ಮುಂಬೈ(ಫೆ.16): ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಐತಿಹಾಸಿಕ ಆಜಾದ್ ಮೈದಾನದಲ್ಲಿ ಲಕ್ಷಾಂತರ ಸಿಎಎ ವಿರೋಧಿ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ವಿರೋಧಿ ಘೋಷಣೆ ಕೂಗಿದ ಪ್ರತಿಭಟನಾಕಾರರು, ಖ್ಯಾತ ಉರ್ದು ಕವಿ ಫೈಜ್ ಅಹ್ಮದ್ ಫೈಜ್ ಅವರ ‘ಹಮ್ ದೇಖೆಂಗೆ’ ಗೀತೆಯನ್ನು ಹಾಡಿದ್ದು ವಿಶೇಷವಾಗಿತ್ತು.

ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದಿದ್ದ ಪ್ರತಿಭಟನಾಕಾರರು, ಮೋದಿ, ಶಾ ಸೇ ಆಜಾದಿ(ಮೋದಿ ಹಾಗೂ ಶಾ ಅವರಿಂದ ಸ್ವಾತಂತ್ರ್ಯ) ಎಂಬ ಘೋಷಣೆ ಕೂಗಿದರು. 

ಈ ವೇಳೆ ಸಿಎಎ ವಿರೋಧಿ ನಿರ್ಣಯವನ್ನು ಕೈಗೊಂಡ ಪ್ರತಿಭಟನಾಕಾರರು, ನಾವು ಈ ದೇಶದ ನಿವಾಸಿಗಳಾಗಿದ್ದು ಯಾವುದೇ ದಾಖಲೆ ತೋರಿಸುವುದಿಲ್ಲ ಎಂದು ಪ್ರತಿಜ್ಞೆಗೈದರು.

'CAA, NRC ಮೂರ್ಖ ಶಿಖಾಮಣಿಗಳ ಯಡವಟ್ಟು ಕಾಯ್ದೆಗಳು'

ಪ್ರತಿಭಟನೆಯಲ್ಲಿ ನಿವೃತ್ತ ನ್ಯಾಯಮೂರ್ತಿ ಕೊಲ್ಸೆ ಪಾಟೀಲ್, ಸಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್, ನಟ ಸುಶಾಂತ್ ಸಿಂಗ್, ಸಮಾಜವಾದಿ ಪಕ್ಷದ ನಾಯಕ ಅಬು ಆಜೀಮ್ ಆಜ್ಮಿ ಸೇರಿದಂತೆ ಇತರರು ಭಾಗವಹಿಸಿದ್ದರು.