ನಾಗ್ಪುರದಲ್ಲಿ ಬಾಡಿಗೆ ನೀಡದೇ ಪರಾರಿಯಾಗಿದ್ದ ಬಾಡಿಗೆದಾರನ ಕೋಣೆಯನ್ನು ಮಾಲೀಕರು ತೆರೆದು ನೋಡಿದಾಗ 48 ಲಕ್ಷ ರೂ. ಮೌಲ್ಯದ ನೋಟುಗಳು ಪತ್ತೆಯಾಗಿವೆ. ಪೊಲೀಸರು ಪರಿಶೀಲಿಸಿದಾಗ ಅವು ನಕಲಿ ನೋಟುಗಳು ಮತ್ತು ಅಲ್ಲಿ ಪ್ರಿಂಟರ್ ಸೇರಿದಂತೆ ಮುದ್ರಣ ಸಾಮಗ್ರಿಗಳು ಇರುವುದು ಬೆಳಕಿಗೆ ಬಂದಿದೆ. ಆರೋಪಿ ಪುಷ್ಪಕ್ ಕೃಷ್ಣ ಭಂಡಾರ್ಕರ್ಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ನಾಗ್ಪುರ: ಬಾಡಿಗೆ ಸರಿಯಾಗಿ ಕೊಡದ ಕಾರಣ, ಮನೆ ಮಾಲೀಕ ಬಾಡಿಗೆದಾರರನ್ನು ಓಡಿಸಿದ್ದರೆ, ಆ ಮನೆಯಲ್ಲಿ 48 ಲಕ್ಷದಷ್ಟು ನೋಟಿನ ಕಂತೆ ಸಿಕ್ಕಿರುವ ಶಾಕಿಂಗ್ ಘಟನೆಯೊಂದು ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ಆರೋಪಿ ಪುಷ್ಪಕ್ ಕೃಷ್ಣ ಭಂಡಾರ್ಕರ್ ಸುಮಾರು ಒಂದೂವರೆ ವರ್ಷಗಳ ಹಿಂದೆ ಕೊಠಡಿಯನ್ನು ಬಾಡಿಗೆಗೆ ಪಡೆದಿದ್ದ. ಬಾಡಿಗೆ ಒಪ್ಪಂದ ಕಳೆದ ಜನವರಿಯಲ್ಲಿಯೇ ಕೊನೆಗೊಂಡಿತ್ತು. ಆ ಬಳಿಕ ಬಾಡಿಗೆಯನ್ನೇ ಕೊಟ್ಟಿರಲಿಲ್ಲ. ಕೇಳಿದರೆ ತನ್ನ ಬಳಿ ಹಣ ಇಲ್ಲ ಎಂದು ಹೇಳುತ್ತಿದ್ದ. ಮನೆ ಮಾಲೀಕ ರಮೇಶ್ ಬೇಸತ್ತು ಮನೆಯನ್ನು ಖಾಲಿ ಮಾಡುವಂತೆ ಕೇಳಿದಾಗ, ಆತ ಚಾಕುವಿನಿಂದ ಬೆದರಿಕೆ ಹಾಕಿದ್ದ.
ಬಳಿಕ ಮಾಲೀಕ ವಾಥೋಡಾ ಪೊಲೀಸರಿಗೆ ದೂರು ನೀಡಿದ್ದರು. ಇಷ್ಟಾಗುತ್ತಿದ್ದಂತೆಯೇ, ಬಾಡಿಗೆದಾರ ಇದ್ದಕ್ಕಿದ್ದಂತೆಯೇ ಕಣ್ಮರೆಯಾದ. ಮನೆ ಮಾಲೀಕ ರಮೇಶ್, ಈ ಕೋಣೆಯ ಬೀಗವನ್ನು ಒಡೆದು ನೋಡಿದಾಗ ನಗದು, ಪೆನ್ನುಗಳು ಮತ್ತು ಕಾಗದದ ರಾಶಿಗಳಂತೆ ಕಾಣುವ ನೋಟುಗಳ ಬಂಡಲ್ಗಳು ಕಂಡುಬಂದಿದ್ದು, ಅವರು ಬೆಚ್ಚಿ ಬಿದ್ದರು. ಮನೆ ಮಾಲೀಕ ತಕ್ಷಣ ಪೊಲಿಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ವಾಥೋಡಾ ಪೊಲೀಸರು, ನೋಟುಗಳನ್ನು ಪರಿಶೀಲಿಸಿದಾಗ, ಅವೆಲ್ಲವೂ ಖೋಟಾ ನೋಟು ಅರ್ಥಾತ್ ನಕಲಿ ನೋಟು ಎನ್ನುವುದು ತಿಳಿದಿದೆ.
48 ಲಕ್ಷ ನಕಲಿ ನೋಟುಗಳು
ಕೋಣೆಯಲ್ಲಿದ್ದ ನಕಲಿ ನೋಟುಗಳ ಕಟ್ಟುಗಳು, ಪ್ರಿಂಟರ್ ಮತ್ತು ಮುದ್ರಣ ಸಾಮಗ್ರಿಗಳನ್ನು ಕಂಡು ಪೊಲೀಸರು ಬೆಚ್ಚಿಬಿದ್ದರು. ಅಲ್ಲದೆ, ಭಾಗಶಃ ಮುದ್ರಿತವಾದ ನೋಟುಗಳು ಸೇರಿದಂತೆ ಸುಮಾರು 48 ಲಕ್ಷ ರೂಪಾಯಿ ಮೌಲ್ಯದ ಇತರ ಸಾಮಗ್ರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿ ನಾಗ್ಪುರದ ತ್ರಿಮೂರ್ತಿ ನಗರದ ನಿವಾಸಿ ಪುಷ್ಪಕ್ ಕೃಷ್ಣ ಭಂಡಾರ್ಕರ್ (ಅಲಿಯಾಸ್ ಬೆಂದಾನೆ) ಎಂದು ತಿಳಿದುಬಂದಿದ್ದು, ಆತನಿಗಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ.
ತನಿಖೆ ಮಾಡ್ತಿರೋ ಪೊಲೀಸರು
ತನಿಖಾಧಿಕಾರಿಗಳು ವಶಪಡಿಸಿಕೊಂಡ ದಾಖಲೆಗಳನ್ನು ವಿಶ್ಲೇಷಿಸುತ್ತಿದ್ದಾರೆ ಮತ್ತು ಶಂಕಿತ ನಕಲಿ ನೋಟುಗಳ ಚಲಾವಣೆಯನ್ನು ಪರಿಶೀಲಿಸುತ್ತಿದ್ದಾರೆ ಅಥವಾ ಉತ್ಪಾದನೆಯಲ್ಲಿ ಇತರ ಸಹ-ಸಂಚುಕೋರರು ಭಾಗಿಯಾಗಿದ್ದಾರೆಯೇ ಎಂದು ಪರಿಶೀಲಿಸುತ್ತಿದ್ದಾರೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಪುಷ್ಪಕ್ ಸುಮಾರು ಒಂದೂವರೆ ವರ್ಷದ ಹಿಂದೆ ಖಾರ್ಬಿ ಪ್ರದೇಶದಲ್ಲಿ ಕೋಣೆಯೊಂದನ್ನು ಬಾಡಿಗೆಗೆ ಪಡೆದಿದ್ದ. ಕೊನೆಗೆ ಬಾಡಿಗೆ ಕೊಡದೇ ಪರಾರಿಯಾಗಿದ್ದ. ಸ್ಥಳಕ್ಕೆ ಆಗಮಿಸಿದ ಪೊಲೀಸ್ ತಂಡಗಳು, 500 ರೂಪಾಯಿಯ ನಕಲಿ ನೋಟುಗಳ ಕಟ್ಟುಗಳನ್ನು ಪತ್ತೆಹಚ್ಚಿದವು. ವಶಪಡಿಸಿಕೊಂಡ ನೋಟುಗಳ ಮೊತ್ತವನ್ನು ಅಂದಾಜಿಸಲು ಹಣ ಎಣಿಸುವ ಯಂತ್ರವನ್ನು ತರಿಸಲಾಯಿತು. ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿಯು ಸುಮಾರು 37 ಲಕ್ಷ ರೂಪಾಯಿ ಮೌಲ್ಯದ ನಕಲಿ ನೋಟುಗಳನ್ನು ಮುದ್ರಿಸಿದ್ದಾನೆ ಎಂದು ತಿಳಿದುಬಂದಿದೆ.







