ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯಗಳು ಮುಂದುವರೆದಿದ್ದು, ಇತ್ತೀಚೆಗೆ ನಾಪತ್ತೆಯಾಗಿದ್ದ ಅಭಿ ಎಂಬ ಹಿಂದೂ ವಿದ್ಯಾರ್ಥಿಯ ಶವ ನವೊಗಾಂವ್ ಜಿಲ್ಲೆಯ ನದಿಯೊಂದರಲ್ಲಿ ಪತ್ತೆಯಾಗಿದೆ.

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಪ್ರಕರಣಗಳು ಅಲ್ಲಲ್ಲಿ ನಡೆಯುತ್ತಲೇ ಇದೆ. ಅಲ್ಲಿನ ಹಿಂದೂಗಳು ಹಾಗೂ ಅಲ್ಲಿರುವ ಭಾರತೀಯರು ಅಪಾಯದಲ್ಲಿರುವುದರಿಂದ ಈಗಾಗಲೇ ಭಾರತ ಸರ್ಕಾರವೂ ತನ್ನ ರಾಯಭಾರಿಗಳ ಕುಟುಂಬವನ್ನು ಬಾಂಗ್ಲಾದೇಶವನ್ನು ತೊರೆಯುವಂತೆ ಸೂಚನೆ ನೀಡಿದೆ. ಕೆಲ ವರದಿಗಳ ಪ್ರಕಾರ ಬಾಂಗ್ಲಾದೇಶದಲ್ಲಿ ಇದುವರೆಗೆ 15ಕ್ಕೂ ಹೆಚ್ಚು ಬಾಂಗ್ಲಾದೇಶಿ ಹಿಂದೂಗಳ ಕೊಲೆಯಾಗಿದೆ. ಈ ಮಧ್ಯೆ ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ ಇಲ್ಲಿನ ಹಿಂದೂ ವಿದ್ಯಾರ್ಥಿಯೋರ್ವನ ಶವ ನದಿಯೊಂದರಲ್ಲಿ ಪತ್ತೆಯಾಗಿದೆ. ಬಾಂಗ್ಲಾದೇಶದ ನಾವೊಗಾಂವ್ ಜಿಲ್ಲೆಯ ನದಿಯಲ್ಲಿ ವಿದ್ಯಾರ್ಥಿ ಅಭಿ ಶವ ಪತ್ತೆಯಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಬಾಂಗ್ಲಾದೇಶದ ದಿ ಡೈಲಿ ಅಗ್ರಜಾತ್ರ ಪ್ರತಿದಿನ್ ವರದಿಯ ಪ್ರಕಾರ, ಶನಿವಾರ ಮಧ್ಯಾಹ್ನ ನೌಗಾಂವ್ ಪಟ್ಟಣದ ಕಲಿತಾಲಾ ಸ್ಮಶಾನದ ಬಳಿಯ ನದಿಯಲ್ಲಿ ವಿದ್ಯಾರ್ಥಿ ಅಭಿ ಶವ ಪತ್ತೆಯಾಗಿದೆ.

ಪ್ರಾರಂಭದಲ್ಲಿ ಇದು ಯಾರ ಶವ ಎಂಬುದು ಪತ್ತೆಯಾಗಿರಲಿಲ್ಲ, ಆದರೆ ನಂತರದಲ್ಲಿ ಅದನ್ನು ಹಿಂದೂ ವಿದ್ಯಾರ್ಥಿ ಅಭಿ ಅವರದ್ದು ಎಂದು ಗುರುತಿಸಲಾಗಿದೆ. ಅಭಿ ನವೊಂಗಾವ್ ಜಿಲ್ಲೆಯ ಸರ್ಕಾರಿ ಕಾಲೇಜೊಂದರಲ್ಲಿ ಮ್ಯಾನೇಜ್ಮೆಂಟ್‌ ವಿಭಾಗದಲ್ಲಿ ಅಧ್ಯಯನ ಮಾಡುತ್ತಿದ್ದ. ತಮ್ಮ ಪದವಿಯ 4ನೇ ವರ್ಷದಲ್ಲಿ ಆತ ಓದುತ್ತಿದ್ದ. ಜನವರಿ 11ರಿಂದ ಆತ ನಾಪತ್ತೆಯಾಗಿದ್ದ ಎಂದು ಆತನ ಕುಟುಂಬದವರು ತಿಳಿಸಿದ್ದಾರೆ. ವಿದ್ಯಾರ್ಥಿ ಶವ ನದಿಯಲ್ಲಿ ಪತ್ತೆಯಾಗಿದೆ ಎಂಬ ವಿಚಾರ ತಿಳಿಯುತ್ತಿದ್ದಂತೆ ಅಭಿ ಕುಟುಂಬದವರು ನದಿ ದಂಡೆಗೆ ಆಗಮಿಸಿದ್ದು, ಆತ ಧರಿಸಿದ್ದ ಬಟ್ಟೆ ನೋಡಿ ಕುಟುಂಬದವರು ಶವ ಆತನದ್ದೇ ಎಂದು ಗುರುತಿಸಿದ್ದಾರೆ. ಆದರೆ ಆತನ ಸಾವಿಗೆ ಕಾರಣ ಏನು ಎಂಬ ಬಗ್ಗೆ ಇನ್ನಷ್ಟೇ ತಿಳಿದು ಬರಬೇಕಿದೆ.

ಅಭಿ ಬೊಗುರಾ ಜಿಲ್ಲೆಯ ಆದಮ್‌ದಿಘಿ ಉಪಜಿಲ್ಲಾದ ಸಂತಹಾರ್ ನಿವಾಸಿ ರಮೇಶ್ ಚಂದ್ರ ಅವರ ಮಗ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ನೌಗಾಂವ್ ಸದರ್ ಪೊಲೀಸ್ ಠಾಣಾಧಿಕಾರಿ ನಿಯಾಮುಲ್ ಇಸ್ಲಾಂ ತಿಳಿಸಿದ್ದಾರೆ. ಶವಪರೀಕ್ಷೆಯ ವರದಿ ಬಂದ ನಂತರ ಸಾವಿಗೆ ಕಾರಣವನ್ನು ನಿರ್ಧರಿಸಲಾಗುವುದು ಎಂದು ಅವರು ಹೇಳಿದ್ದಾರೆ. ಬಾಂಗ್ಲಾದೇಶದ ಹಲವು ಜಿಲ್ಲೆಗಳಲ್ಲಿ ಅಲ್ಪಸಂಖ್ಯಾತ ಹಿಂದೂಗಳ ವಿರುದ್ಧ ಹೆಚ್ಚುತ್ತಿರುವ ಹಿಂಸಾತ್ಮಕ ಘಟನೆಗಳ ಮಧ್ಯೆ ಇದು ಸಂಭವಿಸಿದೆ. ಬಾಂಗ್ಲಾದೇಶದಾದ್ಯಂತ ಸರಣಿ ಹಿಂಸಾತ್ಮಕ ದಾಳಿಗಳಲ್ಲಿ ಕನಿಷ್ಠ 17 ಜನರು ಸಾವನ್ನಪ್ಪಿದ್ದಾರೆ. ಘಟನೆಗೆ ಸಂಬಂಧಿಸಿದಂತೆ 14 ಪ್ರಕರಣಗಳು ದಾಖಲಾಗಿದ್ದು, 21 ಜನರನ್ನು ಬಂಧಿಸಲಾಗಿದೆ, ಆದರೆ ನಾಲ್ಕು ಪ್ರಕರಣಗಳಲ್ಲಿ ಯಾವುದೇ ಬಂಧನ ಆಗಿಲ್ಲ.

ಗುಂಪು ಹಿಂಸಾಚಾರ ಮತ್ತು ಸಾರ್ವಜನಿಕರ ಶಿಕ್ಷೆಯಿಂದಲೇ ಹಲವಾರು ಸಾವುಗಳು ಸಂಭವಿಸಿವೆ. ಮೈಮೆನ್ಸಿಂಗ್‌ನಲ್ಲಿ ದೀಪು ಚಂದ್ರ ದಾಸ್ ಅವರನಂತೂ ಮೂಲಭೂತವಾದಿಗಳು ಹೊಡೆದು ಸುಟ್ಟು ಬಹಳ ಕ್ರೂರವಾಗಿ ಹತ್ಯೆ ಮಾಡಿದ್ದರು. ಹಾಗೆಯೇ ಹಲ್ಲೆಯಿಂದ ಸಾವನ್ನಪ್ಪಿದ ಮತ್ತೊಬ್ಬ ಹಿಂದೂ ಖೋಕೋನ್ ಚಂದ್ರ ದಾಸ್ ಸೇರಿದಂತೆ ಹಲವಾರು ಶಂಕಿತರು ಇನ್ನೂ ತಲೆಮರೆಸಿಕೊಂಡಿದ್ದಾರೆ.

ಇದನ್ನೂ ಓದಿ: ಎಲ್ಐಸಿ ಕಚೇರಿಯಲ್ಲಿ ಬೆಂಕಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಸಹೋದ್ಯೋಗಿಯಿಂದಲೇ ಎಲ್‌ಐಸಿ ಮಹಿಳಾ ಅಧಿಕಾರಿಯ ಕೊಲೆ

ಹಿಂದೂಗಳನ್ನೇ ಗುರಿ ಮಾಡಿ ನಡೆಸಲಾದ ಹಲ್ಲೆ ಹಾಗೂ ಹಿಂಸಾಚಾರದಲ್ಲಿ ಈಗಾಗಲೇ ಹಲವರು ಸಾವನ್ನಪ್ಪಿದ್ದಾರೆ. ಜೆಸ್ಸೋರ್‌ನಲ್ಲಿ ಪತ್ರಕರ್ತ ಮತ್ತು ಉದ್ಯಮಿ ರಾಣಾ ಪ್ರತಾಪ್ ಬೈರಾಗಿ ಅವರನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಓರ್ವನನ್ನು ಬಂಧಿಲಾಗಿತ್ತು. ಹಾಗೆಯೇ ನರಸಿಂಗ್ಡಿಯಲ್ಲಿ ಶರತ್ ಮಣಿ ಚಕ್ರವರ್ತಿ ಅವರನ್ನು ಅವರು ವ್ಯವಹಾರ ನಡೆಸುತ್ತಿದ್ದ ಸ್ಥಳದಲ್ಲೇ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಹಾಗೆಯೇ ಆಭರಣ ವ್ಯಾಪಾರಿ ಪ್ರಾಂಟೋಸ್ ಕರ್ಮಾಕರ್ ಅವರನ್ನು ಅವರ ಮನೆಯಿಂದ ಆಮಿಷವೊಡ್ಡಿ ಹೊರತಂದು ಬಳಿಕ ಗುಂಡಿಕ್ಕಿ ಕೊಂದಿದ್ದರು ಮತ್ತು ಮೀನು ವ್ಯಾಪಾರಿ ಉತ್ಪಲ್ ಸರ್ಕಾರ್ ಅವರನ್ನು ಫರೀದ್‌ಪುರದಲ್ಲಿ ದುಷ್ಕರ್ಮಿಗಳು ಕಡಿದು ಕೊಂದಿದ್ದರು. ಹಾಗೆಯೇ ಪೊಲೀಸ್‌ ಕಸ್ಟಡಿಯಲ್ಲಿದ್ದ ಪ್ರೊಲೋಯ್ ಚಾಕಿ ಎಂಬುವವರು ಸಾವನ್ನಪ್ಪಿದ್ದರು. ವೈದ್ಯಕೀಯ ಆರೈಕೆ ನಿರಾಕರಿಸಿದ್ದೆ ಅವರ ಸಾವಿಗೆ ಕಾರಣ ಎಂದು ಕುಟುಂಬದವರು ದೂರಿದ್ದಾರೆ. ಪ್ರೊಲೋಯ್ ಚಾಕಿ ಸೇರಿದಂತೆ ಪೊಲೀಸ್‌ ಕಸ್ಟಡಿಯಲ್ಲೇ ಹಲವು ಹಿಂದೂಗಳು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಬರ್ತ್‌ಡೇ ಪಾರ್ಟಿಯ ಥ್ರಿಲ್ ರೈಡ್ ಆಯ್ತು ಲಾಸ್ಟ್ ರೈಡ್: ನಾಲ್ವರು ಸ್ನೇಹಿತರು ಜೊತೆಗೆ ಸಾವು