈಮಗ್ಗ ಕ್ಷೇತ್ರಕ್ಕೆ ಮತ್ತು ನೇಕಾರರ ಜೀವನೋಪಾಯಕ್ಕೆ ಬಲವಾದ ಬೆಂಬಲ ಸಿಗುತ್ತದೆ ಎಂದು ಅವರು ತಿಳಿಸಿದರು.
ಪ್ರತಿಯೊಂದು ಕೈಮಗ್ಗ ಉತ್ಪನ್ನದ ಹಿಂದೆ ಒಬ್ಬ ನೇಕಾರನ ಕಠಿಣ ಶ್ರಮ, ಕೌಶಲ್ಯ ಮತ್ತು ಸಮರ್ಪಣಾ ಮನೋಭಾವ ಅಡಗಿರುತ್ತದೆ ಎಂದು ಪ್ರಧಾನಿ ತಿಳಿಸಿದರು. ಇಂತಹ ಉತ್ಪನ್ನಗಳನ್ನು ಖರೀದಿಸುವುದರಿಂದ ದೇಶದಾದ್ಯಂತ ಇರುವ ಲಕ್ಷಾಂತರ ನೇಕಾರರ ಕುಟುಂಬಗಳಿಗೆ ಆರ್ಥಿಕ ನೆರವು ಸಿಗುತ್ತದೆ. ತಲೆಮಾರುಗಳಿಂದ ಸಾಂಪ್ರದಾಯಿಕ ಕಲೆಯನ್ನು ಉಳಿಸಿಕೊಂಡು ಅದನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುತ್ತಿರುವ ನೇಕಾರ ಸಮುದಾಯವನ್ನು ಪ್ರಧಾನಿ ಮೋದಿ ಶ್ಲಾಘಿಸಿದರು.
ವೋಕಲ್ ಫಾರ್ ಲೋಕಲ್’ಗೆ ಶಕ್ತಿ
ಕೈಮಗ್ಗದ ವಸ್ತ್ರಗಳನ್ನು ಆಯ್ಕೆ ಮಾಡಿಕೊಳ್ಳುವುದು ಕೇವಲ ಫ್ಯಾಷನ್ ಮಾತ್ರವಲ್ಲ; ಇದು ಸ್ಥಳೀಯ ಕಲಾವಿದರನ್ನು ಬೆಂಬಲಿಸುವ, ಭಾರತೀಯ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸುವ ಮತ್ತು 'ವೋಕಲ್ ಫಾರ್ ಲೋಕಲ್' ಪರಿಕಲ್ಪನೆಯನ್ನು ಬಲಪಡಿಸುವ ಕಾರ್ಯವಾಗಿದೆ ಎಂದು ಪ್ರಧಾನಿ ಹೇಳಿದರು. ದೇಶೀಯ ವಸ್ತ್ರಗಳ ಬಗ್ಗೆ ಮತ್ತು ಅವುಗಳನ್ನು ತಯಾರಿಸುವ ಕಲಾವಿದರ ಬಗ್ಗೆ ವಿಶೇಷವಾಗಿ ಯುವ ಜನತೆಯಲ್ಲಿ ಹೆಚ್ಚಿನ ಒಲವು ಬೆಳೆಯಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು. ಪ್ರತಿ ವರ್ಷ ಆಗಸ್ಟ್ 7 ರಂದು ದೇಶಾದ್ಯಂತ ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಿಸಲಾಗುತ್ತದೆ. 1905 ರಲ್ಲಿ ಇದೇ ದಿನದಂದು ಪ್ರಾರಂಭವಾದ ಸ್ವದೇಶಿ ಚಳವಳಿಯ ನೆನಪಿಗಾಗಿ ಮತ್ತು ದೇಶದ ಸಂಸ್ಕೃತಿ ಹಾಗೂ ಆರ್ಥಿಕತೆಗೆ ಭಾರತೀಯ ಕೈಮಗ್ಗ ಕ್ಷೇತ್ರವು ನೀಡುತ್ತಿರುವ ಕೊಡುಗೆಯನ್ನು ಗುರುತಿಸಿ ಈ ದಿನವನ್ನು ಆಚರಿಸಲಾಗುತ್ತಿದೆ. ಕೇಂದ್ರ ಸರ್ಕಾರವು 2015 ರಿಂದ ಅಧಿಕೃತವಾಗಿ ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಿಸುತ್ತಾ ಬಂದಿದ್ದು, ಸ್ವದೇಶಿ ವಸ್ತ್ರಗಳನ್ನು ಉತ್ತೇಜಿಸಲು ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಇತ್ತೀಚಿನ ದಿನಗಳಲ್ಲಿ ಪ್ರಧಾನಿ ಮೋದಿ ಅವರು ಸಾಮಾಜಿಕ ಮಾಧ್ಯಮಗಳ ಮೂಲಕ ನೇರವಾಗಿ ಜನರನ್ನು ಉದ್ದೇಶಿಸಿ ವಿಡಿಯೋ ಸಂದೇಶಗಳನ್ನು ನೀಡುತ್ತಿದ್ದು ಈ ಮೂಲಕ ವಿವಿಧ ರಾಷ್ಟ್ರೀಯ ಕಾರ್ಯಕ್ರಮಗಳು ಮತ್ತು ಸಾಮಾಜಿಕ ವಿಚಾರಗಳ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ವಿಶೇಷವಾಗಿ ಯುವ ಜನಾಂಗವನ್ನು ಆಕರ್ಷಿಸುವಲ್ಲಿ ಇಂತಹ ವಿಡಿಯೋಗಳು ಯಶಸ್ವಿಯಾಗುತ್ತಿವೆ.


