ಸಹಗಾಂಜ್‌(ಫೆ.25): ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ‘ನರೇಂದ್ರ ಮೋದಿ ದೊಡ್ಡ ದಂಗೆಕೋರ. ಅವರು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗಿಂತ ಘೋರ ಪತನ ಕಾಣಲಿದ್ದಾರೆ’ ಎಂದು ಕಿಡಿಕಾರಿದರು.

ಹೂಗ್ಲಿ ಜಿಲ್ಲೆಯ ಸಹಗಾಂಜ್‌ನಲ್ಲಿ ನಡೆದ ಚುನಾವಣಾ ರಾರ‍ಯಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ದೇಶಾದ್ಯಂತ ಸುಳ್ಳು ಮತ್ತು ಹಗೆತನವನ್ನು ಹರಡುತ್ತಿದ್ದಾರೆ. ಆದರೆ ಟ್ರಂಪ್‌ ಕತೆ ಏನಾಯಿತೋ ಅದಕ್ಕಿಂತ ಘೋರವಾದ ಪತನವನ್ನು ಮೋದಿ ಕಾಣಲಿದ್ದಾರೆ. ಹಿಂಸಾಚಾರದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ’ ಎಂದು ಹೇಳಿದರು.

ಇದೇ ವೇಳೆ ಕಲ್ಲಿದ್ದಲು ಕಳ್ಳತನ ಪ್ರಕರಣದಲ್ಲಿ ಟಿಎಂಸಿ ಸಂಸದ ಅಭಿಷೇಕ್‌ ಬ್ಯಾನರ್ಜಿ ಪತ್ನಿ ವಿಚಾರಣೆ ನಡೆಸುತ್ತಿರುವ ಸಿಬಿಐ ಕ್ರಮವನ್ನು ಖಂಡಿಸಿದರು. ‘ಇದು ಬಂಗಾಳದ ಮಹಿಳೆಯರಿಗೆಎ ಮಾಡಿದ ಅವಮಾನ’ ಎಂದು ಕಿಡಿಕಾರಿದರು.

ಕ್ರಿಕೆಟಿಗರು ಟಿಎಂಸಿ, ಬಿಜೆಪಿಗೆ:

ಈ ನಡುವೆ ಕ್ರಿಕೆಟಿಗ ಮನೋಜ್‌ ತಿವಾರಿ ಮಮತಾ ಉಪಸ್ಥಿತಿಯಲ್ಲಿ ಟಿಎಂಸಿಗೆ ಸೇರ್ಪಡೆಯಾದರು. ಇನ್ನೊಬ್ಬ ಕ್ರಿಕೆಟಿಗ ಅಶೋಕ್‌ ದಿಂಡಾ ಬಿಜೆಪಿ ಸೇರಿದ್ದಾರೆ.