ಎಲ್‌ಎಲ್‌ಆರ್‌ ಮತ್ತು ಡಿಎಲ್‌ ಪಡೆಯುವ ಪ್ರಕ್ರಿಯೆ ಮತ್ತಷ್ಟು ಸರಳ ಮತ್ತು ತ್ವರಿತಗೊಳಿಸುವ ಸಲುವಾಗಿ ಕೇಂದ್ರ ಸರ್ಕಾರ ಸಾರಿಗೆ ನೀತಿಯಲ್ಲಿ ಕೆಲವೊಂದು ಬದಲಾವಣೆ ಮಾಡಿದ್ದು, ಅದು 2024ರ ಜೂ.1ರಿಂದ ಜಾರಿಗೆ ಬರಲಿದೆ.

ಪಣಜಿ(ಮೇ.28): ವಾಹನ ಚಾಲನಾ ಪರವಾನಗಿ ಮಾಡಿಸಿಕೊಳ್ಳುವವರಿಗೆ ಸಿಹಿ ಸುದ್ದಿ. 2024ರ ಜೂ.1ರಿಂದ ಕಲಿಕಾ ಪರವಾನಗಿ (ಎಲ್‌ಎಲ್‌ಆರ್‌) ಮತ್ತು ಚಾಲನಾ ಪರವಾನಗಿ (ಡ್ರೈವಿಂಗ್‌ ಲೈಸೆನ್ಸ್‌) ಪಡೆಯಲು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗೆ (ಆರ್‌ಟಿಒ) ಹೋಗಬೇಕಿಲ್ಲ. ಸಮೀಪದ ನೋಂದಾಯಿತ ಖಾಸಗಿ ಚಾಲನಾ ಪರೀಕ್ಷಾ ಕೇಂದ್ರಗಳಲ್ಲೇ ಇಂಥ ಸೇವೆ ಪಡೆಯಬಹುದು.

ಎಲ್‌ಎಲ್‌ಆರ್‌ ಮತ್ತು ಡಿಎಲ್‌ ಪಡೆಯುವ ಪ್ರಕ್ರಿಯೆ ಮತ್ತಷ್ಟು ಸರಳ ಮತ್ತು ತ್ವರಿತಗೊಳಿಸುವ ಸಲುವಾಗಿ ಕೇಂದ್ರ ಸರ್ಕಾರ ಸಾರಿಗೆ ನೀತಿಯಲ್ಲಿ ಕೆಲವೊಂದು ಬದಲಾವಣೆ ಮಾಡಿದ್ದು, ಅದು 2024ರ ಜೂ.1ರಿಂದ ಜಾರಿಗೆ ಬರಲಿದೆ.

ಜೂನ್ 1 ರಿಂದ ಡ್ರೈವಿಂಗ್ ಲೈಸೆನ್ಸ್‌ಗೆ ಹೊಸ ನಿಯಮ, RTO ಎದುರು ಟೆಸ್ಟ್ ಮಾಡಬೇಕಿಲ್ಲ!

ಹೊಸ ನೀತಿ ಏನಿದೆ?:

ಇದುವರೆಗೂ ವಾಹನಗಳಿಗೆ ಸಂಬಂಧಿಸಿದ ಎಲ್ಲಾ ಕೆಲಸಗಳಿಗೂ ಆರ್‌ಟಿಒ ಕಚೇರಿಗೇ ತೆರಳಬೇಕಿತ್ತು. ಆದರೆ ಇದೀಗ ಆರ್‌ಟಿಒ ಕಚೇರಿ ಮೇಲಿನ ಹೊರೆ ತಗ್ಗಿಸುವ ನಿಟ್ಟಿನಲ್ಲಿ ನೋಂದಾಯಿತ ಖಾಸಗಿ ಸಂಸ್ಥೆಗಳಿಗೂ ಇಂಥ ಪರೀಕ್ಷೆ ನಡೆಸಿ ಪ್ರಮಾಣಪತ್ರ ನೀಡುವ ಅವಕಾಶವನ್ನು ಕೇಂದ್ರ ಸರ್ಕಾರ ಕಲ್ಪಿಸಿದೆ. ಇದರನ್ವಯ ಸರ್ಕಾರಗಳಿಂದ ಅನುಮೋದನೆ ಪಡೆದ ಖಾಸಗಿ ಸಂಸ್ಥೆಗಳು ಕೂಡಾ ಇನ್ನು ಪರೀಕ್ಷೆ ನಡೆಸಿ, ಪ್ರಮಾಣ ಪತ್ರ ನೀಡಬಹುದಾಗಿದೆ.

ಹೊಸ ನೀತಿ ಅನ್ವಯ ಅರ್ಜಿದಾರರು ಈ ಹಿಂದಿನಂತೆಯೇ ಸರ್ಕಾರಿ ವೆಬ್‌ಸೈಟ್‌ ಮೂಲಕ ಆನ್‌ಲೈನ್‌ನಲ್ಲಿ ಇಲ್ಲವೇ ಆಫ್‌ಲೈನ್‌ನಲ್ಲಿ ಆರ್‌ಟಿಒ ಕಚೇರಿಗೆ ತೆರಳಿ ಎಲ್‌ಎಲ್‌ಆರ್‌ ಮತ್ತು ಡಿಎಲ್‌ ಪಡೆಯಲು ಅಗತ್ಯವಾದ ದಾಖಲೆ ಸಲ್ಲಿಸಬೇಕು. ಹೀಗೆ ಅರ್ಜಿ ಸಲ್ಲಿಸುವ ವೇಳೆ ಸಮೀಪದ ಖಾಸಗಿ ಸಂಸ್ಥೆಗಳ ಹೆಸರು ನಮೂದಿಸಬಹುದು. ಹೀಗೆ ಅರ್ಜಿ ಸಲ್ಲಿಸಿದ ಬಳಿಕ ನಿಗದಿತ ಸಮಯದಲ್ಲಿ ಖಾಸಗಿ ಸಂಸ್ಥೆಗೆ ತೆರಳಿ ಪರೀಕ್ಷೆ ನೀಡಿ ಪ್ರಮಾಣ ಪತ್ರ ಪಡೆಯಬಹುದು.