ದೆಹಲಿ ಚುನಾವಣಾ ಮತದಾನದ ದಿನದಂದು ಪ್ರಧಾನಿ ನರೇಂದ್ರ ಮೋದಿ ಪ್ರಯಾಗ್‌ರಾಜ್‌ನ ಮಹಾಕುಂಭ ಮೇಳದಲ್ಲಿ ಅಮೃತ ಸ್ನಾನ ಮಾಡಿದರು. ಗಂಗಾ ಪೂಜೆ ನೆರವೇರಿಸಿ ರುದ್ರಾಕ್ಷಿ ಹಿಡಿದು ಜಪ ಮಾಡಿದರು. ಭಕ್ತರಿಗೆ ತೊಂದರೆಯಾಗದಂತೆ ಪ್ರಧಾನಿಗೆ ಪ್ರತ್ಯೇಕ ದಾರಿ ವ್ಯವಸ್ಥೆ ಮಾಡಲಾಗಿತ್ತು.
ಬೆಂಗಳೂರು (ಫೆ.5): ದೆಹಲಿ ಚುನಾವಣೆಯ ಮತದಾನದ ದಿನದಂದೇ ಪ್ರಯಾಗ್‌ರಾಜ್‌ನ ಮಹಾಕುಂಭ ಮೇಳಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅಮೃತ ಸ್ನಾನ ಮಾಡಿದ್ದಾರೆ. ಆ ಬಳಿಕ ಗಂಗಾಪೂಜೆ ನೆರವೇರಿಸಿದ ಮೋದಿ, ಬಳಿಕ ಗಂಗಾನದಿಯಲ್ಲಿಯೇ ರುದ್ರಾಕ್ಷಿ ಹಿಡಿದು ಕೆಲ ಕಾಲ ಜಪ ಮಾಡಿದ್ದಾರೆ. ಮಹಾಕುಂಭ ಮೇಳಕ್ಕೆ ಭಾರೀ ಪ್ರಮಾಣದಲ್ಲಿ ಭಕ್ತರು ಆಗಮಿಸಿರುವ ಕಾರಣ ಅವರಿಗೆ ಅಡ್ಡಿ ಆಗಬಾರದು ಎನ್ನುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ತ್ರಿವೇಣಿ ಸಂಗಮಕ್ಕೆ ಬರಲು ಬೇರೆಯದೇ ದಾರಿಯನ್ನು ವ್ಯವಸ್ಥೆ ಮಾಡಲಾಗಿತ್ತು. ಇದು 54 ದಿನಗಳ ಅಂತರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ 2ನೇ ಪ್ರಯಾಗ್‌ರಾಜ್ ಭೇಟಿಯಾಗಿದೆ. ಇದಕ್ಕೂ ಮುನ್ನ ಡಿಸೆಂಬರ್ 13 ರಂದು ಅವರು ಭೇಟಿ ನೀಡಿದ್ದರು.
ಪ್ರಧಾನಿ ಮೋದಿ ಅಮೃತಸ್ನಾನ ಮಾಡುವ ವೇಳೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕೂಡ ಅವರ ಜೊತೆಗಿದ್ದರು. ಎರಡೂವರೆ ಗಂಟೆಗಳ ಕಾಲ ಅವರು ಪ್ರಯಾಗ್‌ರಾಜ್‌ನಲ್ಲಿ ಇರಲಿದ್ದಾರೆ. ಮೋದಿ ಯೋಗಿಯೊಂದಿಗೆ ಮೋಟಾರ್ ಬೋಟ್ ಮೂಲಕ ಸಂಗಮ ಕ್ಷೇತ್ರಕ್ಕೆ ತಲುಪಿದರು. ಅವರು ಕೇಸರಿ ಬಣ್ಣದ ಬಟ್ಟೆಗಳನ್ನು ಧರಿಸಿದ್ದರು. ಅವರ ಕುತ್ತಿಗೆಯಲ್ಲಿ ರುದ್ರಾಕ್ಷಿ ಮಾಲೆ ಇತ್ತು. ಮಂತ್ರಗಳ ಪಠಣದ ನಡುವೆ, ಪ್ರಧಾನಿ ಮೋದಿ ಒಬ್ಬರೇ ಸಂಗಮ್‌ನಲ್ಲಿ ಸ್ನಾನ ಮಾಡಿದರು.
ಮೋದಿ ಅವರ ವಿಮಾನ ಬಮ್ರೌಲಿ ವಿಮಾನ ನಿಲ್ದಾಣಕ್ಕೆ ಬಂದಿತ್ತು. ಈ ವೇಳೆ ರಾಜ್ಯಪಾಲೆ ಆನಂದಿಬೆನ್ ಪಟೇಲ್, ಸಿಎಂ ಯೋಗಿ ಮತ್ತು ಇಬ್ಬರೂ ಉಪಮುಖ್ಯಮಂತ್ರಿಗಳು ಅವರನ್ನು ಸ್ವಾಗತಿಸಿದರು. ಪ್ರಧಾನಿ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಡಿಪಿಎಸ್‌ನ ಹೆಲಿಪ್ಯಾಡ್ ತಲುಪಿದರು. ಇಲ್ಲಿಂದ ಅವರ ಬೆಂಗಾವಲು ಪಡೆ ಅರೈಲ್‌ನ ವಿಐಪಿ ಘಾಟ್ ತಲುಪಿತು. ಅಲ್ಲಿಂದ ಅವರು ದೋಣಿಯಲ್ಲಿ ಸಂಗಮ್ ತಲುಪಿದರು.
ಮಹಾಕುಂಭದಲ್ಲಿ ಮೋದಿ ಸ್ನಾನ, ಮತದಾನದ ದಿನವೇ ಮೋದಿ 11ನೇ ಬಾರಿಗೆ ತೀರ್ಥಯಾತ್ರೆ!
ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಪ್ರಧಾನಿ ಮೋದಿ ಅವರು ಬಮ್ರೌಲಿ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಅರೈಲ್ ತಲುಪಿದರು. ಅಲ್ಲಿಂದ ದೋಣಿ ಮೂಲಕ ಮೇಳದ ಪ್ರದೇಶಕ್ಕೆ ಬಂದರು. ಪ್ರಧಾನಿಯವರ ಭೇಟಿ ಹಿನ್ನೆಲೆಯಲ್ಲಿ ಮಹಾಕುಂಭ ಮೇಳದ ಭದ್ರತೆಯನ್ನು ಹೆಚ್ಚಿಸಲಾಗಿದೆ. ಸಂಗಮ್ ಪ್ರದೇಶದಲ್ಲಿ ಅರೆಸೈನಿಕ ಪಡೆಗಳನ್ನು ಸಹ ನಿಯೋಜಿಸಲಾಗಿದೆ. ಮೋಟಾರ್ ಬೋಟ್‌ನಲ್ಲಿ ಪ್ರಯಾಣ ಮಾಡುವ ವೇಳೆ ಯೋಗಿ ಆದಿತ್ಯನಾಥ್ ಮಹಾಕುಂಭ ಮೇಳಕ್ಕೆ ಸಂಬಂಧಿಸಿದ ಕೆಲ ಮಾಹಿತಿಗಳನ್ನು ಪ್ರಧಾನಿಗೆ ನೀಡುತ್ತಿರುವುದು ಕಂಡಿತು.
ಮೋದಿ-ಅಮಿತ್ ಶಾ ಅದೆಷ್ಟೇ ತೀರ್ಥಸ್ನಾನ ಮಾಡಿದ್ರೂ ಅವರು ಹೋಗೋದು ನರಕಕ್ಕೆ: ಮಲ್ಲಿಕಾರ್ಜುನ ಖರ್ಗೆ
