ಫಿಟ್ನೆಸ್ ಸರ್ಟಿಫಿಕೆಟ್ ಇಲ್ಲದ ಆಟೋ ರಿಕ್ಷಾ, ಬಸ್‌ಗೆ ಪ್ರತಿ ದಿನ 50 ರೂ ದಂಡ, ಹೊಸ ನಿಯಮ!
ಫಿಟ್ನೆಸ್ ಸರ್ಟಿಫಿಕೇಟ್ ಇಲ್ಲದ ವಾಹನಗಳಿಗೆ ಇದೀಗ ದಂಡ ವಿಧಿಸುವ ಹೊಸ ನಿಮಯ ಜಾರಿಯಾಗಿದೆ. ಆಟೋ ರಿಕ್ಷಾ, ಟೂರಿಸ್ಟ್ ಬಸ್‌ಗಳು ಕಡ್ಡಾಯವಾಗಿ ಫಿಟ್ನೆಸ್ ಸರ್ಟಿಫಿಕೇಟ್ ಮಾಡಿಸಿಕೊಳ್ಳಬೇಕು. ಇಲ್ಲದಿದ್ದರೆ ಪ್ರತಿ ದಿನ 50 ರೂಪಾಯಿ ದಂಡ ವಿಧಿಸಲಾಗುತ್ತದೆ.
ಮುಂಬೈ(ಮೇ.28) ಹಳೇ ವಾಹನಗಳ ಮಾಲೀಕರು ಫಿಟ್ನಸ್ ಸರ್ಟಿಫಿಕೆಟ್ ಮಾಡಿಸಿಕೊಳ್ಳಬೇಕು. ವಾಹನ ರಸ್ತೆಯಲ್ಲಿ ಓಡಿಸಲು ಫಿಟ್ ಎಂದು ಸಾಬೀತಾದರೆ ಮಾತ್ರ ಎಫ್‌ಸಿ ನೀಡಲಾಗುತ್ತದೆ. ಆದರೆ ಹಲವರು ಎಫ್‌ಸಿ ಮಾಡಿಸದೇ ಓಡಿಸುತ್ತಾರೆ. ಇದೀಗ ಪ್ರಯಾಣಿಕರ ಸುರಕ್ಷತೆಗಾಗಿ ಹೊಸ ನಿಯಮ ಜಾರಿ ಮಾಡಲಾಗಿದೆ. ಫಿಟ್ನೆಸ್ ಸರ್ಟಿಫಿಕೆಟ್ ಇಲ್ಲದ ಆಟೋ ರಿಕ್ಷಾ, ಬಸ್‌ಗಳಿಗೆ ಪ್ರತಿ ದಿನ 50 ರೂಪಾಯಿ ದಂಡ ವಿಧಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ.
ಮುಂಬೈನಲ್ಲಿರುವ ಆಟೋ ರಿಕ್ಷಾ, ಟೂರಿಸ್ಟ್ ಬಸ್‌ಗಳು ಫಿಟ್ನೆಸ್ ಸರ್ಟಿಫಿಕೆಟ್ ಇಲ್ಲದೆ ಓಡಾಡುತ್ತಿದೆ. ಇದರಿಂದ ಪ್ರಯಾಣಿಕರ ಸುರಕ್ಷತೆ ಅಪಾಯ ಹೆಚ್ಚು. ಈ ಕುರಿತು ವರದಿ ಬಹಿರಂಗವಾಗುತ್ತಿದ್ದಂತೆ ಇದೀಗ ಮಹಾರಾಷ್ಟ್ರ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ಪ್ರಯಾಣಿಕರನ್ನು ಹೊತ್ತೊಯ್ಯುವ ವಾಹನಗಳು ಸುರಕ್ಷಿತವಾಗಿರಬೇಕು. ಎಂಜಿನ್, ಮೋಟಾರ್, ವಯರ್ ಸೇರಿದಂತೆ ಎಲ್ಲವೂ ಫಿಟ್ ಇದ್ದರೆ ಮಾತ್ರ ಪ್ರಯಾಣಿಕರಿಗೆ ಸುರಕ್ಷತೆ ನೀಡಲು ಸಾಧ್ಯ ಹೀಗಾಗಿ ಈ ನಿಯಮದಲ್ಲಿ ಯಾವುದೇ ರಾಜಿ ಇಲ್ಲ ಎಂದು ಮಹಾ ಸರ್ಕಾರ ಹೇಳಿದೆ.
4 ರು. ಹೆಚ್ಚು ಪಡೆದಿದ್ದಕ್ಕೆ ಸಾರಿಗೆ ಇಲಾಖೆಗೆ 8004 ರು. ದಂಡ
ಮೊದಲ ಹಂತದಲ್ಲಿ ಮುಂಬೈನಲ್ಲಿ ಈ ನಿಯಮ ಜಾರಿಯಾಗುತ್ತಿದೆ. ಹಂತ ಹಂತವಾಗಿ ಇತರ ನಗರ ಹಾಗೂ ಮಹಾರಾಷ್ಟ್ರದ ಎಲ್ಲೆಡೆ ನಿಯಮ ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ. ಹಳೇ ವಾಹನಗಳಲ್ಲಿ ವೈಯರ್ ಸಮಸ್ಯೆಗಳಿಂದ ಶಾರ್ಟ್ ಸರ್ಕ್ಯೂಟ್ ಆಗಿ ಬಸ್ ಹೊತ್ತಿ ಉರಿದ ಘಟನೆಗಳಿವೆ. ಬ್ರೇಕ್, ಎಂಜಿನ್ ಸೇರಿದಂತ ಇತರ ತಾಂತ್ರಿಕ ಸಮಸ್ಯೆಗಳಿಂದ ವಾಹನ ಪಲ್ಟಿಯಾಗಿ ಪ್ರಯಾಣಿಕರ ಸಾವು ನೋವು ಸಂಭವಿಸಿದ ಹಲವು ಘಟನೆಗಳಿವೆ. ಈ ಎಲ್ಲಾ ಕಾರಣಗಳಿಂದ ಇದೀಗ ಆಟೋ ರಿಕ್ಷಾ ಹಾಗೂ ಟೂರಿಸ್ಟ್ ಬಸ್‌ಗಳು ಕಡ್ಡಾಯವಾಗಿ ಫಿಟ್ನೆಸ್ ಸರ್ಟಿಫಿಕೇಟ್ ಮಾಡಿಸಿಕೊಳ್ಳಬೇಕು. ಇಲ್ಲದಿದ್ದರೆ ಪ್ರತಿ ದಿನ 50 ರೂಪಾಯಿಯಂತೆ ದಂಡ ವಿಧಿಸಲಾಗುತ್ತಿದೆ. ಫಿಟ್ನೆಸ್ ಸರ್ಟಿಫಿಕೆಟ್ ಅವಧಿ ಮುಗಿದ ದಿನದಿಂದ ಹೊಸ ಫಿಟ್ನೆಸ್ ಸರ್ಟಿಫಿಕೇಟ್ ಮಾಡಿಸಿಕೊಳ್ಳುವ ದಿನದ ವರೆಗೆ ಪ್ರತಿ ದಿನ 50 ರೂಪಾಯಿ ದಂಡ ವಿಧಿಸಲಾಗುತ್ತದೆ. ಇದರ ಒಟ್ಟು ಮೊತ್ತ ಬಲು ದುಬಾರಿಯಾಗಲಿದೆ.
ಮಹಾ ಸರ್ಕಾರದ ಈ ನಿಯಮವನ್ನು ಆಟೋ ರಿಕ್ಷಾ ಚಾಲಕ ಸಂಘ ವಿರೋಧಿಸಿದೆ. ಕೋವಿಡ್ ಸಂಕಷ್ಟದಿಂದ ಆಟೋ ಚಾಲಕರು ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದಾರೆ. ಹಲವರು 2016ರಿಂದ ತಮ್ಮ ಆಟೋಗಳಿಗೆ ಫಿಟ್ನೆಸ್ ಸರ್ಟಿಫಿಕೆಟ್ ಮಾಡಿಲ್ಲ. ಹೀಗಾಗಿ ಇಂತ ಚಾಲಕರು ಸಾಲ ಮಾಡಿ ದಂಡ ಕಟ್ಟಬೇಕಾದ ಪರಿಸ್ಥಿತಿ ಎದುರಾಗಲಿದೆ. ಹೀಗಾಗಿ ಈ ನಿಯಮ ಬಡ ಆಟೋ ಚಾಲಕರ ಹೊಟ್ಟೆ ಮೇಲೆ ಹೊಡೆದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.ಸಾರ್ವಜನಿಕರು ಈ ನಿಯಮವನ್ನು ಸ್ವಾಗತಿಸಿದ್ದಾರೆ.
ಆಯ್ದ ಖಾಸಗಿ ಕೇಂದ್ರದಲ್ಲೂ ಜೂ.1ರಿಂದ ಡಿಎಲ್ ಸಿಗುತ್ತೆ..!