ಅಂದು ಗೆಲುವಿಗೆ ಆಶೀರ್ವದಿಸಿದ್ದ ತಾಯಿ, ಇಂದು ಮೋದಿ ಏಕಾಂಗಿ!
Heeraben Modi give Blessing to Narendra Modi ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಮತ್ತೊಮ್ಮೆ ಬಹುಮತ ಪಡೆದುಕೊಂಡು ಅಧಿಕಾರಕ್ಕೆ ಏರಲು ಸಜ್ಜಾಗಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿಗೆ ಬಿಜೆಪಿ ಏಕಾಂಗಿಯಾಗಿ ಬಹುಮತ ಬಂದಿಲ್ಲ ಎನ್ನುವುದರ ಕೊರಗು ಕಾಡಿದೆ.
ಬೆಂಗಳೂರು (ಜೂ.5): ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿ ಪಟ್ಟವೇರಲು ಸಜ್ಜಾಗಿದ್ದಾರೆ. ಆದರೆ, ಮೋದಿ ಮುಖದಲ್ಲಿ ಮೊದಲಿದ್ದಂತ ಹುಮ್ಮಸ್ಸಿಲ್ಲ ಅನ್ನೋದನ್ನು ಕೆಲವರು ಗಮನಿಸಿದ್ದಾರೆ. ಅದಕ್ಕೆ ಪ್ರಮುಖ ಕಾರಣ ಪ್ರಧಾನಿ ನರೇಂದ್ರ ಮೋದಿ ತಮ್ಮ ರಾಜಕೀಯ ಜೀವನದಲ್ಲಿ ಇದೇ ಮೊದಲ ಬಾರಿಗ ಮೈತ್ರಿಯೊಂದಿಗೆ ಸರ್ಕಾರ ನಡೆಸಬೇಕಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ ಮ್ಯಾಜಿಕ್ ನಂಬರ್ ತಲುಪೋದರಿಂದ 32 ಸೀಟ್ ಹಿನ್ನಡೆ ಕಂಡಿದೆ. ಉತ್ತರ ಪ್ರದೇಶದಲ್ಲಿ ರಾಜಕೀಯ ಲೆಕ್ಕಾಚಾರ ದೊಡ್ಡ ಮಟ್ಟದಲ್ಲಿ ಬಿಜೆಪಿ ಪಾಲಿಗೆ ಹಿನ್ನಡೆಯಾಗಿದೆ. ಅದರೊಂದಿಗೆ ಮಹಾರಾಷ್ಟ್ರ, ಬಂಗಾಳ ಹಾಗೂ ದಕ್ಷಿಣದ ತಮಿಳುನಾಡಿನ ಯೋಜನೆಗಳೂ ಬಿಜೆಪಿಗೆ ಕೈಕೊಟ್ಟಿವೆ. ಇದೆಲ್ಲದರ ನಡುವೆಯೂ ಎನ್‌ಡಿಎ ಮೈತ್ರಿಯ ಭಾಗವಾಗಿರುವ ಜೆಡಿಯು ಹಾಗೂ ಟಿಡಿಪಿ ಸಹಾಯದಿಂದ ಬಿಜೆಪಿ ಅಧಿಕಾರಕ್ಕೇರಲು ಸಿದ್ಧವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರೇ ಪ್ರಧಾನಿ ಅಭ್ಯರ್ಥಿಯಾಗಿರಲಿದ್ದಾರೆ ಎಂದು ಬುಧವಾರ ನಡೆದ ಎನ್‌ಡಿಎ ಸಭೆಯಲ್ಲಿ ನಿರ್ಣಯ ಮಾಡಲಾಗಿದೆ.
ಇದೆಲ್ಲದರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಒಂದು ಫೋಟೋ ವೈರಲ್ ಆಗಿದೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ತಾಯಿಯ ಜೊತೆಗಿರುವ ಫೋಟೋವನ್ನು ಹಂಚಿಕೊಳ್ಳಲಾಗಿದೆ. 2014ರ ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಯಶಸ್ಸು ಪಡೆದ ಬಳಿಕ ಗುಜರಾತ್‌ಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ತಾಯಿಯಿಂದ ಆಶೀರ್ವಾದ ಪಡೆದುಕೊಂಡಿದ್ದರು. ಇನ್ನು 2019ರ ಚುನಾವಣೆಯಲ್ಲೂ ಗೆಲುವು ಸಾಧಿಸಿದ ಬಳಿಕ ಮೋದಿ, ತಾಯಿಯ ಬಳಿ ಹೋಗಿ ಆಕೆಯ ಕಾಲು ಹಿಡಿದು ಆಶೀರ್ವಾದ ಪಡೆದುಕೊಂಡಿದ್ದರು.
ಆದರೆ, ಈ ಭಾರಿ ಹಾಗಾಗಿಲ್ಲ. ಮೋದಿ ಅವರ ಬದುಕಿನಲ್ಲಿ ಈಗ ಏಕಾಂಗಿಯಾಗಿದ್ದಾರೆ. ಹಿಂದಿನ ಎರಡು ಚುನಾವಣೆ ಗೆಲುವಿನಲ್ಲಿ ಖುಷಿಯಿಂದಲೇ ಆಶೀರ್ವದಿಸಿದ್ದ ತಾಯಿ, ತನ್ನ ಮಗ ಮೂರನೇ ಬಾರಿಗೆ ಪ್ರಧಾನಿ ಪಟ್ಟಕ್ಕೇರುವಾಗ ಜಗತ್ತಿನಲ್ಲಿಲ್ಲ. ಇದು ಮೋದಿ ಅವರ ಮುಖಭಾವದಲ್ಲೂ ಢಾಳಾಗಿ ಕಾಣುತ್ತಿದೆ. ಹಾಗೇನಾದರೂ ಹೀರಾಬೆನ್ ಮೋದಿ ಈಗ ಬದುಕಿದ್ದರೆ, ಪ್ರಧಾನಿ ಮೋದಿ ಇಷ್ಟೊತ್ತಿಗಾಗಲೇ ಆಕೆಯೆ ಆಶೀರ್ವಾದ ಪಡೆದುಕೊಳ್ಳಲು ಗುಜರಾತ್‌ಗೆ ಹೋಗುತ್ತಿದ್ದರು. ಆದರೆ, ಮೋದಿ ಅವರಿಗೆ ಈ ಅದೃಷ್ಟವಿಲ್ಲ. 2022ರ ಡಿಸೆಂಬರ್ 30ರಂದು ಪ್ರಧಾನಿ ಮೋದಿ ಅವರ ತಾಯಿ ಹೀರಾಬೆನ್ ಮೋದಿ ನಿಧನರಾಗಿದ್ದರು. ಅದೇ ಡಿಸೆಂಬರ್ 4 ರಂದು ಗುಜರಾತ್ ವಿಧಾನಸಭೆ ಚುನಾವಣೆಯ ಸಮಯದಲ್ಲಿ ಪ್ರಧಾನಿ ಮೋದಿ ತಾಯಿಯ ಜೊತೆ ಕೊನೆಯದಾಗಿ ಕಾಣಿಸಿಕೊಂಡಿದ್ದರು.
ಜನಸಾಮಾನ್ಯರಂತೆ ಪ್ರಧಾನಿ ಮೋದಿ ತಾಯಿಗೆ ಹರಿದ್ವಾರದಲ್ಲಿ ಅಸ್ಥಿ ವಿಸರ್ಜನೆ
ತಮ್ಮ ತಾಯಿಯ ತ್ಯಾಗ ಹಾಗೂ ಜೀವನವೇ ನನ್ನ ಮನೋಭಾವವನ್ನು ಬೆಳೆಸಿತು ಎನ್ನುವ ಪ್ರಧಾನಿ ಮೋದಿ, ಇಂದು ನಾನು ಆತ್ಮವಿಶ್ವಾಸದಿಂದ ಇರಲೂ ಕೂಡ ಆಕೆಯೇ ಕಾರಣ ಎಂದಿದ್ದರು. ಹಬ್ಬದ ಸಂದರ್ಭದಲ್ಲಿ ಹಾಗೂ ಪ್ರಮುಖ ಕಾರ್ಯಕ್ರಮಗಳ ವೇಳೆ ಹೀರಾಬೆನ್ ಮೋದಿ ಅವರ ಆಶೀರ್ವಾದ ಪಡೆಯದೇ ಮೋದಿ ಎಲ್ಲಿಯೀ ಹೋಗುತ್ತಿರಲಿಲ್ಲ. ಹೀರಾಬೆನ್ ಮೋದಿ ತೀರಿಹೋದ ವಿಚಾರ ಮಾಧ್ಯಮಗಳಲ್ಲಿ ಸುದ್ದಿಯಾಗುವ ವೇಳೆಗೆ ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ಗೆ ಆಗಮಿಸಿ, ಅವರ ಅಂತ್ಯಸಂಸ್ಕಾರವನ್ನು ಅತ್ಯಂತ ಸರಳವಾಗಿ ನೆರವೇರಿಸಿ ದೆಹಲಿಗೆ ವಾಪಸಾಗಿದ್ದರು.
ನನ್ನ ತಾಯಿಯೇ ನನ್ನ ಜೀವನದ ದೊಡ್ಡ ಶಿಕ್ಷಕಿ: ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ಮೋದಿ ಅವರ ತಾಯಿ ತೀರಿಹೋಗಿದ್ದಾರೆ ಹಾಗೂ ಮೋದಿ ಗುಜರಾತ್‌ಗೆ ಬಂದು ಅಂತ್ಯಸಂಸ್ಕಾರ ನಡೆಸಿದ್ದಾರೆ ಎನ್ನುವ ಹೊತ್ತಿಗಾಗಲೇ, ಮೋದಿ ದೆಹಲಿಯಲ್ಲಿ ವಿವಿಧ ಅಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಭಾಗಿಯಾಗಿದ್ದರು. ದೇಶದ ಎಲ್ಲಾ ತಾಯಂದಿರರಂತೆ ನನ್ನ ತಾಯಿಯೂ ಅಸಾಧಾರಣವಾಗಿದ್ದರೂ, ಸರಳವಾಗಿದ್ದರು ಎಂದು ಮೋದಿ ತಾಯಿಯ ಬಗ್ಗೆ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ.