ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ತೀರ್ಥಸ್ನಾನದ ಬಗ್ಗೆ ಟೀಕೆ ಮಾಡಿ ನಂತರ ಕ್ಷಮೆ ಯಾಚಿಸಿದ್ದಾರೆ. ಬಡತನ ನಿವಾರಣೆಗಿಂತ ಬಿಜೆಪಿ ನಾಯಕರು ತೀರ್ಥಸ್ನಾನಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ನವದೆಹಲಿ (ಜ.27): ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ವಿರುದ್ಧ ಟೀಕೆ ಮಾಡುವ ಬರದಲ್ಲಿ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡುವ ಮಾತನ್ನಾಡಿದ್ದಾರೆ. ಮಧ್ಯಪ್ರದೇಶದಲ್ಲಿ ನಡೆದ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುವ ವೇಳೆ, ಬಿಜೆಪಿಯ ನಾಯಕರು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ತೀರ್ಥಸ್ನಾನ ಮಾಡುತ್ತಿರುವ ಬಗ್ಗೆ ಟೀಕೆ ಮಾಡಿದ್ದಾರೆ.
'ಗಂಗಾ ನದಿಯಲ್ಲಿ ಮುಳುಗಿದ ಮಾತ್ರಕ್ಕೆ, ದೇಶದಲ್ಲಿನ ಬಡತನ ಮಾಯವಾಗಿ ಬಿಡುತ್ತದಯೇ? ಅದರಿಂದ ನಿಮ್ಮ ಹೊಟ್ಟೆ ತುಂಬುತ್ತದೆಯೇ?' ಎಂದು ಸಮಾವೇಶದಲ್ಲಿ ಪ್ರಶ್ನೆ ಮಾಡಿದ್ದಾರೆ. ಶೀಘ್ರದಲ್ಲೇ ತಮ್ಮ ಮಾತಿನಿಂದ ಆದ ತಪ್ಪನ್ನು ಅರ್ಥ ಮಾಡಿಕೊಂಡ ಮಲ್ಲಿಕಾರ್ಜುನ ಖರ್ಗೆ, ಹಾಜರಿದ್ದ ಜನರ ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡುವ ಮಾತುಗಳಿಗೆ ಕ್ಷಮೆ ಯಾಚಿಸಿದ್ದಾರೆ.
ನಾನು ಯಾರದ್ದೇ ಧಾರ್ಮಿಕ ಭಾವನೆಗಳನ್ನು ಧಕ್ಕೆ ಉಂಟು ಮಾಡುತ್ತಿಲ್ಲ. ಹಾಗೇನಾದರೂ ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ, ನಾನು ಕ್ಷಮೆ ಯಾಚಿಸುತ್ತೇನೆ. ಆದರೆ, ನನಗೆ ಒಂದು ವಿಚಾರ ನನಗೆ ಅರ್ಥವಾಗುತ್ತಿಲ್ಲ. ಒಂದು ಮಗು ಹಸಿವಿನಿಂದ ಸಾಯುತ್ತಿದೆ. ಶಾಲೆಯಲ್ಲಿ ಪ್ರವೇಶ ಸಿಗುತ್ತಿಲ್ಲ. ಕಾರ್ಮಿಕರಿಗೆ ಅವರ ಶ್ರಮಕ್ಕೆ ತಕ್ಕ ಕೂಲಿ ಸಿಗುತ್ತಿಲ್ಲ. ಆದರೆ, ಬಿಜೆಪಿ ನಾಯಕರು ಮಾತ್ರ ಸಾವಿರಾರು ರೂಪಾಯಿ ಖರ್ಚು ಮಾಡಿ ತೀರ್ಥಸ್ನಾನ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಬಿಜೆಪಿ ನಾಯಕರನ್ನು ಟೀಕಿಸಿದ ಖರ್ಗೆ, "ಅವರ ಒಳ್ಳೆಯ ಫೋಟೋ ಬರುವವರೆಗೂ ಅವರು ಸ್ನಾನ ಮಾಡುತ್ತಲೇ ಇರುತ್ತಾರೆ" ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಟೀಕಿಸಿದ ಖರ್ಗೆ, "ಮೋದಿ-ಶಾ ಒಟ್ಟಿಗೆ ತುಂಬಾ ಪಾಪ ಮಾಡಿದ್ದಾರೆ, ಅವರು 100 ಜನ್ಮಗಳಲ್ಲೂ ಸ್ವರ್ಗಕ್ಕೆ ಹೋಗಲು ಸಾಧ್ಯವಿಲ್ಲ. ಜನರ ಶಾಪಗಳಿಂದ ಅವರು ನರಕಕ್ಕೆ ಹೋಗುತ್ತಾರೆ" ಎಂದು ಹೇಳಿದರು.
ಕುಂಭಮೇಳದಲ್ಲಿ ತೀರ್ಥಸ್ನಾನ ಮಾಡಿದ ಪ್ರಕಾಶ್ ರಾಜ್, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು AI ಇಮೇಜ್!
ಖರ್ಗೆ ಅವರಿಗೂ ಮುನ್ನ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮೋದಿ ಸರ್ಕಾರದ ನೀತಿಗಳು ಜನವಿರೋಧಿ ಎಂದು ಆರೋಪಿಸಿದರು. "ಅದಾನಿ ಮತ್ತು ಅಂಬಾನಿ ಹೆಚ್ಚು ಬೆಳೆದಂತೆ, ಈ ಶತಕೋಟ್ಯಾಧಿಪತಿಗಳು ಹೆಚ್ಚು ಹಣ ಪಡೆಯುತ್ತಾರೆ, ನಿಮ್ಮ ಮಕ್ಕಳಿಗೆ ಕಡಿಮೆ ಉದ್ಯೋಗಗಳು ಸಿಗುತ್ತವೆ ಎಂಬುದನ್ನು ಮರೆಯಬೇಡಿ. ಭಾರತದ ಬಡ ಜನಸಂಖ್ಯೆಯನ್ನು ತೊಡೆದುಹಾಕಲು ನೋಟು ರದ್ದತಿ ಮತ್ತು ಜಿಎಸ್‌ಟಿ ಅಸ್ತ್ರಗಳಾಗಿವೆ. ಅದಾನಿ-ಅಂಬಾನಿ ಪಾವತಿಸುವಷ್ಟೇ ಪ್ರಮಾಣದ ಜಿಎಸ್‌ಟಿಯನ್ನು ಸಾಮಾನ್ಯ ಜನರು ಪಾವತಿಸುತ್ತಾರೆ... ನರೇಂದ್ರ ಮೋದಿ ಶತಕೋಟ್ಯಾಧಿಪತಿಗಳ 16 ಲಕ್ಷ ಕೋಟಿ ರೂ. ಸಾಲವನ್ನು ಮನ್ನಾ ಮಾಡಿದರು. ಆದರೆ ರೈತರು, ಕಾರ್ಮಿಕರು ಮತ್ತು ವಿದ್ಯಾರ್ಥಿಗಳ ಸಾಲಗಳನ್ನು ಮನ್ನಾ ಮಾಡಲಾಗಿದೆಯೇ? ನೀವು ಜಿಎಸ್‌ಟಿ ಪಾವತಿಸುತ್ತೀರಿ ಮತ್ತು ಅದಾನಿ ಮತ್ತು ಅಂಬಾನಿ ಭಾರತದಲ್ಲಿ ಚೀನೀ ವಸ್ತುಗಳನ್ನು ಮಾರಾಟ ಮಾಡುತ್ತಾರೆ. ಚೀನಾದಲ್ಲಿ ಜನರಿಗೆ ಉದ್ಯೋಗ ಸಿಗುತ್ತದೆ ಮತ್ತು ಆ ಉದ್ಯೋಗಗಳು ನಿಮ್ಮ ಮಕ್ಕಳ ಕೈಯಿಂದ ಕದಿಯಲ್ಪಡುತ್ತವೆ" ಎಂದು ಅವರು ಹೇಳಿದರು.
ಮಹಾಕುಂಭ ಮೇಳದಲ್ಲಿ ಪುಣ್ಯ ಸ್ನಾನ ಮಾಡಿ ಮೂಲಧರ್ಮಕ್ಕೆ ಮರಳಿದರೇ ರೆಮೋ ಡಿಸೋಜ?
