ಹಾವೇರಿ(ಜ.30): ಪೌರತ್ವ ತಿದ್ದುಪಡಿ ಹಾಗೂ ನಾಗರಿಕ ನೋಂದಣಿ ಕಾಯ್ದೆಗಳು ಮೂರ್ಖ ಶಿಖಾಮಣಿಗಳ ಯಡವಟ್ಟು ಕಾಯ್ದೆಗಳಾಗಿದ್ದು, ಇವುಗಳಿಂದ ದೇಶದ ಶ್ರಮಿಕವರ್ಗ, ಮಹಿಳಾ ವರ್ಗ ದೊಡ್ಡ ಸಮಸ್ಯೆ ಎದುರಿಸಲಿದೆ. ಈ ಕಾಯ್ದೆಗಳು ಕೇವಲ ಸಂಘ ಪರಿವಾರ, ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್‌ ಶಾನಂಥವರಿಗೆ ಮಾತ್ರ ಬೇಕಾಗಿವೆ ಎಂದು ಸಾಮಾಜಿಕ ಹೋರಾಟಗಾರ ಸುಧೀರ್‌ ಮುರೋಳಿ ಹೇಳಿದರು.

ನಗರದ ಮುನ್ಸಿಪಲ್‌ ಮೈದಾನದಲ್ಲಿ ಬುಧವಾರ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆ ವಿರೋಧಿಸಿ ಸಂವಿಧಾನ ಸಂರಕ್ಷಣಾ ಸಮಿತಿ ಏರ್ಪಡಿಸಿದ್ದ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.

ಈ ದೇಶವನ್ನು ಕಟ್ಟಿದ್ದು ಮೋದಿ, ಅಮಿತಾ ಶಾ ಅಲ್ಲ. ದೇಶವನ್ನು ಕಟ್ಟಿದವರು ಕಾರ್ಮಿಕರು ಮತ್ತು ರೈತರು. ಬಿಜೆಪಿ ಈ ದೇಶ ಕಟ್ಟಿದವರನ್ನು ಕಡೆಗಣಿಸುತ್ತಿದೆ. ಬಿಜೆಪಿಗರ ಗುರಿ ಇರುವುದು ಅಂಬೇಡ್ಕರ್‌ ರಚಿಸಿದ ಸಂವಿಧಾನದ ಮೇಲೆ. ಹೀಗಾಗಿ ಜನರ ಗಮನ ಬದಲಾಯಿಸಿ ಸಂವಿಧಾನ ಆಶಯಗಳಿಗೆ ವಿರುದ್ಧವಾಗಿ ಸವಲತ್ತುಗಳನ್ನು ಜನರಿಂದ ಕಿತ್ತುಕೊಳ್ಳುವ ಹುನ್ನಾರ ನಡೆಸಿದ್ದಾರೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಪೌರತ್ವ ತಿದ್ದುಪಡಿ ಹಾಗೂ ನಾಗರಿಕ ನೋಂದಣಿ ಕಾಯ್ದೆಗಳು ಬಹುಸಂಖ್ಯಾತ ಕೆಳವರ್ಗದವರಿಗೆ ಬೇಕಾಗಿಲ್ಲ. ದೇಶ ಹಾಗೂ ಜನರನ್ನು ಕಾಪಾಡುವುದು ಐದು ವರ್ಷಕ್ಕೊಮ್ಮೆ ಬರುವ ರಾಜಕಾರಣಿಗಳಲ್ಲ. ನಮ್ಮನ್ನು ಕಾಪಾಡುವುದು ಈ ದೇಶದ ಸಂವಿಧಾನ. ಹೀಗಾಗಿ ಈ ಸಂವಿಧಾನ ಕಾಪಾಡಿಕೊಳ್ಳಲು ಎಲ್ಲರೂ ಜಾಗ್ರತರಾಗಬೇಕಾಗಿದೆ. ಪೌರತ್ವ ತಿದ್ದುಪಡಿ ಕಾಯಿದೆ ಜಾರಿಯಾದರೆ ಜನಸಾಮಾನ್ಯರು ಮಾತ್ರವಲ್ಲ ಶಾಸಕರು, ಸಂಸದರು ಸಹ ‘ನಮಗೆ ಪೌರತ್ವ ಕೊಡಿ’ ಎಂದು ಸರದಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ಬರುತ್ತದೆ ಎಂದು ಹೇಳಿದರು.

ನಿಜವಾದ ಹಿಂದು ಧರ್ಮವೇ ಬೇರೆ. ಸಂಘ ಪರಿವಾರ ಹೇಳುವ ಹಿಂದು ಧರ್ಮವೇ ಬೇರೆ. ಸಂಘ ಪರಿವಾರದ ಹಿಂದು ಧರ್ಮ, ಹಿಂದು ಮತೀಯ ಸಮುದಾಯಕ್ಕೆ ಸಂಬಂಧಿಸಿದ್ದಾದರೆ, ನಿಜವಾದ ಹಿಂದು ಧರ್ಮ ಸಕಲ ಮತ, ಧರ್ಮಗಳನ್ನು ಒಳಗೊಂಡ ವಿಶ್ವಧರ್ಮದ ಪ್ರತೀಕವಾಗಿದೆ. ಸಂಘ ಪರಿವಾರದವರು ಹಿಂದು ಧರ್ಮಕ್ಕೆ ಅಪಮಾನ ಮಾಡುವ ಮೂಲಕ ಬಸವಣ್ಣನವರ ತತ್ವಗಳ ವಿರೋಧಿಗಳಾಗಿದ್ದಾರೆ ಎಂದು ಕಿಡಿಕಾರಿದರು.

ಚಿಂತಕ ಸಯ್ಯದ್‌ ರೋಷನ್‌ ಮಾತನಾಡಿ, ದೇಶದಲ್ಲಿ ಸಂವಿಧಾನ ವಿರೋಧಿ ಕಾನೂನುಗಳನ್ನು ಜಾರಿಗೊಳಿಸಿದ್ದರಿಂದ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ. ದೇಶದ ಸಂವಿಧಾನದ ಪೀಠಿಕೆ ಸಮಾಜವಾದಿ, ಜಾತ್ಯತೀತ ರಾಷ್ಟ್ರ ಎಂದು ಹೇಳುತ್ತದೆ. ಆದರೆ ಮೋದಿ, ಅಮಿತ್‌ ಶಾ ಅವರು ಇದಕ್ಕೆ ವಿರೋಧವಾಗಿ ಆಡಳಿತ ನಡೆಸುತ್ತಿದ್ದಾರೆ. ದೇಶದಲ್ಲಿ ಸಿಎಎ ಕಾನೂನು ಜಾರಿಗೊಳಿಸುವ ಮೂಲಕ ಸಂವಿಧಾನ ಪೀಠಿಕೆ ಬುಡಮೇಲು ಮಾಡಿದ್ದಾರೆ ಎಂದರು.

ಹೋರಾಟಗಾರ ಮುನೀರ್‌ ಕಾಟಿಪಾಳ್ಯ ಮಾತನಾಡಿ, ದೇಶದಲ್ಲಿ ಜಾರಿಗೊಳಿಸಿರುವ ಕರಾಳ ಕಾಯ್ದೆಗಳಿಂದ ಭಾರತ ಪ್ರಪಂಚದಲ್ಲಿಯೇ ಗಮನ ಸೆಳೆಯುತ್ತಿದೆ. ಈ ಕಾನೂನುಗಳನ್ನು ವಿರೋಧಿಸಿ ವಿದೇಶಗಳಲ್ಲಿ ಸಹ ಜನರು ಪ್ರತಿಭಟಿಸಿ ಕಾನೂನುಗಳ ಹಿಂಪಡೆಯಲು ಒತ್ತಾಯಿಸುತ್ತಿರುವ ಘಟನೆಗಳು ನಡೆಯುತ್ತಿವೆ. ಸಂವಿಧಾನ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸುವ ಮೂಲಕ ಕೇಂದ್ರ ಸರ್ಕಾರ ದೇಶದ ಮುಸ್ಲಿಂ ಹಾಗೂ ಹಿಂದೂ ಬಾಂಧವರ ಮಧ್ಯ ಸಂಘರ್ಷ ಹುಟ್ಟುಹಾಕಲು ಮುಂದಾಗುತ್ತಿದೆ. ಜಾತ್ಯತೀತ, ಸಮಾಜವಾದಿ ರಾಷ್ಟ್ರವಾಗಿರುವ ದೇಶವನ್ನು ಪಾಕಿಸ್ತಾನದ ಮಾದರಿ ಹಿಂದೂ ರಾಷ್ಟ್ರ ಮಾಡಲು ಹೊರಟಿದ್ದಾರೆ. ಭಾರತ ಜಗತ್ತಿನಲ್ಲಿ ತೆಲೆ ಎತ್ತಿ ನಿಂತಿರುವುದು ಜಾತ್ಯತೀಯ, ಸಮಾಜವಾದಿ ರಾಷ್ಟ್ರ ಎಂಬ ಕಾರಣಕ್ಕೆ ಎಂಬುದನ್ನು ಬಿಜೆಪಿಗರು ಅರಿತುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಮೌಲಾನಾ ಸಲೀಮ್‌ ರಜಾ, ಫಾ. ಕಿರಣಕುಮಾರ, ಬಸವರಾಜ ಪೂಜಾರ, ಜಿ.ಎ. ಹಿರೇಮಠ, ಉಡಚಪ್ಪ ಮಾಳಗಿ, ಅಶೋಕ ಮರೆಗಣ್ಣನವರ, ಲಾಲ್‌ಸಾಬ ಚೋಪದಾರ, ಬಸವರಾಜ ಹೆಡಗೊಂಡ, ಕೆ.ಸಿ. ಅಕ್ಷತಾ, ಬಸವರಾಜ ಭೋವಿ, ವಿನಾಯಕ ಕುರುಬರ ಇತರರು ಇದ್ದರು.