ಸರ್ಕಾರಿ ನೇಮಕಾತಿ ಪರೀಕ್ಷೆಗಳಲ್ಲಿನ ಅಕ್ರಮಗಳನ್ನು ಖಂಡಿಸಿ ಜಾರ್ಖಂಡ್‌ನಲ್ಲಿ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಸಿಎಂ ಹೇಮಂತ್ ಸೊರೇನ್ ಅವರ ರಾಜೀನಾಮೆಗೆ ಆಗ್ರಹಿಸುತ್ತಿರುವ ಪ್ರತಿಭಟನಾಕಾರರೊಂದಿಗೆ ಸರ್ಕಾರ ಮಾತುಕತೆಗೆ ಮುಂದಾಗಿದೆ.

ರಾಂಚಿ (ಜು7): ಸರ್ಕಾರಿ ಕೆಲಸಗಳ ನೇಮಕಾತಿ ಪರೀಕ್ಷೆಗಳಲ್ಲಿ ಆಗುತ್ತಿರುವ ಅಕ್ರಮಗಳನ್ನು ಖಂಡಿಸಿ ಜು.25ರಿಂದ ಪ್ರತಿಭಟನೆ ನಡೆಸುತ್ತಿರುವ ಉದ್ಯೋಗಾಕಾಂಕ್ಷಿಗಳು, ಧರ್ಮೇಂದ್ರ ಪ್ರಧಾನ್‌ ಅವರ ರೀತಿ ಸಿಎಂ ಹೇಮಂತ್‌ ಸೊರೇನ್‌ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಸರ್ಕಾರಿ ನೌಕರಿಗಳನ್ನ ತರಕಾರಿ ರೀತಿ ಮಾರಲಾಗುತ್ತಿದೆ!

ಜೈಪಾಲ್ ಸಿಂಗ್ ಮುಂಡಾ ಸ್ಟೇಡಿಯಂನಲ್ಲಿ ಜು.25ರಿಂದ ಉಪವಾಸ ಮಾಡುತ್ತಿರುವ 6 ಜನರಲ್ಲಿ ಒಬ್ಬರಾದ ಸಬಿತಾ ಕುಮಾರಿ ಮಾತನಾಡಿ, ‘ನಮ್ಮ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ. ನೌಕರಿಗಳನ್ನು ತರಕಾರಿಯ ರೀತಿ ಮಾರಲಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜತೆಗೆ, ‘ಏಪ್ರಿಲ್‌ನಲ್ಲಿ ನಡೆದ ಜಾರ್ಖಂಡ್ ಪಿಎಸ್‌ಸಿ ನಾಗರಿಕ ಸೇವೆಗಳ ಪರೀಕ್ಷೆಯನ್ನು ರದ್ದುಗೊಳಿಸುವುದರ ಜತೆಗೆ ಮರುಪರೀಕ್ಷೆಯ ನಿಖರ ದಿನಾಂಕವನ್ನು ಘೋಷಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಮುಂದೇನು?

ಅತ್ತ ಮಾತುಕತೆಗೆ ಜಾರ್ಖಂಡ್‌ ಸರ್ಕಾರ ಒಪ್ಪಿದ ಬೆನ್ನಲ್ಲೇ ಪ್ರತಿಭಟನಾಕಾರರು 11 ಜನರ ತಂಡವನ್ನು ರಚಿಸಿದ್ದಾರೆ. ಇದು 8 ವಿದ್ಯಾರ್ಥಿಗಳು, ಇಬ್ಬರು ಪತ್ರಕರ್ತರು ಹಾಗೂ ಓರ್ವ ವಕೀಲರನ್ನು ಒಳಗೊಂಡಿದೆ.