ಪ್ರಧಾನಿ ನರೇಂದ್ರ ಮೋದಿಯವರ 12 ವರ್ಷಗಳ ಆಡಳಿತವು ಭಾರತದ ಇತಿಹಾಸದಲ್ಲಿ ಒಂದು ಪರಿವರ್ತಕ ಅಧ್ಯಾಯವಾಗಿದೆ 2019ರಲ್ಲಿ, ರಾಷ್ಟ್ರೀಯ ಪತ್ರಿಕೆಯೊಂದಕ್ಕೆ ಬರೆದ ಲೇಖನದಲ್ಲಿ ನಾನು ಪ್ರಧಾನಿ ಮೋದಿ ಅವರನ್ನು ‘ಏಷ್ಯಾದ ಪ್ರಮುಖ ಆಧುನಿಕತಾವಾದಿ’ ಎಂದು ಕರೆದಿದ್ದೆ. ನಾನು ಅಂದು ಹೇಳಿದ್ದ ಮಾತು ನಿಜವಾಗಿದೆ.
- ರಾಜೀವ್ ಚಂದ್ರಶೇಖರ್ ಕೇರಳ ಬಿಜೆಪಿ ಅಧ್ಯಕ್ಷ, ಶಾಸಕ
ಕೆಲ ದಿನಗಳ ಹಿಂದೆ ಕೇರಳದ ಹೊಸ ಕಾಂಗ್ರೆಸ್ ಸರ್ಕಾರವು, ಸಿಪಿಎಂನ 10 ವರ್ಷಗಳ ದುರಾಡಳಿತದಿಂದ ಉಂಟಾದ ಸಾರ್ವಜನಿಕ ಹಣಕಾಸಿನ ದುಃಸ್ಥಿತಿ ವಿವರಿಸುವ ಶ್ವೇತಪತ್ರ ಹೊರಡಿಸಿತು. 12 ವರ್ಷಗಳ ಹಿಂದೆ ಇಂಥದ್ದೇ ಬೆಳವಣಿಗೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ 10 ವರ್ಷಗಳ ದುರಾಡಳಿತದಿಂದ ಕುಗ್ಗಿದ್ದ ಆರ್ಥಿಕತೆಯ ಚುಕ್ಕಾಣಿಯನ್ನು ಪ್ರಧಾನಿ ನರೇಂದ್ರ ಮೋದಿ ಹಿಡಿದಿದ್ದರು. ಹೀಗಿರುವಾಗ, ಮೋದಿ ಸರ್ಕಾರದ 12 ವರ್ಷಗಳ ಕಾರ್ಯಕ್ಷಮತೆಯ ಬಗ್ಗೆ ತಿಳಿಯುವುದು ಅತ್ಯಗತ್ಯ.
2019ರ ಜುಲೈನಲ್ಲಿ, ರಾಷ್ಟ್ರೀಯ ಪತ್ರಿಕೆಯೊಂದಕ್ಕೆ ಬರೆದ ಲೇಖನದಲ್ಲಿ ನಾನು ಪ್ರಧಾನಿ ಮೋದಿ ಅವರನ್ನು ‘ಏಷ್ಯಾದ ಪ್ರಮುಖ ಆಧುನಿಕತಾವಾದಿ’ ಎಂದು ಕರೆದಿದ್ದೆ. ಅವರ 2ನೇ ಅವಧಿಯ ಮೊದಲ ಬಜೆಟ್ ‘ನವ ಭಾರತದ ಮುನ್ಸೂಚಕ’ವಾಗಿದ್ದು, 25.73 ಲಕ್ಷ ಕೋಟಿ ರು. ಗಾತ್ರದ ಆರ್ಥಿಕತೆಯ ಆರಂಭ ಎಂದು ನಾನು ವಾದಿಸಿದ್ದೆ. ಅದಾದ 7 ವರ್ಷಗಳ ನಂತರ ಕೊರೋನಾ, 2 ಜಾಗತಿಕ ಯುದ್ಧ, ಜಾಗತಿಕ ಸವಾಲುಗಳ ನಡುವೆಯೂ ನಾನು ಅಂದು ಹೇಳಿದ್ದ ಮಾತು ನಿಜವಾಗಿದೆ.
ಜೂ.10ರಂದು ಪ್ರಧಾನಿ ಮೋದಿ 4,399 ದಿನಗಳ ಅಧಿಕಾರ ಪೂರ್ಣಗೊಳಿಸುವ ಮೂಲಕ, ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ದಾಖಲೆಯನ್ನು ಮೀರಿ, ಅತಿ ಹೆಚ್ಚು ಕಾಲ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಪ್ರಧಾನಿಯಾಗುತ್ತಾರೆ. ಇದು 12 ವರ್ಷಗಳ ಏಕಸರ್ಕಾರ ಆಡಳಿತವಾಗಿದೆ. ಆ ಅವಧಿಯ ಸಂಸತ್ತಿನಲ್ಲಿ, ಬಳಿಕ ಸರ್ಕಾರದ ಭಾಗವಾಗಿದ್ದ ವ್ಯಕ್ತಿಯಾಗಿ ನಾನು ಹೇಳುವುದಿಷ್ಟು, ‘ಈ 12 ವರ್ಷಗಳು ಭಾರತದ ಸ್ವಾತಂತ್ರ್ಯಾನಂತರದ ಕಥೆಯಲ್ಲಿ ಅತ್ಯಂತ ಪರಿವರ್ತಕ, ಪರಿಣಾಮಕಾರಿ ಮತ್ತು ವಿಮೋಚನಾ ಅಧ್ಯಾಯವಾಗಿದೆ’.
ಆರ್ಥಿಕತೆ ದುರ್ಬಲದಿಂದ ಸದೃಢ:
ಮೋದಿ ಅಧಿಕಾರ ವಹಿಸಿಕೊಂಡಾಗ, ಭಾರತವು ಕರೆನ್ಸಿ ಬಿಕ್ಕಟ್ಟಿಗೆ ತುತ್ತಾದ 5 ದುರ್ಬಲ ಆರ್ಥಿಕತೆಗಳಪಟ್ಟಿಯಲ್ಲಿತ್ತು. ಬೆಳವಣಿಗೆ ನಿಧಾನ ಗತಿಯಲ್ಲಿತ್ತು. ಹಣದುಬ್ಬರ, ಭ್ರಷ್ಟಾಚಾರ ಅತಿರೇಕವಾಗಿ, ಸರ್ಕಾರದ ಮೇಲಿನ ನಂಬಿಕೆ ಕ್ಷೀಣಿಸಿತ್ತು. 12 ವರ್ಷಗಳ ನಂತರ, ಜಿಎಸ್‌ಟಿ ಸೇರಿದಂತೆ ಪ್ರಮುಖ ಆರ್ಥಿಕ ಸುಧಾರಣೆ, 4.10 ಲಕ್ಷ ಕೋಟಿ ರು. ಗಾತ್ರದ ಆರ್ಥಿಕತೆಯ ಆಧಾರದಲ್ಲಿ ಮೋದಿ ಯುಗವನ್ನು ವ್ಯಾಖ್ಯಾನಿಸಲಾಗುತ್ತಿದೆ. 2026ರ ಹೊತ್ತಿಗೆ ಜಿಡಿಪಿ 396.32 ಲಕ್ಷ ಕೋಟಿ ರು.ಗೆ ತಲುಪಿದ್ದು, ಭಾರತವು ವಿಶ್ವದ 6ನೇ ಅತಿದೊಡ್ಡ ಆರ್ಥಿಕತೆಯಾಗಿದೆ.
2025–26ರ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇ.7.7ರಷ್ಟು ವಿಸ್ತರಿಸಿತು. ಜನವರಿ–ಮಾರ್ಚ್ ತ್ರೈಮಾಸಿಕದಲ್ಲಿ ಬೆಳವಣಿಗೆ ಶೇ.7.8ಕ್ಕೆ ಏರಿತು. ಭಾರತವು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ. ಇದು ಅದೃಷ್ಟವಲ್ಲ, ರಚನಾತ್ಮಕ ಸುಧಾರಣೆಯ ಫಲ.
ಡಿಜಿಟಲ್ ಆರ್ಥಿಕತೆ ಬೆಳವಣಿಗೆಯೂ ಅಸಾಧಾರಣವಾಗಿದೆ. 2014ರಲ್ಲಿ 6.1 ಕೋಟಿ ಇದ್ದ ಬ್ರಾಡ್‌ಬ್ಯಾಂಡ್ ಸಂಪರ್ಕಗಳು 2025ರ ವೇಳೆಗೆ 99 ಕೋಟಿಗೆ ಹೆಚ್ಚಾದವು. 2014ರ ಜೂನ್‌ನಲ್ಲಿ ಪ್ರತಿ ಜಿಬಿಗೆ 269ರು. ಇದ್ದ ವೈರ್‌ಲೆಸ್ ಡೇಟಾದ ವೆಚ್ಚವು 2024ರ ಜೂನ್ ವೇಳೆಗೆ 8.31 ರು.ಗೆ ಇಳಿದಿದೆ. 2026ರ ಏಪ್ರಿಲ್ ಹೊತ್ತಿಗೆ240 ಬಿಲಿಯನ್ ಯುಪಿಐ ವಹಿವಾಟು ನಡೆದಿವೆ. ಈ ಸಂಖ್ಯೆಗಳು ಬೆಳೆದಿರುವ ಆರ್ಥಿಕತೆಯನ್ನಷ್ಟೇ ಸೂಚಿಸುವುದಿಲ್ಲ. ರಚನಾತ್ಮಕವಾಗಿ ಪುನರ್ ನಿರ್ಮಿಸಲಾದ ಸಮಾಜವನ್ನು ಎತ್ತಿ ತೋರಿಸುತ್ತವೆ. ಆರ್ಥಿಕ ಒಳಗೊಳ್ಳುವಿಕೆ, ಡಿಜಿಟಲ್ ಗುರುತು, ಫಲಾನುಭವಿಗಳಿಗೆ ಸವಲತ್ತು ನೇರ ವರ್ಗಾವಣೆ ಮತ್ತಿತರ ಸುಧಾರಣಾ ಕ್ರಮಗಳನ್ನು ಒಳಗೊಂಡ ಸದೃಢ ದೇಶವನ್ನು ಈ 12 ವರ್ಷಗಳಲ್ಲಿ ನಿರ್ಮಿಸಲಾಗಿದೆ.
ಹಿಂದೆಂದಿಗಿಂತ ಸುರಕ್ಷಿತ:
ದಶಕಗಳ ಕಾಲ ಭಾರತವು ಸಂಯಮದ ಸಿದ್ಧಾಂತವನ್ನು ಅನುಸರಿಸುತ್ತಿತ್ತು. ಭಯೋತ್ಪಾದಕ ದಾಳಿಗಳನ್ನು ಮೌನವಾಗಿ ನುಂಗಿಕೊಂಡು, ಗಡಿಯಾಚೆಗಿನ ಪ್ರಚೋದನೆಗಳಿಗೆ ರಾಜತಾಂತ್ರಿಕ ಮಾರ್ಗಗಳ ಮೂಲಕ ಪ್ರತಿಕ್ರಿಯಿಸಲಾಗುತ್ತಿತ್ತು. ಯುದ್ಧ ಉಲ್ಬಣಗೊಳ್ಳುವುದನ್ನು ತಪ್ಪಿಸಲು ಭಾರತ ಸೀಮಿತ ದಾಳಿಯನ್ನಷ್ಟೇ ನಡೆಸುತ್ತಿತ್ತು. ಇದು ಭಾರತದ ಮೇಲೆ ದಾಳಿ ಮಾಡಲು ಹಿಂಜರಿಯುವಷ್ಟು ಶತ್ರುಗಳಲ್ಲಿ ಭಯ ಹುಟ್ಟಿಸುವಲ್ಲಿ ಯಶಸ್ವಿಯಾಗುತ್ತಿರಲಿಲ್ಲ. ಇದು ಭಾರತವನ್ನು ದುರ್ಬಲ ರಾಷ್ಟ್ರದಂತೆ ಚಿತ್ರಿಸುತ್ತಿತ್ತು. ಅತ್ತ ಶಕ್ತಿಶಾಲಿ ದೇಶಗಳು ಹೆಚ್ಚಿನ ಗೌರವವನ್ನು ಪಡೆಯುತ್ತಿದ್ದವು. ಈ ಪರಿಪಾಠಕ್ಕೆ ಮೋದಿ ಅಂತ್ಯ ಹಾಡಿದರು.
370ನೇ ವಿಧಿಯ ರದ್ದತಿ, ನಕ್ಸಲರ ವಿರುದ್ಧದ ಕಾರ್ಯಾಚರಣೆ, ಆಧುನಿಕ ರಕ್ಷಣಾ ತಂತ್ರಜ್ಞಾನಗಳ ಅಭಿವೃದ್ಧಿಯ ನಂತರ ಭಾರತ ಹೆಚ್ಚು ಸುರಕ್ಷಿತ ಮತ್ತು ಸ್ವಾವಲಂಬಿಯಾಗಿದೆ. 2025ರಲ್ಲಿ ಪಹಲ್ಗಾಂ ಉಗ್ರ ದಾಳಿಗೆ ಪ್ರತಿಯಾಗಿ ಕೈಗೊಳ್ಳಲಾದ ಆಪರೇಷನ್ ಸಿಂದೂರವು ಭಯೋತ್ಪಾದನೆ ವಿರುದ್ಧ ತ್ವರಿತ ಮತ್ತು ನಿಖರವಾದ ಸೇನಾ ಕ್ರಮ ಕೈಗೊಳ್ಳುವ ಭಾರತದ ಸಂಕಲ್ಪವನ್ನು ತೋರಿಸಿತು. 2016ರ ಸರ್ಜಿಕಲ್ ಸ್ಟ್ರೈಕ್, 2019ರ ಬಾಲಾಕೋಟ್ ವೈಮಾನಿಕ ದಾಳಿ, 2025ರ ಆಪರೇಷನ್ ಸಿಂದೂರಗಳು ಒಂದೇ ಭದ್ರತಾ ನೀತಿಯ ಭಾಗಗಳಾಗಿದ್ದು, ಭಾರತ ಭಯೋತ್ಪಾದನೆಗೆ ಕೇವಲ ರಾಜತಾಂತ್ರಿಕ ವಿರೋಧ ವ್ಯಕ್ತಪಡಿಸುವುದಕ್ಕಿಂತ ಭಾರೀ ಸೇನಾ ಕ್ರಮಗಳ ಮೂಲಕ ಪ್ರತಿಕ್ರಿಯಿಸುವ ಹೊಸ ವಿಧಾನವನ್ನು ಪ್ರತಿಬಿಂಬಿಸುತ್ತವೆ.
2025ರ ವೇಳೆಗೆ ಸರ್ಕಾರ 5 ಪ್ರಮುಖ ತತ್ವಗಳನ್ನು ಸ್ಪಷ್ಟಪಡಿಸಿತು: ಭಯೋತ್ಪಾದಕ ದಾಳಿಗಳಿಗೆ ಕಠಿಣ ಪ್ರತಿಕ್ರಿಯೆ, ಅಣ್ವಸ್ತ್ರ ಬೆದರಿಕೆಗಳಿಗೆ ಶೂನ್ಯ ಸಹಿಷ್ಣುತೆ, ಭಯೋತ್ಪಾದಕರು ಮತ್ತು ಅವರ ಬೆಂಬಲಿಗರ ಸಮಾನ ಪರಿಗಣನೆ, ಯಾವುದೇ ಮಾತುಕತೆಯಲ್ಲಿ ಮೊದಲು ಉಗ್ರವಾದದ ಬಗೆಗಿನ ಚರ್ಚೆಗೆ ಆದ್ಯತೆ, ಭಾರತದ ಸಾರ್ವಭೌಮತ್ವದ ವಿಷಯದಲ್ಲಿ ಯಾವುದೇ ರಾಜಿಯಿಲ್ಲ. ಇದು ಆಕ್ರಮಣಕಾರಿ ನೀತಿಯಲ್ಲ. ಬದಲಿಗೆ ಭವಿಷ್ಯದ ದಾಳಿಗಳನ್ನು ತಡೆಯುವ ವಿಧಾನಗಳಾಗಿವೆ. ಈ ಭದ್ರತಾ ಬದಲಾವಣೆಗಳು ಭಾರತವನ್ನು ದಶಕಗಳಿಗಿಂತ ಹೆಚ್ಚು ಸುರಕ್ಷಿತವಾಗಿಸಿವೆ.
ಪ್ರಜಾಪ್ರಭುತ್ವ ಇನ್ನಷ್ಟು ಪರಿಣಾಮಕಾರಿ:
2014, 2019 ಮತ್ತು 2024ರ ಲೋಕಸಭೆ ಚುನಾವಣೆಯಲ್ಲಿ ಮತದಾರರಿಂದ ತಿರಸ್ಕೃತವಾದ ಕೆಲವು ರಾಜಕೀಯ ಶಕ್ತಿಗಳು ಮೋದಿ ಅವರ ಆಡಳಿತದಲ್ಲಿ ಭಾರತದ ಪ್ರಜಾಪ್ರಭುತ್ವ ದುರ್ಬಲಗೊಂಡಿದೆ ಎಂದು ವಾದಿಸುತ್ತಿವೆ. 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 293 ಸ್ಥಾನಗಳನ್ನು ಗೆದ್ದ ಬಳಿಕ, ಮೋದಿ ಅವರು ನೆಹರು ಅವರ ನಂತರ ಸತತ 3 ಬಾರಿ ಪ್ರಧಾನಮಂತ್ರಿಯಾಗಿ ಆಯ್ಕೆಯಾದ 2ನೇ ನಾಯಕನಾದರು.
ಅಭಿವೃದ್ಧಿ, ರಾಷ್ಟ್ರೀಯ ಭದ್ರತೆ ಮತ್ತು ‘ಭಾರತ ಮೊದಲು’ ಎಂಬ ಕಾರ್ಯಸೂಚಿಯ ಆಧಾರದ ಮೇಲೆ ಸತತ 3 ಜನಾದೇಶಗಳನ್ನು ಪಡೆಯುವುದು ಪ್ರಜಾಪ್ರಭುತ್ವ ಸರಿಯಾಗಿ ಕಾರ್ಯನಿರ್ವಹಿಸುತ್ತಿರುವುದರ ಸಾಕ್ಷಿ.
ಪ್ರಜಾಪ್ರಭುತ್ವದ ನಿಜವಾದ ಅಳತೆ ಬರೀ ಚುನಾವಣಾ ಗೆಲುವಲ್ಲ. ಬದಲಿಗೆ, ವ್ಯವಸ್ಥೆಯಿಂದ ಹೊರಗುಳಿದ ಜನರಿಗೆ ಆಡಳಿತದ ಪ್ರಯೋಜನಗಳು ತಲುಪುತ್ತಿವೆಯೇ ಎಂಬುದನ್ನೂ ನೋಡಿಕೊಳ್ಳುವುದಾಗಿದೆ. ಆ ಮಾನದಂಡದಲ್ಲಿ ಮೋದಿ ಸರ್ಕಾರದ ಸಾಧನೆ ಗಮನಾರ್ಹವಾಗಿದೆ. ಭಾರತವು ಶೇ.100ರಷ್ಟು ಗ್ರಾಮ ವಿದ್ಯುದೀಕರಣ ಸಾಧಿಸಿದ್ದು, 2014ರಲ್ಲಿ ಜನಸಂಖ್ಯೆಯ ಸುಮಾರು ಶೇ.85.1ರಷ್ಟು ಜನರಿಗೆ ಮಾತ್ರ ವಿದ್ಯುತ್ ಲಭ್ಯವಿತ್ತು. ಬ್ಯಾಂಕ್ ಖಾತೆ ಹೊಂದಿದ್ದವರ ಪ್ರಮಾಣ 2014ರ ಶೇ.48.3ರಿಂದ 2025ರಲ್ಲಿ ಶೇ.89ಕ್ಕೆ ಏರಿದೆ. ಈ ಅಂಕಿಅಂಶಗಳು, ಸಾಮಾನ್ಯ ಜನರಿಗೆ ಆರ್ಥಿಕ ಅವಕಾಶಗಳು ವಿಸ್ತರಿಸಿರುವುದನ್ನು ತೋರಿಸುತ್ತವೆ. ಉದಾಹರಣೆಗೆ, ರಾಜಸ್ಥಾನದ ಗ್ರಾಮೀಣ ಪ್ರದೇಶದ ಒಬ್ಬ ಮಹಿಳೆಯೊಬ್ಬರು ತಮಗೆ ಅಡುಗೆ ಅನಿಲ(ಎಲ್‌ಪಿಜಿ) ಸಿಲಿಂಡರ್‌ಗೆ ಸಿಗುವ ಸಬ್ಸಿಡಿಯನ್ನು ಮಧ್ಯವರ್ತಿಗಳು, ಸೋರಿಕೆ ಅಥವಾ ಭ್ರಷ್ಟಾಚಾರವಿಲ್ಲದೆ ನೇರವಾಗಿ ಬ್ಯಾಂಕ್ ಖಾತೆ ಪಡೆಯುತ್ತಾರೆಂದರೆ, ಅದು ಪ್ರಜಾಪ್ರಭುತ್ವವು ನಿಜವಾಗಿಯೂ ಕಾರ್ಯರೂಪದಲ್ಲಿದೆ ಎಂಬುದರ ಪ್ರತೀಕ.
ತಂತ್ರಜ್ಞಾನ ಸಾರ್ವಭೌಮತ್ವ:
ಐಟಿ ನೀತಿ, ಇಂಡಿಯಾ ಸೆಮಿಕಂಡಕ್ಟರ್ ಮಿಷನ್, ಎಐ ಮತ್ತು ಡಿಜಿಟಲ್ ವೇದಿಕೆಗಳ ನಿಯಂತ್ರಣ ನಿಯಮಗಳನ್ನು ರೂಪಿಸುವ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ನಾನು, ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಧನೆಯನ್ನು ಹತ್ತಿರದಿಂದ ನೋಡಿದ್ದೇನೆ. 2014ರಲ್ಲಿ ಮೋದಿ ಅಧಿಕಾರ ವಹಿಸಿಕೊಂಡಾಗ, ಭಾರತವು ಜಾಗತಿಕ ತಂತ್ರಜ್ಞಾನದ ನಿಷ್ಕ್ರಿಯ ಗ್ರಾಹಕನಾಗಿದ್ದು, ತನ್ನ ಡಿಜಿಟಲ್ ಆರ್ಥಿಕತೆಯನ್ನು ನಡೆಸಲು ವಿದೇಶಿ ಚಿಪ್, ವಿದೇಶಿ ವೇದಿಕೆ, ವಿದೇಶಿ ಕ್ಲೌಡ್ ಮೂಲಸೌಕರ್ಯ ಮತ್ತು ವಿದೇಶಿ ಬಂಡವಾಳವನ್ನು ಅವಲಂಬಿಸಿತ್ತು. ಅದನ್ನು ಬದಲಾಯಿಸುವುದು ನಮ್ಮ ಮಹತ್ವಾಕಾಂಕ್ಷೆಯಾಗಿತ್ತು.
ಈ ದಿಸೆಯಲ್ಲಿ ಮಹತ್ವದ ಹೆಜ್ಜೆಯಾಗಿ, 2026ರ ಫೆಬ್ರವರಿಯಲ್ಲಿ ಮೋದಿ ಅವರು ಗುಜರಾತಿನ ಸಾನಂದ್‌ನಲ್ಲಿ ಮೈಕ್ರಾನ್ ಟೆಕ್ನಾಲಜಿಯ ಸೆಮಿಕಂಡಕ್ಟರ್ ಅಸೆಂಬ್ಲಿ, ಟೆಸ್ಟಿಂಗ್ ಮತ್ತು ಪ್ಯಾಕೇಜಿಂಗ್ ಘಟಕವನ್ನು ಉದ್ಘಾಟಿಸಿದರು. ಇದರಿಂದ ಭಾರತದಲ್ಲಿ ವಾಣಿಜ್ಯ ಮಟ್ಟದ ಸೆಮಿಕಂಡಕ್ಟರ್ ಉತ್ಪಾದನೆ ಆರಂಭವಾಯಿತು. ಇದೇ ವೇಳೆ, ನೆಟ್ರಾಸೆಮಿ ಮತ್ತು ಮೈಂಡ್‌ಗ್ರೋವ್ ಟೆಕ್ನಾಲಜೀಸ್ ಮುಂತಾದ ಭಾರತೀಯ ಸ್ಟಾರ್ಟ್‌ಅಪ್‌ಗಳು ಅತ್ಯಾಧುನಿಕ ಚಿಪ್‌ಗಳ ವಿನ್ಯಾಸ ಪ್ರಾರಂಭಿಸಿವೆ.
ಡಿಎಲ್‌ಐ, ಪಿಎಲ್‌ಐ ಯೋಜನೆ ಮತ್ತು ಡಿಜಿಟಲ್ ಇಂಡಿಯಾ ಕಾರ್ಯಕ್ರಮಗಳು ತಾಂತ್ರಿಕವಾಗಿ ಸ್ವಾವಲಂಬಿ ಭಾರತದ ಅಡಿಪಾಯವನ್ನು ನಿರ್ಮಿಸುತ್ತಿವೆ. ಇಂದು, ನಾವು ಅತ್ಯಾಧುನಿಕ ತಂತ್ರಜ್ಞಾನವನ್ನಷ್ಟೇ ಬಳಸದೆ, ಅದನ್ನು ತಯಾರಿಸುವ ಮತ್ತು ನಿಯಂತ್ರಿಸುವ ರಾಷ್ಟ್ರವಾಗಿದ್ದೇವೆ. ಮೊದಲ ಅವಧಿಯಲ್ಲಿ ಬೀಜ ಬಿತ್ತಿ, 2ನೇ ಅವಧಿಯಲ್ಲಿ ಸಾಂಸ್ಥಿಕಗೊಳಿಸಿ, 3ನೇ ಅವಧಿಯಲ್ಲಿ ಮೊದಲ ವಾಣಿಜ್ಯ ಫಲವನ್ನು ನೀಡುವ ಆ ಮಹತ್ವಾಕಾಂಕ್ಷೆಯು ಬಹುಶಃ ಈ 12 ವರ್ಷಗಳ ಅತ್ಯಂತ ಮಹತ್ವದ ದೀರ್ಘಕಾಲೀನ ಪರಂಪರೆಯಾಗಿದೆ.
ರೂಪಾಂತರದ ಕಾಲ:
ನೆಹರು ಸಂಸ್ಥೆಗಳನ್ನು ನಿರ್ಮಿಸಿದರು. ಭಾರತಕ್ಕೆ ಸಾಂವಿಧಾನಿಕ ಚೌಕಟ್ಟು, ವೈಜ್ಞಾನಿಕ ಅಡಿಪಾಯ, ವಿಶ್ವವಿದ್ಯಾಲಯ, ಅಣೆಕಟ್ಟು, ಆಧುನಿಕ ರಾಜ್ಯದ ಯಂತ್ರಾಂಶಗಳನ್ನು ನೀಡಿದರು. ಆ ಕೊಡುಗೆ ಶಾಶ್ವತ ಮತ್ತು ಗೌರವಾನ್ವಿತವಾಗಿದೆ. ಆದರೆ ಸಮಾಜವಾದ, ಭದ್ರತೆ ಮತ್ತು ಸಾರ್ವಭೌಮತ್ವದ ಬಗ್ಗೆ ಅವರ ಆಲೋಚನೆಗಳು ದೂರದೃಷ್ಟಿಯಿಲ್ಲದವು. ಚೀನಾ ಮತ್ತು ಪಾಕಿಸ್ತಾನದೊಂದಿಗಿನ ಸಂಘರ್ಷದ ವೇಳೆ ಇದು ಸಾಬೀತಾಗಿದೆ.
ಇದೀಗ ಮೋದಿಯವರು ಭಾರತಕ್ಕೆ ಸೃಷ್ಟಿಸಿರುವ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಗಳು ಕೇವಲ ನೈತಿಕತೆ ಮಾತ್ರವಲ್ಲದೆ ಆರ್ಥಿಕ ಮತ್ತು ಭದ್ರತಾ ಬಲದ ರಾಷ್ಟ್ರವಾಗಿ ಭಾರತವನ್ನು ನಿರ್ಮಿಸಿದ್ದಾರೆ. ಇದು ಸಾಧ್ಯವಾಗಿರುವುದು ಭಾರತೀಯರ ಆಶಾವಾದ, ಆತ್ಮವಿಶ್ವಾಸ, ಆಡಳಿತ ವ್ಯವಸ್ಥೆ, ಡಿಜಿಟಲ್ ಮೂಲಸೌಕರ್ಯ, ಭದ್ರತಾ ಸಿದ್ಧಾಂತ, ಆರ್ಥಿಕ ವಿಶ್ವಾಸದಿಂದ.
ನೆಹರು ಅವರು ಅಂದಿನ ಕಾಲಕ್ಕೆ ತಕ್ಕಂತೆ ದೇಶದ ಹಾರ್ಡ್‌ವೇರ್‌ಅನ್ನು ರೂಪಿಸಿದರು. ಆದರೆ ಮೋದಿಯವರು ನಮ್ಮ ಕಾಲಕ್ಕೆ ಅನುಗುಣವಾದ ಹಾರ್ಡ್‌ವೇರ್, ಸಾಫ್ಟ್‌ವೇರನ್ನು ರೂಪಿಸಿದರು. ಮೋದಿಯವರ ಈ ಮಹಾನ್ ಕಾರ್ಯವನ್ನು ಸರಿಗಟ್ಟಲು ನೆಹರು ಯುಗದಿಂದ ಇಂದಿನವರೆಗೆ ಯಾವ ಪ್ರಧಾನಿಗೂ, ಬಹುಶಃ ನೆಹರೂ ಅವರಿಗೂ ಸಾಧ್ಯವಿಲ್ಲ.
190 ಲಕ್ಷ ಕೋಟಿ ರು.ನಿಂದ 381 ಲಕ್ಷ ಕೋಟಿ ರು. ಗಿಂತಲೂ ಹೆಚ್ಚು ಬೆಳೆದಿರುವ ಆರ್ಥಿಕತೆ, ವರ್ಷಕ್ಕೆ ನೂರು ಶತಕೋಟಿ ಮೊತ್ತದ ವಹಿವಾಟುಗಳು ನಡೆಯುವ ಡಿಜಿಟಲ್ ಪಾವತಿ ವ್ಯವಸ್ಥೆ, ಸಾರ್ವತ್ರಿಕ ಗ್ರಾಮೀಣ ವಿದ್ಯುದೀಕರಣ, ಅರ್ಧ ಶತಕೋಟಿಗೂ ಹೆಚ್ಚು ಜನರನ್ನು ಹಣಕಾಸು ವ್ಯವಸ್ಥೆ ಅಡಿ ತರಲಾಗಿರುವುದು, ಭಾರತದ ಮೇಲೆ ದಾಳಿಯಾದಾಗ ನಿರ್ದಯವಾಗಿ ಪ್ರತಿದಾಳಿ ಮಾಡುವ ಸೇನೆ, ವಾಷಿಂಗ್ಟನ್, ಮಾಸ್ಕೋ, ರಿಯಾದ್ ಮತ್ತು ಬೀಜಿಂಗ್‌ನಲ್ಲಿ ಏಕಕಾಲದಲ್ಲಿ ಗೌರವವನ್ನು ಗಳಿಸುವ ರಾಜತಾಂತ್ರಿಕ ನಿಲುವು, ಸೆಮಿಕಂಡಕ್ಟರ್ ಉದ್ಯಮವು ಭಾರತೀಯ ನೆಲದಲ್ಲಿ ತನ್ನ ಮೊದಲ ಹೆಜ್ಜೆಗಳನ್ನು ಇಡಲು ಪ್ರಾರಂಭಿಸಿರುವುದು ಸಾಕಾರಗೊಂಡಿದೆ. 12 ವರ್ಷಗಳ ಮೋದಿಯವರ ಉದ್ದೇಶಪೂರ್ವಕ, ಸ್ಥಿರ ಮತ್ತು ಧೈರ್ಯಶಾಲಿ ಆಡಳಿತವು ಇದನ್ನೇ ನೀಡಿದೆ.


